ನಂಬಿಕೆ, ಅಧಿಕಾರ ಮತ್ತು ರಾಜಕೀಯ ನಾಯಕತ್ವ
ಖುಲ್ಲಂ ಖುಲ್ಲಾ * ಬಿವಿಸೀ
ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕವಾಗಿ ಬಹಳಷ್ಟು ಸುದ್ದಿ ಮಾಡುತ್ತಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ದೇವಸ್ಥಾನದ ಭೇಟಿಗಳು, ಹಳೆಯ ಚರ್ಚೆಯನ್ನೇ ಮತ್ತೊಮ್ಮೆ ಮುನ್ನಲೆಗೆ ತಂದಿದ್ದು ಇದು ಅವಶ್ಯವೂ ಆಗಿದೆ. ವೈಯುಕ್ತಿಕ ಶ್ರದ್ದಾ ನಂಬಿಕೆಗಳ ಮಿತಿ ಯಾವುದು, ರಾಜಕೀಯ ಚಟುವಟಿಕೆ ಆರಂಭವಾಗುವುದು ಎಲ್ಲಿಂದ? ಈ ಪ್ರಶ್ನೆ ಚರ್ಚೆಗೊಳಗಾಗುತ್ತಿದೆ. ಅಂತರ್ಗತ ಭಕ್ತಿಯನ್ನು ಗೌರವಿಸುವ ನಮ್ಮ ಸಂಪ್ರದಾಯದಲ್ಲಿ, ರಾಜಕೀಯ ಆಕಾಂಕ್ಷೆ ಹೊಂದಿರುವ ವ್ಯಕ್ತಿಗಳು ಸಾರ್ವಜನಿಕವಾಗಿ ಟೆಂಪಲ್ ರನ್ನಿಂಗ್‍ನಲ್ಲಿ ತೊಡಗಿ ಪ್ರಾರ್ಥನೆಯೆಂಬುದನ್ನೇ ಶೋ ಎಂದು ಮಾಡಿದಾಗ ಅದು ಖಚಿತವಾಗಿಯೂ ಜನರ ಪರಾಮರ್ಶೆಗೊಳಗಾಗುತ್ತದೆ. ಇಲ್ಲಿ ನಂಬಿಕೆಗಿಂತಲೂ ಅದರ ಉದ್ದೇಶವೇ ಮುನ್ನಲೆಗೆ ಬರುತ್ತದೆ. ಹೇಳೋದೆಲ್ಲ ಕಾಶೀಕಾಂಡ, ತಿನ್ನೋದೆಲ್ಲ ಮಶೀಕೆಂಡ ಎನ್ನುವ ಮಾತು ಕೇಳಿದ್ದೀರಾ? ಈ ಮಾತನ್ನು ತಮ್ಮ ಇಷ್ಟಾನಿಷ್ಠಗಳನ್ನೆಲ್ಲ ಜಾಹೀರು ಮಾಡುತ್ತ, ತಮ್ಮ ದೇವಸ್ಥಾನದ ಭೇಟಿಗಳು ತಮ್ಮ ವೈಯಕ್ತಿಕ ದುರಾಸೆಗಳಿಗೆ ಲಿಂಕ್ ಆಗಿವೆ ಎಂದು ಬಿಂಬಿಸುವ ರಾಜಕಾರಣಿಗಳಿಗೆ ದೇವತೆಗಳು ತಮ್ಮ ಇಚ್ಛೆಯನುಸಾರ ನಡೆದುಕೊಳ್ಳುವವರು ಎನ್ನುವ ಗ್ರಹಿಕೆ ಇರುತ್ತದೆಯೇ ಎಂಬ ಅನುಮಾನ ಬಂದರೆ ಅಸಹಜವಲ್ಲ.
ಕರ್ನಾಟಕದಲ್ಲಿ ಇಂದು ನಾಯಕತ್ವದ ಸಂಘರ್ಷವೊಂದೇ ನಡೆಯುತ್ತಿಲ್ಲ, ಆಳ್ವಿಕೆಯ ಅಗ್ನಿಪರೀಕ್ಷೆಯೂ ನಡೆಯುತ್ತಿದೆ. ಹಣಕಾಸು ಒತ್ತಡ, ದಿಕ್ಕು ತಪ್ಪಿದ ಆಡಳಿತ, ಸಾರ್ವಜನಿಕರ ಅಸಮಾಧಾನ ಇವೆಲ್ಲವೂ ವಾಸ್ತವವನ್ನು ಬಿಂಬಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳ ಹುದ್ದೆಯಲ್ಲಿರುವವರಿಗೆ ಅಥವಾ ಅದರ ಆಕಾಂಕ್ಷಿಗಳಿಗೆ ಹೆಚ್ಚಾಗಿ ಸಂಘಟನಾತ್ಮಕ ಶಕ್ತಿ ಮತ್ತು ಅವರು ಪ್ರತಿನಿಧಿಸುವ ಮೌಲ್ಯಗಳು ಮುಖ್ಯವಾಗುತ್ತದೆ. ಸಿಎಂ ಕುರ್ಚಿಯಲ್ಲಿ ಕೂರಬೇಕಾದವರಿಗೆ ನೈತಿಕ ವಿಶ್ವಾಸಾರ್ಹತೆ, ಭಾವನಾತ್ಮಕ ಸಮತೋಲನ ಮತ್ತು ವಿಶಾಲ ಸಾಮಾಜಿಕ ಸ್ವೀಕೃತಿ ಇರಬೇಕಾಗುತ್ತದೆ. ಇದನ್ನೇ ಜನತಾ ಜನಾರ್ಧನ ಬಯುಸುವುದಲ್ಲವೇ? ಇದಕ್ಕೆ ವ್ಯತಿರಿಕ್ತವಾಗಿ ಅಧಿಕಾರವನ್ನು ವೈಯಕ್ತಿಕ ಅನುಕೂಲತೆಗೆ ಬಳಸಿಕೊಳ್ಳುವ ರಾಜಕಾರಣಿಗಳನ್ನು ದೇವರು ಬಿಟ್ಟುಬಿಡುವುದೂ ಇಲ್ಲ. ಚರಿತ್ರೆಯು ಇದಕ್ಕೆ ಉಪಯುಕ್ತವಾದ ಸಮಾನಾಂತರ ಘಟನೆಗಳನ್ನು ಮುಂದಿಡುತ್ತದೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಹ ಆಗಾಗ್ಗೆ, ಅಧಿಕಾರದಲ್ಲಿದ್ದಾಗ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದುದು, ರಾಜಕೀಯ ಅನಿಶ್ಚಿತತೆ ಹೆಚ್ಚಾದಾಗ ಇದು ಹೆಚ್ಚಾಗುತ್ತಿದ್ದುದು ನೇರವಾಗಿ ಕಾಣುವಂತಿರುತ್ತಿತ್ತು. ಆದರೂ ಅವರ ದೇವತಾ ನಂಬಿಕೆಯ ಸಾರ್ವಜನಿಕ ಅಭಿವ್ಯಕ್ತಿ ಅವರನ್ನು ಹುದ್ದೆಯಿಂದ ಪದಚ್ಯುತಗೊಳಿಸುವುದನ್ನು ತಪ್ಪಿಸಲಾಗಲಿಲ್ಲ ಅಥವಾ ಕಾನೂನು ಪ್ರಕ್ರಿಯೆಯಿಂದ, ರಾಜಕೀಯ ಪರಿಣಾಮಗಳಿಂದ ಅವರನ್ನು ಪಾರು ಮಾಡಲಿಲ್ಲ. ಲಂಚದ ಪ್ರಕರಣಗಳಲ್ಲಿ ಅವರು ಜೈಲು ಶಿಕ್ಷೆ ಅನುಭವಿಸಬೇಕಾಯಿತು. ತದನಂತರ ದೀರ್ಘ ಕಾಲ ತಮ್ಮ ಪಕ್ಷದಲ್ಲೇ ಅವರು ಮೂಲೆಗುಂಪಾದರು. ಇತ್ತೀಚೆಗೆ ಯಡಿಯೂರಪ್ಪ ಪೆÇೀಕ್ಸೋ ಕಾಯ್ದೆಯಡಿ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಇಳಿವಯಸ್ಸಿನಲ್ಲಿ ಅವರ ಭವಿಷ್ಯ ಇದು ನ್ಯಾಯಾಂಗದ ನಿರ್ಧಾರವನ್ನು ಅವಲಂಬಿಸಿದೆ. ಅವರ ಉದಾಹರಣೆಯೇ ವಾಸ್ತವವನ್ನು ಬಿಂಬಿಸುತ್ತದೆ. ಸಾರ್ವಜನಿಕವಾಗಿ ಧಾರ್ಮಿಕತೆಯ ಪ್ರದರ್ಶನ ಪಕ್ಷದ ಅಧಿಕಾರ, ಕಾನೂನು ನಿಯಮ ಮತ್ತು ಸಾಂಸ್ಥಿಕ ಉತ್ತರದಾಯಿತ್ವವನ್ನು ಮೀರಲಾಗುವುದಿಲ್ಲ.
ಈ ಸಂದರ್ಭವೇ ಡಿ ಕೆ ಶಿವಕುಮಾರ್ ಅವರು ಇರುವ ಹುದ್ದೆಗೆ ಸೂಕ್ತವೇ ಎಂಬ ಚರ್ಚೆಯನ್ನು ಹುಟ್ಟುಹಾಕುತ್ತದೆ. ದೇವರ ಮೇಲಿನ ಅವರ ನಂಬಿಕೆಯ ಡಂಗೂರಗಳೇನೇ ಇರಲಿ, ಅವರನ್ನು ಪ್ರಬಲವಾದ ಒಂದು ವರ್ಗದ ಜಮೀನುದಾರಿ ನಾಯಕರೆಂದು ಪರಿಗಣಿಸಲಾಗುತ್ತದೆ, ಅವರು ಊಳಿಗಮಾನ್ಯ ಶೈಲಿಯ ಅಧಿಕಾರವನ್ನು ಚಲಾಯಿಸುತ್ತಾರೆಯೇ ಹೊರತು ಸಹಮತವನ್ನು ಉಂಟುಮಾಡುವುದಿಲ್ಲ ಎಂದೂ ಆರೋಪಿಸಲಾಗುತ್ತದೆ. ಯಡಿಯೂರಪ್ಪ ಅವರಂತೆಯೇ ಇವರೂ ಸಹ ಲಂಚದ ಆರೋಪದ ಮೇಲೆ ಜೈಲು ಶಿಕ್ಷೆ ಅನುಭವಿಸಿದ್ದು, ಮಹಿಳೆಯರಿಂದಲೂ ದೌರ್ಜನ್ಯದ ಆರೋಪಗಳನ್ನು ಎದುರಿಸಿದ್ದವರು. ಸಮಾಜಘಾತುಕ ಶಕ್ತಿಗಳೊಡನೆ ತಮ್ಮ ರಾಜಕೀಯದ ಆರಂಭದ ದಿನಗಳಲ್ಲಿ ಡಿಕೆಶಿ ಹೊಂದಿದ್ದ ಒಡನಾಟ (ಕುಖ್ಯಾತ ರೌಡಿ ಎಂದೇ ಹೆಸರಾಗಿದ್ದ ಕೋತ್ವಾಲ್ ರಾಮಚಂದ್ರ ಇವರ ಒಡನಾಡಿಯಾಗಿದ್ದರು) ಅವರ ವರ್ಚಸ್ಸನ್ನು ಹಾಳುಮಾಡಿತ್ತು. ಅಹಿಂದ ಸಮುದಾಯದಲ್ಲಿ ಅನೇಕರು ಮತ್ತು ಲಿಂಗಾಯತ ಸಮುದಾಯದವರು ನಿರ್ಣಾಯಕವಾದ ಚುನಾವಣಾ ಬಹುಮತವನ್ನು ರೂಪಿಸುವುದರಿಂದ, ಈ ಗುಂಪುಗಳು ಡಿಕೆಶಿ ಅವರನ್ನು ತಮ್ಮ ಸಾಮಾಜಿಕ ಮತ್ತು ರಾಜಕೀಯ ಆಕಾಂಕ್ಷೆಗಳ ಪ್ರತಿನಿಧಿ ಎಂದು ಸ್ವೀಕರಿಸಲಿಲ್ಲ. ಈ ಕಲ್ಪನೆಯೇ ಅವರನ್ನು ವ್ಯಾಪಕ ಜನ ಸ್ವೀಕರಿಸುವ ಮತ್ತು ಎಲ್ಲರನ್ನೂ ಒಂದುಗೂಡಿಸುವ ಮುಖ್ಯಮಂತ್ರಿಯಾಗಿ ಪರಿಗಣಿಸುವ ಕಲ್ಪನೆಗೆ ಮಿತಿ ಹೇರುತ್ತದೆ. ಈ ಸ್ವೀಕಾರಾರ್ಹತೆ ಜಾತಿಯಿಂದ ಮೈಕ್ರೋಸ್ಕೋಪಿಕ್ ಬಲದ ಸಮಾಜದಿಂದ ಬಂದಿದ್ದರೂ ರಾಮಕೃಷ್ಣ ಹೆಗಡೆಗೆ ಇತ್ತು. ಲಿಂಗಾಯಿತರು, ದಲಿತರು, ಒಕ್ಕಲಿಗರು, ಹಿಂದುಳಿದವರು ಎಲ್ಲರೂ ಅವರ ನಾಯಕತ್ವದಲ್ಲಿ ನಂಬಿಕೆಯಿರಿಸಿದ್ದರು.
ಶಿವಕುಮಾರ್ ಅವರ ವ್ಯಕ್ತಿತ್ವದ ಸಾರ್ವಜನಿಕ ಚರ್ಚೆಗಳಲ್ಲಿ ಅವರು ಕೂಡಿ ಹಾಕಿದ ಸಂಪತ್ತು, ಪ್ರಭಾವ ಮತ್ತು ಸರ್ಕಾರಿ ಯೋಜನೆಗಳಲ್ಲಿ ಭಾಗವಹಿಸುವಿಕೆಯ ಸುತ್ತಲೂ ಹರಡಿಕೊಂಡಿದೆ. ಇದು ವ್ಯಾಪಕವಾದ ಕಲ್ಪನೆಯನ್ನು ಸೃಷ್ಟಿಸಿದ್ದು, ಸರಿಯೋ ತಪೆÇ್ಪೀ ಮುಖ್ಯಮಂತ್ರಿಯ ಹುದ್ದೆಯನ್ನು ಅವರಿಗೆ ನೀಡಿದರೆ, ಅದು ಸುಧಾರಣೆಯ ವೇದಿಕೆಯಾಗುವುದೋ ಅಥವಾ ರಾಜ್ಯದ ಸಂಪನ್ಮೂಲಗಳ ಮೇಲೆ ನಿಯಂತ್ರಣ ಸಾಧಿಸುವ ಅವಕಾಶವಾಗುವುದೋ ಎಂಬ ಅನುಮಾನ ಮೂಡುತ್ತದೆ.
ಕರ್ನಾಟಕದ ಹಣಕಾಸು ಪರಿಸ್ಥಿತಿ ಬಿಕ್ಕಟ್ಟಿನಲ್ಲಿದ್ದು, ನಾಗರಿಕರು ಪರಿಣಾಮಕಾರಿ ಸೇವಾ ವಿತರಣೆಗಾಗಿ ಆಗ್ರಹಿಸುತ್ತಿರುವಾಗ, ಈ ರೀತಿಯ ಸಿಎಂ ಹುದ್ದೆ ಒದಗಿಸುವ ವೈಯಕ್ತಿಕ ಅನುಕೂಲತೆಯ ಭಾವನೆಗಳು ಹಾನಿಕಾರಕವಾಗುತ್ತದೆ. ರಾಜ್ಯಕ್ಕೆ ಎಚ್ಚರಿಕೆ ನೀಡುವುದಕ್ಕಿಂತಲೂ ಭರವಸೆ ನೀಡುವ ನಾಯಕತ್ವ ಬೇಕಿದೆ. ಈ ನಾಯಕತ್ವವು ಅಧಿಪತ್ಯ ಸಾಧಿಸುವುದಕ್ಕಿಂತಲೂ ಹೆಚ್ಚಾಗಿ ಉಸ್ತುವಾರಿಯ ಜವಾಬ್ದಾರಿ ಹೊರಬೇಕಿದೆ. ಇದು ರಾಜಕೀಯ ಘರ್ಷಣೆಯನ್ನು ಉಲ್ಬಣಿಸುವುದರ ಬದಲು ತಣ್ಣಗಾಗಿಸುತ್ತದೆ.
ಆಕಾಂಕ್ಷೆಗಳು ಪ್ರಜಾಸತ್ತಾತ್ಮಕ ರಾಜಕೀಯದಲ್ಲಿ ಲೋಪವೇನಲ್ಲ. ಆದರೆ ನೈತಿಕ ಅಧಿಕಾರ ಮತ್ತು ವಿಶಾಲವಾದ ಸಾರ್ವಜನಿಕರ ವಿಶ್ವಾಸ ಇಲ್ಲದ ಆಕಾಂಕ್ಷೆ ಪಕ್ಷಕ್ಕೆ, ವ್ಯಕ್ತಿಗೆ ಹೊರೆಯಾಗುತ್ತದೆ. ಕರ್ನಾಟಕ ಎದುರಿಸುತ್ತಿರುವ ಸವಾಲುಗಳು ಸಂಯಮ, ಒಳಗೊಳ್ಳುವಿಕೆ ಮತ್ತು ಸಾಂಸ್ಥಿಕ ಗೌರವವನ್ನು ಅಪೇಕ್ಷಿಸುತ್ತವೆಯೇ ಹೊರತು ಅಧಿಕಾರದ ಪ್ರದರ್ಶನಗಳನ್ನಲ್ಲ. ಅಧಿಕಾರದ ವ್ಯಾಮೋಹ ಮತ್ತು ಜನಕೇಂದ್ರಿತ ನಾಯಕತ್ವದ ನಡುವಿನ ಅಂತರ ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಕಾಣುತ್ತಿದೆ.
Comments
Post a Comment