ಡಿಕೆಶಿ ಮಹತ್ವಾಕಾಂಕ್ಷೆ ಮತ್ತು ಕಾಂಗ್ರೆಸ್ ಬುಡಕ್ಕೆ ಬಿದ್ದ ಬೆಂಕಿ

 ನೇರಾನೇರ * ಬಿವಿಸೀ

ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮುಖ್ಯಮಂತ್ರಿಯಾಗುವ ಮಹತ್ವಾಕಾಂಕ್ಷೆ ಈಗ ಪಕ್ಷದ ಆಂತರಿಕ ಚರ್ಚೆಗಳನ್ನೂ ಮೀರಿ ಹೋಗಿದ್ದು, ದಿನನಿತ್ಯವೂ ನಡೆಯುತ್ತಿರುವ ಈ ಪ್ರಹಸನಗಳು ರಾಜಕೀಯವಾಗಿ ಹಾನಿಕಾರಕವಾಗಿ ಕಾಣುತ್ತಿದೆ. ಕರ್ನಾಟಕದಲ್ಲಿ ಒಂದು ಸ್ಥಿರ ಸರ್ಕಾರದ ಅವಧಿಯಾಗಬೇಕಿದ್ದ ಸಮಯದಲ್ಲಿ ಒಬ್ಬ ವ್ಯಕ್ತಿಯ ಕುರ್ಚಿ ವ್ಯಾಮೋಹದ ಬಗ್ಗೆ ನಿತ್ಯ ಸುದ್ದಿ ಹರಡುತ್ತಿರುವುದು, ಕಾಂಗ್ರೆಸ್ ಪಕ್ಷದ ಹೈಕಮಾಂಡ್‍ನ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಿದ್ದು, ಪಕ್ಷದಲ್ಲಿ ಶಿಸ್ತು ಕಾಪಾಡುವಂತೆ ಮಾಡುವ ಸಾಮಥ್ರ್ಯವನ್ನೇ ಅದು ಕಳೆದುಕೊಂಡಂತೆ ಕಾಣುತ್ತಿದೆ.

ಶಿವಕುಮಾರ್ ಸಾಧಾರಣ ವ್ಯಕ್ತಿಯಲ್ಲ. ಉಪ ಮುಖ್ಯಮಂತ್ರಿಯಾಗಿ ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಬೆಂಗಳೂರು ಅಭಿವೃದ್ಧಿ ಮತ್ತು  ರಾಜ್ಯದ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ, ಕೃಷಿ ವಲಯವನ್ನು ನಿರ್ವಹಿಸುವ ಭಾರಿ ನೀರಾವರಿ ಸಚಿವ ಹುದ್ದೆ ಅವರ ಬಳಿ ಇದೆ.  ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮೂಲ ಸೌಕರ್ಯಗಳು, ಯೋಜನೆಯಲ್ಲಿ ಕಾಣುವ ಗೊಂದಲಗಳು, ಆಳ್ವಿಕೆಯ ಕೊರತೆ ಇವೆಲ್ಲವೂ ತಕ್ಷಣವೇ ಗಮನಹರಿಸಬೇಕಾದ ಅಂಶಗಳಾಗಿವೆ. ಭಾರಿ ನೀರಾವರಿ ಯೋಜನೆಗಳು ಅಷ್ಟೇ ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿಳಂಬ, ವಿವಾದ ಮತ್ತು ಬೃಹತ್ ಪ್ರಮಾಣದ ಸಾರ್ವಜನಿಕ ವೆಚ್ಚ ಇಲಾಖೆಯನ್ನು ಬಾಧಿಸುತ್ತಿದೆ. ಆದರೂ ಆಡಳಿತ ಹಳ್ಳಹಿಡಿದಿದ್ದು ರಾಜಕೀಯ ಪ್ರಹಸನಗಳೇ ಕೇಂದ್ರ ಬಿಂದು ಆಗಿವೆ.

ಇದೊಂದು ಸೆಟ್ ನಮೂನೆಯಾಗಿ ರೂಪುಗೊಂಡುಬಿಟ್ಟಿದೆ. ಪ್ರತಿದಿನವೂ ಡಿ ಕೆ ಶಿವಕುಮಾರ್ ಅಥವಾ ಅವರ ಸೋದರ ಡಿ ಕೆ ಸುರೇಶ್ ಹೇಳಿಕೆಗಳನ್ನು ನೀಡುತ್ತಿರುತ್ತಾರೆ, ಪಕ್ಷಕ್ಕೆ ನಿಷ್ಠೆ ತೋರುವ ರೀತಿಯಲ್ಲಿ, ಕಾರ್ಯಕರ್ತರ ಆಕಾಂಕ್ಷೆ ಅಥವಾ ವಿಧಿಯ ಬರಹ ಹೀಗೆ ಹಲವು ಆಯಾಮಗಳ ಹೇಳಿಕೆಗಳು ಬರುತ್ತಿರುತ್ತವೆ. ಆದರೆ ಎದ್ದುಕಾಣುವ ಅಂಶ ಎಂದರೆ ಈ ಹೇಳಿಕೆಗಳ ಹಿಂದೆ ಮುಖ್ಯಮಂತ್ರಿ ಹುದ್ದೆ ಪಡೆಯುವ ಆಕಾಂಕ್ಷೆ ಅಡಗಿರುತ್ತದೆ. ಈ ಮುಚ್ಚುಮರೆಯು ಯಾರನ್ನೂ ಮೂರ್ಖರನ್ನಾಗಿ ಮಾಡುವುದಿಲ್ಲ. ಆದರೆ ಪರಿಣಾಮ ಮಾತ್ರ ಹಾನಿಕಾರಕ. ಇದು ಹಾಲಿ ಮುಖ್ಯಮಂತ್ರಿಯ ಅಧಿಕಾರವನ್ನು ಮೊಟಕುಗೊಳಿಸುವ ಉದ್ದೇಶದ್ದು. ಆಡಳಿತವನ್ನು ಅಸ್ತವ್ಯಸ್ತಗೊಳಿಸುತ್ತದೆ ಮತ್ತು ಮಾಧ್ಯಮಗಳಿಗೆ ಪಕ್ಷದ ಆಂತರಿಕ ಅಧಿಕಾರ ಕಚ್ಚಾಟದ ಸುದ್ದಿಗಳನ್ನು ಒದಗಿಸುತ್ತದೆಯೇ ಹೊರತು ಪಕ್ಷದ ನೀತಿ ಸಾಧನೆಗಳ ಮಾಹಿತಿಯನ್ನಲ್ಲ.

ಈ ಬೆಳವಣಿಗೆಗಳಿಂದ ಹೊರಡುವ ಇನ್ನೂ ಹಾನಿಕಾರಕ ಸಂದೇಶ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದೇ ಆಗಿರುತ್ತದೆ. ಒಬ್ಬ ಪ್ರಬಲ ನಾಯಕನನ್ನು ಮಣಿಸುವ ಸಾಮಥ್ರ್ಯ ಇರುವ ಒಬ್ಬ ನಾಯಕರೂ ಪಕ್ಷದಲ್ಲಿ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಪಕ್ಷದಲ್ಲಿ ಶಿಸ್ತು ಇಲ್ಲವಾಗಿದ್ದು ತಮ್ಮ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ನಾಯಕರು ಒತ್ತಡದ ತಂತ್ರಗಳನ್ನು ಅನುಸರಿಸುತ್ತಿರುವುದು, ಸಾಂಸ್ಥಿಕ ಪ್ರಕ್ರಿಯೆಯನ್ನು ನಿರ್ಲಕ್ಷಿಸಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಈ ಅಭಿಪ್ರಾಯವೇ ಪಕ್ಷಕ್ಕೆ ಹಾನಿಕಾರಕವಾಗಿದ್ದು, ಈಗಾಗಲೇ ಕರ್ನಾಟಕದಲ್ಲಿ ಮತ್ತು ರಾಷ್ಟ್ರ ಮಟ್ಟದಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡಿರುವ ಪಕ್ಷವನ್ನು ಇನ್ನಷ್ಟು ದುಸ್ಥಿತಿಗೆ ಕೊಂಡೊಯ್ಯುತ್ತದೆ.

ಈ ದುರವಸ್ಥೆಯ ಜವಾಬ್ದಾರಿ ನೇರವಾಗಿ ಕೇಂದ್ರ ನಾಯಕತ್ವದ ಮೇಲಿರುತ್ತದೆ. ಸೋನಿಯಾ ಮತ್ತು ರಾಹುಲ್ ಗಾಂಧಿಯವರ ಮೌನ ಕಾರ್ಯತಂತ್ರದ ಸಂಯಮ ಅಲ್ಲ. ಇದು ಜವಾಬ್ದಾರಿಯಿಂದ ನುಣುಚಿಕೊಳ್ಳುವುದೇ ಆಗಿದೆ. ಶಿವಕುಮಾರ್ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದರೆ, ಪಕ್ಷವು ಕರ್ನಾಟಕದ ಜನತೆಗೆ ಸ್ಪಷ್ಟನೆ ನೀಡಬೇಕಾಗುತ್ತದೆ. ಇಲ್ಲವಾದರೆ, ನಾಯಕತ್ವವು ಯಾವುದೇ ಸಂದೇಹಕ್ಕೆ ಎಡೆಮಾಡಿಕೊಡದಂತೆ, ಅವರಿಗೆ ನೀಡಲಾಗಿರುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ಆದೇಶಿಸಬೇಕಿದೆ. ಅಂತ್ಯವಿಲ್ಲದ ಊಹಾಪೆÇೀಹಗಳು, ಖಾಲಿ ಇಲ್ಲದ ಹುದ್ದೆಯ ಬಗ್ಗೆ ಗುಮಾನಿಗಳು ಪಕ್ಷದಲ್ಲಿ ವಿಶ್ವಾಸವನ್ನು ಹಾಳುಮಾಡುತ್ತದೆ.

ರಾಜಕೀಯ ಮಹತ್ವಾಕಾಂಕ್ಷೆ ಸಹಜವಾದ ಲಕ್ಷಣ; ಆದರೆ ಸಾರ್ವಜನಿಕ ಪ್ರದರ್ಶನ ಅಸಹಜವಾಗಿ ಕಾಣುತ್ತದೆ. ಕಾಂಗ್ರೆಸ್ ಪಕ್ಷವು ತನ್ನ ಮನೆಯನ್ನೇ ಸರಿಯಾಗಿ ನಿರ್ವಹಿಸಲಾಗದಂತೆ ಕಾಣುವುದು ಅದರ ವರ್ಚಸ್ಸನ್ನು ಕುಗ್ಗಿಸುತ್ತದೆ. ಆಳ್ವಿಕೆ ಮತ್ತು ಸಮನ್ವಯ ಸರ್ಕಾರದ ಉಳಿವಿಗೆ ಅತ್ಯವಶ್ಯವಾಗಿರುವಾಗ, ವೈಯುಕ್ತಿಕ ಆಕಾಂಕ್ಷೆಗಳು ಸಾರ್ವಜನಿಕ ಕರ್ತವ್ಯವನ್ನೂ ಮೀರಿ ವ್ಯಕ್ತವಾಗುವುದು, ಪಕ್ಷಕ್ಕೆ ದುಬಾರಿಯಾಗಿ ಪರಿಣಮಿಸುತ್ತದೆ. ಪಕ್ಷ ಇದನ್ನು ಎದುರಿಸುವ ಸಾಮಥ್ರ್ಯವನ್ನು ಹೊಂದಿಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again