ಕಾನೂನು ಮಂತ್ರಿ ಎಚ್ಕೆ ಪಾಟೀಲ್ ವಿರುದ್ಧ ಸುಪ್ರೀಂ ತೀರ್ಪಿಗಿಂತಲೂ ಮೌನವೇ ಹೆಚ್ಚು ಸದ್ದು ಮಾಡುತ್ತಿದೆ

 ಇಂತಹ ಪ್ರಕರಣಗಳಲ್ಲಿ ರಾಜೀನಾಮೆ ನೀಡುವುದು ಮಾತ್ರ ಶಿಕ್ಷೆಯಾಗುವುದಿಲ್ಲ, ಅದನ್ನು ಸಚಿವರು ಈಗಾಗಲೇ ನೀಡಿರಬೇಕಿತ್ತು. ಇಲ್ಲಿ ತನ್ನ ದುರ್ವರ್ತನೆಯ ಬಗ್ಗೆ ಪಶ್ಚಾತ್ತಾಪವೂ ಮುಖ್ಯವಾಗುತ್ತದೆ.


.............


 


ಇದ್ದುದು ಇದ್ದ ಹಾಗೆ * ಬಿವಿಸೀ

ಕರ್ನಾಟಕದ ಕಾನೂನು ಸಚಿವ ಎಚ್ ಕೆ ಪಾಟೀಲ್ ವಿರುದ್ಧ ಸುಪ್ರೀಂಕೋರ್ಟ್‍ನ ಅಂತಿಮ ಆದೇಶ ತಾತ್ವಿಕವಾಗಿ ದೀರ್ಘಕಾಲದ ಭೂ ವಿವಾದವೊಂದಕ್ಕೆ ತೆರೆ ಎಳೆದಿದೆ. ಕಾನೂನಾತ್ಮಕವಾಗಿಯೇನೋ ಇದು ಹೌದು. ಆದರೆ ರಾಜಕೀಯವಾಗಿ ಮತ್ತು ನೈತಿಕತೆಯ ನೆಲೆಯಲ್ಲಿ ಇನ್ನೂ ಗಂಭೀರವಾದ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ. ಸಾರ್ವಜನಿಕ ಹುದ್ದೆಯಲ್ಲಿರುವ ಒಬ್ಬ ಪ್ರಬಲ ವ್ಯಕ್ತಿಯನ್ನು ದೇಶದ ಅತ್ಯುನ್ನತ ನ್ಯಾಯಾಲಯವು ಕಾನೂನುಬಾಹಿರತೆಯ ಕಾರಣದಿಂದ ಅಪರಾಧಿಯಾಗಿ ಬಿಂಬಿಸಿರುವಾಗ ಇದು ಎಂತಹ ಪರಿಣಾಮ ಬೀರುತ್ತದೆ ಅಥವಾ ಬೀರಬೇಕು?

ಈ ವಿವಾದವು ಕೇವಲ ತಾಂತ್ರಿಕವಲ್ಲ. ದೂರುದಾರರಿಬ್ಬರೂ ಸೋದರಿಯರು, ಹುಬ್ಬಳ್ಳಿಯ ವಾಣಿಜ್ಯ ಸಂಕೀರ್ಣದಲ್ಲಿ ವಾಣಿಜ್ಯ ಆಸ್ತಿಯನ್ನು ಹೊಂದಿದ್ದರು. ತಮ್ಮ ಭೂಮಿಯನ್ನು ಬಲಾತ್ಕಾರದಿಂದ, ರಾಜಕೀಯ ಹಾಗೂ ಸಾಂಸ್ಥಿಕ ಪ್ರಭಾವದಿಂದ ಕಸಿದುಕೊಳ್ಳಲಾಗಿದೆ ಎಂದು ಈ ಮಹಿಳೆಯರು ಆರೋಪಿಸಿದ್ದರು. ಇವರ ವಾದದ ಅನುಸಾರ, ಪಾಟೀಲ್ ಕುಟುಂಬ ಈ ಆಸ್ತಿಯನ್ನು 1964ರಿಂದಲೇ ಆಕ್ರಮಿಸಿಕೊಂಡಿದ್ದು, ದೀರ್ಘಾವಧಿಯ ಭೋಗ್ಯದ ಕಾನೂನು ಮಿತಿಯ ಸಮಯ ಮೀರಿದ್ದರೂ ಇದನ್ನು ಆಕ್ರಮಿಸಿಕೊಂಡೇ ಇದ್ದರು ಎಂದು ಸುಪ್ರೀಂ ಕೋರ್ಟಿನಲ್ಲಿ ಸಹೋದರಿಯರು ದಾವೆ ಹೂಡಿದ್ದರು. ತದನಂತರ ನಡೆದದ್ದು ಪರಿಹಾರ ಕಂಡುಹಿಡಿಯುವ ಪ್ರಯತ್ನಗಳಲ್ಲ, ಬದಲಾಗಿ ದಶಕಗಳ ಅಸಮಾನ ಕಾನೂನು ಸಂಘರ್ಷ, ಅಂತಿಮವಾಗಿ ಸುಪ್ರೀಂಕೋರ್ಟ್ ಅತಿಕ್ರಮ ತೆರವುಗೊಳಿಸಲು ಆದೇಶಿಸಿತ್ತು.

ಈ ವಿವಾದದ ಸಮಯವೂ ಮುಖ್ಯವಾಗುತ್ತದೆ. ಇದು ಕೇವಲ ಆ ಕ್ಷಣದ ಲೋಪವಾಗಲೀ ಅಥವಾ ಕಡತಗಳ ನಿರ್ವಹಣೆಯಲ್ಲಾಗಿರುವ ತಪ್ಪು ಗ್ರಹಿಕೆಯ ಪರಿಣಾಮವಾಗಲೀ ಅಲ್ಲ. ನ್ಯಾಯಾಲಯವು ಪರಿಣಾಮಕಾರಿಯಾಗಿ ಗುರುತಿಸಿರುವಂತೆ, ಹಲವು ಪೀಳಿಗೆಗಳ ಕಾಲ ಈ ಅತಿಕ್ರಮಣವನ್ನು ಮುಂದುವರೆಸಿದ್ದ ಕುಟುಂಬವೊಂದರ ಸದಸ್ಯರೊಬ್ಬರು ರಾಜ್ಯದ ಕಾನೂನು ಸಚಿವ ಹುದ್ದೆಯನ್ನು ಅಲಂಕರಿಸಿದ್ದಾರೆ.

ಪಾಟೀಲ್ ಒಬ್ಬ ಸಾಧಾರಣ ರಾಜಕಾರಣಿಯಾಗಿ ಗುರುತಿಸಲ್ಪಡುವುದಿಲ್ಲ. ಮೃದು ಸ್ವಭಾವದ, ಸಮಚಿತ್ತದ, ಸಾಂವಿಧಾನಿಕ ಪ್ರಜ್ಞೆ ಇರುವ ನಾಯಕರಾಗಿ ಹೆಸರು ಗಳಿಸಿದ್ದಾರೆ. ಹಾಗಾಗಿಯೇ ಈ ನ್ಯಾಯಾಲಯದ ತೀರ್ಪು ಅವರನ್ನು ಪ್ರಕ್ಷುಬ್ದಗೊಳಿಸಬೇಕಿತ್ತು ಮತ್ತು ಮುಂದಿನ ಕ್ರಮಕ್ಕೆ ಅವರನ್ನು ಪ್ರೇರೇಪಿಸಬೇಕಿತ್ತು. ಸಮಸ್ಯೆ ಇರುವುದು ಕೇವಲ ನ್ಯಾಯಾಲಯದ ತೀರ್ಪಿನಲ್ಲಿ ಅಲ್ಲ. ಬದಲಾಗಿ ತದನಂತರದ ಮೌನದಲ್ಲಿ. ಪಾಟೀಲ್ ಯಾವುದೇ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ, ನೈತಿಕವಾಗಿ ತೀರ್ಪಿಗೆ ಮಾನ್ಯತೆಯನ್ನೂ ನೀಡಿಲ್ಲ. ಸಾರ್ವಜನಿಕ ಹುದ್ದೆಯು ಸಾಮಾನ್ಯವಾಗಿ ಕಾನೂನಾತ್ಮಕವಾಗಿ ಪಾರಾಗುವುದಕ್ಕಿಂತಲೂ ಹೆಚ್ಚಿನ ಗುಣಮಟ್ಟವನ್ನು ನಿರೀಕ್ಷಿಸುತ್ತದೆ ಎಂಬ ಪ್ರಜ್ಞೆಯೂ ಸಹ ಕಾಣುತ್ತಿಲ್ಲ.

ಸುಪ್ರೀಂಕೋರ್ಟ್ ಹಾಲಿ ಕಾನೂನು ಸಚಿವರನ್ನು ಮೃದು ಭಾಷೆಯಲ್ಲಿ ಖಂಡಿಸುವುದಿಲ್ಲ. ಇದು ನೈತಿಕ ಅಧಿಕಾರದ ಪ್ರಶ್ನೆ. ದಶಕಗಳ ಕಾಲ ಮಹಿಳೆಯರಿಗೆ ಸೇರಿದ ಖಾಸಗಿ ಭೂಮಿಯನ್ನು ಅಕ್ರಮವಾಗಿ, ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ ಒಬ್ಬ ವ್ಯಕ್ತಿ ಸಾಂವಿಧಾನಿಕ ನೈತಿಕತೆ ಅಥವಾ ಕಾನೂನು ನಿಯಮದ ಬಗ್ಗೆ ಮಾತನಾಡಲು ಅರ್ಹತೆ ಪಡೆಯುತ್ತಾರೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಶಿಸ್ತು ಮತ್ತು ಕಾರ್ಯತಂತ್ರವು ಉತ್ತರದಾಯಿತ್ವದ ಸ್ಥಾನ ಪಡೆದುಕೊಳ್ಳುತ್ತದೆ.

ಇಂತಹ ಪ್ರಕರಣಗಳಲ್ಲಿ ರಾಜೀನಾಮೆ ನೀಡುವುದು ಮಾತ್ರ ಶಿಕ್ಷೆಯಾಗುವುದಿಲ್ಲ, ಅದನ್ನು ಸಚಿವರು ಈಗಾಗಲೇ ನೀಡಿರಬೇಕಿತ್ತು. ಇಲ್ಲಿ ತನ್ನ ದುರ್ವರ್ತನೆಯ ಬಗ್ಗೆ ಪಶ್ಚಾತ್ತಾಪವೂ ಮುಖ್ಯವಾಗುತ್ತದೆ. ಸಾರ್ವಜನಿಕವಾಗಿ ನೈತಿಕ ವೈಫಲ್ಯವನ್ನು ಒಪ್ಪಿಕೊಳ್ಳುವುದು ಮುಖ್ಯವಾಗುತ್ತದೆ. ಪ್ರಬುದ್ಧ ಪ್ರಜಾಪ್ರಭುತ್ವಗಳಲ್ಲಿ ನಾಯಕರು ನ್ಯಾಯಾಂಗದ ಛೀಮಾರಿಯ ಹಿನ್ನೆಲೆಯಲ್ಲೇ ಪದತ್ಯಾಗ ಮಾಡುತ್ತಾರೆ. ಭಾರತದಲ್ಲಿ ರಾಜೀನಾಮೆಯನ್ನು ಅಪರಾಧ ಪ್ರಜ್ಞೆಯ ಅಳುಕು ಎಂದು ತಪ್ಪಾಗಿ ಭಾವಿಸಲಾಗುತ್ತದೆಯೇ ಹೊರತು ಪ್ರಜಾಸತ್ತಾತ್ಮಕ ಜವಾಬ್ದಾರಿ ಎಂದು ಭಾವಿಸುವುದಿಲ್ಲ. ಇದು ರಾಜಕೀಯ ನೈತಿಕತೆಯ ಮಟ್ಟವನ್ನು ಮತ್ತಷ್ಟು ಕುಸಿಯುವಂತೆ ಮಾಡಿದೆ.

ಈಗ ಭೂಮಿ ಮರಳಿ ಮಾಲೀಕರಿಗೆ ದೊರೆತಿರಬಹುದು. ನ್ಯಾಯಾಲಯದ ತೀರ್ಪು ಅಂತಿಮ ಇರಬಹುದು. ಆದರೆ ಇನ್ನೂ ದೊಡ್ಡ ಪ್ರಶ್ನೆ ಬಗೆಹರಿಯದೆ ಉಳಿಯುತ್ತದೆ. ಪ್ರಜಾಪ್ರಭುತ್ವದಲ್ಲಿ ಕಾನೂನುಬದ್ಧತೆ ಮುಖ್ಯವಾಗುತ್ತದೆ. ನ್ಯಾಯೋಚಿತತೆ ಉತ್ತರದಾಯಿತ್ವದಿಂದಲೇ ಬರುತ್ತದೆ. ಕಾನೂನು ಸಚಿವರೊಬ್ಬರು ಸುಪ್ರೀಂಕೋರ್ಟ್ ತೀರ್ಪನ್ನು ಯಾವುದೇ ಪರಿಣಾಮ ಇಲ್ಲದೆ ಸ್ವೀಕರಿಸುವುದೆಂದರೆ,  ಇಲ್ಲಿ ಹಾನಿಯಾಗುವುದು ವಿವಾದಕ್ಕಲ್ಲ, ಸಾರ್ವಜನಿಕ ವಿಶ್ವಾಸಕ್ಕೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again