ಡಿಕೆಶಿ ರಾಜಕೀಯ ಕಸರತ್ತುಗಳು ಮತ್ತು ವಾಸ್ತವ ಸ್ಥಿತಿ
ಕಳೆದ ಹಲವು ತಿಂಗಳುಗಳಿಂದ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿಯಾಗುವ ಹೆಬ್ಬಯಕೆಯಿಂದ ರಾಜಕೀಯವಾಗಿ ಬ್ಯಾಲೆನ್ಸ್ ಮಾಡುವ ಸರ್ಕಸ್ಸಿನ ನಡೆ ಅನುಸರಿಸುತ್ತಿದ್ದಾರೆ. ಆದರೆ ಅವೆಲ್ಲ ಅವರಿಗೆ ಮುಳುವಾಗುತ್ತಿರುವ ಸೂಚನೆಗಳು ಕಾಣುತ್ತಿವೆ.
ಶಿವಕುಮಾರ್ ಅವರನ್ನು ಪ್ರಕ್ಷುಬ್ಧಗೊಳಿಸಿರುವ ಅಂಶವೆಂದರೆ ದೆಹಲಿಯಿಂದ ಇತ್ತೀಚೆಗೆ ಬರುತ್ತಿರುವ ಸೂಚನೆಗಳು. ರಾಹುಲ್ ಗಾಂಧಿಯನ್ನು ಭೇಟಿಯಾಗಲು ಡಿಕೆಶಿ ವಿಫಲರಾದರು. ಬಹುಮುಖ್ಯವಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯಿಂದ ಅವರನ್ನು ಹೊರಗಿಡಲಾಯಿತು. ಸಿದ್ದರಾಮಯ್ಯ ಅವರನ್ನು ಮಾತ್ರ ಆಹ್ವಾನಿಸಲಾಯಿತು.
ಕಾಂಗ್ರೆಸ್ ರಾಜಕಾರಣದಲ್ಲಿ ಈ ರೀತಿಯ ಸೂಚನೆಗಳು ಮುಖ್ಯವಾಗುತ್ತವೆ. ಡಿಕೆಶಿ ಹೈಕಮಾಂಡ್‍ನಿಂದ ಅಂದರೆ ರಾಹುಲ್ ಮತ್ತು ಸೋನಿಯಾರಿಂದ ದೂರವಾಗಿದ್ದಾರೆ. ಸಾಮಿಪ್ಯತೆಯೇ ಅಧಿಕಾರಕ್ಕೆ ಬಲ. ಸಂಪರ್ಕದ ನಿರಾಕರಣೆ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ.
ಇದರ ನಂತರ, ಶಿವಕುಮಾರ್ ಅವರು ಪದೇಪದೇ ತಾನು ಮುಖ್ಯಮಂತ್ರಿ ಹುದ್ದೆಯನ್ನು ಬಯಸುತ್ತಿಲ್ಲ ಎಂದು ಹೇಳುತ್ತಿರುವುದನ್ನು ನಂಬಲಾಗುವುದಿಲ್ಲ. ಇದು ಆಯ್ಕೆಗಿಂತಲೂ ಹೆಚ್ಚಾಗಿ ಒತ್ತಾಯಪೂರ್ವಕವಾಗಿ ಕಾಣುತ್ತಿದೆ. ಸಾರ್ವಜನಿಕರು ನಡೆ ಮತ್ತು ನುಡಿಯ ನಡುವೆ ವ್ಯತ್ಯಾಸವನ್ನು ಗುರುತಿಸುತ್ತಾರೆ.
ಅವರ ಚಟುವಟಿಕೆಗಳನ್ನು ನೋಡಿದಾಗ ಅವರಲ್ಲಿ ಮುಖ್ಯಮಂತ್ರಿಯಾಗುವ ಆಕಾಂಕ್ಷೆ ಎದ್ದು ಕಾಣುತ್ತದೆ ಆದರೆ ಅವರ ಮಾತುಗಳಲ್ಲಿ ಇದನ್ನು ನಿರಾಕರಿಸಲಾಗುತ್ತಿದೆ. ಈ ಅಂತರ ಸ್ಪಷ್ಟವಾಗಿ ಕಾಣುವ ಸಂದರ್ಭದಲ್ಲೆಲ್ಲಾ ಮಾಧ್ಯಮಗಳನ್ನು ಟೀಕಿಸುವ ಡಿಕೆಶಿ, ಮಾಧ್ಯಮ ಇಲ್ಲದ ಕತೆಗಳನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸುತ್ತಾರೆ. ಈ ಮಾದರಿಯು ಸಾಮಾನ್ಯವಾಗಿದ್ದು ಕಾಕತಾಳೀಯವೇನೂ ಅಲ್ಲ.
ವಿಡಂಬನೆ ಎಂದರೆ, ಶಿವಕುಮಾರ್ ಈ ವೇಳೆಗಾಗಲೇ ಒಬ್ಬ ರಾಜಕಾರಣಿಗೆ ಅಗತ್ಯವಾದ ಎಲ್ಲವನ್ನೂ ಗಳಿಸಿದ್ದಾರೆ. ಪ್ರಮುಖ ಸಚಿವ ಹುದ್ದೆಗಳನ್ನು ಪಡೆದಿದ್ದಾರೆ, ವ್ಯಾಪಕ ಅಧಿಕಾರ ಗಳಿಸಿದ್ದಾರೆ, ಸರ್ಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾರೆ. ದೇಶದಲ್ಲಿ ಅತ್ಯಂತ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದಾರೆ. ಕೇಂದ್ರೀಯ ಸಂಸ್ಥೆಗಳ ಸತತ ವಿಚಾರಣೆಯ ಹೊರತಾಗಿಯೂ, ಜೈಲು ಶಿಕ್ಷೆಯ ಹೊರತಾಗಿಯೂ, ಆದಾಯಕ್ಕಿಂತಲೂ ಹೆಚ್ಚಿನ ಸಂಪತ್ತು ಗಳಿಕೆ ಮತ್ತು ಮನಿಲಾಂಡರಿಂಗ್ ಆರೋಪಗಳಿದ್ದರೂ ಸಹಾ ಡಿಕೆಶಿ ಅವರ ರಾಜಕೀಯ ಸ್ಥಾನಕ್ಕೆ ಕುಂದು ಬಂದಿಲ್ಲ. ಸಾರ್ವಜನಿಕವಾಗಿ ಪಶ್ಚಾತ್ತಾಪದ ಒಂದು ಮಾತನ್ನೂ ಅವರು ಆಡಿಲ್ಲ. ಅಧಿಕಾರ ಅವರಿಗೆ ರಕ್ಷಣೆ ನೀಡಿದೆ ಎಂಬ ಭಾವನೆ ದಟ್ಟವಾಗಿದೆ.
ಇದು ಸಾಧ್ಯವಾಗುವುದಕ್ಕೆ ಕಾರಣ ಸಿದ್ದರಾಮಯ್ಯ ಸರ್ಕಾರದ ನೇತೃತ್ವ ವಹಿಸಿರುವುದು. ಅವರು ಉಪಮುಖ್ಯಮಂತ್ರಿಯನ್ನು ಎದುರುಹಾಕಿಕೊಳ್ಳಲು ಸಿದ್ಧವಾಗಿಲ್ಲ, ಬದಲಾಗಿ ಪಕ್ಷದಲ್ಲಿ ಶಾಂತಿ ಕಾಪಾಡಲು ಯತ್ನಿಸುತ್ತಿದ್ದಾರೆ. ಡಿಕೆಶಿಯ ಅತಿರೇಕಗಳನ್ನು ನಿರ್ಲಕ್ಷಿಸಿ ಸಿದ್ದರಾಮಯ್ಯ ಆಂತರಿಕ ಕಲಹವನ್ನು ತಪ್ಪಿಸುತ್ತಿದ್ದಾರೆ. ಆದರೆ ಈ ಮೌನ ದುಬಾರಿಯಾಗುತ್ತದೆ. ಇದು ಸರ್ಕಾರದ ನೈತಿಕ ಸ್ಥಾನಮಾನವನ್ನು ಕುಗ್ಗಿಸುತ್ತದೆ, ಆಡಳಿತವನ್ನು ಬದಿಗೆ ಸರಿಸಿ ಪ್ರತಿಸ್ಪರ್ಧಿಗಳ ಆಕಾಂಕ್ಷೆಗಳ ಬಗ್ಗೆ ಹೆಚ್ಚು ಗಮನ ನೀಡಲಾಗುತ್ತಿದೆ ಎಂಬ ಭಾವನೆ ದಟ್ಟವಾಗುತ್ತಿದೆ.
ಆಕಾಂಕ್ಷೆಯೊಂದೇ ಕಾರಣ ಅಲ್ಲ. ರಾಜಕಾರಣವು ಆಕಾಂಕ್ಷೆಯನ್ನು ಆಧರಿಸಿಯೇ ನಡೆಯುತ್ತದೆ. ಸಮಸ್ಯೆ ಇರುವುದು ಆಕಾಂಕ್ಷೆ ಇಲ್ಲ ಎಂದು ಹೇಳುವುದರಲ್ಲಿ. ಮತದಾರರು ಈಗ ಎಚ್ಚೆತ್ತಿದ್ದಾರೆ. ಅಧಿಕಾರದ ಆಟಗಳನ್ನು ಸಹಿಸಿಕೊಳ್ಳುತ್ತಾರೆ ಆದರೆ ಆಡಿದ ಮಾತುಗಳು ವರ್ತನೆಗೆ ವಿರುದ್ಧವಾಗಿ ನಿರಾಕರಿಸುವುದನ್ನು ಸಹಿಸಲಾರರು.
Comments
Post a Comment