ಅರಸು-ಸಿದ್ದರಾಮಯ್ಯ ಹೋಲಿಕೆ ಎಷ್ಟು ಸಮರ್ಥನೀಯ?
ಬಿವಿಸೀ
ಕಳೆದ ಕೆಲವು ದಿನಗಳಿಂದ ಕರ್ನಾಟಕದ ಅನೇಕ ಸುದ್ದಿ ಪತ್ರಿಕೆಗಳು ಪರಸ್ಪರ ಪೈಪೆÇೀಟಿಯ ಮೇಲೆ ಆಕರ್ಷಣೀಯ, ವರ್ಣಮಯ ಪುಟಗಳಲ್ಲಿ ಪ್ರಕಟಿಸುತ್ತಿರುವ ವಿಷಯ ಎಂದರೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಯುಗ ಪುರುಷ ಎಂದು ಬಣ್ಣಿಸುವುದು, ಇದಕ್ಕೆ ಕಾರಣ ಎಂದರೆ ಕರ್ನಾಟಕದಲ್ಲಿ ಅತಿ ದೀರ್ಘ ಕಾಲ ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದ ಕೀರ್ತಿಗೆ ಸಿದ್ದರಾಮಯ್ಯ ಭಾಜನರಾಗಿರುವುದು. ಈ ಸಂಭ್ರಮದಲ್ಲಿ ದೀರ್ಘಾವಧಿ ಆಳ್ವಿಕೆಯನ್ನೇ ಮಹಾನ್ ಎಂದು ಬಿಂಬಿಸುತ್ತಿರುವುದು ಪತ್ರಿಕೋದ್ಯಮದ ನಿರ್ಣಯ ಸಾಮಥ್ರ್ಯವನ್ನು ದುರ್ಬಲಗೊಳಿಸಿದಂತೆ ಕಾಣುತ್ತದೆ.
ಆಳ್ವಿಕೆಯ ಅವಧಿ ವಾಸ್ತವ. ಪರಂಪರೆ ಎನ್ನುವುದು ಒಂದು ಮೌಲ್ಯ ಮಾಪನ. ಎರಡೂ ಒಂದೇ ಆಗುವುದಿಲ್ಲ. ಅಂಕಿ ಸಂಖ್ಯೆಗಳ ಮೈಲಿಗಲ್ಲು ದಾಟುವುದರಿಂದ ಸಿದ್ದರಾಮಯ್ಯ ಸಹಜವಾಗಿಯೇ ಪರಿವರ್ತನಕಾರ ಮುಖ್ಯಮಂತ್ರಿಯ ಸ್ಥಾನಗಳಿಸುತ್ತಾರೆ ಎನ್ನುವುದು ಸರಳೀಕರಣವಷ್ಟೇ ಅಲ್ಲದೆ, ದಾರಿ ತಪ್ಪಿಸುವ ವಿಶ್ಲೇಷಣೆಯೂ ಆಗುತ್ತದೆ. ಆಳ್ವಿಕೆಯನ್ನು ಅಳೆಯಬೇಕಿರುವುದು ಪ್ರಭಾವದ ನೆಲೆಯಲ್ಲೇ ಹೊರತು ಅಂಕಿ ಸಂಖ್ಯೆಗಳಲ್ಲಿ ಅಲ್ಲ.
ಈ ಎಲ್ಲ ಪ್ರಮಾದ ಭರಿತ ಸುದ್ದಿ ವಿಶ್ಲೇಷಣೆಗಳಲ್ಲಿ ಕಾಣದಿರುವುದು ಸಮತೋಲನ. ಹಾಲಿ ಆಳ್ವಿಕೆಯ ಕೊರತೆಗಳನ್ನು, ತಪ್ಪು ಒಪ್ಪುಗಳನ್ನು ಎಲ್ಲಿಯೂ ವಿಶ್ಲೇಷಣೆ ಮಾಡಲಾಗಿಲ್ಲ. ಹಣಕಾಸು, ಸೇವಾ ವಿತರಣೆ, ನೀತಿಗಳ ಹೊಂದಾಣಿಕೆ ಅಥವಾ ಆಡಳಿತಾತ್ಮಕ ಅಡೆತಡೆಗಳನ್ನು ಚರ್ಚಿಸಲಾಗಿಲ್ಲ. ತಪ್ಪು ಮಾಡದ ಯಾವುದೇ ಸರ್ಕಾರ ಇರುವುದಿಲ್ಲ. ಸಿದ್ದರಾಮಯ್ಯ ಸಹ ಅಪವಾದವಲ್ಲ. ಪತ್ರಿಕೋದ್ಯಮವು ಸರ್ಕಾರದ ಸಾಧನೆಗಳನ್ನು ಮತ್ತು ವೈಫಲ್ಯಗಳನ್ನು ಒಟ್ಟೊಟ್ಟಿಗೇ ಬಿಂಬಿಸುವುದರ ಮೂಲಕ ಅದರ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ತನ್ಮೂಲಕ ಓದುಗರಿಗೆ ತರ್ಕಬದ್ಧ ತೀರ್ಮಾನಕ್ಕೆ ಬರಲು ಅನುಕೂಲವಾಗುತ್ತದೆ. ವಿಚಾರಣೆ, ತಪಾಸಣೆ ಇಲ್ಲದೆ ಪ್ರಶಂಸಿಸುವುದು ಯಾರನ್ನೂ ಒಪ್ಪಿಸುವುದಿಲ್ಲ.
ಇನ್ನೂ ಹೆಚ್ಚು ಸಮಸ್ಯಾತ್ಮಕವಾಗಿ ಕಾಣುವುದು ನೇರವಾಗಿ ಅಥವಾ ಪರೋಕ್ಷವಾಗಿ ಸಿದ್ದರಾಮಯ್ಯ ಮತ್ತು ದೇವರಾಜ ಅರಸು ಅವರನ್ನು ಹೋಲಿಸುವುದು. ಇಲ್ಲಿ ಪರ್ಯಾಯವಾಗಿ ಕಾಣುವ ಒಂದೇ ಅಂಶ ಎಂದರೆ ದೀರ್ಘಾವಧಿಯ ಆಳ್ವಿಕೆ ಮತ್ತು ಅಹಿಂದ ಸಮುದಾಯಗಳ ಬಗ್ಗೆ ಕಾಳಜಿ. ಇದನ್ನು ದಾಟಿ ನೋಡಿದಾಗ, ಈ ಹೋಲಿಕೆ ಅರ್ಥಹೀನವಾಗುತ್ತದೆ. ಅರಸು ಅವರು ಕಾರ್ಯನಿರ್ವಹಿಸಿದ ರಾಜಕೀಯ ಮತ್ತು ಸಾಮಾಜಿಕ ಸಂದರ್ಭಗಳೇ ಭಿನ್ನವಾದುದು. ಮೂಲತಃ ಅವರು ಕರ್ನಾಟಕದ ಅಧಿಕಾರ ಸಂರಚನೆಯನ್ನೇ ಬದಲಾಯಿಸಿದರು, ಭೂ ಸುಧಾರಣೆಗಳ ಮೂಲಕ, ಆಡಳಿತಾತ್ಮಕ ಪುನಶ್ಚೇತನದ ಮೂಲಕ ಇದನ್ನು ಸಾಕಾರಗೊಳಿಸಿದರು. ಅರಸು ಅವರು ಸೃಷ್ಟಿಸಿರುವ ಒಂದು ಚೌಕಟ್ಟಿನ ಒಳಗೇ ಸಿದ್ದರಾಮಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ. ಜನರ ಕಲ್ಯಾಣ ಯೋಜನೆಗಳ ಫಲವನ್ನು ರಕ್ಷಿಸುವುದಕ್ಕೂ ಇಡೀ ವ್ಯವಸ್ಥೆಯನ್ನು ಮರುನಿರ್ಮಾಣ ಮಾಡುವುದಕ್ಕೂ ಅಪಾರ ಅಂತರವಿದೆ.
ಮಹತ್ವದ ಸಂಗತಿ ಎಂದರೆ, ಸಿದ್ದರಾಮಯ್ಯ ಸ್ವತಃ ಈ ಸಮಾನ ಹೋಲಿಕೆಯನ್ನು ಸಂಯಮಪೂರ್ಣವಾಗಿ ನಿರಾಕರಿಸಿದ್ದಾರೆ. ತಾವು ತಮ್ಮದೇ ಆದ ವ್ಯಕ್ತಿತ್ವದ ನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಅರಸು ಅವರಿಗೆ ಅವರದ್ದೇ ಆದ ವರ್ಚಸ್ಸು ಇತ್ತು ಎಂದು ಹೇಳಿದ್ದಾರೆ. ಈ ಹೋಲಿಕೆಯನ್ನು ಬಲವಂತವಾಗಿ ಹೇರುವ ಮೂಲಕ ಮಾಧ್ಯಮಗಳು ಒಂದೆಡೆ ಚಾರಿತ್ರಿಕ ವಾಸ್ತವಕ್ಕೂ ನ್ಯಾಯ ಸಲ್ಲಿಸುವುದಿಲ್ಲ ಅಥವಾ ಮುಖ್ಯಮಂತ್ರಿಗಳ ವೈಯುಕ್ತಿಕ ನಿಲುವನ್ನೂ ಸಮರ್ಥಿಸುವುದಿಲ್ಲ.
ಇಲ್ಲಿ ಪಾರದರ್ಶಕತೆ ಇಲ್ಲದಿರುವುದು ಮತ್ತೊಂದು ಸಮಸ್ಯೆಯಾಗಿದೆ. ಈ ಪ್ರಕಟಣೆಗಳು, ಬಹುತೇಕವಾಗಿ ಪಾವತಿ ಮಾಡಲಾಗಿರುವ ಪೆÇ್ರೀತ್ಸಾಹಕ ಸುದ್ದಿಗಳು ಎನ್ನುವುದು ಸಾಮಾನ್ಯ ಗ್ರಹಿಕೆಯಾಗಿದ್ದು, ಈ ಪ್ರಕಟಣೆಗಳಲ್ಲಿ, ಮಾಹಿತಿಗಳ ನಿಖರತೆಯ ಬಗ್ಗೆ ಎಚ್ಚರ ವಹಿಸುವಂತಹ ಯಾವುದೇ ಸಂದೇಶಗಳು ಇರುವುದಿಲ್ಲ. ಪ್ರಾಯೋಜಿತ ವಿಷಯವನ್ನು ಸಂಪಾದಕೀಯ ಸಂಭ್ರಮವಾಗಿ ಕಂಡಾಗ, ಓದುಗರನ್ನು ತಮಗೆ ಬೇಕಾದಂತೆ ಬಳಸಿದಂತಾಗುತ್ತದೆ. ಇದು ವಿಶ್ವಾಸವನ್ನು ಕುಂದಿಸುವುದೇ ಅಲ್ಲದೆ ಪತ್ರಿಕೆಗಳ ವಿಶ್ವಾಸಾರ್ಹತೆಗೂ ಧಕ್ಕೆ ಉಂಟುಮಾಡುತ್ತದೆ.
ಕರ್ನಾಟಕದ ಪತ್ರಿಕೋದ್ಯಮ ಒಂದು ಕಾಲದಲ್ಲಿ ಸ್ವತಂತ್ರ ನಿಲುವು ಮತ್ತು ಸಂದೇಹವಾದಕ್ಕೆ ಹೆಸರಾಗಿತ್ತು. ಇಂದು ಅಧಿಕಾರ ಕೇಂದ್ರಗಳನ್ನು ತೃಪ್ತಿಪಡಿಸುತ್ತಿರುವುದನ್ನು ನೋಡಿದರೆ, ಇಡೀ ವೃತ್ತಿಯೇ ಒತ್ತಡದಲ್ಲಿರುವಂತೆ ತೋರುತ್ತದೆ. ಹಣಕಾಸು, ರಾಜಕೀಯ ಒತ್ತಡಗಳು ಎದ್ದು ಕಾಣುತ್ತವೆ. ಆದರೆ ಉಳಿಯುವಿಕೆಯು ಶರಣಾಗಿರುವುದನ್ನು ಸಮರ್ಥಿಸುವ ಮಾನದಂಡವಾಗಲಾರದು.
ಈ ಪಾವತಿ ಮಾಡಿದ ಪ್ರಕಟಣೆಗಳನ್ನು ಇತಿಹಾಸವು ಆಳ್ವಿಕೆಯ ದಾಖಲೆಗಳೆಂದು ಪರಿಗಣಿಸುವುದಿಲ್ಲ. ಪತ್ರಿಕೋದ್ಯಮವು ವಿಶ್ವಾಸಾರ್ಹತೆಗಿಂತಲೂ ಅನುಕೂಲತೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿದ ಗಳಿಗೆ ಎಂದು ದಾಖಲಿಸುತ್ತದೆ. ದೀರ್ಘಾವಧಿ ದಾಖಲೆಗಳಲ್ಲಿ ಉಳಿಯಬಹುದು ಆದರೆ ವಿಶ್ವಾಸಾರ್ಹತೆಯೊಂದೇ ನೆನಪಿನಲ್ಲಿ ಉಳಿಯುತ್ತದೆ.
Comments
Post a Comment