ಕರ್ನಾಟಕ ಕಾಂಗ್ರೆಸ್ ರಾಜಕಾರಣದಲ್ಲಿ ಗೂಂಡಾಗಿರಿ ಮೆರೆಯುತ್ತಿದೆ
ಅಲವದರಲವೆನ್ನಿ * ಬಿವಿಸೀ
ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಂದು ಅಹಿತಕರ ಮಾದರಿ ರೂಪುಗೊಳ್ಳುತ್ತಿದೆ. ನಾಗರಿಕ ನಡೆವಳಿಕೆಯ ಕುಸಿತ, ಸಾರ್ವಜನಿಕ ನಿಂದನೆ, ಬೆದರಿಕೆ, ಶಾಸಕರಿಂದಲೇ ದೈಹಿಕ ದಾಳಿ ಇವೆಲ್ಲವೂ ಆತಂಕ ಮೂಡಿಸುವ ವರ್ತನೆಗಳಾಗಿವೆ. ಒಂದು ಕಾಲದಲ್ಲಿ ಅಪರೂಪವಾಗಿ ನಡೆಯುತ್ತದೆ ಎಂದು ಭಾವಿಸಲಾಗುತ್ತಿದ್ದ ಘಟನೆಗಳು ಈಗ ಸಮಾಜದಲ್ಲಿ ಬೇರೂರಿರುವ ವ್ಯಾಧಿ ಎನ್ನುವುದನ್ನು ಸೂಚಿಸುತ್ತಿದ್ದು, ಅಧಿಕಾರ ಪ್ರಾಪ್ತಿಯ ಮೋಹ, ಆಂತರಿಕ ಶಿಸ್ತಿನ ಕೊರತೆ ಮತ್ತು ಪಕ್ಷದ ನಾಯಕತ್ವದ ಅನಗತ್ಯ ತಾಳ್ಮೆ ಈ ಸಮಸ್ಯೆಯನ್ನು ಜಟಿಲಗೊಳಿಸುತ್ತಿದೆ.
ಶಿಡ್ಲಘಟ್ಟದ ಶಾಸಕ ರಾಜೀವ್ ಗೌಡ ಅವರ ಉಚ್ಛಾಟನೆ ಈ ವಿಷಯವನ್ನು ಈಗ ಸಾರ್ವಜನಿಕವಾಗಿ ಬಯಲುಗೊಳಿಸಿದೆ. ಶಿಡ್ಲಘಟ್ಟದ ಪುರಸಭೆಯ ಮಹಿಳಾ ಮುಖ್ಯಾಧಿಕಾರಿಯವರನ್ನು ನಿಂದಿಸಿ, ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ರಾಜೀವ್ ಗೌಡ ಅವರ ವರ್ತನೆ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ. ಟೀಕೆಗಳು ಹೆಚ್ಚಾಗುತ್ತಿರುವಂತೆ, ಕೆಪಿಸಿಸಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಆದರೂ ಈ ಉಚ್ಛಾಟನೆ ವಿಶೇಷ ಎನಿಸಲು ಕಾರಣ ಎಂದರೆ ಇದು ಅಪರೂಪದ ಪ್ರಸಂಗ.
ರಾಜೀವ್ ಗೌಡ ಅವರ ಪ್ರಕರಣವೇನೂ ಅಪರೂಪ ಅಲ್ಲ. ಕೆ ಆರ್ ನಗರದ ಕಾಂಗ್ರೆಸ್ ಶಾಸಕ ಡಿ ರವಿಶಂಕರ್ ಸಾರ್ವಜನಿಕ ಸಂವಾದದ ಸಮಯದಲ್ಲಿ ಪಕ್ಷದ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಹರಿದಾಡುತ್ತಿದೆ. ಇನ್ನೊಬ್ಬ ಶಾಸಕ ಎಸ್ ಎನ್ ಸುಬ್ಬಾರೆಡ್ಡಿ ಟೋಲ್ ಪ್ಲಾಜಾದ ಸಿಬ್ಬಂದಿಯನ್ನು ಹೆದರಿಸಿ, ದಾಳಿ ನಡೆಸಿರುವುದು , ವಿಐಪಿಯಂತೆ ಪರಿಗಣಿಸಲು ಒತ್ತಾಯಿಸಿರುವುದು, ಅಧಿಕಾರದ ಸವಲತ್ತನ್ನು ದುರ್ಬಳಕೆ ಮಾಡುವ ಮಾದರಿಗಳಾಗಿ ಪರಿಣಮಿಸಿದೆ. ಹಿರಿಯ ನಾಯಕ ಆರ್ ವಿ ದೇಶಪಾಂಡೆ ಮಹಿಳಾ ಪರ್ತಕರ್ತರೊಬ್ಬರಿಗೆ ಕ್ಯಾಮರಾದ ಎದುರಿನಲ್ಲೇ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮತ್ತು ಖಂಡಿಸಿರುವುದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ಆದರೆ ರಾಜೀವ್ ಗೌಡರ ಹೊರತಾಗಿ ಯಾವ ಪ್ರಕರಣಗಳಲ್ಲೂ ಶಿಸ್ತು ಕ್ರಮವನ್ನು ಜರುಗಿಸಿಲ್ಲ.
ಈ ಉತ್ತರದಾಯಿತ್ವದ ಆಯ್ಕೆ ಪ್ರಕ್ರಿಯೆಯೇ ಮೂಲತಃ ಸಮಸ್ಯಾತ್ಮಕವಾದುದು.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುನ್ನ ಹಲವು ವರ್ಷಗಳು ವಿರೋಧ ಪಕ್ಷವಾಗಿತ್ತು. ಈಗ ಅಧಿಕಾರ ಹೆಚ್ಚಾಗಿದೆ ಎನಿಸುತ್ತದೆ. ಪಕ್ಷದ ಅನೇಕ ಕಾರ್ಯಕರ್ತರು ಚುನಾವಣಾ ವಿಜಯ ಸಾಧಿಸಿದರೆ ಅವರಿಗೆ ಜವಾಬ್ದಾರಿ ಹೊರಿಸುವುದಕ್ಕಿಂತಲೂ ಮನಸೋಯಿಚ್ಛೆ ವರ್ತಿಸಲು ಪರವಾನಗಿ ದೊರೆಯುತ್ತದೆ ಎಂದು ಭಾವಿಸಿದಂತಿದೆ. ಕಾಂಗ್ರೆಸ್ ನಾಯಕರು ಆಳುವುದಕ್ಕೇ ಹುಟ್ಟಿದ್ದಾರೆ ಎಂಬ ನಂಬಿಕೆ ಅಹಂಕಾರವನ್ನು ಹೆಚ್ಚಿಸುತ್ತದೆಯೇ ಹೊರತು, ಸಂಯಮ ಕಲಿಸುವುದಿಲ್ಲ.
ಇಲ್ಲಿ ನಾಯಕತ್ವದ ಧ್ವನಿ ಮುಖ್ಯವಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪಕ್ಷದ ಶಿಸ್ತನ್ನು ಕಾಪಾಡುವ ಮತ್ತು ಗಮನಿಸುವ ಜವಾಬ್ದಾರಿ ಹೊತ್ತಿದ್ದಾರೆ. ಆದರೆ ಶಿಸ್ತಿನ ಇತಿಮಿತಿಗಳನ್ನು ನಿಗದಿಪಡಿಸುವ ಅಧಿಕಾರ ಇರುವ ವ್ಯಕ್ತಿಯೇ ಸಾರ್ವಜನಿಕವಾಗಿ ವರ್ತಿಸುವಾಗ ತಮ್ಮ ಇತಿಮಿತಿಯನ್ನು ಮೀರುತ್ತಿದ್ದಾರೆ, ಅನಗತ್ಯವಾದ ಮಾತುಗಳನ್ನಾಡುತ್ತಿದ್ದಾರೆ. ಇದು ಕಾರ್ಯಕರ್ತರಿಗೆ ನೀಡುವ ಸೂಚನೆ ನಿಸ್ಸಂದೇಹವಾದದ್ದು. ಅವರ ಕೆಲವು ಬೆಂಬಲಿಗರ ಆಕ್ರಮಣಕಾರಿ ವರ್ತನೆ ಈ ಸಂದೇಶವನ್ನು ಪುಷ್ಟೀಕರಿಸುತ್ತದೆ.
ಇಷ್ಟೇ ಸಮಸ್ಯಾತ್ಮಕವಾಗಿರುವುದು ಕೆಪಿಸಿಸಿಯ ಶಿಸ್ತು ಸಮಿತಿಯ ಪಾತ್ರ. ಪಕ್ಷದಲ್ಲಿ ತಲೆದೋರುವ ಅಶಿಸ್ತಿನ ಪ್ರಸಂಗಗಳನ್ನು ಗಮನಿಸಿ, ಖಂಡನೆಯ ನೋಟಿಸ್ ಜಾರಿ ಮಾಡಿ, ಹಾನಿಯು ಸರಿಪಡಿಸಲಾಗದಂತೆ ಆಗುವ ಮೊದಲು ಕ್ರಮ ಕೈಗೊಳ್ಳುವುದು ಈ ಸಮಿತಿಯ ಕರ್ತವ್ಯ. ಆದರೆ ಈ ಸಮಿತಿಯು ಕೆಲವು ಸಂದರ್ಭಗಳಲ್ಲಿ ಮಾತ್ರ ಹಸ್ತಕ್ಷೇಪ ಮಾಡುತ್ತದೆ. ಸಾರ್ವಜನಿಕರ ಆಕ್ರೋಶ ತೀವ್ರವಾಗಿ ನಿರ್ಲಕ್ಷಿಸುವುದು ಅಸಾಧ್ಯವಾದಾಗ ಕ್ರಮಕ್ಕೆ ಮುಂದಾಗುತ್ತದೆ. ಹಾಗಾಗಿ ಶಿಸ್ತು ಎನ್ನುವುದು ಬಿಕ್ಕಟ್ಟು ನಿರ್ವಹಣೆಯ ವಿಷಯವಾಗಿದೆಯೇ ಹೊರತು, ಸಾಂಸ್ಥಿಕ ಸುಧಾರಣೆಯ ಪ್ರಶ್ನೆ ಆಗಿಲ್ಲ.
ಇದು ಕರ್ನಾಟಕದಲ್ಲಿ ಮಾತ್ರ ಕಾಣುವ ವೈಫಲ್ಯವಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಇರುವ ಪ್ರಮುಖ ದೌರ್ಬಲ್ಯವಾಗಿದ್ದು, ಇಲ್ಲಿ ಅಧಿಕಾರವನ್ನು ವ್ಯಕ್ತಿ ಕೇಂದ್ರಿತವಾಗಿ ಚಲಾಯಿಸಲಾಗುತ್ತದೆ. ಉತ್ತರದಾಯಿತ್ವ ಎನ್ನುವುದು ರಾಜಕೀಯ ಅನುಕೂಲಗಳನ್ನು ಅವಲಂಬಿಸಿರುತ್ತದೆ. ರಾಜೀವ್ ಗೌಡರ ಉಚ್ಛಾಟನೆ ಸುಧಾರಣೆಯಾಗಿ ಕಾಣುವುದಕ್ಕಿಂತಲೂ, ನಿರ್ಣಾಯಕ ಶಿಸ್ತು ಕ್ರಮಗಳು ಹೇಗೆ ಅಪರೂಪವಾಗಿವೆ ಎನ್ನುವುದನ್ನು ಸೂಚಿಸುತ್ತದೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಮಹತ್ವದ ಪಾತ್ರವನ್ನು ಕಾಂಗ್ರೆಸ್ ಆಗಾಗ್ಗೆ ಉಲ್ಲೇಖಿಸುತ್ತಾ ತನ್ನ ನೈತಿಕ ಮೇಲರಿಮೆಯನ್ನು ವ್ಯಕ್ತಪಡಿಸುತ್ತದೆ. ಆದರೆ ದುರ್ವರ್ತನೆಗೆ ಚರಿತ್ರೆ ಸದಾಕಾಲವೂ ಕವಚವಾಗುವುದಿಲ್ಲ. ಪಕ್ಷಗಳನ್ನು ಅವುಗಳ ಹಿಂದಿನ ಚರಿತ್ರೆಯ ಆಧಾರದಲ್ಲಿ ಮಾಪನ ಮಾಡುವುದಿಲ್ಲ, ವರ್ತಮಾನದ ವರ್ತನೆಯ ಆಧಾರದ ಮೇಲೆ ನೋಡಲಾಗುತ್ತದೆ. ಕಾಂಗ್ರೆಸ್ ಪಕ್ಷವು ಆಂತರಿಕ ಶಿಸ್ತನ್ನು ಕಾಪಾಡಿಕೊಳ್ಳದೆ ಹೋದರೆ ಹೆಚ್ಚಾಗುತ್ತಿರುವ ಅನಾಗರಿಕ ವರ್ತನೆಗಳು ಮತ್ತು ಆ ಸಂಸ್ಕøತಿ ಪಕ್ಷದ ವಿಶ್ವಾಸಾರ್ಹತೆಯನ್ನು ನಿರ್ನಾಮ ಮಾಡುವುದೇ ಅಲ್ಲದೆ, ಪಕ್ಷವು ಆಳ್ವಿಕೆ ನಡೆಸುವ ಸಂಸ್ಥೆಗಳ ಗೌರವಕ್ಕೂ ಧಕ್ಕೆ ಉಂಟುಮಾಡುತ್ತದೆ.
Comments
Post a Comment