ಏಕಾಂಗಿಯಾಗಿ ಆಂಬೇಡ್ಕರ್ ಭಾರತದ ಸಂವಿಧಾನ ರಚಿಸಿರಲಿಲ್ಲ, ಆದರೆ ಅವರ ಪಾತ್ರ ಪ್ರಧಾನವಾಗಿತ್ತು

 ನಿದರ್ಶನಗಳು ಅಂಬೇಡ್ಕರ್ ಅವರ ಪ್ರಭಾವ ಕೇವಲ ಸಾಂಕೇತಿಕವಲ್ಲ ಎನ್ನುವುದನ್ನು ನಿರೂಪಿಸುತ್ತವೆ.

.............


ನೇರಾನೇರ * ಬಿವಿಸೀ

ಭಾರತೀಯ ಸಂವಿಧಾನವನ್ನು ಅಂಬೇಡ್ಕರ್ ಏಕಾಂಗಿಯಾಗಿ ಬರೆದಿದ್ದಾರೆ ಎಂಬ ನಂಬಿಕೆ ಸರಿಯಾದುದಲ್ಲ. ಆದರೂ ಅವರು ಪಡೆಯುತ್ತಿರುವ ವ್ಯಾಪಕ ಪ್ರಶಂಸೆಗೆ ಆಳವಾದ ಕಾನೂನಾತ್ಮಕ, ಬೌದ್ಧಿಕ ಹಾಗೂ ಸಾಂಕೇತಿಕ ತಳಹದಿ ಇದೆ. ಸಂವಿಧಾನವು ದೊಡ್ಡದಾದ, ಸಮಗ್ರವಾದ ಸಾಂಸ್ಥಿಕ ಪ್ರಕ್ರಿಯೆಯ ಒಂದು ಉತ್ಪನ್ನ. ಸಂವಿಧಾನ ರಚನಾ ಮಂಡಲಿಯಲ್ಲಿ 299 ಸದಸ್ಯರಿದ್ದು, 7 ಜನರ ಕರಡು ಸಮಿತಿಯ ಅಧ್ಯಕ್ಷತೆಯನ್ನು ಅಂಬೇಡ್ಕರ್ ವಹಿಸಿದ್ದರು. ಈ ಸಮಿತಿಯಲ್ಲಿ ಪ್ರಖ್ಯಾತ ನ್ಯಾಯವಾದಿಗಳು, ಆಡಳಿತಗಾರರು ಇದ್ದರು. ಇವರ ಕೊಡುಗೆಗಳು ಮಹತ್ವದ್ದಾಗಿದ್ದವು. ಅಲ್ಲಾಡಿ ಕೃಷ್ಣಸ್ವಾಮಿ ಐಯ್ಯರ್ ಒಕ್ಕೂಟದ ನ್ಯಾಯಾಂಗದ ಸಂರಚನೆಯನ್ನು ರೂಪಿಸಿದ್ದರು. ಕೆ ಎಮ್ ಮುನ್ಷಿ ಅಲ್ಪಸಂಖ್ಯಾತ ಹಕ್ಕುಗಳು ಮತ್ತು ನಿರ್ದೇಶಕ ತತ್ವಗಳಿಗೆ ಕೊಡುಗೆ ನೀಡಿದ್ದರು. ಗೋಪಾಲ ಸ್ವಾಮಿ ಐಯ್ಯಂಗಾರ್ ಆಡಳಿತಾತ್ಮಕ ರಚನೆಗಳನ್ನು ಮರುಪರಿಷ್ಕರಿಸಿದ್ದರು. ಕರಡು ರಚನೆಯಲ್ಲಿ ಜಾಗತಿಕ ಸಾಂವಿಧಾನಿಕ ಪರಂಪರೆಗಳೂ ನೆರವಾಗಿದ್ದವು. ಅಮೆರಿಕದ ಹಕ್ಕುಗಳ ಮಸೂದೆ ಮತ್ತು ಐರಿಷ್ ಸಂವಿಧಾನದ ನಿರ್ದೇಶಕ ತತ್ವಗಳು ಪ್ರಧಾನವಾಗಿದ್ದವು. ಈ ದೃಷ್ಟಿಯಿಂದ ಸಂವಿಧಾನವು ಸಾಮೂಹಿಕ ಶ್ರಮದ ಪ್ರತಿಫಲವಾಗಿತ್ತು.

ಆದಾಗ್ಯೂ ಅಂಬೇಡ್ಕರ್ ಅವರ ಪ್ರಭಾವ ಗುಣಾತ್ಮಕವಾಗಿ ಭಿನ್ನವಾಗಿತ್ತು. ಕರಡು ಸಮಿತಿಯ ಅಧ್ಯಕ್ಷರಾಗಿ ಅವರು ಸಮಿತಿಯ ವೈವಿಧ್ಯಮಯ ವರದಿಗಳನ್ನು ಪರಿವರ್ತಿಸಿ ತುಲನಾತ್ಮಕ ಮಾದರಿಗಳಾಗಿ, ರಾಜಕೀಯ ಚರ್ಚೆಗಳನ್ನು ಪ್ರಕ್ಷಿಪ್ತ ಸಾಂವಿಧಾನಿಕ ಅನುಚ್ಛೇದಗಳಾಗಿ ರೂಪಿಸಿದ್ದರು. ಚರ್ಚೆಗಳ ಸಮಯದಲ್ಲಿ ಬಹುತೇಕ ಪ್ರಶ್ನೆಗಳಿಗೆ ಅಂಬೇಡ್ಕರ್ ಉತ್ತರಿಸಿದ್ದರು. ತಾತ್ವಿಕ ನಿಯಮಗಳ ಹಿಂದಿದ್ದ ಉದ್ದೇಶಗಳನ್ನು ಸುಸ್ಪಷ್ಟವಾಗಿ ಅಧಿಕಾರಯುತವಾಗಿ ವಿವರಿಸಿದ್ದರು. ಸಾಂವಿಧಾನಿಕ ನೈತಿಕತೆ, ಸಾಮಾಜಿಕ ಪ್ರಜಾಪ್ರಭುತ್ವ ಮತ್ತು ವ್ಯಕ್ತಿ ಪೂಜೆಯ ಅಪಾಯಗಳ ಬಗ್ಗೆ ಅವರು ಮಾಡಿದ ಭಾಷಣಗಳು ತತ್ವಶಾಸ್ತ್ರೀಯ ಪರಿಭಾಷೆಯನ್ನು ಸೃಷ್ಟಿಸಿತ್ತು.

ಅದರ ಮೂಲಕವೇ ಹೊಸ ಸಂವಿಧಾನದ ತಳಹದಿಯೂ ಸಿದ್ಧವಾಗಿತ್ತು. ಹಾಗಾಗಿಯೇ ಸಾಮೂಹಿಕ ಪ್ರಯತ್ನದ ಒಳಗೇ, ಅಂಬೇಡ್ಕರ್ ಅವರನ್ನು ಸಂವಿಧಾನದ ಪ್ರಧಾನ ನಿರ್ಮಾತೃ ಎಂದು ಭಾವಿಸಲಾಗುತ್ತದೆ.


ಸುಪ್ರೀಂಕೋರ್ಟ್‍ನ ನ್ಯಾಯಶಾಸ್ತ್ರವು ಈ ಕೇಂದ್ರ ಪಾತ್ರವನ್ನು ಸ್ಪಷ್ಟವಾಗಿ ನಿರೂಪಿಸುತ್ತದೆ. ಒಂದು ಚಾರಿತ್ರಿಕ ದಾಖಲೆಯಾಗಿ ಅಲ್ಲದೆ, ಸಾಂವಿಧಾನಿಕ ವಾಸ್ತವವಾಗಿ ನಿರೂಪಿಸುತ್ತದೆ. ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ (1973) ಮೊಕದ್ದಮೆಯಲ್ಲಿ ನ್ಯಾಯಾಲಯವು ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ಉಲ್ಲೇಖಿಸಿ, ಸಾಂವಿಧಾನಿಕ ತಿದ್ದುಪಡಿಗಳು ಪ್ರಜಾಸತ್ತಾತ್ಮಕ ಆಳ್ವಿಕೆಯ ಅಂತಃಸತ್ವವನ್ನು ನಾಶಪಡಿಸಕೂಡದು ಎಂದು ಹೇಳಿತ್ತು.

ಸ್ವಾತಂತ್ರ್ಯ, ಸಮಾನತೆ ಮತ್ತು ಸಾಂಸ್ಥಿಕ ನಿಬರ್ಂಧಗಳ ಬಗ್ಗೆ ಅಂಬೇಡ್ಕರ್ ಅವರ ನಿಲುವು ಮತ್ತು ಪ್ರತಿಪಾದನೆಗಳು ಸಂವಿಧಾನದ ಮೂಲ ರಚನೆಯ ತತ್ವಗಳಿಗೆ ಆಧಾರವಾಗಿತ್ತು. ಇಂದಿರಾ ಸಾಹ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1992) ಮೊಕದ್ದಮೆಯಲ್ಲಿ ನ್ಯಾಯಾಲಯವು ಅಂಬೇಡ್ಕರ್ ಅವರ ಸಂವಿಧಾನ ಶಾಸನಸಭೆಯ ಉಲ್ಲೇಖಗಳನ್ನು ಪ್ರಸ್ತಾಪಿಸಿ, ಸಕಾರಾತ್ಮಕ ಆಡಳಿತ ಕ್ರಮಗಳನ್ನು ಸಾಂವಿಧಾನಿಕವಾಗಿ ಬೇರೂರಿದ ಸಾಧನ ಎಂದೂ ಸಮಾನತೆಯನ್ನು ಸಾಧಿಸಲು ಅತ್ಯವಶ್ಯವೆಂದೂ ಹೇಳಿತ್ತು. ಪರಿಹಾರಕ ತಾರತಮ್ಯಗಳ ಬಗ್ಗೆ ಅವರ ದೃಷ್ಟಿಕೋನವು ಸಂವಿಧಾನ ಅನುಚ್ಛೇದ 16ರಲ್ಲಿ ಉಲ್ಲೇಖಿಸಲಾಗಿದ್ದು, ಇದು ಮೀಸಲಾತಿ ನ್ಯಾಯಶಾಸ್ತ್ರದ ತಾತ್ವಿಕ ಬೆನ್ನೆಲುಬೂ ಆಗಿದೆ.


ಅದೇ ರೀತಿಯಲ್ಲಿ, ಎಸ್ ಆರ್ ಬೊಮ್ಮಾಯಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ (1994) ಪ್ರಕರಣದಲ್ಲಿ ನ್ಯಾಯಾಲಯವು, ಸರ್ವಾಧಿಕಾರಿ ಧೋರಣೆಯು ಆಡಳಿತದಲ್ಲಿ ತಲೆದೋರುವ ಬಗ್ಗೆ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ಉಲ್ಲೇಖಿಸಿ, ಕಾಯಾರ್ಂಗದ ಅಧಿಕಾರ ದುರುಪಯೋಗದ ಬಗ್ಗೆ ಎಚ್ಚರಿಕೆ ನೀಡಿತ್ತು. ಒಕ್ಕೂಟ ವ್ಯವಸ್ಥೆ ಮತ್ತು ಸಾಂವಿಧಾನಿಕ ನೈತಿಕತೆಯೇ ಸೆಕ್ಯುಲರಿಸಂ ಮತ್ತು ಪ್ರಜಾಸತ್ತಾತ್ಮಕ ಉತ್ತರದಾಯಿತ್ವಗೂ ಸಂವಿಧಾನದ ಮೂಲ ಸಂರಚನೆಯ ಭಾಗ ಎಂದು ಪರಿಗಣಿಸಲು ನ್ಯಾಯಾಲಯಕ್ಕೆ ಆಧಾರವಾಗಿತ್ತು. ನವತೇಜ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ (2018) ಮೊಕದ್ದಮೆಯಲ್ಲಿ ನ್ಯಾ ಚಂದ್ರಚೂಡ್ ಅಂಬೇಡ್ಕರ್ ಅವರನ್ನು ಉಲ್ಲೇಖಿಸಿ, ಸ್ವಾತಂತ್ರ್ಯದ ಪರಿವರ್ತನಾ ಸಾಮಥ್ರ್ಯವನ್ನು ಪ್ರಸ್ತಾಪಿಸಿದ್ದರು. ಸಾಂವಿಧಾನಿಕ ಹಕ್ಕುಗಳು ವ್ಯಕ್ತಿಗಳನ್ನು ಸಾಮಾಜಿಕ ಹಾಗೂ ನೈತಿಕ ಶ್ರೇಣೀಕರಣಗಳಿಂದ ಮೇಲೆತ್ತಬೇಕು ಎಂದು ವಾದಿಸಿದ್ದರು.

ಈ ಪೂರ್ವ ನಿದರ್ಶನಗಳು ಅಂಬೇಡ್ಕರ್ ಅವರ ಪ್ರಭಾವ ಕೇವಲ ಸಾಂಕೇತಿಕವಲ್ಲ ಎನ್ನುವುದನ್ನು ನಿರೂಪಿಸುತ್ತವೆ. ಇದು ಭಾರತದ ಸಂವಿಧಾನದ ತತ್ವಗಳನ್ನು ಒಟ್ಟಾಗಿಸಿತ್ತು. ನ್ಯಾಯಾಲಯಗಳು ಪದೇಪದೇ ಅವರ ಭಾಷಣಗಳನ್ನು ಉಲ್ಲೇಖಿಸುವ ಮೂಲಕ, ಮೂಲಭೂತ ಹಕ್ಕುಗಳು ಮತ್ತು ಸಾಂವಿಧಾನಿಕ ಸಂರಚನೆಗಳ ಆಯ್ಕೆಗಳನ್ನು ರೂಪಿಸುತ್ತವೆ.

ಹಾಗಾಗಿ, ಅಂಬೇಡ್ಕರ್ ಅವರ ಪ್ರಾಮುಖ್ಯತೆ ಉದ್ಭವಿಸುವುದು ಮೂರು ಪರಸ್ಪರ ಪೂರಕ ಕಾರಣಗಳಿಂದ.  ಅವರ ಸಂವಿಧಾನ ರಚನೆಯಲ್ಲಿ ಕಾರ್ಯಾತ್ಮಕ ನಾಯಕತ್ವ. ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ತತ್ವಗಳನ್ನು ರೂಪಿಸುವಲ್ಲಿ ಅವರ ಬೌದ್ಧಿಕ ಆಳ ಮತ್ತು ವ್ಯಾಪ್ತಿ, ದೀರ್ಘಕಾಲ ಪ್ರಸ್ತುತತೆ ಪಡೆಯುವ ಅವರ ತಾತ್ವಿಕ ಪ್ರಭಾವ. ಇದನ್ನು ಸುಪ್ರೀಂಕೋರ್ಟ್ ಆಗಾಗ್ಗೆ ಉಲ್ಲೇಖಿಸುತ್ತಲೇ ಇರುತ್ತದೆ. ಇದರ ರಚನೆಕಾರರೂ ಸಹ ನಿಸ್ಸಂದೇಹವಾಗಿ ಸಂವಿಧಾನವನ್ನು ಸಮೃದ್ಧಗೊಳಿಸಿದ್ದಾರೆ. ಆದರೆ ಅಂಬೇಡ್ಕರ್ ಅದಕ್ಕೆ ಬೇಕಾದ ಸಹಯೋಗ, ಸ್ಪಷ್ಟತೆ, ನೈತಿಕ ರಚನೆಯನ್ನು ಕೊಡುಗೆಯಾಗಿ  ನೀಡಿದ್ದಾರೆ. ಈ ಅಂಶವೇ ಅಂಬೇಡ್ಕರ್ ಅವರನ್ನು ಸಂವಿಧಾನದ ಮೂಲ ನಿರ್ಮಾತೃ ಎಂದು ಇತಿಹಾಸ ಸ್ಮರಿಸುವುದಕ್ಕೆ ಕಾರಣವೇ ಹೊರತು, ಮಿಥ್ಯೆಯ ಸೃಷ್ಟಿಯಾಗಿ ಅಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again