ಬೀದಿ ಪಾಲಾದ ದಲಿತರು: ರಾಜ್ಯ ಸರ್ಕಾರದ ರಕ್ಷಣೆ ಎಲ್ಲಿದೆ?
ಬೆಳ್ತಂಗಡಿಯಲ್ಲಿ ದಲಿತರ ಸಾರ್ವಜನಿಕ ಮೆರವಣಿಗೆ ಮತ್ತು ಸಮಾವೇಶವನ್ನು ಹಮ್ಮಿಕೊಂಡಿದ್ದು, ಅವರಿಗೆ ಮೀಸಲಾದ ಭೂಮಿಯ ಮೇಲೆ ಹಕ್ಕು ಪ್ರತಿಪಾದಿಸಲಾಯಿತು. ಈ ರೀತಿಯ ಸಮಾವೇಶ ಮೊದಲನೆಯದೇನಲ್ಲ. ಬೆಳ್ತಂಗಡಿ-ಧರ್ಮಸ್ಥಳದ ಪ್ರದೇಶದಲ್ಲಿ ಈ ರೀತಿ ದಲಿತರು ಪದೇಪದೇ ಹೋರಾಟ ನಡೆಸುತ್ತಿದ್ದು ಇದು ಯಾವುದೇ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ದೀರ್ಘಕಾಲ ದಲಿತರಿಗೆ ಮೀಸಲಾದ ಭೂಮಿಯ ಮೇಲಿನ ಹಕ್ಕನ್ನು ಅವರಿಗೆ ನಿರಾಕರಿಸುತ್ತಲೇ ಬಂದಿರುವುದು ಅವರಲ್ಲಿ ಅಶಾಂತಿಗೆ ಕಾರಣವಾಗಿದೆ.
ದಲಿತರಿಗೆ ಭೂಮಿ ಕೇವಲ ಆರ್ಥಿಕ ಆಸ್ತಿ ಅಲ್ಲ, ಅದು ಅವರ ಘನತೆ, ಭದ್ರತೆ ಮತ್ತು ಸ್ವಾತಂತ್ರ್ಯದ ಅಡಿಪಾಯವಾಗಿರುತ್ತದೆ. ಭೂ ಸುಧಾರಣಾ ಕಾನೂನುಗಳನ್ನು ರೂಪಿಸಿದ್ದು, ಭೂಮಿಯನ್ನು ವ್ಯವಸ್ಥಿತವಾಗಿ ದಲಿತರು ಮತ್ತು ದಮನಿತರಿಂದ ಕಸಿದುಕೊಂಡಿರುವ ಚಾರಿತ್ರಿಕ ಪ್ರಮಾದಗಳನ್ನು ಸರಿಪಡಿಸಿ, ಕೃಷಿ ಭೂಮಿಯನ್ನು ದಲಿತರಿಗೆ ಮರು ವಿತರಣೆ ಮಾಡುವ ಉದ್ದೇಶದಿಂದ ಈ ಕಾಯ್ದೆ ರಚನೆಯಾಗಿತ್ತು. ಇಂತಹ ಭೂಮಿಯನ್ನು ಪಟ್ಟಭದ್ರ ಹಿತಾಸಕ್ತಿಗಳು ಒತ್ತುವರಿ ಮಾಡಿಕೊಂಡಾಗ, ರಾಜ್ಯದ ಬಾಧ್ಯತೆ ಇರುವುದು ಅದನ್ನು ತೆರವುಗೊಳಿಸಿ, ಯಾವುದೇ ಮಾತುಕತೆಗೆ ಅವಕಾಶ ನೀಡದೆ ಮರುಹಂಚಿಕೆ ಮಾಡುವುದರಲ್ಲಿ. ರಾಜ್ಯ ಸರ್ಕಾರವು ವಿಚಾರಣೆ ನಡೆಸಿ, ಕ್ರಮ ಕೈಗೊಂಡು ಭೂಮಿಯನ್ನು ಮರಳಿಸಬೇಕು. ಬೆಳ್ತಂಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಗಳನ್ನು ಗಮನಿಸಿದರೆ, ಸರ್ಕಾರ ತನ್ನ ಈ ಜವಾಬ್ದಾರಿಯಿಂದ ಉದ್ದೇಶಪೂರ್ವಕವಾಗಿ ನುಣುಚಿಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.
ಈ ವೈಫಲ್ಯವು ಅಸಮರ್ಥನೀಯವಾಗುವ ಕಾರಣ ಎಂದರೆ, ಸತತವಾಗಿ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ, ನ್ಯಾಯಾಂಗ ಪಟ್ಟಭದ್ರರು ಆಕ್ರಮಿನಿಸಿಕೊಂಡ ಭೂಮಿ ಅಕ್ರಮ ಎಂದು ಸಾರಿದರೂ, ಅವರಿಗೆ ಹಕ್ಕುಗಳು ಜಾರಿಯಾಗುತ್ತಿಲ್ಲ. ನ್ಯಾಯಾಲಯದ ತೀರ್ಪುಗಳಲ್ಲಿ ಈಗಾಗಲೇ ನಕಲಿ ಸಹಿ ಮಾಡಿ ಭೂಮಿಯ ಮೇಲೆ ಹಕ್ಕು ಸಾಧಿಸಿದ ಪ್ರಕರಣಗಳು ದಾಖಲಾಗಿವೆ. ದಲಿತ ಸಂಘಟನೆಗಳು ಮತ್ತು ನಾಗರಿಕ ಸಮಾಜದ ಗುಂಪುಗಳು ಭೂ ಕಬಳಿಕೆ ಮತ್ತು ಒತ್ತುವರಿಯ ಮಾದರಿಗಳನ್ನು ದಾಖಲಿಸಿದ್ದು, ಅದನ್ನು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಮುಂದೆ ಮಂಡಿಸಿವೆ. ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಸಾಮೂಹಿಕ ಮನವಿಗಳನ್ನೂ ಸಲ್ಲಿಸಲಾಗಿದೆ. ಇದು ಆಡಳಿತಾತ್ಮಕ ನಿರ್ಲಕ್ಷ್ಯವಲ್ಲ, ಬದಲಾಗಿ ರಾಜಕೀಯವಾಗಿ ಸರ್ಕಾರಗಳಿಗೆ ಇದು ಬೇಡವಾದ ವಿಚಾರವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇಪದೇ ದಲಿತರ ಕಲ್ಯಾಣಕ್ಕೆ ತಮ್ಮ ಬದ್ಧತೆಯನ್ನು ತೋರಿಸುತ್ತಿರುತ್ತವೆ. ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯವನ್ನು ರಾಜಕೀಯ ಚೌಕಟ್ಟುಗಳ ಮೂಲಕ ಪರಿಪಾಲಿಸಲಾಗುತ್ತಿದ್ದು, ಅದರಲ್ಲಿ ದಲಿತರೇ ಆಳ್ವಿಕೆಯಿಂದ ಆಗ್ರಹಿಸುವ ಪ್ರಧಾನ ಭೂಮಿಕೆ ಹೊಂದಿರುತ್ತಾರೆ. ರಾಷ್ಟ್ರಮಟ್ಟದಲ್ಲಿ ಸಾಂವಿಧಾನಿಕ ಸಂಕೇತವಾಗಿ ಕಲ್ಯಾಣ ಯೋಜನೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳ ಏಳಿಗೆಯ ಬಗ್ಗೆ ಸರ್ಕಾರದ ಕಾಳಜಿಯನ್ನು ವ್ಯಕ್ತಪಡಿಲಾಗುತ್ತಿದೆ. ಆದರೆ ಬೆಳ್ತಂಗಡಿಯ ನೆಲದ ವಾಸ್ತವಗಳನ್ನು ಗಮನಿಸಿದಾಗ ಈ ಪ್ರತಿಪಾದನೆಗಳು ಠೊಳ್ಳು ಎನ್ನುವುದು ಸ್ಪಷ್ವವಾಗುತ್ತದೆ. ಕಲ್ಯಾಣ ಯೋಜನೆಗಳನ್ನು ತಲುಪಿಸುವುದೇ ಮುಖ್ಯವಾಗಿದ್ದು, ಜಾರಿಗೊಳಿಸುವ ಪ್ರಕ್ರಿಯೆ ಹಿನ್ನಲೆಗೆ ಸರಿದಿದೆ, ಉತ್ತರದಾಯಿತ್ವದ ಬದಲು ಸಾಂಕೇತಿಕತೆಯೇ ಹೆಚ್ಚು ಕಾಣುತ್ತದೆ.
ವಿಷಯದ ಕೇಂದ್ರ ಕಾಳಜಿ ಇರುವುದು ಆಯ್ಕೆ ಮಾಡಿದ ಆಳ್ವಿಕೆಯ ಮಾದರಿಯಲ್ಲಿ. ಸರ್ಕಾರಗಳು ದಲಿತರನ್ನು ಸವಲತ್ತುಗಳನ್ನು ವಿತರಿಸುವಾಗ ಪೆÇ್ರೀತ್ಸಾಹಿಸುತ್ತವೆ, ಆದರೆ ದಲಿತರ ಹಕ್ಕುಗಳನ್ನು ಪ್ರತಿಪಾದಿಸಿದಾಗ ಅದು ಮೂಲ ಬೇರುಗಳನ್ನೇ ಗುರಿಯಾಗಿಸುವುದರಿಂದ, ನಿರ್ಲಕ್ಷಿಸಲಾಗುತ್ತದೆ. ಇಂತಹ ಪ್ರಸಂಗಗಳಲ್ಲಿ ಭೂ ಕಾಯ್ದೆಗಳನ್ನು ಜಾರಿಗೊಳಿಸುವುದು ಸಂಘರ್ಷದ ಹಾದಿಯಾಗಬೇಕೇ ಹೊರತು ಆಚರಣೆ ಮಾಡುವುದಲ್ಲ. ಕ್ರಮ ಜರುಗಿಸಲು ನಿರಾಕರಿಸುವ ಪ್ರವೃತ್ತಿಯೇ ಸರ್ಕಾರಗಳ ನಿಜವಾದ ಆದ್ಯತೆಗಳೇನು ಎನ್ನುವುದನ್ನು ನಿರೂಪಿಸುತ್ತದೆ.
ರಾಜ್ಯ ಸರ್ಕಾರದ ನಿರಂತರ ಮೌನ ಅಪಾಯಕಾರಿ ಸಂದೇಶವನ್ನು ನೀಡುತ್ತದೆ. ನ್ಯಾಯಾಲಯದ ತೀರ್ಪುಗಳು ನ್ಯಾಯವನ್ನು ಖಚಿತವಾಗಿಸುವುದಿಲ್ಲ ಎಂದು ದಲಿತರಿಗೆ ಹೇಳಲಾಗುತ್ತಿದ್ದು, ಅರ್ಜಿಗಳು ಸಲ್ಲಿಸಿದ ಮಾತ್ರಕ್ಕೆ ಕ್ರಮ ಕೈಗೊಳ್ಳಬೇಕು ಎಂದೇನಿಲ್ಲ, ಅಧಿಕಾರವು ಕಾನೂನನ್ನೂ ಮೀರಿ ನಿಲ್ಲುತ್ತದೆ ಎಂಬ ಸಂದೇಶವನ್ನು ಸರ್ಕಾರಗಳು ರವಾನಿಸುತ್ತಿವೆ. ಹಾಗಾಗಿ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರತಿಭಟನೆ ಅನಿವಾರ್ಯವಾಗಿದೆ. ಸರ್ಕಾರಗಳು ನಿರ್ಣಾಯಕ ಕ್ರಮ ಜರುಗಿಸುವವರೆಗೂ, ಒತ್ತುವರಿಗಳನ್ನು ತನಿಖೆಗೊಳಪಡಿಸಿ, ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೊಳಿಸಿ, ನಿಜವಾದ ಫಲಾನುಭವಿಗಳಿಗೆ ಭೂಮಿಯನ್ನು ಮರಳಿಸುವವರೆಗೂ ಬೆಳ್ತಂಗಡಿಯ ಹೋರಾಟಗಳು ನಡೆಯುತ್ತಿರುತ್ತವೆ. ಇದು ದಲಿತರ ಘನತೆ ಮತ್ತು ಸಮಾನತೆಯನ್ನು ರಕ್ಷಿಸುವುದಾಗಿ ಪ್ರತಿಪಾದಿಸುವ ಸರ್ಕಾರಗಳನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತದೆ.
Comments
Post a Comment