ಟ್ರಂಪ್‍ನ ಹೊಸ ಜಗತ್ತು ಮತ್ತು ಭಾರತದ ಸಂದಿಗ್ಧತೆ
ವರ್ತಮಾನದ ಜಾಗತಿಕ ವಾತಾವರಣದಲ್ಲಿ ಡೊನಾಲ್ಡ್ ಟ್ರಂಪ್ ರೀತಿಯಲ್ಲಿ, ಯಾವ ನಾಯಕರೂ ಸಹ ಮಿತ್ರರನ್ನು ಮತ್ತು ವಿರೋಧಿಗಳನ್ನು ಸಮನಾಗಿ ಗೊಂದಲದಲ್ಲಿ ಸಿಲುಕಿಸಿಲ್ಲ. ಟ್ರಂಪ್‍ನ ವಿದೇಶಾಂಗ ನೀತಿ ಸಾಂಸ್ಥಿಕ ಸಂಪ್ರದಾಯಗಳಿಗಿಂತಲೂ ಹೆಚ್ಚಾಗಿ ಪ್ರಚೋದನೆಗಳಿಂದ ಕೂಡಿದೆ. ಹಾಗಾಗಿ ಈ ನೀತಿಗಳು ಅನಿಶ್ಚಿತತೆಯ ವಾತಾವರಣವನ್ನು ಸೃಷ್ಟಿಸಿದ್ದು, ವಿಶ್ವದ ಇತರ ದೇಶಗಳೊಡನೆ ಅಮೆರಿಕದ ಸಂಬಂಧಗಳನ್ನು ಗೋಜಲುಗೊಳಿಸಿವೆ. ಭಾರತದ ಮಟ್ಟಿಗೆ ಈ ಅನಿಶ್ಚಿತತೆಯೇ ರಾಜತಾಂತ್ರಿಕ ತಲೆಬೇನೆಯಾಗಿದೆ. ಭಾರತ ಸರ್ಕಾರವು ವಾಷಿಂಗ್‍ಟನ್‍ನೊಡನೆ ಸಹಭಾಗಿತ್ವ ಅಪೇಕ್ಷಿಸುತ್ತದೆ, ಆದರೆ ಅಮೆರಿಕದ ಶ್ವೇತ ಭವನವು ಬೆದರಿಕೆ ತಂತ್ರಗಾರಿಕೆ ಬಳಸುವ ಮೂಲಕ ಇದನ್ನು ನಿರ್ವಹಿಸಲು ಬಯಸುತ್ತದೆ ಎನ್ನುವುದು ನಿಜಕ್ಕೂ ಭಾರತಕ್ಕೆ ಆತಂಕ ತಂದೊಡ್ಡಿದೆ.
ವೆನೆಜುಯೆಲಾದಲ್ಲಿ ಅಮೆರಿಕದ ಹಠಾತ್ ಪ್ರವೇಶದ ಮೂಲಕ, ಅಲ್ಲಿನ ಆಳ್ವಿಕೆ ನಡೆಸುವ ಮಡುರಾ ಮತ್ತು ಅವರ ಪತ್ನಿಯನ್ನು ಬಂಧಿಸುವ ಮೂಲಕ ದಕ್ಷಿಣ ಭೂಗೋಳದಲ್ಲಿ ತೀಕ್ಷ್ಣ ಸಂಚಲನ ಉಂಟುಮಾಡಿದೆ. ಈಗ ದೇಶಗಳ ಸಾರ್ವಭೌಮತ್ವಗಳು ವ್ಯಾವಹಾರಿಕವಾಗಿವೆ. ಗ್ರೀನ್ ಲ್ಯಾಂಡ್ ಆಕ್ರಮಿಸುವ ಅವರ ಆಕಾಂಕ್ಷೆಯನ್ನು ಪುನಃ ವ್ಯಕ್ತÀಪಡಿಸುತ್ತಿದ್ದು, ನ್ಯಾಟೋ ಮೈತ್ರಿಕೂಟದ ಭಾಗವಾಗಿರುವ ಈ ಪ್ರದೇಶದ ಸಾರ್ವಭೌಮತ್ವವನ್ನೂ ಲೆಕ್ಕಿಸುತ್ತಿಲ್ಲ. ಅಮೆರಿಕದ ಮಿಲಿಟರಿ ಆಕ್ರಮಣ ಮತ್ತು ಒತ್ತಡದ ಪ್ರಚಾರಗಳು ಮಧ್ಯಪ್ರಾಚ್ಯದಲ್ಲಿ ತೀವ್ರವಾಗಿದ್ದು, ಇಸ್ಲಾಮಿಕ್ ದೇಶಗಳಲ್ಲೂ ಹರಡಿದೆ. ಅಮೆರಿಕದ ಸೇನೆಯನ್ನು ರಾಜಕೀಯ ಅಸ್ತ್ರವಾಗಿ ಬಳಸುವ ಸಾಧ್ಯತೆಗಳನ್ನು ಇದು ಸೂಚಿಸುತ್ತಿದ್ದು, ಸೇನೆ ಕೊನೆಯ ಆಯ್ಕೆಯಾಗಿ ಉಳಿದಿಲ್ಲ ಎನ್ನುವುದನ್ನೂ ಸೂಚಿಸುತ್ತದೆ.
ಈ ವಾತಾವರಣದಲ್ಲೇ ಭಾರತ ಅಮೆರಿಕದೊಡನೆ ವ್ಯವಹಾರ ನಡೆಸಬೇಕಿದೆ.
ಅಧಿಕೃತವಾಗಿ ಅಮೆರಿಕ ಸರ್ಕಾರವು ಭಾರತವನ್ನು ರಣತಾಂತ್ರಿಕ ಸಹಭಾಗಿ ಎಂದೇ ಪರಿಗಣಿಸುತ್ತದೆ. ಟ್ರಂಪ್‍ನ ರಾಯಭಾರಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ನಿರಂತರವಾಗಿ ಸಂಪರ್ಕಿಸುತ್ತಿದ್ದು, ತಂತ್ರಜ್ಞಾನ, ರಕ್ಷಣಾ ಸಹಕಾರದ ಬಗ್ಗೆ ಮಾತನಾಡುತ್ತಿದ್ದಾರೆ. ಚೀನಾ ಸಂಬಂಧವನ್ನು ಸಮತೋಲನಗೊಳಿಸುವ ನಿಟ್ಟಿನಲ್ಲಿ ಮುಂದುವರೆದಿದ್ದಾರೆ. ಲಿಖಿತ ರೂಪದಲ್ಲಿ ಅಮೆರಿಕ ಮತ್ತು ಭಾರತದ ಸಂಬಂಧಗಳು ಎರಡೂ ದೇಶಗಳಿಗೆ ಮುಖ್ಯವಾಗುತ್ತದೆ. ಆದರೆ ಟ್ರಂಪ್‍ನ ವೈಯುಕ್ತಿಕ ವರ್ತನೆ ಈ ಭರವಸೆಯನ್ನು ಕಡಿಮೆ ಮಾಡಿದೆ.
ಭಾರತದ ರಫ್ತುಗಳ ಮೇಲೆ ಟ್ರಂಪ್ ಭಾರಿ ಪ್ರಮಾಣದ ಸುಂಕ ವಿಧಿಸಿದ್ದು, ಇದು ಅಮೆರಿಕದ ಮಾರುಕಟ್ಟೆಯನ್ನೇ ಅವಲಂಬಿಸುವ ಉದ್ಯಮಗಳಿಗೆ ತೀವ್ರ ಧಕ್ಕೆ ಉಂಟುಮಾಡುತ್ತದೆ. ಸಾರ್ವಜನಿಕವಾಗಿ ಭಾರತದ ಆರ್ಥಿಕತೆಯನ್ನು ಅವಹೇಳನ ಮಾಡಿರುವ ಟ್ರಂಪ್ ಈ ಪರಿಭಾಷೆಯನ್ನು ಯಾವ ಮಿತ್ರ ರಾಷ್ಟ್ರವೂ ಬಳಸುವುದಿಲ್ಲ. ಇನ್ನೂ ಹಾನಿಕರ ಅಂಶವೆಂದರೆ, ಪ್ರಾದೇಶಿಕ ಸಂಘರ್ಷ ತೀವ್ರವಾಗುತ್ತಿರುವ ಹೊತ್ತಿನಲ್ಲಿ ಟ್ರಂಪ್ ಪಾಕಿಸ್ತಾನಕ್ಕೆ ಅನುಕಂಪ ತೋರುವುದು. ಇದು ಭಾರತದ ಭದ್ರತೆಯ ಮೂಲಕ್ಕೇ ಧಕ್ಕೆ ಉಂಟುಮಾಡುವಂತಿದೆ. ಭಾರತ ಸರ್ಕಾರದ ಪಾಲಿಗೆ ಇವು ಸಾಧಾರಣ ಮುಜುಗರ ಆಗುವುದಿಲ್ಲ. ಮೂಲಭೂತವಾಗಿ ವಿಶ್ವಾಸ ದ್ರೋಹದ ಸೂಚನೆಯಾಗುತ್ತದೆ.
ಪರಿಣಾಮ, ಅಮೆರಿಕದೊಂದಿಗಿನ ಸಂಬಂಧಲ್ಲಿ ವಿಚಿತ್ರವಾದ ದ್ವಂದ್ವ ನೀತಿಯನ್ನು ಕಾಣುತ್ತಿದ್ದೇವೆ. ಭಾರತದ ರಾಯಭಾರಿಗಳು ಅಮೆರಿಕದೊಡನೆ ನಿರಂತರ ಮಾತುಕತೆಗಳಲ್ಲಿರುವುದಕ್ಕೆ ಕಾರಣ, ಅಮೆರಿಕ ಈಗ ನಿರ್ಲಕ್ಷಿಸಲಾರದಷ್ಟು ಪ್ರಬಲವಾಗಿದೆ. ಆದರೂ ಭಾರತದ ರಾಜತಾಂತ್ರಿಕ ತಜ್ಞರು ಅಗತ್ಯ ಇದ್ದಾಗ ಅಮೆರಿಕ ಭಾರತವನ್ನು ಬೆಂಬಲಿಸುವುದು ಅನುಮಾನಾಸ್ಪದ ಎಂದೇ ಹೇಳುತ್ತಿದ್ದಾರೆ. ಚೀನಾ ಅಥವಾ ಪಾಕಿಸ್ತಾನದೊಡನೆ ಬಿಕ್ಕಟ್ಟು ಉಂಟಾದರೆ ಟ್ರಂಪ್‍ನ ಅಮೆರಿಕ ನೆರವಾಗಬಹುದು ಅಥವಾ ಚೌಕಾಸಿ ಮಾಡಬಹುದು, ಹಿಂಜರಿಯಲೂಬಹುದು ಅಥವಾ ಭಾರತದ ದೌರ್ಬಲ್ಯವನ್ನು ದುರುಪಯೋಗಪಡಿಸಿಕೊಳ್ಳಬಹುದು. ಈ ಅನಿಶ್ಚಿತತೆಯೇ ಭಾರತಕ್ಕೆ ತೊಡರಾಗಿದ್ದು, ಜಪಾನ್, ಯೂರೋಪ್ ಮತ್ತಿತರ ಸಹಭಾಗಿಗಳೊಡನೆ ಭಾರತ ಸಂಬಂಧಗಳನ್ನು ಬಲಪಡಿಸಲು ಹೇತುವಾಗಿದೆ. ರಷ್ಯಾದೊಡನೆ ಮಾತುಕತೆಗಳನ್ನು ಮುಂದುವರೆಸಲು ಮತ್ತು ತನ್ನದೇ ಆದ ರಾಜತಾಂತ್ರಿಕ ಸ್ವಾಯತ್ತತೆಯನ್ನು ಬಲಪಡಿಸಲು ದಾರಿಯಾಗಿದೆ.
ಹಾಗಾಗಿಯೇ ಟ್ರಂಪ್ ಮುಂದಿನ ವರ್ಷ ಭಾರತಕ್ಕೆ ಭೇಟಿ ನೀಡುವ ಬಗ್ಗೆ ಪ್ರಕಟಣೆ ಮುಜುಗರ ಉಂಟುಮಾಡುವ ಮೌನ ಆವರಿಸಿದ್ದು, ಯಾವುದೇ ಉತ್ಸಾಹ ಕಾಣುತ್ತಿಲ್ಲ. ಅವರ ಮೊದಲ ಭೇಟಿ ಪ್ರದರ್ಶನಕಾರಿಯಾಗಿ ಆಶಾಭಾವನೆ ಹುಟ್ಟಿಸಿತ್ತು. ಇಂದು ಮನಸ್ಥಿತಿ ಭಿನ್ನವಾಗಿದೆ. ಅನೇಕ ಭಾರತೀಯರು ಟ್ರಂಪ್‍ನನ್ನು ಸ್ನೇಹಿತನಾಗಿ ನೋಡದೆ, ದೇಶವನ್ನು ಅಪಮಾನಿಸುವ, ಆರ್ಥಿಕತೆಯನ್ನು ದಂಡಿಸುವ, ಭಾರತದ ವಿರೋಧಿಗಳನ್ನು ಉಪಯುಕ್ತ ಅಸ್ತ್ರಗಳಂತೆ ಬಳಸುವ ನಾಯಕರಾಗಿ ನೋಡುತ್ತಾರೆ. ವಿದೇಶದಲ್ಲಿರುವ ಭಾರತೀಯರು, ಅಮೆರಿಕವನ್ನೂ ಸೇರಿದಂತೆ, ಒಂದು ರೀತಿಯ ಹಗೆತನದ ವಾತಾವರಣ ಎದುರಿಸುತ್ತಿದ್ದು, ಅನಿಶ್ಚಿತ ಸನ್ನಿವೇಶವನ್ನು ಕಾಣುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸೂಚನೆಯಾಗಿದೆ.
ಜಾಗತಿಕ ರಾಜಕಾರಣದಲ್ಲಿ ಮನುಜ ಸಂಬಂಧಗಳಲ್ಲಿರುವಂತೆ ವಿಶ್ವಾಸವೇ ಮುಖ್ಯವಾಗುತ್ತದೆ. ಅದನ್ನು ಆಜ್ಞಾಪೂರ್ವಕವಾಗಿ ನಿರ್ವಹಿಸಲಾಗುವುದಿಲ್ಲ. ವಿಶ್ವಾಸ ಗಳಿಸಬೇಕಾದರೆ ನಿರಂತರವಾದ ತಾತ್ವಿಕ ಬದ್ಧತೆಯ ವರ್ತನೆ ಮುಖ್ಯವಾಗುತ್ತದೆ. ಟ್ರಂಪ್ ಈ ಧೋರಣೆಯನ್ನು ತೋರುವವರೆಗೂ ಭಾರತವು ಅವರೊಡನೆ ಸಂಯಮದಿಂದ ವರ್ತಿಸುತ್ತದೆ ಮತ್ತು ಎಚ್ಚರಿಕೆಯಿಂದ ವಿಶ್ವಾಸ ವ್ಯಕ್ತಪಡಿಸುತ್ತಿರುತ್ತದೆ.
Comments
Post a Comment