ಉನ್ನಾವೋದಿಂದ ಮತ್ತು ಧರ್ಮಸ್ಥಳವರೆಗೆ - ಸಾರ್ವಜನಿಕ ಪ್ರಜ್ಞೆಯ ಇಬ್ಬಂದಿತನ
ಸಂಪಾದಕೀಯ * ಬಿವಿಸೀ
ಸಮಕಾಲೀನ ಭಾರತ ಅನ್ಯಾಯಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಉನ್ನಾವೋ ಅತ್ಯಾಚಾರ-ಹತ್ಯೆಯ ಪ್ರಕರಣ ಇದನ್ನು ಸ್ಪಷ್ಟವಾಗಿ ನಿರೂಪಿಸಿದೆ. ಈ ಘಟನೆಯ ವಿರುದ್ಧ ಆಕ್ರೋಶ ಮುಗಿಲು ಮುಟ್ಟಿತ್ತು. ಒತ್ತಡವೂ ಹೆಚ್ಚಾಗಿತ್ತು. ಸಂಸ್ಥೆಗಳು ಕಾರ್ಯೋನ್ಮುಖವಾಗುವುದು ಅನಿವಾರ್ಯವಾಗಿತ್ತು. ಪ್ರತಿಕ್ರಿಯಿಸುವುದು ಅವಶ್ಯವಾಗಿತ್ತು.
ಆದರೆ ಈ ಘಟನೆಯು ಅಹಿತಕರ ಸತ್ಯವನ್ನೂ ಹೊರಹಾಕಿತ್ತು.
ಇದೇ ಭಾರತವು ಇಂದು ಇಂತಹುದೇ ಹಲವಾರು ದುರ್ಘಟನೆಗಳು ಸಂಭವಿಸಿದಾಗ, ಧರ್ಮಸ್ಥಳದಲ್ಲಿ ಅತ್ಯಾಚಾರ, ಹತ್ಯೆ, ಅಪಹರಣಗಳ ಸುದ್ದಿಗಳು ಹರಡುತ್ತಿದ್ದಾಗ, ದಾಖಲೆಸಹಿತ ಆರೋಪಗಳು ಕೇಳಿಬಂದಾಗ, ಮೌನವಾಗುತ್ತದೆ. ರಾಷ್ಟ್ರ ಮಟ್ಟದಲ್ಲಿ ಯಾವುದೇ ಆಕ್ರೋಶ ಕಾಣುವುದಿಲ್ಲ. ಮಾಧ್ಯಮಗಳಿಂದ ಯಾವುದೇ ಒತ್ತಡ ಕಾಣುವುದಿಲ್ಲ. ಅಧಿಕಾರ ಕೇಂದ್ರಗಳಲ್ಲಿ ತುರ್ತುಕ್ರಮ ಜರುಗಿಸುವ ಉಮೇದು ಕಾಣುವುದಿಲ್ಲ.
ಈ ವೈರುಧ್ಯವನ್ನು ನಿರ್ಲಕ್ಷಿಸುವುದು ಹೇಗೆ ಸಾಧ್ಯ?
ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣನವರ್, ಸರಿಯಾಗಿ ಹೇಳಿದ್ದಾರೆ. ಅವರ ವಾದವೂ ಸರಳವಾಗಿದೆ. ಅಪರಾಧಗಳು ಆಕ್ರೋಶ ಹುಟ್ಟಿಸಬೇಕಾದರೆ ಆರೋಪಿಗಳು ದುರ್ಬಲರಾಗಿರಬೇಕು ಅಥವಾ ಅಮಾಯಕರಾಗಿರಬೇಕು. ಆರೋಪಗಳು ಬಲಾಢ್ಯರನ್ನು, ಸಂಪತ್ತು ಇರುವವರನ್ನು, ಧಾರ್ಮಿಕ ಕೇಂದ್ರದ ಕುಟುಂಬಗಳನ್ನು, ಧರ್ಮಸ್ಥಳದ ಗಣರಾಜ್ಯವನ್ನು ಕುಕ್ಕಿದಾಗ ವ್ಯವಸ್ಥೆ ತಣ್ಣಗಾಗುತ್ತದೆ.
ವಿಶೇಷ ತನಿಖಾ ದಳವನ್ನು ರಚಿಸಿದ್ದು ರಾಜ್ಯ ಸರ್ಕಾರ. ಈ ವರ್ತನೆಯನ್ನು ಬದಲಾಯಿಸುವುದು ಅದರ ಗುರಿಯಾಗಿತ್ತು. ಬದಲಾಗಿ ಅದು ಅನುಮಾನಗಳನ್ನು ದಟ್ಟವಾಗಿಸಿದೆ. ಆರೋಪಿಗಳನ್ನು ಮುಟ್ಟಲೂ ಸಾಧ್ಯವಾಗುತ್ತಿಲ್ಲ. ಅವರನ್ನು ವಿಚಾರಣೆಗೆ ಕರೆಯಲಾಗುತ್ತಿಲ್ಲ. ಪ್ರಶ್ನಿಸಲಾಗುತ್ತಿಲ್ಲ. ಅವರು ಎಂದಿನಂತೆ ಇದ್ದಾರೆ. ಇದಕ್ಕೆ ವಿರುದ್ಧವಾಗಿ ದೂರುದಾರರು, ಮಾಹಿತಿದಾರರು, ಕಾರ್ಯಕರ್ತರು ವಿಚಾರಣೆಯ ನೋಟಿಸ್ ಪಡೆಯುತ್ತಿದ್ದಾರೆ. ಅವರ ಮೇಲೆ ಒತ್ತಡ ಹೆಚ್ಚಾಗಿದೆ. ಅವರನ್ನು ಬೆದರಿಸಲಾಗಿದೆ. ತಮ್ಮ ಹೇಳಿಕೆಗಳಿಗೆ ವಿರುದ್ಧವಾಗಿ ಮಾತನಾಡುವಂತೆ ಅವರನ್ನು ಬಲಾತ್ಕರಿಸಲಾಗುತ್ತಿದೆ.
ಇದು ಪ್ರಕ್ರಿಯೆಯ ಲೋಪವಲ್ಲ. ಸ್ಪಷ್ಟವಾದ ಒಂದು ಮಾದರಿ
ನಾಗರಿಕ ಸಮಾಜ ತನ್ನ ದನಿ ಎತ್ತಿದೆ. ಮಹಿಳಾ ಸಂಘಟನೆಗಳು ಜಂಟಿಯಾಗಿ, `ಕೊಂದವರು ಯಾರು?' ಎಂಬ ಸರಳ ಪ್ರಶ್ನೆಯನ್ನು ಕೇಳಿವೆ. ಯಾರು ಹಂತಕರು? ಇದು ಒಂದು ಪ್ರಬಲವಾದ ಗಳಿಗೆ. ಆದರೆ ಫಲಿತಾಂಶ ಶೂನ್ಯ. ಯಾವುದೇ ಬಂಧನವಾಗಿಲ್ಲ. ಯಾವುದೇ ಸಾಧನೆಯಾಗಿಲ್ಲ. ಉತ್ತರದಾಯಿತ್ವ ಇಲ್ಲ. ಎಲ್ಲವೂ ಯಥಾಸ್ಥಿತಿಯಲ್ಲಿದೆ.
ಏಕೆಂದರೆ ಪ್ರತಿಭಟನೆಗಳು ಮಾತ್ರವೇ ಸುರಕ್ಷಿತ ಅಧಿಕಾರ ಕೋಟೆಯನ್ನು ಭೇದಿಸಲು ಸಾಧ್ಯವಿಲ್ಲ. ಸರ್ಕಾರವೇ ನಿಜವಾದ ಅಪರಾಧಿಗಳನ್ನು ಶಿಕ್ಷಿಸಲು ನಿರ್ಧರಿಸದೆ ಹೋದಾಗ, ವಿಚಾರಣೆಗಳು ಕೇವಲ ಆಚರಣೆಗಳಾಗುತ್ತವೆ. ಸಮಿತಿ, ಆಯೋಗಗಳು ರಕ್ಷಾ ಕವಚಗಳಾಗುತ್ತವೆ. ಸಮಯವೇ ಅಸ್ತ್ರವಾಗುತ್ತದೆ.
ಧರ್ಮಸ್ಥಳದ ಪ್ರಕರಣಗಳು ಗಡುಚಾಗಿರುವುದು ಏಕೆಂದರೆ, ಅಲ್ಲಿ ಭಾಗಿಯಾಗಿರುವ ಅಧಿಕಾರ ಕೇಂದ್ರದ ಸ್ವರೂಪ ಹಾಗಿದೆ. ಇದು ಕೇವಲ ಹಣ ಅಥವಾ ರಾಜಕೀಯ ಬಲದ ಪ್ರಶ್ನೆಯಲ್ಲ. ಇದೊಂದು ಧಾರ್ಮಿಕ ಅಧಿಕಾರ ಕೇಂದ್ರ. ಸಾಮಾಜಿಕ ನಿಯಂತ್ರಕ ಕೇಂದ್ರ. ಆರೋಪಿಗಳನ್ನು ಪ್ರಶ್ನಿಸುವುದು ಸಂಪ್ರದಾಯದ ಮೇಲೆ ದಾಳಿ ಮಾಡಿದಂತಾಗುತ್ತದೆ. ಉತ್ತರದಾಯಿತ್ವವನ್ನು ಅಡ್ಡಿಪಡಿಸಿದಂತೆ ಕಾಣಲಾಗುತ್ತದೆ. ಕಾನೂನಿನ ಬದಲು ಭೀತಿ ಆವರಿಸುತ್ತದೆ.
ಈ ದ್ವಿಮುಖ ಮಾನದಂಡಗಳು ಎಲ್ಲರನ್ನೂ ಚಿಂತೆಗೀಡುಮಾಡಬೇಕಿದೆ. ಒಂದು ಅಪರಾಧ ಎಲ್ಲಿ ಸಂಭವಿಸಿದೆ ಅಥವಾ ಯಾರು ಆರೋಪಿ ಎನ್ನುವುದನ್ನು ನ್ಯಾಯ ಅವಲಂಬಿಸಬಾರದು. ಸಮಾಜವು ಉನ್ನಾವೋ ಪ್ರಕರಣದಲ್ಲಿ ಬಲವಾಗಿ ಪ್ರತಿಕ್ರಿಯಿಸುತ್ತದೆ, ಆದರೆ ಧರ್ಮಸ್ಥಳದಲ್ಲಿ ಮೌನವಾಗುತ್ತದೆ. ಈ ಆಯ್ಕೆ ಪ್ರಕ್ರಿಯೆಯ ಠಕ್ಕುತನದ ಪರಮಾವಧಿ.
ಸತ್ಯ ಹೇಳುವವರನ್ನು ಬೇಟೆಯಾಡುತ್ತಿದ್ದು, ಆರೋಪಿಗಳನ್ನು ರಕ್ಷಿಸುತ್ತಿರುವಾಗ, ನಿಸ್ಸಂದೇಹವಾದ ಸಂದೇಶ ರವಾನೆಯಾಗುತ್ತದೆ, ಕೆಲವು ಸಂತ್ರಸ್ತರು ಮುಖ್ಯವಾಗುತ್ತಾರೆ ಕೆಲವರು ನಗಣ್ಯವಾಗುತ್ತಾರೆ. ಇತಿಹಾಸ ಅಪರಾಧಗಳನ್ನು ಮಾತ್ರ ಸ್ಮರಿಸುವುದಿಲ್ಲ, ಈ ಅಪರಾಧಗಳು ಮುಂದುವರೆಯಲು ಅನುವು ಮಾಡಿಕೊಟ್ಟ ಮೌನವನ್ನೂ ನೆನೆಯುತ್ತದೆ.
Comments
Post a Comment