ಚುನಾಯಿತ ಅಧಿಕಾರವೇ ಸಾರ್ವಜನಿಕ ಬೆದರಿಕೆಯ ಕೇಂದ್ರ
ಪ್ರಚಲಿತ * ಬಿವಿಸೀ
ಚುನಾಯಿತ ಪ್ರತಿನಿಧಿಗಳು ಸರ್ಕಾರಿ ಅಧಿಕಾರಿಗಳನ್ನು ಬೆದರಿಸುವುದು ಆಘಾತಕಾರಿ ಬೆಳವಣಿಗೆ. ಇತ್ತೀಚಿನ ಕೆಲವು ಪ್ರಕರಣಗಳಲ್ಲಿ ಶಿಡ್ಲಘಟ್ಟದ ಶಾಸಕ ರಾಜೀವ್ ಗೌಡ, ಪುರಸಭೆಯ ಹಿರಿಯ ಮಹಿಳಾ ಅಧಿಕಾರಿಯೊಬ್ಬರಿಗೆ ಬೆದರಿಕೆ ಒಡ್ಡಿರುವುದು ವರದಿಯಾಗಿದೆ. ಮತ್ತೊಂದು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಪುರಸಭೆ ಆಯುಕ್ತರಿಗೆ ಬೆದರಿಕೆ ಒಡ್ಡುತ್ತಿರುವ ವಿಡಿಯೋ ವೈರಲ್ ಆಗಿದೆ. ಇದೇನೂ ಅಲ್ಲಲ್ಲಿ ನಡೆಯುವ ವಿರಳ ಘಟನೆಗಳಲ್ಲ. ಚುನಾಯಿತ ಪ್ರತಿನಿಧಿಗಳಲ್ಲಿ ಕಾನೂನು ವಿರೋಧಿ ಸಂಸ್ಕøತಿ ಬೆಳೆಯುತ್ತಿರುವುದರ ಸಂಕೇತ.
ಈ ಬೆದರಿಕೆಗಳು ಸದಾ ಕಾಲವೂ ಅಧಿಕಾರಿಗಳನ್ನು ಕ್ರಮ ಕೈಗೊಳ್ಳುವಂತೆ ಬಲಾತ್ಕಾರ ಮಾಡುವಂತಿರುವುದಿಲ್ಲ. ಒಮ್ಮೊಮ್ಮೆ ಇದು ಕೇವಲ ಪ್ರತಿನಿಧಿಗಳ ಶಕ್ತಿ ಪ್ರದರ್ಶನವಾಗಿರುತ್ತದೆ. ಈ ಘಟನೆಗಳು ನೀಡುವ ಸ್ಪಷ್ಟ ಸಂದೇಶವೆಂದರೆ, ಶಾಸಕರು ಅಧಿಕಾರಿಗಳನ್ನು ಬೆದರಿಸಬಹುದು; ಆದರೂ ಅವರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎನ್ನುವುದು. ಇದು ಆಳ್ವಿಕೆ ಎನಿಸಿಕೊಳ್ಳುವುದಿಲ್ಲ. ಸಾರ್ವಜನಿಕವಾಗಿ ಬೆದರಿಸುವ ಒಂದು ಕ್ರಿಯೆಯಾಗಿ ಕಾಣುತ್ತದೆ.
ಈ ಪ್ರಕರಣಗಳಿಗೆ ವ್ಯಕ್ತವಾಗುವ ಪ್ರತಿಕ್ರಿಯೆಗಳು ಸಮಸ್ಯೆಯನ್ನು ಮತ್ತಷ್ಟು ಉಲ್ಬಣಿಸುತ್ತದೆ. ಶಿಡ್ಲಘಟ್ಟ ಪ್ರಕರಣದಲ್ಲಿ ಸಿಬ್ಬಂದಿಗಳ ಪ್ರತಿಭಟನೆ ನಡೆದಿದ್ದು, ಪಕ್ಷದ ವತಿಯಿಂದ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಪುತ್ತೂರು ಪ್ರಕರಣದಲ್ಲಿ ವಿಡಿಯೋ ಸಾಕ್ಷಿ ಇದ್ದಾಗ್ಯೂ ಸಹ ಹೆಚ್ಚು ಖಂಡನೆಗೆ ಒಳಗಾಗಿಲ್ಲ, ಪಕ್ಷದಿಂದಲೂ ಯಾವುದೇ ಕ್ರಮ ಕೈಗೊಂಡಿಲ್ಲ.
ಸಮಸ್ಯೆ ಇರುವುದು ಕೇವಲ ವ್ಯಕ್ತಿಗತ ಶಾಸಕರಲ್ಲಿ ಅಲ್ಲ. ಹಿರಿಯ ನಾಯಕರೂ ಸಹ ಈ ವರ್ತನೆಯನ್ನು ಸಾಮಾನ್ಯ ಎನ್ನುವಂತೆ ಮಾಡಿದ್ದಾರೆ. ಹಳಿಯಾಳದ ಶಾಸಕ ಮತ್ತು ಮಾಜಿ ಸಚಿವ ಆರ್ ವಿ ದೇಶಪಾಂಡೆ, ಹಲವು ಬಾರಿ ಸಚಿವರಾಗಿದ್ದು, ಸಭೆಗಳಲ್ಲಿ ಅಧಿಕಾರಿಗಳನ್ನು ಸಾರ್ವಜನಿಕವಾಗಿಯೇ ಬೈಯ್ಯುವುದಕ್ಕೆ ಖ್ಯಾತರಾಗಿದ್ದಾರೆ.
ಈ ವರ್ತನೆಯ ಮೂಲ ಇರುವುದು ಅಧಿಕಾರ ಇದೆ ಎಂಬ ಅಪಾಯಕಾರಿ ಅಹಮಿಕೆಯಲ್ಲಿ. ಅನೇಕ ಶಾಸಕರು, ತಾವು ಚುನಾವಣೆಗಳಲ್ಲಿ ಗೆದ್ದ ಮಾತ್ರಕ್ಕೆ ಆಡಳಿತದ ಮೇಲೆ ಪೂರ್ಣ ನಿಯಂತ್ರಣ ಲಭಿಸುತ್ತದೆ ಎಂದೇ ಭಾವಿಸುತ್ತಾರೆ. ಅಧಿಕಾರಿಗಳನ್ನು ವಿನಮ್ರವಾಗಿ ಹೇಳಿದಂತೆ ಮಾಡುವ ಸಹಾಯಕರ ಹಾಗೆ ನೋಡುತ್ತಾರೆ. ಇದು ಊಳಿಗಮಾನ್ಯ ಮನಸ್ಥಿತಿಯಾಗಿದೆ. ಒಬ್ಬ ಶಾಸಕ ಸಾಂವಿಧಾನಿಕ ಪ್ರತಿನಿಧಿಯಾಗಿರಬೇಕೇ ಹೊರತು, ಸ್ಥಳೀಯ ಬಲಾಢ್ಯ ಫ್ಯೂಡೆಲ್ ವ್ಯಕ್ತಿಯಾಗಿ ಅಲ್ಲ.
ಪ್ರಜಾಪ್ರಭುತ್ವ ವ್ಯವಸ್ಥೆಯು ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನು ನಿಯಂತ್ರಿಸಿ, ಸರಿಪಡಿಸಲು ಕಾನೂನಾತ್ಮಕ ಮಾರ್ಗಗಳನ್ನು ಕಲ್ಪಿಸುತ್ತದೆ. ವಿವರಣೆ ಕೇಳುವುದು, ದೂರುಗಳನ್ನು ಆಲಿಸುವುದು ಮತ್ತು ಉನ್ನತ ಅಧಿಕಾರಿಗಳನ್ನು ಸಂಪರ್ಕಿಸುವುದು ಇರುವ ದಾರಿ. ಬೆದರಿಕೆ ಒಡ್ಡುವುದು, ಸಾರ್ವಜನಿಕವಾಗಿ ಅಪಮಾನಿಸುವುದು ಆಳ್ವಿಕೆಯಾಗುವುದಿಲ್ಲ. ಗೂಂಡಾಗಿರಿ ಎನಿಸಿಕೊಳ್ಳುತ್ತದೆ. ಸಾಂವಿಧಾನಿಕ ವ್ಯವಸ್ಥೆಯಲ್ಲಿ ಇದಕ್ಕೆ ಆಸ್ಪದ ಇರುವುದಿಲ್ಲ.
ಆದರೆ ಇದರಿಂದಾಗುವ ಹಾನಿ ದೀರ್ಘ ಕಾಲ ಇರುತ್ತದೆ. ಅಧಿಕಾರಿಗಳು ಹೆದರಿಕೊಂಡಷ್ಟೂ ನಿರ್ಧಾರಗಳು ವಿಳಂಬವಾಗುತ್ತವೆ, ಪ್ರಾಮಾಣಿಕ ಅಧಿಕಾರಿಗಳು ಉತ್ಸಾಹ ಕಳೆದುಕೊಳ್ಳುತ್ತಾರೆ. ಆಳ್ವಿಕೆ ದುರ್ಬಲವಾಗುತ್ತದೆ. ಸಾರ್ವಜನಿಕ ವಿಶ್ವಾಸ ಇಲ್ಲವಾಗುತ್ತದೆ. ಆಡಳಿತಗಾರರು ಕಾನೂನಿಗಿಂತಲೂ ಹೆಚ್ಚಾಗಿ ರಾಜಕಾರಣಿಗಳಿಗೆ ಹೆದರುವಂತಹ ವ್ಯವಸ್ಥೆಯಲ್ಲಿ ಕಾನೂನು ಕಾರ್ಯಗತವಾಗುವುದಿಲ್ಲ .
ರಾಜಕೀಯ ಪಕ್ಷಗಳು ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು. ಬೇಕಾದ ಸನ್ನಿವೇಶಗಳಲ್ಲಿ ಆಕ್ರೋಶ ವ್ಯಕ್ತಪಡಿಸುವುದು, ವಿಳಂಬವಾಗಿ ಕ್ರಮ ಜರುಗಿಸುವುದು ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತದೆ. ಪಕ್ಷದ ನಾಯಕತ್ವಗಳು, ಅದರಲ್ಲೂ ಅಧಿಕಾರದಲ್ಲಿರುವವರು, ಸ್ಪಷ್ಟವಾದ ಇತಿಮಿತಿಗಳನ್ನು, ನಿಬರ್ಂಧಗಳನ್ನು ಜಾರಿಗೊಳಿಸಬೇಕು, ತಪ್ಪು ಮಾಡುವವರನ್ನು ನಿರಂತರವಾಗಿ ಹದ್ದುಬಸ್ತಿನಲ್ಲಿಡಬೇಕು. ಕಾನೂನು ತನ್ನ ಪ್ರಕ್ರಿಯೆ ನಡೆಸಲು ಅವಕಾಶ ಕಲ್ಪಿಸಬೇಕು.
ಎಲ್ಲಕ್ಕಿಂತಲೂ ಮಿಗಿಲಾಗಿ, ವಿನಮ್ರತೆ ಮತ್ತು ಸಾರ್ವಜನಿಕ ಜೀವನದಲ್ಲಿ ಸಂಯಮ ಇರುವುದು ಮುಖ್ಯವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಭಯೋತ್ಪಾದಕರನ್ನು ಆಯ್ಕೆ ಮಾಡುವುದಲ್ಲ. ಇದು ಕಾನೂನು ಗೌರವಿಸುವವರಿಗೆ ಅಧಿಕಾರ ನೀಡಬೇಕು. ಇನ್ನೂ ಹೆಚ್ಚಿನ ಹಾನಿ ಆಗುವ ಮುನ್ನ ಈ ತತ್ವವನ್ನು ಸಮರ್ಥಿಸಿಕೊಳ್ಳಬೇಕಿದೆ.
Comments
Post a Comment