ಬಾಂಗ್ಲಾದಲ್ಲಿ ಹಿಂದೂಗಳ ದಮನ: ಇಸ್ಲಾಮಿಕ್ ದೇಶಗಳ ಮೌನವೇಕೆ?
ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರತಿಪಾದಿಸುವ ಇಸ್ಲಾಮಿಕ್ ದೇಶಗಳು, ಅವರ ನೀತಿಗಳು ಮುಸ್ಲಿಮರು ಬಹುಸಂಖ್ಯಾತರಾಗಿರುವ ಸಮಾಜಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕಿದೆ
................
ಇದ್ದುದು ಇದ್ದ ಹಾಗೆ * ಬಿವಿಸೀ
ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳು ಉಲ್ಬಣಿಸುತ್ತಿದ್ದು, ಹಿಂದೂಗಳನ್ನು ಗುರಿಮಾಡಿ ಕೊಲ್ಲಲಾಗುತ್ತಿದೆ. ದೇವಸ್ಥಾನ ಮತ್ತು ಮನೆಗಳನ್ನೂ ಧ್ವಂಸ ಮಾಡಲಾಗುತ್ತಿದೆ. ಬಲಾತ್ಕಾರದಿಂದ ಸ್ಥಳಾಂತರ ಮಾಡಲಾಗುತ್ತಿದೆ. ಇದು ಹಲವು ವಲಯಗಳಲ್ಲಿ ಆತಂಕ ಸೃಷ್ಟಿಸಿದೆ. ಆದರೂ ಎದ್ದು ಕಾಣುವಂತಹ ಒಂದು ಅಂಶ ಎಂದರೆ ಬಹುತೇಕ ಇಸ್ಲಾಮಿಕ್ ದೇಶಗಳ ಮೌನ. ಬೇರೆ ಸನ್ನಿವೇಶಗಳಲ್ಲಿ ಅಲ್ಪಸಂಖ್ಯಾತ ಹಕ್ಕುಗಳ ಬಗ್ಗೆ ಪ್ರಖರವಾಗಿ ದೊಡ್ಡ ದನಿಯಲ್ಲಿ ಹುಯಿಲೆಬ್ಬಿಸುವ, ವಿಶೇಷವಾಗಿ ಭಾರತದ ಸಂದರ್ಭದಲ್ಲಿ ಗಟ್ಟಿ ದನಿಯಲ್ಲಿ ಮಾತನಾಡುವ, ಎಚ್ಚರಿಕೆ ನೀಡುವ, ಈ ದೇಶಗಳ ಹಿಂದೂ ದಮನ ಬಗ್ಗೆ ಮೌನ ಅಚ್ಚರಿದಾಯಕವಾಗಿದೆ.
ಟರ್ಕಿ, ಪಾಕಿಸ್ತಾನ, ಮಲೇಷಿಯಾ ಮತ್ತು ಸೌದಿ ಅರೇಬಿಯಾ ದೇಶಗಳು ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುವ ದಾಳಿಗಳನ್ನು ವಿರೋಧಿಸಿ, ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿರುತ್ತವೆ, ನಿರ್ಣಯಗಳನ್ನು ಅನುಮೋದಿಸುತ್ತಿರುತ್ತವೆ, ಅಂತಾರಾಷ್ಟ್ರೀಯ ಅಭಿಪ್ರಾಯವನ್ನು ಕ್ರೋಢೀಕರಿಸುತ್ತಿರುತ್ತವೆ. ಈ ಘಟನೆಗಳು ಸ್ಥಳೀಯ ಸ್ವರೂಪದ್ದಾದರೂ, ತನಿಖೆಗೆ ಒಳಗಾಗಿದ್ದರೂ ಸಹ ಈ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಆದರೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಸತತವಾದ ಬೆದರಿಕೆ ಮತ್ತು ಹತ್ಯೆಗಳನ್ನು ಎದುರಿಸುತ್ತಿರುವಾಗ, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ನಿರಂತರ ಭೀತಿಯಲ್ಲಿ, ಧರ್ಮನಿಂದನೆ ಕಾನೂನು ಮತ್ತು ಸಾಮೂಹಿಕ ಹಿಂಸೆಯ ವಾತಾವರಣದಲ್ಲಿ ಬದುಕುತ್ತಿರುವಾಗ ಇದೇ ಸರ್ಕಾರಗಳು ಮೌನ ವಹಿಸುತ್ತವೆ. ಈ ಮೌನ ಇಸ್ಲಾಮಿಕ್ ದೇಶಗಳ ದ್ವಂದ್ವ ನೀತಿಗಳನ್ನು ಬಯಲು ಮಾಡುತ್ತದೆ. ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ತಾತ್ವಿಕವಾಗಿಲ್ಲದೆ ಕೇವಲ ಧಾರ್ಮಿಕ ಅಸ್ಮಿತೆಗಳನ್ನು ಆಧರಿಸಿರುವುದನ್ನು ಸ್ಪಷ್ಟಪಡಿಸುತ್ತದೆ.
ಭಾರತದಲ್ಲಿ ಮುಸ್ಲಿಮರು ಮತ್ತು ಬಾಂಗ್ಲಾದೇಶದಲ್ಲಿ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳು ಎದುರಿಸುತ್ತಿರುವ ಪರಿಸ್ಥಿತಿಯ ವ್ಯತ್ಯಾಸ ಎದ್ದುಕಾಣುವಂತಿದೆ. ಭಾರತದಲ್ಲಿ ಸಾಮಾಜಿಕ ಘರ್ಷಣೆಗಳು ಮತ್ತು ರಾಜಕೀಯ ಧೃವೀಕರಣ ನಡೆಯುತ್ತಿದ್ದರೂ, ಮುಸ್ಲಿಂ ಜನಸಂಖ್ಯೆಗೆ ಸಾಂವಿಧಾನಿಕ ರಕ್ಷಣೆ, ರಾಜಕೀಯ ಪ್ರಾತಿನಿಧ್ಯ ಇದೆ, ಸ್ವತಂತ್ರ ನ್ಯಾಯಾಂಗ ಇದೆ, ಮುಕ್ತ ಪತ್ರಿಕಾ ಸ್ವಾತಂತ್ರ್ಯವೂ ಇದೆ. ಅವರ ಕುಂದು ಕೊರತೆಗಳಿಗೆ ಇಲ್ಲಿ ಸ್ಪಂದನೆ ದೊರೆಯುತ್ತದೆ. ಆದರೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಹಿಂದೂಗಳು ಕ್ಷೀಣಿಸುತ್ತಿರುವ ಜನಸಂಖ್ಯೆಯಾಗುತ್ತಿದ್ದು ಪರಿಣಾಮಕಾರಿಯಾದ ಸಾಂಸ್ಥಿಕ ರಕ್ಷಣೆಯನ್ನು ಹೊಂದಿಲ್ಲ. ರಾಜಕೀಯ ಅಸ್ಥಿರತೆ ಉಂಟಾದಾಗ ನಡೆಯುವ ನಿರ್ದಿಷ್ಟ ದಾಳಿಗಳು ಅವ್ಯಾಹತವಾಗಿ ನಡೆಯುತ್ತಿವೆ. ಆದಾಗ್ಯೂ ಜಾಗತಿಕ ಮಟ್ಟದಲ್ಲಿ ವ್ಯಕ್ತವಾಗುವ ಆಕ್ರೋಶ ಒಂದೇ ದಿಕ್ಕಿನಲ್ಲಿರುವಂತೆ ಕಾಣುತ್ತಿದೆ.
ಈ ಆಯ್ಕೆಯನುಸಾರ ತೋರುವ ಕಾಳಜಿ ಭಾರತದಲ್ಲೂ ಪ್ರತಿಧ್ವನಿಸುತ್ತದೆ. ಭಾರತದ ಬಹುತೇಕ ಎಡಪಂಥೀಯ, ಉದಾರವಾದಿ ಬುದ್ಧಿಜೀವಿಗಳು, ಸ್ಥಳೀಯವಾಗಿ ಅಲ್ಪಸಂಖ್ಯಾತರ ಮೇಲಿನ ಅನ್ಯಾಯಗಳನ್ನು ಖಂಡಿಸಿ, ಪ್ರತಿರೋಧ ವ್ಯಕ್ತಪಡಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ ನೆರೆ ರಾಷ್ಟ್ರಗಳಲ್ಲಿ ಹಿಂದೂಗಳ ಮೇಲೆ ನಡೆಯುವ ದಾಳಿಗಳ ಬಗ್ಗೆ ಅಳೆದು ಸುರಿದೂ ಮಾತನಾಡುತ್ತಾರೆ. ಅಂತಿಮ ಫಲಿತಾಂಶ ಒಂದೇ ಆಗಿರುತ್ತದೆ. ಸಾರ್ವತ್ರಿಕ ಮಾನವ ಹಕ್ಕುಗಳ ಸಮರ್ಥಕರಾಗಿ ಇವರ ನಿಲುವು, ಈ ರೀತಿಯ ನೈತಿಕ ಮೌನದಿಂದ, ದುರ್ಬಲವಾಗುತ್ತದೆ.
ಈ ಬೂಟಾಟಿಕೆಯನ್ನು ಖಂಡಿಸುವುದೆಂದರೆ, ಭಾರತದಲ್ಲಿ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅಲಕ್ಷಿಸುವುದಲ್ಲ. ಈ ಪ್ರಕರಣಗಳ ಬಗ್ಗೆ ಕೂಡಲೇ ಗಮನ ಹರಿಸಬೇಕಿದೆ, ಸರಿಪಡಿಸಬೇಕಿದೆ. ಆದರೆ ಇಲ್ಲಿ ಸ್ಥಿರವಾದ ನಿಲುವು ಮುಖ್ಯವಾಗುತ್ತದೆ. ಮಾನವ ಹಕ್ಕುಗಳು ಸಂತ್ರಸ್ತರ ಧಾರ್ಮಿಕ ಅಸ್ಮಿತೆಯನ್ನು ಅವಲಂಬಿಸುವುದಿಲ್ಲ. ಅಥವಾ ಅನ್ಯಾಯ ನಡೆದ ಸ್ಥಳವನ್ನು ಆಧರಿಸುವುದಿಲ್ಲ. ಮಾನವ ಪರ ಕಾಳಜಿಗೆ ಗಡಿಗಳು ಅಡ್ಡಿಯಾದಾಗ ಅಥವಾ ಸಿದ್ದಾಂತಗಳು ಅಡ್ಡ ಬಂದಾಗ, ಅಲ್ಲಿ ನೈತಿಕ ನಿಲುವು ಘಾಸಿಗೊಳಗಾಗುತ್ತದೆ, ಅದು ರಾಜಕೀಯ ಅಸ್ತ್ರವಾಗುತ್ತದೆ.
ಈ ಸನ್ನಿವೇಶದಿಂದ ಮೂಡುವ ಸ್ಪಷ್ಟ ಸಂದೇಶ ಎಂದರೆ, ಅಲ್ಪಸಂಖ್ಯಾತರ ಹಕ್ಕುಗಳ ಬಗ್ಗೆ ಪ್ರತಿಪಾದಿಸುವ ಇಸ್ಲಾಮಿಕ್ ದೇಶಗಳು, ಅವರ ನೀತಿಗಳು ಏಕೆ ಮುಸ್ಲಿಮರು ಬಹುಸಂಖ್ಯಾತರಾಗಿರುವ ಸಮಾಜಗಳಿಗೆ ಏಕೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಬೇಕಿದೆ. ಭಾರತದಲ್ಲಿ ಎಡಪಂಥೀಯರು, ಹಿಂದೂಗಳು ಸಂತ್ರಸ್ತರಾದಾಗ ಏಕೆ ಅವರ ದನಿ ಸ್ಪಷ್ಟವಾಗಿರುವುದಿಲ್ಲ ಎಂದು ಹೇಳಬೇಕಿದೆ. ಬೇಕಾದಾಗ ಆಕ್ರೋಶ ವ್ಯಕ್ತಪಡಿಸುವುದು ವಿಶ್ವಾಸಾರ್ಹತೆಗೆ ಹಾನಿ ಮಾಡುತ್ತದೆ. ನಿರ್ದಿಷ್ಟ ಗುರಿಯಿಟ್ಟು ದಮನ ಮಾಡುವುದರ ಬಗ್ಗೆ ಮೌನವಾಗಿರುವುದು ಯಾವುದೇ ಹೇಳಿಕೆ ಮತ್ತು ಪ್ರತಿಕ್ರಿಯೆಗಿಂತಲೂ ಹೆಚ್ಚು ಆತಂಕ ಮೂಡಿಸುತ್ತದೆ.
Comments
Post a Comment