ಕಾರವಾರ-ಮಂಗಳೂರು ಜೈಲಿನ ಸಮಸ್ಯೆ ತೀವ್ರ ಕಾನೂನು ವ್ಯವಸ್ಥೆ ಕುಸಿತದ ಸೂಚನೆ

 ಇದ್ದುದು ಇದ್ದ ಹಾಗೆ * ಬಿವಿಸೀ

ಕಾರವಾರದ ಜೈಲಿನೊಳಗೆ ಇತ್ತೀಚೆಗೆ ಒಂದೇ ವಾರದಲ್ಲಿ ನಡೆದ ಎರಡು ಹಿಂಸಾತ್ಮಕ ಘಟನೆಗಳು ಅಪರೂಪದ್ದೇನಲ್ಲ. ಬದಲಾಗಿ ಅಪಾಯಕಾರಿ ವಿದ್ಯಮಾನವಾಗಿ ಕಾಣುತ್ತದೆ. ಕಾರವಾರದಲ್ಲಿ ನಡೆದಿದ್ದು ಮತ್ತು ಮಂಗಳೂರಿನಲ್ಲಿ ಈ ಹಿಂದೆ ನಡೆದ ದುರ್ಘಟನೆಗಳು ಕೇವಲ ಆಡಳಿತ ವೈಫಲ್ಯ ಮಾತ್ರವಲ್ಲ. ಇನ್ನೂ ತೀವ್ರವಾದ ಗಂಭೀರ ಸಮಸ್ಯೆ ಲಕ್ಷಣಗಳಾಗಿ ತೋರುತ್ತವೆ. ನಮ್ಮ ಜೈಲುಗಳಲ್ಲಿ ಮೂಲಭೂತ ಅಧಿಕಾರ ನಿಯಂತ್ರಣ ವ್ಯವಸ್ಥೆಯೇ ಕುಸಿದುಹೋಗಿದೆ.

ವರದಿಗಳ ಅನುಸಾರ, ಕಾರವಾರದ ಸೆರೆವಾಸಿಗಳು ಜೈಲಿನ ಸಿಬ್ಬಂದಿಗಳ ಮೇಲೆ ದೈಹಿಕ ಹಲ್ಲೆ ನಡೆಸಿದ್ದು, ಅಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸ ಮಾಡಿರುವುದೇ ಅಲ್ಲದೆ, ಅಧಿಕಾರಿಗಳನ್ನು ಹೆದರಿಸಿದ್ದಾರೆ. ಕೆಲವು  ದಿನಗಳ ಹಿಂದೆ ಇದೇ ಜೈಲಿನಲ್ಲಿ ಇಂತಹುದೇ ಸಂಘರ್ಷವು ತಲೆದೋರಿತ್ತು. ಎರಡು ಹಿಂಸಾತ್ಮಕ ಘಟನೆಗಳು ಒಂದೇ ಜೈಲಿನಲ್ಲಿ, ಕೆಲವೇ ದಿನಗಳ ಅಂತರದಲ್ಲಿ ಸಂಭವಿಸುವುದು ಅಲಕ್ಷಿಸಲಾಗದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಈ ಜೈಲಿನ ಉಸ್ತುವಾರಿ ವಹಿಸುವುದು ಕೈದಿಗಳೋ ಅಥವಾ ಸರ್ಕಾರವೋ ?

ಅಧಿಕಾರಿಗಳು ಆರಂಭದಲ್ಲಿ ಈ ಘಟನೆಗಳನ್ನು ನಿತ್ಯ ಸಂಭವಿಸುವ ಶಿಸ್ತು ಕ್ರಮಕ್ಕೆ ಪ್ರತಿಕ್ರಿಯೆ ಎಂದೇ ಹೇಳುತ್ತಿದ್ದರು. ಆದರೆ ಈ ಅಭಿಪ್ರಾಯ ಸುಳ್ಳು ಎನ್ನುವುದು, ಪದೇಪದೇ ಸಂಭವಿಸುತ್ತಿರುವ ಹಿಂಸಾತ್ಮಕ ಘಟನೆಗಳಿಂದ ನಿರೂಪಿತವಾಗುತ್ತದೆ. ಈ ಘಟನೆಗಳು ಸೆರೆವಾಸಿಗಳಲ್ಲಿ ಹೆಚ್ಚಾಗುತ್ತಿರುವ ಆತ್ಮವಿಶ್ವಾಸದ ಸೂಚನೆಯಾಗಿ ಕಾಣುತ್ತದೆ. ಹಾಗಾಗಿಯೇ ಪ್ರತಿರೋಧ ವ್ಯಕ್ತಪಡಿಸುವುದೇ ಅಲ್ಲದೆ, ಎಲ್ಲರೂ ಒಟ್ಟಾಗಿ, ನಿಯಮಗಳನ್ನು ಉಲ್ಲಂಘಿಸಲು ಮುಂದಾಗಿದ್ದಾರೆ. ಇದರಿಂದ ಅವರ ಮೇಲೆ ಯಾವುದೇ ಪರಿಣಾಮ ಆಗುತ್ತಿಲ್ಲ. ಮೂಲಭೂತ ಶಿಸ್ತು ಪಾಲನೆಯೇ ಆಯ್ಕೆಯ ಪ್ರಶ್ನೆಯಾದಾಗ, ವ್ಯವಸ್ಥೆ ಕುಸಿಯುತ್ತದೆ.

ಮಂಗಳೂರು ಜೈಲು ಘಟನೆಯು ತೀರ ಇತ್ತೀಚೆಗೆ ಸಂಭವಿಸಿದ್ದು, ಇದೇ ಮಾದರಿಯಲ್ಲಿ ನಡೆದಿದೆ. ಕೈದಿಗಳ ಒಂದು ಗುಂಪು ಆಕ್ರಮಣಕಾರಿಯಾಗಿ, ನಿಯಮಗಳನ್ನು ಹೇರುವುದಕ್ಕೆ ಪ್ರತಿಭಟಿಸಿದ್ದೇ ಅಲ್ಲದೆ ಸಿಬ್ಬಂದಿಯನ್ನು ಪ್ರಚೋದಿಸಿ ಜೈಲಿನ ನಿತ್ಯ ಕಾರ್ಯಾಚರಣೆಯನ್ನು ಭಂಗಗೊಳಿಸಿದ್ದರು.  ಕಾರವಾರವಾಗಲೀ, ಮಂಗಳೂರು ಆಗಲೀ ಘರ್ಷಣೆಯ ಮಾದರಿ ಒಂದೇ ಆಗಿದೆ. ಕೈದಿಗಳು ತಮ್ಮ ಮೇಲೆ ಹೇರಿದ ಮಿತಿಗಳನ್ನು ಪರೀಕ್ಷಿಸುತ್ತಿದ್ದು, ಜೈಲು ಅಧಿಕಾರಿಗಳು ಇದನ್ನು ಎದುರಿಸಲು ಸಿದ್ದತೆ ನಡೆಸದೆ ಇರುವುದು ಮತ್ತು ವ್ಯವಸ್ಥೆಯು ನಿಯಂತ್ರಣವನ್ನು ಸಾಧಿಸಲು ವಿಫಲವಾಗಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಇಲ್ಲಿ ನೇರವಾಗಿ ಹೇಳುವುದು ಬಹಳ ಮುಖ್ಯವಾಗುತ್ತದೆ. ಕರ್ನಾಟಕದ ಕರಾವಳಿಯಲ್ಲಿರುವ ಜೈಲುಗಳು ಸಾಂಸ್ಥಿಕ ವೈಫಲ್ಯದ ಸೂಚನೆಗಳನ್ನು ನೀಡುತ್ತಿವೆ. ಇವು ಗಾತ್ರದಲ್ಲಿ ತಿಹಾರ್ ಅಥವಾ ಪರಪ್ಪನ ಅಗ್ರಹಾರ ಅಲ್ಲದೆ ಇದ್ದರೂ ಶಿಸ್ತು ಕಾಪಾಡಲು ಇರುವ ನಿಯಮಗಳು ಒಂದೇ ಆಗಿರುತ್ತವೆ. ಕೈದಿಗಳು ನಿಯಮಗಳನ್ನು ಮೀರಬಹುದು ಅಥವಾ ಉಲ್ಲಂಘಿಸಬಹುದು ಎಂದು ಭಾವಿಸಿದಾಗ ಅಧಿಕಾರಿಗಳಿಗೆ ಸವಾಲೆಸೆಯುತ್ತಾರೆ. ತಾವು ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಖಾತರಿ ಅವರಿಗೆ ಇರುತ್ತದೆ.

ಇಲ್ಲಿರುವ ಮುಖ್ಯ ಪ್ರಶ್ನೆ ಎಂದರೆ, ಆಡಳಿತ ವ್ಯವಸ್ಥೆಯ ಪ್ರತಿಕ್ರಿಯೆಯಲ್ಲಿ ತುರ್ತು ಕ್ರಮ ಜರುಗಿಸುವ ಇರಾದೆ ಕಾಣುವುದಿಲ್ಲ. ಪ್ರತಿಯೊಂದು ಘಟನೆ ನಡೆದ ನಂತರವೂ `ತನಿಖೆಯನ್ನು ಆದೇಶಿಸಲಾಗಿದೆ', `ಹೇಳಿಕೆ ಪಡೆಯಲಾಗುತ್ತದೆ' ಎಂದು ಹೇಳುವುದು ವಾಡಿಕೆಯಾಗಿದೆ. ಆದರೆ ಈ ತನಿಖೆಗಳು ಶಿಸ್ತನ್ನು ಮರುಸ್ಥಾಪಿಸುವುದಿಲ್ಲ. ನೇರವಾಗಿ ಕಾಣುವಂತಹ, ನಿರಂತರತೆಯ ತುರ್ತು ಕ್ರಮ ಅತ್ಯವಶ್ಯವಾಗಿದೆ.

ಜೈಲು ಅಧಿಕಾರಿಗಳು ಸಿಬ್ಬಂದಿ ಕೊರತೆಯನ್ನು ಎದುರಿಸುತ್ತಿದ್ದರೆ, ಅವರಿಗೆ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ರಾಜಕೀಯ ಹಸ್ತಕ್ಷೇಪ ಕಠಿಣ ಜಾರಿ ಪ್ರಕ್ರಿಯೆಯನ್ನು ತಡೆಗಟ್ಟುತ್ತದೆ. ಶಿಸ್ತು ದುರ್ಬಲವಾಗುತ್ತದೆ. ಕಠೋರ ಅಪರಾಧಿಗಳನ್ನು ಅನುಕೂಲಗಳಿಗಾಗಿಯೇ ಕಡಿಮೆ ಭದ್ರತೆ ಇರುವ ಬ್ಲಾಕ್‍ಗಳಲ್ಲಿ ಇರಿಸಲಾಗುತ್ತದೆ.  ಇಡೀ ವ್ಯವಸ್ಥೆಯೇ ದುರ್ಬಲವಾಗಿದೆ. ಈ ವೈಫಲ್ಯಗಳು ಮತ್ತು ಹಿಂಸಾತ್ಮಕ ಘಟನೆಗಳು ನಿರೀಕ್ಷಿತ ಪರಿಣಾಮಗಳನ್ನೇ ಬೀರುತ್ತಿವೆ.

ಈ ಹೊತ್ತಿನ ಜೈಲುಗಳು ಹೊಸ ತಲೆಮಾರಿನ ಕೈದಿಗಳನ್ನು ಹೊಂದಿರುವುದನ್ನು ನಾವು ಗುರುತಿಸಬೇಕಿದೆ. ಅನೇಕರು ಯುವಕರಾಗಿದ್ದಾರೆ, ಹೆಚ್ಚು ಜಾಲಗಳನ್ನು ಹೊಂದಿರುತ್ತಾರೆ, ಗ್ಯಾಂಗ್‍ಗಳ ಪ್ರಭಾವಕ್ಕೆ ಒಳಗಾಗಿರುತ್ತಾರೆ, ಸಾಂಪ್ರದಾಯಿಕ ಅಧಿಕಾರಯುತ ರಚನೆಗಳಿಂದ ಇವರು ಹೆದರುವುದಿಲ್ಲ. ಅವರನ್ನು ನಿರ್ವಹಿಸುವುದಕ್ಕೆ ಆಧುನಿಕ ತರಬೇತಿ, ಉತ್ತಮ ಬೇಹುಗಾರಿಕೆ ಮತ್ತು ಕಠಿಣ ನಿಯಮಗಳು ಅಗತ್ಯವಾಗಿವೆ. ಜೈಲು ಸಿಬ್ಬಂದಿಗೆ ಆಡಳಿತದ ಬೆಂಬಲ ಸ್ಥಿರವಾಗಿರಬೇಕಾಗುತ್ತದೆ. ಆದರೆ ಸರ್ಕಾರ ಈ ನಿಟ್ಟಿನಲ್ಲಿ ನಿಧಾನ ಗತಿಯಲ್ಲಿದೆ.

ಕಾರವಾರದಲ್ಲಿ ಎರಡು ಸಲ ನಡೆದಿದ್ದನ್ನು ಎಚ್ಚರಿಕೆಯ ಸಂಕೇತವಾಗಿ ನೋಡಬೇಕಿದೆ. ಈ ಜೈಲಿಗೆ ಮಾತ್ರವೇ ಅಲ್ಲದೆ, ಇಡೀ ಕರಾವಳಿಯ ಜೈಲುಗಳ ವಲಯಕ್ಕೂ ಇದು ಅನ್ವಯಿಸುತ್ತದೆ. ಸರ್ಕಾರ ಕೂಡಲೇ ಕಠಿಣ ಮತ್ತು ವ್ಯವಸ್ಥಿತವಾದ ಕ್ರಮ ಜರುಗಿಸದೆ ಹೋದರೆ, ಈಗ ನಡೆದ ಕಲಹಗಳು ನಾಳೆ ದೊಂಬಿಗಳಾಗುತ್ತವೆ.

ಸೆರೆಮನೆಗಳು ಅಧಿಕಾರ ಸಮೀಕರಣ ನಿತ್ಯವೂ ಬದಲಾಗುತ್ತಿರುವ ಕದನ ಕಣಗಳು ಅಲ್ಲ. ಅವು ಕಾನೂನು, ಸುವ್ಯವಸ್ಥೆ ಮತ್ತು ಸರಿಪಡಿಸುವ ಸಂಸ್ಥೆಗಳು. ಈ ಸಂಸ್ಥೆಗಳು ಕಾನೂನುಬಾಹಿರ ನಡವಳಿಕೆಯನ್ನು ಬಿಂಬಿಸುವುದೇ ಆದರೆ, ಅದನ್ನು ನಿಯಂತ್ರಿಸುವುದು ಸರ್ಕಾರದ ಜವಾಬ್ದಾರಿ. ಇಲ್ಲವಾದರೆ, ಸರ್ಕಾರ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತದೆ.

ಮತ್ತೊಮ್ಮೆ ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again