ಕಾಂಗ್ರೆಸ್ ಸರ್ಕಾರವೂ ಬುಲ್ಡೋಜರ್ ನ್ಯಾಯದ ಪರ!

 ಸಂವಿಧಾನವೇ ತನ್ನ ನೈತಿಕ ಬುನಾದಿ ಎಂದು ಪ್ರತಿಪಾದಿಸುವ ಪಕ್ಷಕ್ಕೆ ಬುಲ್ಡೋಜರ್ ಆಡಳಿತ ನೀತಿ ಅನುಸರಿಸಿದರೆ ತೆರಬೇಕಾದ ಬೆಲೆಯ ಬಗ್ಗೆ ಆಲೋಚನೆ ಮಾಡಬೇಕಿದೆ.


 

ಕೇವಿಯಟ್ * ಬಿವಿಸೀ

ಕರ್ನಾಟಕದ ಗೃಹಸಚಿವ ಜಿ ಪರಮೇಶ್ವರ್ ಅವರ ಇತ್ತೀಚಿನ ಹೇಳಿಕೆಗಳು ಸೃಷ್ಟಿಸಿರುವ ವಿವಾದ ದೀರ್ಘಕಾಲ ಚರ್ಚೆಯಲ್ಲಿರುತ್ತದೆ. ಕಾಂಗ್ರೆಸ್ ಪಕ್ಷದೊಳಗಿನ ಒಳಬಿರುಕುಗಳನ್ನು ಪರಮೇಶ್ವರ್ ಬಹಿರಂಗಪಡಿಸಿದ್ದು, ಪಕ್ಷವು ವಿರೋಧ ಪಕ್ಷವಾಗಿದ್ದಾಗ ಬೋಧಿಸುವುದಕ್ಕೂ, ಅಧಿಕಾರದಲ್ಲಿದ್ದಾಗ ಸಹಿಸಿಕೊಳ್ಳುವುದಕ್ಕೂ ನಡುವೆ ಇರುವ ವ್ಯತ್ಯಾಸವನ್ನು ಹೊರಗೆಡಹಿದ್ದಾರೆ.

ಡ್ರಗ್‍ಮಾಫಿಯಾ ವಿರುದ್ಧ ಬುಲ್ಡೋಜರ್ ಶೈಲಿಯ ಕ್ರಮದ ಬಗ್ಗೆ ಪರಮೇಶ್ವರ್ ಮಾತನಾಡಿದಾಗ ಒಂದು ರೀತಿಯಲ್ಲಿ ರಾಜಕೀಯವಾಗಿ ಸ್ಫೋಟಕ ವಾತಾವರಣವನ್ನು ಪ್ರವೇಶಿಸಿದಂತೆ ಕಾಣುತ್ತದೆ. ಬುಲ್ಡೋಜರ್ ನ್ಯಾಯ ಎನ್ನುವುದು ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಸಾಮಾನ್ಯವಾಗಿದ್ದು, ಇಲ್ಲಿ  ಸರ್ಕಾರ ಕೈಗೊಳ್ಳುತ್ತಿರುವ ಧ್ವಂಸ ಕಾರ್ಯಾಚರಣೆಗಳನ್ನು ಕಾನೂನುಬಾಹಿರ ಶಿಕ್ಷೆ, ಸಾಮೂಹಿಕ ಗುರಿಯಾಗಿಸುವಿಕೆ ಮತ್ತು ಅಧಿಕಾರದ ಪ್ರದರ್ಶನ ಎಂದು ಖಂಡಿಸಲಾಗುತ್ತಿದೆ. ಹಲವು ವರ್ಷಗಳ ಕಾಲ ಕಾಂಗ್ರೆಸ್ ಈ ಮಾದರಿಯನ್ನು ವಿರೋಧಿಸುತ್ತಲೇ ಬಂದಿದ್ದು, ಇದನ್ನು ಅಸಾಂವಿಧಾನಿಕ ಮತ್ತು ನೈತಿಕವಾಗಿ ಅಸಮರ್ಥನೀಯ ಎಂದು ಹೇಳುತ್ತಾ ಬಂದಿದೆ.

ಹಾಗಾಗಿ ಪಕ್ಷದ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಗೃಹಮಂತ್ರಿ ಪಿ ಚಿದಂಬರಂ ಅವರು ಕೂಡಲೇ ಪ್ರತಿಕ್ರಿಯಿಸಿದ್ದು ಸೂಕ್ತವೂ, ಗಮನಾರ್ಹವೂ ಆಗಿದೆ. ಚಿದಂಬರಂ ಅವರ ಖಂಡನೆ ಸ್ಪಷ್ಟವಾಗಿದೆ. ಹಿರಿಯ ಕಾಂಗ್ರೆಸ್ ನಾಯಕರಾಗಿ, ಸಾಂವಿಧಾನಿಕ ವಕೀಲರಾಗಿ ಚಿದಂಬರಂ ಇಲ್ಲಿರುವ ಅಪಾಯವನ್ನು ಸರಿಯಾಗಿ ಗ್ರಹಿಸಿದ್ದಾರೆ. ಇದು ಕೇವಲ ರಾಜ್ಯ ಗೃಹಸಚಿವರೊಬ್ಬರ ಜಾಗ್ರತೆ ಇಲ್ಲದ ಹೇಳಿಕೆ ಮಾತ್ರವೇ ಅಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷ ಸ್ವತಃ ತನ್ನ ಸೈದ್ಧಾಂತಿಕ ಮಿತಿಗಳನ್ನು ದಾಟಿದಂತಾಗುತ್ತದೆ. ಪರಮೇಶ್ವರ್ ಅವರನ್ನು ಖಂಡಿಸುವ ಮೂಲಕ ಚಿದಂಬರಂ, ಕಾನೂನು ಪ್ರಕ್ರಿಯೆಯನ್ನು ಅನುಸರಿಸುವ ಮೂಲಕ ಪ್ರಜಾಸತ್ತಾತ್ಮಕ ಆಳ್ವಿಕೆಯನ್ನು ನಿರ್ವಹಿಸಬೇಕೇ ಹೊರತು, ಅಧಿಕಾರ ಇರುವುದು ಪ್ರದರ್ಶನಕ್ಕಾಗಿ ಅಲ್ಲ ಎಂಬ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ತದನಂತರ ನಡೆದ ಬೆಳವಣಿಗೆಗಳು ಈ ಎಚ್ಚರಿಕೆಗಿಂತಲೂ ಹೆಚ್ಚು ಮುಖ್ಯವಾಗಿ ಕಾಣುತ್ತದೆ. ರಾಹುಲ್‍ಗಾಂಧಿ ಆಗಲೀ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಲೀ ಅಥವಾ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲೀ ಸಾರ್ವಜನಿಕವಾಗಿ ಈ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಈ ಸಾಮೂಹಿಕ ಮೌನ ಕುತೂಹಲಕರವಾಗಿದ್ದು ಪರಿಣಾಮಕಾರಿಯೂ ಆಗಿದೆ. ಬಿಜೆಪಿ ನಾಯಕರೊಬ್ಬರು ಇದೇ ಮಾತನಾಡಿದ್ದಲ್ಲಿ, ಕಾಂಗ್ರೆಸ್ ನಾಯಕತ್ವ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತಪಡಿಸಿ, ಪ್ರತಿಕ್ರಿಯಿಸುತ್ತಿತ್ತು. ಈಗ ಸಂಯಮ ಕಾಣುತ್ತಿದೆ.

ಏಕೆ ಈ ಮೌನ?

ಇದರ ಭಾಗಶಃ ಉತ್ತರವನ್ನು ರಾಜಕೀಯ ಅನುಕೂಲತೆಯಲ್ಲಿ ಕಾಣಬಹುದು. ಡ್ರಗ್ಸ್ ಮತ್ತು ಇತರ ಅಪರಾಧಗಳನ್ನು ತಡೆಗಟ್ಟಲು ಕಾನೂನು ಜಾರಿಗೊಳಿಸುವುದು ಸಾರ್ವಜನಿಕರ ಭಾವನೆಗಳನ್ನು ಬಿಂಬಿಸುತ್ತದೆ. ನಾಗರಿಕ ಹಕ್ಕುಗಳನ್ನು ಪ್ರತಿಪಾದಿಸುವ ಪಕ್ಷಗಳೂ ಸಹ ಕಾನೂನು ಸುವ್ಯವಸ್ಥೆ ಮೃದುವಾಗಿರುವುದನ್ನು ಒಪ್ಪಲು ಹೆದರುತ್ತವೆ. ಸಾರ್ವಜನಿಕವಾಗಿ ಗೃಹ ಸಚಿವರನ್ನು ಖಂಡಿಸುವುದು ಸರ್ಕಾರದ ಕಠಿಣ ನಿಲುವಿನ ಕಲ್ಪನೆಯನ್ನು ಹುಸಿಗೊಳಿಸುತ್ತದೆ. ಆಳ್ವಿಕೆಯೇ ಸದಾ ಗಮನದಲ್ಲಿರುವ ರಾಜ್ಯದಲ್ಲಿ ಇದು ಇನ್ನೂ ಹೆಚ್ಚಾಗಿ ಕಾಣುತ್ತದೆ.

ಇಲ್ಲಿ ಆಂತರಿಕ ಸಮೀಕರಣಗಳ ಪ್ರಶ್ನೆಯೂ ಇದೆ. ಪರಮೇಶ್ವರ್ ಸಾಧಾರಣ ನಾಯಕರಲ್ಲ. ಹಿರಿಯ ದಲಿತ ನಾಯಕರಾಗಿ ಪಕ್ಷದ ಮಾಜಿ ರಾಜ್ಯಾಧ್ಯಕ್ಷರಾಗಿದ್ದವರು. ಕರ್ನಾಟಕದ ರಾಜಕೀಯ ವಾತಾವರಣದಲ್ಲಿ ಸೂಕ್ಷ್ಮ ಸ್ಥಾನವನ್ನು ಹೊಂದಿದ್ದಾರೆ. ಮೇಲಿನ ನಾಯಕರಿಂದ ಅವರ ಖಂಡನೆ ಪಕ್ಷದ ಒಳಗೂ ಸಂಚಲನ ಮೂಡಿಸುತ್ತದೆ.

ಆದರೂ ಈ ಪ್ರಸಂಗವು ಅಹಿತಕರವಾದ ಸತ್ಯವನ್ನು ಹೊರಗೆಡಹುತ್ತದೆ. ಕಾಂಗ್ರೆಸ್ ಈಗ ತತ್ವ ಮತ್ತು ಪ್ರಾಯೋಗಿಕತೆಯ ನಡುವೆ ಸಿಲುಕಿದೆ. ವಿರೋಧ ಪಕ್ಷವಾಗಿದ್ದಾಗ ಪಕ್ಷವು ನೈತಿಕ ಸ್ಪಷ್ಟತೆಯೊಂದಿಗೆ ಬುಲ್ಡೋಜರ್ ನ್ಯಾಯದ ವಿರುದ್ಧ ಮಾತನಾಡುತ್ತದೆ. ಆಡಳಿತದಲ್ಲಿದ್ದಾಗ, ಬೇರೆ ಯೋಚನೆ ಮಾಡುವುದೇ ಅಲ್ಲದೆ, ಸರ್ಕಾರದ ಸಚಿವರು ಬಿಜೆಪಿಗರ ಬುಲ್ಡೋಜರ್ ರೂಲ್ ಪರಿಭಾಷೆಯಲ್ಲಿ ಮಾತನಾಡುತ್ತಾರೆ. ಅದು ಕಾರ್ಯಗತವಾಗುವವರೆಗೂ ಹೀಗೆಯೇ ಮಾತನಾಡುತ್ತಿರುತ್ತಾರೆ.

ಈ ವಿರೋಧಾಭಾಸವು ರಾಜಕೀಯವಾಗಿ ಅನಿವಾರ್ಯವಾಗಿರಬಹುದು, ಆದರೆ ಪಕ್ಷ ಮತ್ತು ಸರಕಾರಕ್ಕೆ ದುಬಾರಿಯಾಗುತ್ತದೆ. ಈ ಪ್ರಸಂಗದಲ್ಲಿ ಅಪಾಯಗಳನ್ನು ಸಂಯಮ ಎನ್ನುವುದಕ್ಕಿಂತಲೂ ಪರೋಕ್ಷ ಒಪ್ಪಿಗೆ ಎಂದೇ ಭಾವಿಸಲಾಗುತ್ತದೆ. ಸಂವಿಧಾನವೇ ತನ್ನ ನೈತಿಕ ಬುನಾದಿ ಎಂದು ಪ್ರತಿಪಾದಿಸುವ ಪಕ್ಷಕ್ಕೆ ಇಲ್ಲಿ ತೆರಬೇಕಾದ ಬೆಲೆಯ ಬಗ್ಗೆ ಆಲೋಚನೆ ಮಾಡಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again