ಕುಸಿಯುತ್ತಿರುವ ಆಳ್ವಿಕೆಯಲ್ಲಿ ಕರ್ನಾಟಕದ ಅಧಿಕಾರ ರಾಜಕಾರಣ
ಅಲವಾದರಲವೆನ್ನಿ * ಬಿವಿಸೀ
ಕರ್ನಾಟಕ ಆಡಳಿತ ಇಂದು ಹಠಾತ್ ಕುಸಿತವನ್ನು ಎದುರಿಸುತ್ತಿಲ್ಲ. ಬದಲಾಗಿ ಸದ್ದಿಲ್ಲದೆ ಇನ್ನೂ ಹೆಚ್ಚು ಅಪಾಯಕಾರಿಯಾದ ಪತನವನ್ನು ಎದುರಿಸುತ್ತಿದೆ. ರಾಜ್ಯವನ್ನು ತೇಲುತ್ತಿರುವ ಸರ್ಕಾರ ಆಳುತ್ತಿದೆ. ಅಧಿಕಾರ ಇದೆ, ಆದರೆ ಯಾವುದೂ ಬಗೆಹರಿಯುತ್ತಿಲ್ಲ. ನಿರ್ಧಾರಗಳು ವಿಳಂಬವಾಗುತ್ತಿದೆ. ಜವಾಬ್ದಾರಿಗಳು ಮಸುಕಾಗುತ್ತಿದೆ. ಆಡಳಿತವು ದಿಕ್ಕುದೆಸೆ ಇಲ್ಲದೆ ಕುಂಟುತ್ತಿದೆ.
ಸಮಸ್ಯೆಯ ಮೂಲ ಇರುವುದು ಮೇಲ್ಮಟ್ಟದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಅನಿಶ್ಚಿತತೆಯಲ್ಲಿ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಬಣಗಳ ನಡುವೆ ಬಗೆಹರಿಸಲಾದ ವೈಷಮ್ಯ ವ್ಯವಸ್ಥೆಯನ್ನೇ ದುರ್ಬಲಗೊಳಿಸುತ್ತಿದೆ. ಪ್ರತಿವಾರಕ್ಕೊಮ್ಮೆ ಮುಖ್ಯಮಂತ್ರಿ ಹುದ್ದೆಗಾಗಿ ಕಲಹ ಮುನ್ನಲೆಗೆ ಬರುತ್ತದೆ. ನಂತದ ತಣ್ಣಗಾಗುತ್ತದೆ. ಮತ್ತೆ ಮರುಕಳಿಸುತ್ತದೆ. ಆಳ್ವಿಕೆ ಹೀಗೆ ನಡೆಯುವುದು ಸಾಧ್ಯವಿಲ್ಲ. ಅಧಿಕಾರಿಗಳು ನಿರ್ಧಾರಗಳಿಗಾಗಿ ಕಾಯುತ್ತಾರೆ, ಕಡತಗಳು ನಿಧಾನಗತಿಯಲ್ಲಿ ಚಲಿಸುತ್ತವೆ ಅಥವಾ ಚಲಿಸುವುದೇ ಇಲ್ಲ ಎಂದರೂ ತಪ್ಪಲ್ಲ. ಭವಿಷ್ಯದ ನಾಯಕತ್ವವೇ ಅನಿಶ್ಚಿತವಾಗಿರುವಾಗ ಯಾರೂ ಸಹ ಜವಾಬ್ದಾರಿಯನ್ನು ಹೊರುವುದಿಲ್ಲ.
ಇತ್ತೀಚಿನ ಸಿಎಂ ಮತ್ತು ಡಿಸಿಎಂ ಮತ್ತು ಅವರ ಹಿಂಬಾಲಕರ ದೆಹಲಿ ಪ್ರಯಾಣ ಈ ಸಮಸ್ಯೆಯನ್ನು ಬಹಿರಂಗಪಡಿಸಿದೆ. ಇಡೀ ರಾಜಕೀಯ ನಾಯಕತ್ವವು ಬೆಂಗಳೂರಿನಿಂದ ರಾಜಧಾನಿಗೆ ತೆರಳಿದ್ದು, ಹೈಕಮಾಂಡ್‍ನ ಔತಣ ಕೂಟದಲ್ಲಿ ಭಾಗವಹಿಸಿದೆ. ಇದಕ್ಕೆ ಆಡಳಿತಾತ್ಮಕ ತುರ್ತು ಏನಿರಲಿಲ್ಲ. ಇನ್ನೂ ದುರಂತ ಎಂದರೆ ಈ ಭೇಟಿ ಕಾಂಗ್ರೆಸ್ ಪಕ್ಷದ ಯಾವುದೇ ವೈಫಲ್ಯಗಳ ಕುರಿತಾಗಿ ಆತ್ಮಾವಲೋಕನಕ್ಕೆ ಅವಕಾಶವನ್ನೇ ಕೊಡಲಿಲ್ಲ. ಪಕ್ಷದ ಬಿಹಾರದ ಸೋಲನ್ನು ಪರಾಮರ್ಶಿಸಲಾಗಿಲ್ಲ. ಔತಣ ಕೂಟದಿಂದ ಮುಖ್ಯಮಂತ್ರಿಯ ಗೈರು ಆಂತರಿಕ ಬಿರುಕುಗಳನ್ನು ಸ್ಪಷ್ಟವಾಗಿ ತೋರಿಸಿದೆ. ಈ ಔತಣಕೂಟವು ಉದ್ದೇಶರಹಿತ ಪ್ರದರ್ಶನವಾಗಿ ಕಾಣುತ್ತದೆ.
ಇತ್ತ ರಾಜ್ಯದಲ್ಲಿ ಮುಖ್ಯಮಂತ್ರಿಗಳು ಸರ್ಕಾರ ಕರ್ನಾಟಕದ ಜನತೆಗೆ ಇಲ್ಲಿಯವರೆಗಿನ ಇತರ ಸರಕಾರಗಳಿಗಿಂತ ತನ್ನ ಸರಕಾರ ಹೆಚ್ಚು ಸೇವೆ ಮಾಡಿದೆ ಎಂದು ಹೇಳುತ್ತಿದ್ದಾರೆ. ಈ ಘೋಷಣೆಗಳು ವಾಸ್ತವತೆಗೆ ದೂರವಾದದ್ದು. ರಾಜ್ಯದ ಹಣಕಾಸು ಪರಿಸ್ಥಿತಿ ತೀವ್ರ ಸಂಕಷ್ಟದಲ್ಲಿದ್ದು, ಉದಾರವಾಗಿ, ತ್ವರಿತಗತಿಯಲ್ಲಿ ಜಾರಿಯಾದ ಗ್ಯಾರಂಟಿ ಯೋಜನೆಗಳು ಸ್ಪಷ್ಟವಾದ ಆರ್ಥಿಕ ಮಾರ್ಗವನ್ನು ಅನುಸರಿಸಲಿಲ್ಲ. ಬೊಕ್ಕಸವು ಬರಿದಾಗುತ್ತಿದ್ದು, ವೇತನಗಳ ವಿಳಂಬವಾಗುತ್ತಿದೆ. ಖಾಲಿ ಇರುವ ಹುದ್ದೆಗಳು ಹೆಚ್ಚಾಗುತ್ತಿವೆ. ನೇಮಕಾತಿ ಪ್ರಕ್ರಿಯೆ ತೆವಳುತ್ತಿದೆ.
ಇದರ ಪ್ರಭಾವ ನೇರವಾಗಿ ಎಲ್ಲೆಡೆ ಕಾಣುತ್ತಿದೆ. ಆಸ್ಪತ್ರೆಗಳು ಸಿಬ್ಬಂದಿಯ ಕೊರತೆಯಲ್ಲೇ ಕಾರ್ಯ ನಿರ್ವಹಿಸುತ್ತಿವೆ. ಶಾಲೆಗಳ ನಿರ್ವಹಣೆಯಲ್ಲಿ ಅಡ್ಡಿಯುಂಟಾಗುತ್ತಿದೆ. ಸರ್ಕಾರಿ ಕಚೇರಿಗಳು ತೆರೆದಿರುತ್ತವೆ, ಇಲ್ಲಿ ಕೆಲಸಗಳು ಮುನ್ನಡೆಯುತ್ತಿಲ್ಲ. ರಸ್ತೆಗಳು ದುರ್ಭರ ಸ್ಥಿತಿಯಲ್ಲಿವೆ. ಸಾರ್ವಜನಿಕ ಕಾಮಗಾರಿಗಳು ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಗೃಹಮಂತ್ರಿಗಳು ಬಡತನವನ್ನು ಹೋಗಲಾಡಿಸುವಲ್ಲಿ ರಸ್ತೆಗಳ ಸುಸ್ಥಿತಿಯನ್ನೇ ಪ್ರಶ್ನಿಸುವ ಮೂಲಕ ಸರ್ಕಾರ ಜನರಿಂದ ದೂರ ಸರಿದಿರುವ ಪ್ರವೃತ್ತಿಯನ್ನು ತೋರ್ಪಡಿಸಿದ್ದಾರೆ. ಮೂಲಸೌಕರ್ಯಗಳು ಔದಾರ್ಯವಲ್ಲ, ಇದು ಪ್ರಗತಿ ಮತ್ತು ಘನತೆಯ ಆಧಾರ.
ಕಲ್ಯಾಣ ಯೋಜನೆಗಳೂ ಸಹ ಸಂಕಷ್ಟ ಎದುರಿಸುತ್ತಿವೆ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಪಾವತಿ ವಿಳಂಬದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಇದು ಯೋಜನೆಯನ್ನೇ ಅರ್ಥಹೀನ ಮಾಡಿದೆ. ವಿಳಂಬಗಳು ವಿಶ್ವಾಸವನ್ನು ಹಾಳುಮಾಡುತ್ತವೆ. ವಿತರಣೆಯಾಗದ ಭರವಸೆಗಳು ಬೇಗನೆ ಪ್ರತಿರೋಧವನ್ನು ಎದುರಿಸುತ್ತದೆ.
ಇಲ್ಲಿರುವ ದೊಡ್ಡ ಕಾಳಜಿ ಕೊರತೆಗಳ ನೆಲೆಯಲ್ಲಿ ಕಾಣುತ್ತದೆ. ಸರ್ಕಾರ ಎಂದರೆ ಅಸ್ಮಿತೆ ಮತ್ತು ಇಂಗಿತಕ್ಕೆ ಸೀಮಿತವಾಗಿದೆ. ಫಲಿತಾಂಶಗಳು ಘೋಷಣೆಗಳಿಗಿಂತಲೂ ಕಡಿಮೆ ಆಗುತ್ತಿದೆ. ಬಿ ಆರ್ ಅಂಬೇಡ್ಕರ್ ಅವರ ಪರಂಪರೆ ಪದೇಪದೇ ಚರ್ಚೆಗೆ ಬರುತ್ತದೆ, ಆದರೆ ಅವರ ಮೂಲ ಚಿಂತನೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಅಂಬೇಡ್ಕರ್ ಬಲಿಷ್ಠ ಸಂಸ್ಥೆಗಳಲ್ಲಿ, ಹಣಕಾಸು ಜವಾಬ್ದಾರಿಯಲ್ಲಿ, ಸಾಂವಿಧಾನಿಕ ಶಿಸ್ತಿನಲ್ಲಿ ನಂಬಿಕೆ ಇಟ್ಟಿದ್ದರು.
ಕರ್ನಾಟಕದಲ್ಲಿ ಸಂಪನ್ಮೂಲಗಳ ಕೊರತೆ ಇಲ್ಲ. ಕೊರತೆ ಇರುವುದು ಸ್ಥಿರತೆಯಲ್ಲಿ. ಸರ್ಕಾರವು ಮಾತುಗಳಲ್ಲಿ ನಿರತವಾಗಿದೆಯೇ ಹೊರತು ಕಾರ್ಯದಲ್ಲಿ ಅಲ್ಲ. ಇದು ನೇರವಾಗಿ ಕಾಣುತ್ತಿದೆ. ಆದರೂ ಪರಿಣಾಮಕಾರಿಯಾಗಿಲ್ಲ. ಇದು ಕುಸಿತ ಅಲ್ಲ, ಬದಲಾಗಿ ಸ್ವಯಂ ಆಹ್ವಾನಿಸಿಕೊಂಡ ಪತನ.
Comments
Post a Comment