ಬಿಹಾರದ ಫಲಿತಾಂಶ- ಆತ್ಮವಿಮರ್ಶೆಗೆ ಮುಂದಾಗದ ಕಾಂಗ್ರೆಸ್
ರಾಹುಲ್ ಗಾಂಧಿ ತಮ್ಮ ಪದತ್ಯಾಗ ಮಾಡದೆ ಹೋದರೆ ಕಾಂಗ್ರೆಸ್ ಪಕ್ಷದ ಪುನರುತ್ಥಾನ ಅಸಾಧ್ಯವಾಗುತ್ತದೆ.
ಖುಲ್ಲಂ ಖುಲ್ಲಾ * ಬಿವಿಸೀ
ಬಿಹಾರ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಹೀನಾಯ ಸೋಲು ಪಕ್ಷಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಇದು ರಾಜಕೀಯವಾಗಿ ಅಪಮಾನಕರವಾಗಿದ್ದರೂ ಸಹ ಪಕ್ಷದ ಪ್ರತಿಕ್ರಿಯೆ ದಿವ್ಯಮೌನವೇ ಆಗಿರುವುದು ಅಚ್ಚರಿದಾಯಕವಾಗಿದೆ. ಯಾವುದೇ ರೀತಿಯ ಆತ್ಮವಿಮರ್ಶೆ ಇಲ್ಲದೆ, ಉತ್ತರದಾಯಿತ್ವ ಇಲ್ಲದೆ, ಶತಮಾನದ ಇತಿಹಾಸ ಇರುವ ಪಕ್ಷವು ನಿರ್ಣಾಯಕವಾದ ಒಂದು ಉತ್ತರದ ರಾಜ್ಯದಲ್ಲಿ ಏಕೆ ನಾಮಾವಶೇಷವಾಗಿದೆ ಎಂಬ ಪರಾಮರ್ಶೆಯ ಪ್ರಯತ್ನವಿಲ್ಲದೆ ಮೌನಕ್ಕೆ ಶರಣಾಗಿದೆ. ನೆಹರೂ ಮತ್ತು ರಾಜೀವ್ ಗಾಂಧಿ ಅವರ ಪರಂಪರೆಯನ್ನು ತಾನು ಅನುಸರಿಸುತ್ತಿರುವೆ ಎನ್ನುವ ಪಕ್ಷಕ್ಕೆ ಇಂತಹ ದುಃಸ್ಥಿತಿ ಬರಬಾರದಿತ್ತು.
ಫಲಿತಾಂಶಗಳ ಘೋಷಣೆಯಾದಾಗ ರಾಹುಲ್ ಗಾಂಧಿ ವಿದೇಶದಲ್ಲಿದ್ದರು. ಸಮಸ್ಯೆ ಇರುವುದು ಅವರು ಹಿಂತಿರುಗಿದ ನಂತರವೂ ಸಹ ಕಾಂಗ್ರೆಸ್ ಹೈಕಮಾಂಡ್ ಔಪಚಾರಿಕವಾಗಿ ಬಿಹಾರ ಸೋಲಿನ ಬಗ್ಗೆ ಆತ್ಮಾವಲೋಕನ ನಡೆಸಲಿಲ್ಲ. ಪಕ್ಷದ ಕಾರ್ಯಕರ್ತರು, ರಾಜ್ಯಗಳ ನಾಯಕರು, ಸಾರ್ವಜನಿಕರು ನಿರೀಕ್ಷೆಯಲ್ಲೇ ಕಾಲ ಕಳೆಯಬೇಕಾಯಿತು. ರಾಹುಲ್ ಆಗಲಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಾಗಲೀ ಯಾವುದೇ ವಿವರಣೆ ನೀಡಲಿಲ್ಲ. ಸೋನಿಯಾ ಗಾಂಧಿಯವರಿಂದ ಸಣ್ಣ ಪ್ರತಿಕ್ರಿಯೆಯೂ ವ್ಯಕ್ತವಾಗಲಿಲ್ಲ. ಈ ಮೌನ ಪಕ್ಷಕ್ಕೆ ಹಾನಿಕರವಾಗಿದ್ದು, ಇಂದಿಗೂ ಪಕ್ಷ ಉಳಿಸಿಕೊಂಡಿರುವ ಅಳಿದುಳಿದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟುಮಾಡುತ್ತದೆ.
ರಾಷ್ಟ್ರ ಮಟ್ಟದಲ್ಲಿ ತನ್ನ ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಶ್ರಮಿಸುತ್ತಿರುವ ಪಕ್ಷವು ಸೋಲು ಸಂಭವಿಸಿಯೇ ಇಲ್ಲ ಎಂಬ ರೀತಿಯಲ್ಲಿ ವರ್ತಿಸುತ್ತಿರುವುದು ವಿಚಿತ್ರ. ಜನರು ಉತ್ತರದಾಯಿತ್ವವನ್ನು ಅಪೇಕ್ಷಿಸುತ್ತಾರೆ. ನಾಯಕರು ಜವಾಬ್ದಾರಿಯನ್ನು ಹೊತ್ತು, ಹಿನ್ನಡೆಗೆ ಕಾರಣಗಳನ್ನು ಚರ್ಚಿಸಿ ಮುಂದಿನ ಹಾದಿಗೆ ನೀಲನಕ್ಷೆ ನೀಡುವುದನ್ನು ನಿರೀಕ್ಷಿಸುತ್ತಾರೆ. ಕಾಂಗ್ರೆಸ್ ಇದಾವುದನ್ನೂ ಮಾಡಿಲ್ಲ.
ತತ್ಪರಿಣಾಮವಾಗಿ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರೂ ಸಹ, ಕಾಂಗ್ರೆಸ್ ಪಕ್ಷಕ್ಕೆ ಜವಾಬ್ದಾರಿಯುತ ರಾಜಕೀಯ ಶಕ್ತಿಯಾಗಿ ಸಕ್ರಿಯವಾಗಿರಲು ಸಾಧ್ಯವೇ ಎಂದು ಅನುಮಾನಿಸುತ್ತಿದ್ದಾರೆ.
ಬಿಹಾರದ ಪರಾಭವಕ್ಕೆ ಕಾರಣಗಳನ್ನು ಗುರುತಿಸುವುದು ಕಷ್ಟವೇನಲ್ಲ. ಮೊದಲನೆಯದಾಗಿ, ಪ್ರಚಾರವು ಬಹುಮಟ್ಟಿಗೆ ರಾಹುಲ್ ಗಾಂಧಿ ಕೇಂದ್ರಿತವಾಗಿತ್ತು. ಯಾವುದೇ ಕಾಂಗ್ರೆಸ್ ಮುಖ್ಯಮಂತ್ರಿಯನ್ನು ಪ್ರಚಾರಕ್ಕೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ. ಯಾವ ಪ್ರಾದೇಶಿಕ ನಾಯಕರನ್ನೂ ಬೆಳೆಯಲು ಬಿಡಲಿಲ್ಲ. ಈವರೆಗೆ ಕಂಡಂತೆ ಅವರ ಮನವಿಗಳು ಮತಗಳಾಗಿ ಪರಿವರ್ತನೆಯಾಗುವುದರಲ್ಲಿ ವಿಫಲವಾಗಿರುವ ರಾಹುಲ್ ಗಾಂಧಿ ಸೋಲಿನ ಭಾರ ಹೊರಬೇಕಾಗಿದೆ.
ಎರಡನೆಯದಾಗಿ, ಕಾಂಗ್ರೆಸ್ ತನ್ನ ಚಾರಿತ್ರಿಕ ವರ್ಚಸ್ಸಿನಿಂದ ಕುಸಿದಿದ್ದು, ಒಳಗೊಳ್ಳುವಿಕೆಯನ್ನು ಕೇವಲ ಆಯ್ದ ನಿರೂಪಣೆಗಳಿಗೆ ಮಾತ್ರ ಬಳಸಿತ್ತು. ರಾಹುಲ್ ಗಾಂಧಿಯ ನಾಯಕತ್ವದಲ್ಲಿ ಪಕ್ಷವು ಕೆಲವು ಗುಂಪುಗಳ ಪರ ವಹಿಸುವ ರೀತಿಯಲ್ಲಿ ವರ್ತಿಸುತ್ತಿದ್ದು, ಪರಿಶಿಷ್ಟ ಜಾತಿಗಳು, ಹಿಂದುಳಿದ ಜಾತಿಗಳ ಉದ್ಧಾರವನ್ನು ಕೇಂದ್ರೀಕರಿಸಿದೆ. ಆದರೆ ಭಾರತ ಬದಲಾಗಿದೆ. ಹಲವು ಹಿಂದುಳಿದ ಸಮುದಾಯಗಳು ಆರ್ಥಿಕವಾಗಿ, ರಾಜಕೀಯವಾಗಿ ಪ್ರಭಾವಶಾಲಿಗಳಾಗಿವೆ. ಅವುಗಳನ್ನು ಏಕರೂಪದಲ್ಲಿ ಅವಕಾಶವಂಚಿತರು ಎಂದು ಭಾವಿಸುವುದು ತಪ್ಪಾಗುತ್ತದೆ, ಇದು ರಾಜಕೀಯವಾಗಿ ಗೊಂದಲ ಮೂಡಿಸುತ್ತದೆ. ಈ ಆಯ್ದ ಒಳಗೊಳ್ಳುವಿಕೆಯು ಇತರ ಸಮುದಾಯಗಳನ್ನು ಪಕ್ಷದಿಂದ ದೂರ ಸರಿಸಿದ್ದು ಈಗಿರುವ ಸಾಮಾಜಿಕ ಒಳಬಿರುಕುಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಸಮಸ್ಯೆಯ ಮೂಲದಲ್ಲಿರುವುದು ನಾಯಕತ್ವದ ಪ್ರಶ್ನೆ. ರಾಹುಲ್ ಗಾಂಧಿ ಉತ್ಸಾಹದ ಹೊರತಾಗಿಯೂ ರಾಜಕೀಯ ಪ್ರಬುದ್ಧತೆ ಮತ್ತು ಕಾರ್ಯತಂತ್ರದ ಸ್ಪಷ್ಟತೆಯನ್ನು ಪ್ರದರ್ಶಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಕುಸಿಯುತ್ತಿರುವ ಪಕ್ಷದ ಪುನರುಜ್ಜೀವನ ಕಷ್ಟವಾಗುತ್ತಿದೆ. ಸ್ಥಿರತೆ ಇಲ್ಲದ ಅವರ ಭಾಗವಹಿಸುವಿಕೆ, ಅನಗತ್ಯ, ಅಸಂಬದ್ಧ ಹೇಳಿಕೆಗಳು ಮತ್ತು ಸುಸ್ಥಿರ ಬದ್ಧತೆಯ ಕೊರತೆ, ಅವರನ್ನು ಪಕ್ಷಕ್ಕೆ ಹೊರೆಯಾಗಿಸಿದೆ. ರಾಹುಲ್ ತಾತ್ಕಾಲಿಕವಾಗಿಯಾದರೂ ಪದತ್ಯಾಗ ಮಾಡದೆ ಹೋದರೆ, ಸೋಲಿಗೆ ಹೊಣೆ ಹೊರದೇ ಹೋದರೆ, ಬಹುಶಃ ಪಕ್ಷವು ತನ್ನ ಪುನರುಜ್ಜೀವನದ ಅವಕಾಶವನ್ನೇ ಕಳೆದುಕೊಳ್ಳುತ್ತದೆ.
ಬಿಹಾರದ ಪರಾಭವ ಅಪವಾದವೇನಲ್ಲ. ಇದು ಎಚ್ಚರಿಕೆಯ ಗಂಟೆಯಾಗಿದೆ. ಕಾಂಗ್ರೆಸ್ ಅಂತಿಮವಾಗಿ ಕನ್ನಡಿಯಲ್ಲಿ ನೋಡಿಕೊಂಡು, ಆತ್ಮಾವಲೋಕನ ಮಾಡಿಕೊಳ್ಳದೆ ಹೋದರೆ, ಒಂದು ಕಾಲದಲ್ಲಿ ಪ್ರಾಬಲ್ಯ ಸಾಧಿಸಿದ್ದ ರಾಜಕೀಯ ವಾತಾವರಣದಲ್ಲಿ ಅದು ಕೇವಲ ಪ್ರೇಕ್ಷಕನಾಗಿ ಉಳಿದುಬಿಡುತ್ತದೆ.
Comments
Post a Comment