ಭಾರತದ ಮಾಹಿತಿ ಹಕ್ಕು ಯುಗ ಅಂತ್ಯ

 ಪತ್ರಕರ್ತನಾಗಿ ನನ್ನದೇ ಅನುಭವದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯ ದುರವಸ್ಥೆಯನ್ನು ಕಂಡಿದ್ದೇನೆ.

...............

ನೇರಾನೇರ * ಬಿವಿಸೀ

ಇಪ್ಪತ್ತು ವರ್ಷಗಳ ಹಿಂದೆ ಮಾಹಿತಿ ಹಕ್ಕು ಕಾಯ್ದೆ ಜಾರಿಯಾದಾಗ, ಅದನ್ನು ಸಾಧಾರಣ ಪ್ರಜೆಗಳ ಕೈಗೆ ನೀಡಿದ ಒಂದು ಬಲಿಷ್ಠವಾದ ಅಸ್ತ್ರ ಮತ್ತು ಪ್ರಜಾಪ್ರಭುತ್ವದ ನಿರ್ಣಾಯಕ ಹಂತ ಎಂದು ಪರಿಗಣಿಸಲಾಗಿತ್ತು. ಇಂದು ಈ ಕಾಯ್ದೆ ಕೇವಲ ತನ್ನ ರೂಪದಲ್ಲಿ ಮಾತ್ರ ಉಳಿದಿದ್ದು ಇದೀಗ ಸತ್ವ ಕಳೆದುಕೊಂಡಿದೆ. ಮೂಲ ಭರವಸೆಯ ಸ್ಥಾನವನ್ನು ಆಕ್ರಮಿಸಿರುವುದು ದುರ್ಬಲವಾದ ಒಂದು ಕಾನೂನು. ಇದು ಇನ್ನೂ ಪ್ರಸ್ತುತವಾಗಿರುವುದಕ್ಕೆ ಕಾರಣ ಜಾಗೃತಿ ಅಭಿಯಾನಗಳು ಮತ್ತು ಅಧಿಕೃತ ಸಮರ್ಥನೆಗಳು. ಆದರೆ ಈ ಕ್ರಮಗಳು ವಾಸ್ತವಕ್ಕೆ ದೂರವಾಗಿವೆ.

ಕರ್ನಾಟಕದ ಆರ್‍ಟಿಐ ಆಯುಕ್ತರು ವಿವಿಧ ಜಿಲ್ಲೆಗಳಲ್ಲಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಈ ಕಾರ್ಯಕ್ರಮಗಳಲ್ಲಿ ಆರ್‍ಟಿಐ ಕಾಯ್ದೆಯನ್ನು ನಾಗರಿಕರಿಗೆ ಮಾಹಿತಿಗಳನ್ನು ಪಡೆದುಕೊಳ್ಳಲು ಮತ್ತು ಅಧಿಕಾರಿಗಳನ್ನು ಉತ್ತರದಾಯಿಗಳನ್ನಾಗಿ ಮಾಡಲು ಇರುವ ಒಂದು ಪರಿಣಾಮಕಾರಿ ಸಾಧನ ಎಂದು ಬಣ್ಣಿಸುತ್ತಾರೆ. ಆದರೆ ಈ ಕಾರ್ಯಕ್ರಮಗಳು ಕಾಟಾಚಾರಕ್ಕೆಂಬತೆ ಕೇವಲ ಶೋಗಳಾಗಿವೆ. ಕಾಯ್ದೆಯನ್ನು ಅನುಷ್ಠಾನಗೊಳಿಸದೆ ಜಾಗೃತಿ ಮೂಡಿಸುವುದು ಅರ್ಥಹೀನ. ನಾಗರಿಕರಿಗೆ ಆರ್‍ಟಿಐ ಕಾಯ್ದೆಯ ಬಗ್ಗೆ ಅರಿವು ಇಲ್ಲದೆ ಏನಿಲ್ಲ. ಆದರೆ ಸರ್ಕಾರಗಳಿಂದ ಆರ್ ಟಿ ಐ ಶಾಸನ ಪರಿಣಾಮಕಾರಿ ಜಾರಿಗೆ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ.

ಆರ್‍ಟಿಐ ಬಳಕೆದಾರರ ನೈಜ ಅನುಭವಗಳು ಆಯುಕ್ತರ ಘೋಷಣೆಗಳಿಗೆ ವ್ಯತಿರಿಕ್ತ. ಅರ್ಜಿಗಳನ್ನು ನಿರ್ಲಕ್ಷಿಸುವುದು, ಗಡುವುಗಳನ್ನು ಉಲ್ಲಂಘಿಸುವುದು, ಒಂದು ವೇಳೆ ಮಾಹಿತಿಯನ್ನು ಒದಗಿಸಿದರೂ ತೀರ ವಿಳಂಬವಾದ ಮೇಲೆ ನೀಡುವುದು ಅಥವಾ ಮಾಹಿತಿ ನಿರಾಕರಿಸಲು ಕಾಯ್ದೆಯಲ್ಲೇ ಇರುವ ಕೆಲವು ನಿಯಮಗಳನ್ನು ಬಳಸಿಕೊಳ್ಳುವುದು ಇವೆಲ್ಲವೂ ವಾಸ್ತವದ ಅನುಭವಗಳು. ಇಲ್ಲಿ ಮುಖ್ಯ ದೋಷ ವ್ಯವಸ್ಥೆಯಲ್ಲೇ ಇದೆ. ಸರ್ಕಾರಿ ಅಧಿಕಾರಿಗಳು ಕಾಲಕಾಲಕ್ಕೆ ಆರ್‍ಟಿಐ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಮೇಲ್ವಿಚಾರಣೆ ನಡೆಸುವ ಯಾವುದೇ ಆಂತರಿಕ ವ್ಯವಸ್ಥೆ ಇಲ್ಲ. ಮೇಲ್ವಿಚಾರಕ ಅಧಿಕಾರಿಗಳು ಕಾಯ್ದೆಯ ಅನುಸಾರ ನಡೆದುಕೊಳ್ಳುವುದನ್ನು ಗಮನಿಸುವುದಿಲ್ಲ. ನಿಷ್ಕ್ರಿಯರಾಗಿರುವುದು ವಾಸ್ತವದಲ್ಲಿ ದುಬಾರಿಯೂ ಆಗುವುದಿಲ್ಲ.

ಪತ್ರಕರ್ತನಾಗಿ ನನ್ನದೇ ಅನುಭವದಲ್ಲಿ ಮಾಹಿತಿ ಹಕ್ಕು ಕಾಯ್ದೆ ಜಾರಿಯ ದುರವಸ್ಥೆಯನ್ನು ಕಂಡಿದ್ದೇನೆ. ಸರ್ಕಾರದ ಕಾರ್ಯನಿರ್ವಹಣೆಯ ಬಗ್ಗೆ ವಾಸ್ತವ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ನಾನು ಹಲವು ವರ್ಷಗಳಿಂದ ನೂರಾರು (ಸಾವಿರಕ್ಕೂ ಸನಿಹ) ಅರ್ಜಿಗಳನ್ನು ಸಲ್ಲಿಸಿದ್ದೇನೆ.

 ಬಹುತೇಕ ಅರ್ಜಿಗಳಿಗೆ ಪ್ರತಿಕ್ರಿಯೆ ಬಂದಿಲ್ಲ. ಮಾಹಿತಿ ಅಧಿಕಾರಿಗಳ ಅಸಹಕಾರ ಪ್ರಶ್ನಿಸಿ ಮಾಹಿತಿ ಆಯೋಗದ ಕಚೇರಿಗೆ ಹೋಗಿ ಆಯುಕ್ತರ ಎದುರು ಸ್ವತಃ ವಾದಿಸಿದರೂ ಅವರು ಕೊಟ್ಟ ರಿಲೀಫ್ ಜಾರಿಯಾಗಿಲ್ಲ, ಇನ್ನೇನು ಇದನ್ನು ಪ್ರಶ್ನಿಸಿ ವಕೀಲರನ್ನು ಎಂಗೇಜ್ ಮಾಡಿಕೊಂಡು ಹೈಕೋರ್ಟಿಗೇ ಹೋಗಬೇಕು ಎನ್ನುವಷ್ಟರ ಮಟ್ಟಿಗೆ ಬಂತು. ಇದರ ಬೆನ್ನಹಿಂದೆ ಬಿದ್ದು ನಮ್ಮ ಹಕ್ಕು ಸಾಧಿಸಲು ಪ್ರತಿ ದಿನ ನಮ್ಮ ಡ್ಯೂಟಿ ನಿರ್ವಹಿಸಬೇಕಾದ ನಮಗೆ ಪುರಸೊತ್ತು ಇರಲು ಸಾಧ್ಯವೇ? ಇದಕ್ಕೆ ಅಗತ್ಯವಾದ ಸಂಪನ್ಮೂಲ, ಸಮಯದ ಹಕೀಕತ್ತು ಏನು?

ಇತ್ತೀಚಿನ ಪ್ರಕರಣವೊಂದರಲ್ಲಿ, ನಾನು ದಕ್ಷಿಣ ಕನ್ನಡದ ಪೆÇಲೀಸ್ ಸೂಪರಿಂಟೆಂಡೆಂಟ್ ಕಚೇರಿಯಿಂದ, ಸ್ವಾಮಿಯೊಬ್ಬರ ವಿರುದ್ಧ ಮಹಿಳೆಯೊಬ್ಬರು ಅಪಹರಣ ಮತ್ತು ಚಿತ್ರಹಿಂಸೆಯ ದೂರು ನೀಡಿದ್ದಾರೆಯೇ ಎಂಬ ಮಾಹಿತಿಯನ್ನು ಕೋರಿದ್ದೆ. ಈ ಅರ್ಜಿಗೆ ಉತ್ತರವೇ ಬರಲಿಲ್ಲ. ಹಲವು ಬಾರಿ ಅರ್ಜಿಯ ಬೆಂಬತ್ತಿದಾಗ, ಎಸ್ ಪಿ ಕಚೇರಿಯಿಂದ ಈ ಅರ್ಜಿಯನ್ನು ಸದ್ರಿ ಪೆÇಲೀಸ್ ಠಾಣೆಗೆ ರವಾನಿಸಲಾಗಿದೆ ಎಂಬ ಮಾಹಿತಿ ನೀಡಲಾಯಿತು. ಹಲವು ತಿಂಗಳುಗಳ ನಂತರ, ಹಲವಾರು ಬಾರಿ ವಿಚಾರಿಸಿದಾಗಲೂ, ಈ ಕುರಿತ ಅಧಿಕೃತ ಮಾಹಿತಿಯಾಗಲೀ, ಪ್ರತಿಕ್ರಿಯೆಯಾಗಲೀ ಇನ್ನೂ ಲಭಿಸಿಲ್ಲ. 

ಇದು ಅಪವಾದವೇನಲ್ಲ. ಇದೇ ನಿಯಮ. ಆರ್‍ಟಿಐ ವ್ಯವಸ್ಥೆಯು ಕಾಯ್ದೆಯನ್ನು ಅನುಷ್ಠಾನಗೊಳಿಸುವ ಸಂಪೂರ್ಣ ಜವಾಬ್ದಾರಿಯನ್ನು ಪ್ರಜೆಗಳ ಮೇಲೆ ಹೇರಲಾಗುತ್ತಿದೆ.  ಸಾಧಾರಣ ವ್ಯಕ್ತಿ ಈಗಾಗಲೇ ಜೀವನೋಪಾಯದ ಸಮಸ್ಯೆಗಳಿಂದ ಬಳಲಿದ್ದು, ಅಂಥವರು ಕಡತಗಳ ಬೆನ್ನಟ್ಟಿ, ಪದೇಪದೇ ಕಚೇರಿಗಳಿಗೆ ಭೇಟಿ ನೀಡಿ, ಹಲವು ತಿಂಗಳು ಅಥವಾ ವರ್ಷಗಳ ಕಾಲ ತಮ್ಮ ಅರ್ಜಿಯನ್ನು ಹಿಂಬಾಲಿಸುವುದು ಅಸಾಧ್ಯವಾದ ಮಾತು. ಹೀಗೆ ಆರ್ ಟಿ ಐ ಕಾಯ್ದೆ ಈಗಾಗಲೇ ವಿಫಲವಾಗಿದೆ.

ನ್ಯಾಯಾಲಯಗಳೂ ಸಹ ಈ ಗೋಜಲನ್ನು ಸರಿಪಡಿಸುವ ನಿಟ್ಟಿನಲ್ಲಿ ಉತ್ಸಾಹ ತೋರುತ್ತಿಲ್ಲ. ವಿಳಂಬ ಮತ್ತು ಕಾಯ್ದೆಯನ್ನು ಪಾಲಿಸದೆ ಇರುವುದನ್ನು ಆಡಳಿತಾತ್ಮಕ ಲೋಪ ಎಂದೇ ಪರಿಗಣಿಸಲಾಗುತ್ತಿದೆಯೇ ಹೊರತು, ಪ್ರಜಾಸತ್ತಾತ್ಮಕ ಹಕ್ಕುಗಳ ಉಲ್ಲಂಘನೆ ಎಂದು ನೋಡುತ್ತಿಲ್ಲ.

ಈ ಸಂದರ್ಭದಲ್ಲಿ ಆರ್‍ಟಿಐ ಜಾಗೃತಿ ಕಾರ್ಯಕ್ರಮಗಳು ವಿಫಲ ಯತ್ನವಾಗುತ್ತವೆ. ಆರ್‍ಟಿಐ ಕಾಯ್ದೆಯನ್ನು ಪುನರುಜ್ಜೀವನಗೊಳಿಸಬೇಕಾದರೆ ವಿಲೇವಾರಿಯ ಪ್ರಮಾಣವನ್ನು ಗಮನಿಸಬೇಕು, ವಿಳಂಬದ ಪ್ರಕರಣಗಳು ಹೆಚ್ಚಾಗುವುದನ್ನು ಗಮನಿಸಬೇಕು ಮತ್ತು ತಪ್ಪು ಮಾಡುವ ಅಧಿಕಾರಿಗಳಿಗೆ ಸ್ವಯಂ ದಂಡ ವಿಧಿಸಬೇಕು. ಮೇಲಾಗಿ ಆಯೋಗಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕು. ಅಲ್ಲಿಯವರೆಗೂ ಆರ್‍ಟಿಐ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಅಧಿಕಾರಿಗಳ ಘೋಷಣೆಗಳು ಪೆÇಳ್ಳು ಎನಿಸಿಕೊಳ್ಳುತ್ತವೆ. ಜಾಗೃತಿ ಕಾರ್ಯಕ್ರಮಗಳು ಅರ್ಥಹೀನ ಕ್ರಮಗಳಾಗಿ, ಒಂದು ಕಾಲದಲ್ಲಿ ಪರಿವರ್ತಕವಾಗಿದ್ದ ಕಾಯ್ದೆಯ ಅವಸಾನವನ್ನು ಮರೆಮಾಚುವ ತಂತ್ರವಾಗಿಯೇ ಇರುತ್ತವೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again