ಅಧಿಕಾರಸ್ಥರ ಜತೆ ಮಾಧ್ಯಮಗಳ ಹೊಂದಾಣಿಕೆಯಿಂದ ಪ್ರಜಾತಂತ್ರಕ್ಕೆ ಧಕ್ಕೆ

 ಪ್ರಜಾಪ್ರಭುತ್ವಕ್ಕೆ ಆಳುವವರನ್ನು ಪ್ರಶಂಸಿಸುವ ಮಾಧ್ಯಮ, ಪತ್ರಿಕೆ ಅಗತ್ಯವಿಲ್ಲ. ಆಳುವವರನ್ನು ನಿರ್ಭೀತಿಯಿಂದ ಪ್ರಶ್ನಿಸುವ ಪತ್ರಿಕೆಗಳು ಬೇಕಿವೆ

ಖುಲ್ಲಂಖುಲ್ಲಾ * ಬಿವಿಸೀ

ನಿಜವಾದ ಪ್ರಜಾಪ್ರಭುತ್ವದಲ್ಲಿ ಅಧಿಕಾರ ಮತ್ತು ಮಾಧ್ಯಮಗಳ ನಡುವಿನ ಸಂಬಂಧಗಳು ಸದಾ ಅಹಿತಕರವಾಗಿರುತ್ತದೆ, ಸ್ನೇಹಪರವಾಗಿರಲು ಸಾಧ್ಯವೇ ಇಲ್ಲ. ಎರಡರ ನಡುವೆ ಹಿತಕರ ವಾತಾವರಣ ಇರುವುದು ಆರೋಗ್ಯಕರವಲ್ಲ. ಎಚ್ಚರಿಕೆಯ ಸೂಚನೆಯೂ ಆಗಿರುತ್ತದೆ. ಮಾಧ್ಯಮಗಳು ಅಧಿಕಾರವನ್ನು ಪ್ರಶ್ನಿಸಲು ಇದೆಯೇ ಹೊರತು, ಅಧಿಕಾರದ ಮರುಭರವಸೆ ನೀಡಲು ಅಲ್ಲ. ಈ ಪಾತ್ರ ದುರ್ಬಲವಾದರೆ, ಪ್ರಜಾಪ್ರಭುತ್ವ ಹಠಾತ್ತನೆ ಕುಸಿಯುತ್ತದೆ. ಕ್ರಮೇಣ ನಾಶವಾಗುತ್ತದೆ.

ಗ್ರಾಂಥಿಕವಾಗಿ ಭಾರತ ಇದನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ. ಸಂವಿಧಾನವು ವಾಕ್‍ಸ್ವಾತಂತ್ರ್ಯ ನೀಡುತ್ತದೆ. ದೇಶವು ಬಲವಾದ ಪತ್ರಿಕೋದ್ಯಮದ ದೀರ್ಘ ಪರಂಪರೆಯನ್ನು ಹೊಂದಿದೆ. ಮಾಧ್ಯಮವಲಯ ವಿಶಾಲವಾಗಿದ್ದು, ವೈವಿಧ್ಯಮಯವಾಗಿದೆ. ಆದರೂ ಆಚರಣೆಯಲ್ಲಿ ಇಂದು ಮಿಶ್ರಿತ ಚಿತ್ರಣ ಕಾಣುತ್ತದೆ. ಕೆಲವು ಪತ್ರಕರ್ತರು ಮತ್ತು ಮಾಧ್ಯಮ ಸಾಧನಗಳು ಗಂಭೀರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕರು ಇದನ್ನು ಮಾಡುತ್ತಿಲ್ಲ. ಅದರಲ್ಲೂ ಟಿ ವಿ ವಾಹಿನಿಗಳಲ್ಲಿ ಅಧಿಕಾರವನ್ನು ಪರೀಕ್ಷಿಸುವುದಕ್ಕಿಂತಲೂ ಪ್ರತಿಧ್ವನಿಸುವುದೇ ಹೆಚ್ಚು.

ಇದು ನೇರ ಸೆನ್ಸಾರ್‍ಷಿಪ್ ಕಾರಣದಿಂದಲ್ಲ. ಹೆಚ್ಚಿನ ಸಮಯದಲ್ಲಿ ಇದು ಭೀತಿಯ ಪರಿಣಾಮ. ಆದಾಯ ತೆರಿಗೆ, ಇ ಡಿ  ದಾಳಿಯ ಭೀತಿ, ಕಾನೂನು ಕ್ರಮದ ಭಯ. ಜಾಹೀರಾತು ಅಥವಾ ಸಾಮೀಪ್ಯ  ಕಳೆದುಕೊಳ್ಳುವ ಭೀತಿ. ಕ್ರಮೇಣ ಈ ಭೀತಿ ಆಂತರಿಕವಾಗುತ್ತದೆ. ಸುದ್ದಿಗಳನ್ನು ಮೃದುವಾಗಿಸಲಾಗುತ್ತದೆ. ಪ್ರಶ್ನೆಗಳ ಕೈಬಿಡಲಾಗುತ್ತದೆ. ಮೌನವನ್ನು ಸಮತೋಲನ ಎಂದು ಬಿಂಬಿಸಲಾಗುತ್ತದೆ. ಹೀಗೆಯೇ ಸ್ವಯಂ ಸೆನ್ಸಾರ್‍ಷಿಪ್, ಮುಕ್ತ ಆಯ್ಕೆಯ ಸ್ಥಾನವನ್ನು ಆಕ್ರಮಿಸುತ್ತದೆ.

ಒಂದು ವಿಚಾರದಲ್ಲಿ ಸ್ಪಷ್ಟವಾಗಿರುವುದು ಮುಖ್ಯ. ಮಾಧ್ಯಮ ಎಂದರೆ ವಿರೋಧ ಪಕ್ಷವಲ್ಲ. ಹಾಗೆ ವರ್ತಿಸಲೂ ಕೂಡದು. ವಿರೋಧ ಪಕ್ಷಗಳು ಮತ ಯಾಚಿಸುತ್ತವೆ, ಅಧಿಕಾರ ಅಪೇಕ್ಷಿಸುತ್ತವೆ. ಪತ್ರಿಕೋದ್ಯಮವು ವಾಸ್ತವಗಳನ್ನು ಶೋಧಿಸುತ್ತವೆ ಉತ್ತರದಾಯಿತ್ವ ಅಪೇಕ್ಷಿಸುತ್ತವೆ. ರಾಜಕೀಯ ವಿರೋಧ ಪಕ್ಷ ದುರ್ಬಲವಾದಾಗ ಅಥವಾ ಎಚ್ಚರಿಕೆಯಿಂದ ಇಲ್ಲದಾಗ ಮಾಧ್ಯಮವು ಸಹಜವಾಗಿ ವಿರೋಧಿ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಇದು ಕ್ರಿಯಾಶೀಲತೆ ಅಲ್ಲ, ಅವಶ್ಯಕ.

ಸಮಸ್ಯೆಗಳು ಉದ್ಭವಿಸುವುದು ಸರ್ಕಾರಗಳು ಮಾಧ್ಯಮಗಳ ಪಾತ್ರವನ್ನು ಒಪ್ಪದೆ ಇದ್ದಾಗ. ಕಿರುಕುಳ ಒಂದು ಅಸ್ತ್ರವಾಗುತ್ತದೆ. ಸುದ್ದಿಗಳನ್ನು ಪ್ರಕಟಿಸದಿರಲು ಒತ್ತಡ ಇರುವುದಿಲ್ಲ, ಬದಲಾಗಿ ನೈಜ ಸುದ್ದಿಯನ್ನು ಪ್ರಕಟಿಸುವುದು ದುಬಾರಿಯಾಗುತ್ತದೆ. ತೆರಿಗೆ ನೋಟಿಸ್, ಪೆÇಲೀಸ್‍ಕ್ರಮ ಎದುರಾಗುತ್ತದೆ. ಅಧಿಕಾರಸ್ಥರನ್ನು ಪ್ರಶ್ನಿಸುವುದರಿಂದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಇಂತಹ ಪರಿಸ್ಥಿತಿಯಲ್ಲಿ ಪತ್ರಿಕೆಗಳ ಮುಂದೆ ಯಾವ ಆಯ್ಕೆ ಇರಲು ಸಾಧ್ಯ? ಸುಲಭ ಮಾರ್ಗಗಳಂತೂ ಇರುವುದಿಲ್ಲ. ಹೊಂದಾಣಿಕೆ ರಕ್ಷಣೆ ನೀಡುತ್ತದೆ, ಆದರೆ ವಿಶ್ವಾಸವನ್ನು ಹಾಳುಮಾಡುತ್ತದೆ. ಸುಸ್ಥಿರವಾದ ಒಂದೇ ಆಯ್ಕೆ ಎಂದರೆ ಶಿಸ್ತಿನ ಪತ್ರಿಕೋದ್ಯಮ ನಡೆಸುವುದು. ಮೃದುವಾಗಿ ಪ್ರಶ್ನಿಸುವುದು, ಪ್ರತಿಯೊಂದು ವಿಷಯವನ್ನೂ ಪರಿಶೀಲಿಸುವುದು. ದಾಖಲೆಗಳನ್ನು ಇಟ್ಟಿರುವುದು. ಉತ್ತರ ಬರದ ಪ್ರಶ್ನೆಗಳನ್ನು ಪುನರಾವರ್ತನೆ ಮಾಡುವುದು. ಅಧಿಕಾರವು ಅಭಿಪ್ರಾಯಗಳನ್ನು ಅಲ್ಲಗಳೆಯಬಹುದು ಆದರೆ ಸುಡುವಾಸ್ತವಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

ಪತ್ರಿಕೋದ್ಯಮ ಪ್ರಪಂಚದಲ್ಲಿ ಉನ್ನತ ಸ್ಥಾನ ಪಡೆದಿರುವ ಜೋಸೆಫ್ ಪುಲಿಟ್ಜರ್ ಅವರಿಂದ ಪಾಠ  ಕಲಿಯಬೇಕಿದೆ. ಮಾಧ್ಯಮಗಳು, ಪತ್ರಿಕೆಗಳು ಸಾಮಾನ್ಯ ಜನರ ಸೇವೆ ಮಾಡಬೇಕೇ ಹೊರತು, ಅಧಿಕಾರದಲ್ಲಿರುವವರಿಗೆ ಅಲ್ಲ ಎಂದು ಪುಲಿಟ್ಜರ್ ಹೇಳುತ್ತಾರೆ. ಓದುಗರನ್ನು ತಲುಪುವುದು ಮತ್ತು ಸ್ಪಷ್ಟತೆಯನ್ನು ಪ್ರತಿಪಾದಿಸಿದ ಪುಲಿಟ್ಜರ್ ಜನಪ್ರಿಯತೆಗಾಗಿ ಗುಣಮಟ್ಟವನ್ನು ಬಿಟ್ಟುಕೊಡುವುದರ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ, ಪತ್ರಿಕೋದ್ಯಮವು ಅಧಿಕಾರದಿಂದ ಸ್ವತಂತ್ರವಾಗಿರಬೇಕು, ಅದು ದುಬಾರಿಯಾದರೂ ಸಹ ಅಡ್ಡಿಯಿಲ್ಲ, ಎಂದು ಪುಲಿಟ್ಜರ್ ಪ್ರತಿಪಾದಿಸಿದ್ದರು.

ಇಂದು ಭಾರತದ ಮಾಧ್ಯಮಗಳು ಕಷ್ಟದ ಸಮಯ ಎದುರಿಸುತ್ತಿವೆ. ಸಂಪೂರ್ಣವಾಗಿ ತೆಪ್ಪಗಾಗಿಸಲಾಗಿಲ್ಲ. ಆದರೆ ಸ್ಥಿರವಾಗಿ ಧೈರ್ಯವಾಗಿಯೂ ಇಲ್ಲ. ಉತ್ತಮ ಪತ್ರಿಕೋದ್ಯಮ ಜಾರಿಯಲ್ಲಿದೆ, ಆದರೆ ಅಲ್ಲಲ್ಲಿ ಚದುರಿಹೋಗಿದ್ದು ಕೆಲವೆಡೆ ಏಕಾಂಗಿಯಾಗಿವೆ. ಗಂಭೀರವಾಗಿ ಯೋಚಿಸಬೇಕಾದ ಅಂಶವೆಂದರೆ, ಬೆದರಿಕೆಗಳು ಸಾಮಾನ್ಯವಾಗಿವೆ. ಒತ್ತಡಗಳು ಈ ವೃತ್ತಿಗೆ ಆಘಾತ ಉಂಟುಮಾಡದೆ ಇದ್ದರೂ ಈಗಾಗಲೇ ಬಹುಮುಖ್ಯವಾದ ಪಾಸಿಟಿವ್ ಅಂಶಗಳನ್ನು ಕಳೆದುಕೊಂಡಿದ್ದಾಗಿದೆ.

ಪ್ರಜಾಪ್ರಭುತ್ವಕ್ಕೆ ಆಳುವವರನ್ನು ಪ್ರಶಂಸಿಸುವ ಮಾಧ್ಯಮ, ಪತ್ರಿಕೆ ಅಗತ್ಯವಿಲ್ಲ. ಆಳುವವರನ್ನು ನಿರ್ಭೀತಿಯಿಂದ ಪ್ರಶ್ನಿಸುವ ಪತ್ರಿಕೆಗಳು ಬೇಕಿವೆ. ನಿಜವಾದ ಅಪಾಯ ಇರುವುದು ಸರ್ಕಾರದಲ್ಲಿ ಅಲ್ಲ, ಬದಲಾಗಿ ಸರ್ಕಾರಗಳ ವಿರೋಧಿ ನಿಲುವಿನ ಹೊರತಾಗಿಯೂ ಹೊಂದಾಣಿಕೆ ಮಾಡಿಕೊಂಡು ನಡೆಯುವುದರಲ್ಲಿ. ಪ್ರಜಾಪ್ರಭುತ್ವ ದುರ್ಬಲವಾಗುವುದೇ ಹೀಗೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again