ಸಂಪರ್ಕಕ್ಕಾಗಿ ಕಾಯುತ್ತಿರುವ ಕರಾವಳಿ
* ಸಂಪಾದಕೀಯ
ಕರಾವಳಿ ಕರ್ನಾಟಕವು ಇಂದು ವಿರೋಧಾಭಾಸದ ಕವಲು ಹಾದಿಗಳಲ್ಲಿ ನಿಂತಿದೆ. ಭಾರತದ ಅತ್ಯಂತ ಉತ್ತಮ ಉದ್ಯಮಶೀಲತೆ ಮತ್ತು ದೂರಗಾಮಿ ದೃಷ್ಟಿಕೋನದ ಪ್ರದೇಶವಾಗಿದ್ದರೂ ಸಹ, ಈ ಜಿಲ್ಲೆಗಳು ಅದರ ಆರ್ಥಿಕ ಪ್ರಗತಿ ಮತ್ತು ಕೊಡುಗೆಗಳಿಗೆ, ಕಾರ್ಯತಾಂತ್ರಿಕ ಪ್ರಾಮುಖ್ಯತೆಗೆ ತಕ್ಕಂತಹ ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಈಗ ಕೆಲವು ಬೇಡಿಕೆಗಳನ್ನು ಮುಂದಿಡಲಾಗುತ್ತಿದೆ. ರಾಜ್ಯದ ರಾಜಧಾನಿ ಮತ್ತು ಕರಾವಳಿಯ ನಡುವೆ ಎಕ್ಸ್‍ಪ್ರೆಸ್ ವೇ ಹೆದ್ದಾರಿ, ಘಟ್ಟ ಪ್ರದೇಶಗಳ ರೈಲು ಮಾರ್ಗಗಳ ವಿದ್ಯುತ್ತೀಕರಣ ಪೂರ್ತಿಯಾಗಿರುವುದರಿಂದ ವೇಗದ ಆಧುನಿಕ ರೈಲು ಮಾರ್ಗಗಳು, ಕರಾವಳಿ ಹೆದ್ದಾರಿಗಳ ಅಗಲೀಕರಣ ಮುಂತಾದ ಬೇಡಿಕೆಗಳು ದುಬಾರಿಯೂ ಅಲ್ಲ ಅಥವಾ ಅವಸರದ ಆಗ್ರಹಗಳೂ ಅಲ್ಲ. ಈ ಸೌಕರ್ಯಗಳು ಎಂದೋ ಲಭ್ಯವಾಗಬೇಕಿತ್ತು.
ಬೆಂಗಳೂರು ಮತ್ತು ಕರಾವಳಿ ಪ್ರದೇಶದ ನಡುವಿನ ರಸ್ತೆ ಸಂಚಾರವು ನಿಧಾನಗತಿಯಲ್ಲಿ ಸಾಗುತ್ತಿದ್ದು, ಅನಿಶ್ಚಿತತೆಯನ್ನು ಎದುರಿಸುತ್ತಿದೆ, ದುಬಾರಿಯೂ ಆಗಿದೆ. ದಶಕಗಳ ಕಾಲದ ವ್ಯಾಪಾರ, ವಾಣಿಜ್ಯ, ಪ್ರವಾಸೋದ್ಯಮ, ಶಿಕ್ಷಣ ಮತ್ತು ಆರೋಗ್ಯ ಸೇವೆಯ ಪ್ರಗತಿಯ ಹೊರತಾಗಿಯೂ ಇಲ್ಲಿನ ರಸ್ತೆ ಸಂಪರ್ಕಗಳು ಕಿರಿದಾದ, ದಟ್ಟಣೆ ಹೆಚ್ಚಾಗಿರುವ ರಸ್ತೆಗಳನ್ನೇ ಅವಲಂಬಿಸಿದ್ದು, ಪ್ರಯಾಣಿಕರ ಮತ್ತು ಸರಕುಗಳ ಸಂಚಾರವು ಕಷ್ಟಕರವಾಗಿದೆ. ದೆಹಲಿ-ಆಗ್ರಾ ಕಾರಿಡಾರ್ ಮಾದರಿಯಲ್ಲಿ ಎಕ್ಸ್‍ಪ್ರೆಸ್ ವೇ ನಿರ್ಮಾಣವಾಗುವುದು ಐಷಾರಾಮಿ ಎಂದೇನೂ ಎನಿಸುವುದಿಲ್ಲ, ಇದು ಅವಶ್ಯಕವಾಗಿದೆ. ದಕ್ಷವಾದ ರಸ್ತೆ ಸಂಪರ್ಕ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ, ಹೆಚ್ಚಿನ ರಕ್ಷಣೆ ಒದಗಿಸುತ್ತದೆ, ಒಳನಾಡಿನ ಪ್ರದೇಶಗಳನ್ನು ಬಂದರು ಪಟ್ಟಣಗಳಿಗೆ ಸಂಪರ್ಕಿಸಲು ನೆರವಾಗುತ್ತದೆ, ತನ್ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಾಗಿಲು ತೆರೆದಂತಾಗುತ್ತದೆ.
ರೈಲ್ವೆ ಮಾರ್ಗಗಳೂ ಸಹ ಈಗ ಅವಶ್ಯವಾಗಿ ಬೇಕಾಗಿರುವ ಸೌಲಭ್ಯವಾಗಿವೆ. ಘಟ್ಟ ಪ್ರದೇಶಗಳಲ್ಲಿ ರೈಲ್ವೆ ಮಾರ್ಗಗಳ ವಿದ್ಯುದೀಕರಣ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ, ಸೇವೆಗಳ ಉನ್ನತೀರಕಣಕ್ಕೆ ಯಾವುದೇ ಸಮಸ್ಯೆಯಿಲ್ಲ. ವಂದೇಭಾರತ್ ಮತ್ತು ಇತರ ವೇಗ ಗತಿಯ ರೈಲುಗಳನ್ನು ಮಂಗಳೂರು ಮತ್ತು ಬೆಂಗಳೂರಿನ ನಡುವೆ ಒದಗಿಸಿದರೆ ಚಲನೆಯನ್ನು ಹೆಚ್ಚಿಸುವುದೇ ಅಲ್ಲದೆ, ವ್ಯಾಪಾರಿ ಸಂಚಾರವನ್ನು ವೇಗಗೊಳಿಸುತ್ತದೆ, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತಾಗುತ್ತದೆ, ಬಂದರುಗಳ ಮೂಲ ಸೌಕರ್ಯಗಳು ಬಲಗೊಳ್ಳುತ್ತವೆ. ಈಗಾಗಲೇ ಮಂಗಳೂರು ದೇಶದ ಪ್ರಮುಖ ನಗರಗಳೊಡನೆ ರೈಲು ಸಂಪರ್ಕ ಹೊಂದಿದ್ದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ಹೊಂದಿದೆ. ಇದನ್ನು ರೈಲು ಆಧುನಿಕೀಕರಣ ಪ್ರಕ್ರಿಯೆಯಲ್ಲಿ ಎರಡನೆ ಆದ್ಯತೆಯಾಗಿ ಪರಿಗಣಿಸುವುದು ಇಲ್ಲಿನ ಭೌಗೋಳಿಕ ಮತ್ತು ಆರ್ಥಿಕ ಸನ್ನಿವೇಶಕ್ಕೆ ತದ್ವಿರುದ್ಧವಾದ ನೀತಿಯಾಗುತ್ತದೆ.
ಕರಾವಳಿಯ ಉದ್ದಕ್ಕೂ, ಮಂಗಳೂರು ಮತ್ತು ಕಾರವಾರದ ನಡುವೆ ದಶಪಥ ರಸ್ತೆಯ ನಿರ್ಮಾಣಕ್ಕಾಗಿ ಆಗ್ರಹಿಸುತ್ತಿರುವುದು ವಾಸ್ತವಿಕವಾಗಿದೆ. ಈಗಿರುವ ಚತುಷ್ಪತ ಹೆದ್ದಾರಿಯಲ್ಲಿ ವಾಹನ ಸಂಚಾರ ತೀವ್ರ ಹೆಚ್ಚಾಗಿದ್ದು, ಪದೇಪದೇ ಅಡ್ಡಿ-ಆತಂಕಗಳು ಎದುರಾಗುತ್ತಿವೆ. ಭದ್ರತೆಯ ಬಗ್ಗೆ ಕಾಳಜಿ ಹೆಚ್ಚಾಗಿದೆ. ಕಾರಿಡಾರ್ ವಿಸ್ತೀರ್ಣವು ಬಂದರುಗಳನ್ನು, ಮೀನುಗಾರಿಕೆಯನ್ನು, ಕೈಗಾರಿಕಾ ವಲಯಗಳನ್ನು ಮತ್ತು ಪ್ರವಾಸ ಕೇಂದ್ರಗಳನ್ನು ಸಂಪರ್ಕಿಸುವ ಮೂಲಕ ಒಂದು ದೀರ್ಘ ಆರ್ಥಿಕ ವಲಯವನ್ನು ಸೃಷ್ಟಿಸುತ್ತದೆ, ತನ್ಮೂಲಕ ಕರಾವಳಿಯುದ್ದಕ್ಕೂ ಅಭಿವೃದ್ಧಿಯ ಅವಕಾಶಗಳು ತೆರೆದುಕೊಳ್ಳುತ್ತವೆ.
ಈ ನಿರ್ಲಕ್ಷ್ಯವನ್ನು ಸಮರ್ಥಿಸುವುದು ಏಕೆ ಕಷ್ಟವಾಗುತ್ತದೆ ಎಂದರೆ ಈ ಪ್ರದೇಶದ ಚರಿತ್ರೆ ಹೀಗಿದೆ. ಕರಾವಳಿ ಕರ್ನಾಟಕವು ಸದಾ ಕಾಲಕ್ಕೂ ಭಾರತಕ್ಕೆ ಕೊಡುಗೆ ಸಲ್ಲಿಸುತ್ತಿದ್ದು, ಅತಿ ದೊಡ್ಡ ಬ್ಯಾಂಕುಗಳು, ಅತ್ಯಾಧುನಿಕ ವೈದ್ಯಕೀಯ ಸಂಸ್ಥೆಗಳು, ರಾಷ್ಟ್ರಮಟ್ಟದ ಮಾನ್ಯತೆ ಪಡೆದಿರುವ ಆಸ್ಪತ್ರೆಗಳು ಮತ್ತು ವೃತ್ತಿ ಪರ ಸಂಸ್ಥೆಗಳಿಗೆ ಈ ಪ್ರದೇಶ ತವರು ಮನೆಯಾಗಿದೆ. ಇಲ್ಲಿನ ಜನರು ಉದ್ಯಮಶೀಲರಾಗಿದ್ದು, ವೃತ್ತಿಪರರೂ ಆಗಿದ್ದಾರೆ. ವಲಸೆ ಬಂದವರಾಗಿದ್ದರೂ ಪ್ರಾದೇಶಿಕ ಗಡಿಗಳಿಂದಾಚೆಗೆ ತಮ್ಮ ಕೊಡುಗೆ ಸಲ್ಲಿಸಿದ್ದಾರೆ.
ರೈಲ್ವೆ ಸಚಿವಾಲಯವು ಅಶ್ವಿನಿ ವೈಷ್ಣವ್ ಅವರ ಬಳಿ ಇದ್ದು, ರಸ್ತೆ ಸಾರಿಗೆ ಸಚಿವರಾಗಿ ನಿತಿನ್ ಗಡ್ಕರಿ ಇದ್ದಾರೆ. ಇಬ್ಬರೂ ಸಚಿವರು ಮಹತ್ವಾಕಾಂಕ್ಷೆ ಮತ್ತು ಕಾರ್ಯದಕ್ಷತೆಗೆ ಹೆಸರಾಗಿದ್ದಾರೆ. ಕರಾವಳಿ ಜಿಲ್ಲೆಯ ಸಂಸದರು ಇವರಿಬ್ಬರಿಗೂ ಈಗಾಗಲೇ ಹಲವು ಮನವಿಗಳನ್ನು ಸಲ್ಲಿಸಿದ್ದಾರೆ. ಇದಕ್ಕೆ ಮೌನ ಅಂತಿಮ ಉತ್ತರ ಆಗಲಾರದು. ಮೂಲ ಸೌಕರ್ಯಗಳು ಭವಿಷ್ಯವನ್ನು ನಿರ್ಧರಿಸುತ್ತವೆ, ಈ ನಿರ್ಧಾರಗಳನ್ನು ವಿಳಂಬ ಮಾಡಿದಷ್ಟೂ ಪ್ರದೇಶವು ಸಾಮಥ್ರ್ಯ ಇದ್ದರೂ ಸಹ ಸ್ಥಗಿತಗೊಂಡು ಜಡಗಟ್ಟುತ್ತದೆ.
ಇದು ಆಡಳಿತಗಾರರಿಗೆ, ಚುನಾಯಿತ ಪ್ರತಿನಿಧಿಗಳಿಗೆ ಮತ್ತು ನಾಗರಿಕರಿಗೆ ತಮ್ಮ ಒಕ್ಕೊರಲ ದನಿ ಎತ್ತಬೇಕಾದ ಸಮಯ. ಕರಾವಳಿ ಸಂಪರ್ಕದ ಸೌಕರ್ಯಗಳಲ್ಲಿ ಬಂಡವಾಳ ಹೂಡಿಕೆ ಮಾಡುವುದು ಪ್ರಾದೇಶಿಕವಾಗಿ ಅನುಕೂಲ ಮಾಡಿದಂತಾಗುವುದಿಲ್ಲ, ಇದು ರಾಷ್ಟ್ರೀಯ ಲಾಭವಾಗುತ್ತದೆ. ಕರಾವಳಿ ಈಗಾಗಲೇ ಬಹಳ ಕಾಲದಿಂದ ಕಾಯುತ್ತಲೇ ಇದೆ.
Comments
Post a Comment