ರಾಜಕಾರಣಿಗಳ ವೈಭವೀಕರಣದಿಂದ ಪ್ರಜಾಪ್ರಭುತ್ವದ ಅಧಃಪತನ: ಮಾಧ್ಯಮ ಹಾಗೂ ಸಮಾಜದ ಜಂಟಿ ಹೊಣೆಗಾರಿಕೆ ಇದರಲ್ಲಿದೆ
ಸ್ವತಂತ್ರ ಪತ್ರಿಕೋದ್ಯಮವು ಅಧಿಕಾರಸ್ಥರ ಮೆಚ್ಚುಗೆಗೆ ಹಂಬಲಿಸುವುದನ್ನು ಬಿಡಬೇಕು.
.............
ಸಾರ್ವಜನಿಕ ಕಾರ್ಯಕ್ರಮಗಳಿಗೆ ರಾಜಕಾರಣಿಗಳನ್ನು ಆಹ್ವಾನಿಸುವ ಕುರಿತು ಇಂದು ವ್ಯಕ್ತವಾಗುತ್ತಿರುವ ಅಸಮಾಧಾನವು ಕೇವಲ ನಕಾರಾತ್ಮಕ ಚಿಂತನೆಯಲ್ಲ, ಬದಲಾಗಿ ಅದು ಪ್ರಜಾಪ್ರಭುತ್ವದ ಜಾಗೃತ ಅಂತಃಪ್ರಜ್ಞೆಯಾಗಿದೆ. ಇಂದಿನ ಅನೇಕ ಚುನಾಯಿತ ಪ್ರತಿನಿಧಿಗಳು ತಮಗೆ ಸಿಕ್ಕ ಅಧಿಕಾರವನ್ನು ಸಾರ್ವಜನಿಕ ಜವಾಬ್ದಾರಿ ಎಂದುಕೊಳ್ಳುವ ಬದಲು, ಅದೊಂದು ಜನ್ಮಸಿದ್ಧ ಹಕ್ಕು ಎಂಬಂತೆ ವರ್ತಿಸುತ್ತಿದ್ದಾರೆ. ಕ್ರಿಮಿನಲ್ ಹಿನ್ನೆಲೆ, ಅಸಭ್ಯ ನಡವಳಿಕೆ ಮತ್ತು ಸಾಂಸ್ಥಿಕ ಮೌಲ್ಯಗಳ ಉಲ್ಲಂಘನೆಗಳು ಈಗ ಸರ್ವೇಸಾಮಾನ್ಯವಾಗಿವೆ. ವಿಪರ್ಯಾಸವೆಂದರೆ, ಇವುಗಳನ್ನು ಪ್ರಶ್ನಿಸಿ ಸರಿಪಡಿಸುವ ಬದಲು ಮಾಧ್ಯಮಗಳ ಒಂದು ವರ್ಗ ಮತ್ತು ನಾಗರಿಕ ಸಮಾಜವು ಅಧಿಕಾರದ ಈ ಅಹಂಕಾರವನ್ನೇ ಸಂಭ್ರಮಿಸುತ್ತಿವೆ.
ಕಾರ್ಯಕ್ರಮಗಳು ಇಂದು ರಾಜಕಾರಣಿಗಳ ಉಪಸ್ಥಿತಿಯಿಲ್ಲದೆ ಪೂರ್ಣಗೊಳ್ಳುವುದಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ರಾಜಕಾರಣಿಯೊಬ್ಬ ಬಂದರಷ್ಟೇ ಕಾರ್ಯಕ್ರಮಕ್ಕೆ ಗೌರವ ಎನ್ನುವ ಮನಸ್ಥಿತಿ ಪ್ರಜಾಪ್ರಭುತ್ವದ ಆಶಯಗಳನ್ನೇ ಬುಡಮೇಲು ಮಾಡುತ್ತಿದೆ. ಸಂಸ್ಥೆಗಳಿಗೆ ಮತ್ತು ಸಾರ್ವಜನಿಕರಿಗೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಕೇವಲ ಒಬ್ಬ ಸಚಿವ ಅಥವಾ ನಾಯಕನಿಗೆ ನೀಡಿದಾಗ, ಅಲ್ಲಿ ಕಾರ್ಯಕ್ರಮದ ಸತ್ವಕ್ಕಿಂತ ಹೆಚ್ಚಾಗಿ ಅಧಿಕಾರದ ಸಾಮಿಪ್ಯವೇ ವಿಜೃಂಭಿಸುತ್ತದೆ.
ಈ ಅವನತಿಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ಹೊಣೆಗಾರಿಕೆ ಅತ್ಯಂತ ದೊಡ್ಡದು. ಹಣಕ್ಕಾಗಿ ಪ್ರಕಟಿಸುವ ಜನ್ಮದಿನದ ವಿಶೇಷ ಪುಟಗಳು ಮತ್ತು ಜಾಹೀರಾತುಗಳನ್ನೇ ಸುದ್ದಿಯಂತೆ ಬಿಂಬಿಸುವ ಪತ್ರಿಕೋದ್ಯಮವು ರಾಜಕಾರಣಿಗಳ ಸುತ್ತ ಒಂದು ಸುಳ್ಳು ಪ್ರಭಾವಲಯವನ್ನು ಸೃಷ್ಟಿಸುತ್ತಿದೆ. ನಾಯಕರ ಮಾತುಗಳನ್ನೇ ವೇದವಾಕ್ಯದಂತೆ ಪದೇ ಪದೇ ಪ್ರಸಾರ ಮಾಡುವುದರಿಂದ ಅವರ ಅಧಿಕಾರವು ಒಂದು ತಮಾಷೆಯ ಪ್ರದರ್ಶನವಾಗಿ ಬದಲಾಗುತ್ತಿದೆ. ಇಲ್ಲಿ ಉತ್ತರದಾಯಿತ್ವ ಮರೆಯಾಗಿ, ಕೇವಲ ಅಧಿಕಾರಕ್ಕೆ ಮೆರುಗು ನೀಡುವ ಕೆಲಸ ನಡೆಯುತ್ತಿದೆ.
ಇನ್ನೂ ವಿಷಾದನೀಯವೆಂದರೆ, ವಿಶ್ವಾಸಾರ್ಹತೆ ಕಳೆದುಕೊಂಡ ರಾಜಕಾರಣಿಗಳ ಜೊತೆ ವೇದಿಕೆ ಹಂಚಿಕೊಳ್ಳಲು ತುಡಿಯುತ್ತಿರುವ ಸಂಪಾದಕರು ಮತ್ತು ಪತ್ರಕರ್ತರ ಸಂಘಟನೆಗಳ ವರ್ತನೆ. ಇಂತಹ ನಾಯಕರಿಂದ ತಮ್ಮ ಕಾರ್ಯಕ್ರಮಕ್ಕೆ ಮೆರುಗು ಸಿಗುತ್ತದೆ ಎಂದು ಭಾವಿಸುವುದು ಪತ್ರಿಕೋದ್ಯಮದ ಸೋಲು. ಇದು ಪತ್ರಿಕೋದ್ಯಮಕ್ಕೆ ಶಕ್ತಿ ಸಿಗುವುದು ಅದರ ಸ್ವಾತಂತ್ರ್ಯದಿಂದಲ್ಲ, ಬದಲಾಗಿ ಅಧಿಕಾರಸ್ಥರ ನಿಕಟ ಸಂಪರ್ಕದಿಂದ ಎಂಬ ತಪ್ಪು ಸಂದೇಶವನ್ನು ಸಮಾಜಕ್ಕೆ ರವಾನಿಸುತ್ತದೆ. ಮುಖ್ಯಮಂತ್ರಿಗಳ ಪಕ್ಕದಲ್ಲಿ ಕುಳಿತು ಫೆÇೀಟೋ ತೆಗೆಸಿಕೊಳ್ಳಲು ಪೈಪೆÇೀಟಿ ನಡೆಸುವ ಸಂಪಾದಕರು ಜನರಿಗೆ ಮಾಹಿತಿ ನೀಡುತ್ತಿಲ್ಲ, ಬದಲಾಗಿ ತಮ್ಮ ಪ್ರಭಾವವನ್ನು ಜಾಹೀರಾತು ಮಾಡಿಕೊಳ್ಳುತ್ತಿದ್ದಾರೆ.
ಇದೇ ಕಾರಣಕ್ಕೆ ಹಠಾತ್ ವೈಚಾರಿಕ ಪಲ್ಲಟಗಳು ಕಾಣಿಸಿಕೊಳ್ಳುತ್ತವೆ. ಮೊದಲು ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದವರು, ಈಗ ಯಾವುದೇ ಮುಜುಗರವಿಲ್ಲದೆ ತಾವು ಹಿಂದೆ ವಿರೋಧಿಸಿದ ನಾಯಕರನ್ನೇ ಹೊಗಳುತ್ತಿದ್ದಾರೆ. ಇದು ತತ್ವಗಳ ಬದಲಾವಣೆಯಲ್ಲ, ಬದಲಾಗಿ ಅಸ್ತಿತ್ವಕ್ಕಾಗಿ ಮಾಡಿಕೊಳ್ಳುವ ಹೊಂದಾಣಿಕೆ. ನಂಬಿಕೆಗಳು ನಿಜವಾಗಿಯೂ ಬದಲಾಗಿದ್ದರೆ ಅದನ್ನು ಬರಹಗಳ ಮೂಲಕ ಸಾಬೀತುಪಡಿಸಬೇಕಿತ್ತು, ಕೇವಲ ಫೆÇೀಟೋಗಳ ಮೂಲಕ ಪ್ರದರ್ಶಿಸುವುದಲ್ಲ.
ಈ ಪ್ರವೃತ್ತಿಯಿಂದ ಆಗುತ್ತಿರುವ ಹಾನಿ ಬಹಳ ಗಂಭೀರವಾದುದು. ತನ್ನನ್ನು ತಾನು ಅಧಿಕಾರ ಕೇಂದ್ರಗಳ ಮಧ್ಯವರ್ತಿ ಎಂದು ಭಾವಿಸುವ ಸಂಪಾದಕನು ಎಂದಿಗೂ ವ್ಯವಸ್ಥೆಯನ್ನು ಪ್ರಾಮಾಣಿಕವಾಗಿ ಪ್ರಶ್ನಿಸಲಾರ. ಅಂತಹ ಸುದ್ದಿಮನೆಗಳಲ್ಲಿ ಸ್ವಯಂ-ಸೆನ್ಸಾರ್‍ಶಿಪ್ ಸಾಮಾನ್ಯವಾಗುತ್ತದೆ. ಅಧಿಕಾರದಿಂದ ದೂರವಿದ್ದರೆ ಅಪಾಯ, ಹತ್ತಿರವಿದ್ದರೆ ರಕ್ಷಣೆ ಎಂಬ ಗುಲಾಮಿ ಮನಸ್ಥಿತಿ ಅಲ್ಲಿ ಬೇರೂರುತ್ತದೆ.
ಪ್ರಜಾಪ್ರಭುತ್ವವು ಕೇವಲ ರಾಜಕಾರಣಿಗಳ ಅತಿರೇಕದಿಂದ ಮಾತ್ರ ದುರ್ಬಲಗೊಳ್ಳುವುದಿಲ್ಲ; ಮಾಧ್ಯಮಗಳು ತನ್ನ ಮೂಲ ಕರ್ತವ್ಯವನ್ನು ಮರೆತಾಗಲೂ ಅದು ಕುಸಿಯುತ್ತದೆ. ಪತ್ರಿಕೋದ್ಯಮದ ಘನತೆ ಇರುವುದು ಅದರ ನಿಷ್ಠುರ ನಿಲುವಿನಲ್ಲಿಯೇ ಹೊರತು ಅಧಿಕಾರಸ್ಥರೊಂದಿಗಿನ ಆಪ್ತತೆಯಲ್ಲಲ್ಲ. ಸಮಾಜವು ಮಾಧ್ಯಮಗಳಿಂದ ಬಯಸುವುದು ಪಾರದರ್ಶಕತೆ ಮತ್ತು ಜನಸಾಮಾನ್ಯರ ಧ್ವನಿಯನ್ನು. ಯಾವಾಗ ಮಾಧ್ಯಮಗಳು ಅಧಿಕಾರದ ನೆರಳಿನಲ್ಲಿ ನಡೆಯಲು ಆರಂಭಿಸುತ್ತವೆಯೋ, ಆಗ ಅವು ತಮ್ಮ ಧ್ವನಿ ಮತ್ತು ಜನರ ನಂಬಿಕೆ ಎರಡನ್ನೂ ಕಳೆದುಕೊಳ್ಳುತ್ತವೆ.
ಸ್ವತಂತ್ರ ಪತ್ರಿಕೋದ್ಯಮವು ಅಧಿಕಾರಸ್ಥರ ಮೆಚ್ಚುಗೆಗೆ ಹಂಬಲಿಸುವುದನ್ನು ಬಿಡಬೇಕು. ಅಧಿಕಾರವನ್ನು ವೈಭವೀಕರಿಸುವುದು ಅದರ ಕೆಲಸವಲ್ಲ; ಅದನ್ನು ಪ್ರಶ್ನಿಸುವುದು ಮತ್ತು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸುವುದು ಅದರ ನಿಜವಾದ ಧರ್ಮ. ಆಗ ಮಾತ್ರ ಸಮಾಜದಲ್ಲಿ ಪ್ರಜಾಪ್ರಭುತ್ವವು ಗಟ್ಟಿಯಾಗಿ ಉಳಿಯಲು ಸಾಧ್ಯ.
Comments
Post a Comment