ಸಾವು ಉತ್ತರದಾಯಿತ್ವವನ್ನು ಅಳಿಸಿಹಾಕಿದಾಗ...
2016ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅಬಕಾರಿ ಸಚಿವ ಹುದ್ದೆಗೆ ಎಚ್ ವೈ ಮೇಟಿ ರಾಜೀನಾಮೆ ನೀಡಿದ್ದು ಕರ್ತವ್ಯ ಪ್ರಜ್ಞೆಯಿಂದಲೋ ಅಥವಾ ರಾಜಕೀಯ ಇಚ್ಛೆಯಿಂದಲೋ ಅಲ್ಲ.
ಅಹುದಾದರಹುದೆನ್ನಿ * ಬಿವಿಸೀ
ಮಾಜಿ ಸಚಿವ ಹಾಗೂ ಹಾಲಿ ಶಾಸಕರಾಗಿದ್ದ ಎಚ್ ವೈ ಮೇಟಿ ನಿಧನರಾದಾಗ ಪಕ್ಷಾತೀತವಾಗಿ ಎಲ್ಲ ರಾಜಕೀಯ ಪಕ್ಷಗಳಿಂದಲೂ ಶ್ರದ್ಧಾಂಜಲಿ ಸಂದೇಶಗಳು, ಅವರನ್ನು ಹೊಗಳಿ ಅಟ್ಟಕ್ಕೇರಿಸಿದ ಹೇಳಿಕೆಗಳು ಹರಿದುಬಂದವು. ಒಮ್ಮೆ ಅವರು ಲೈಂಗಿಕ ವಿವಾದದಲ್ಲಿ ಸಿಲುಕಿದ್ದಾಗ ದಿವ್ಯ ಮೌನ ವಹಿಸಿದ್ದ ಅಥವಾ ಅವರ ರಾಜೀನಾಮೆಗೆ ಒತ್ತಾಯಿಸಿದ್ದ ನಾಯಕರೆಲ್ಲರೂ ಅವರ ಸರಳತೆ, ಸೌಜನ್ಯ, ಸಾರ್ವಜನಿಕ ಸೇವೆಗೆ ಬದ್ಧತೆಗಳ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಆದರೆ ಈ ಶ್ರದ್ಧಾಂಜಲಿಗಳ ಹಿಂದೆ ಇರುವ, ಭಾರತದ ಸಾರ್ವಜನಿಕ ಜೀವನದಲ್ಲಿನ ಸತ್ಯ ಎಂದರೆ ಸಾವಿನ ಭಾವನಾತ್ಮಕ ಸನ್ನಿವೇಶಗಳಲ್ಲಿ ವ್ಯಕ್ತಿಯ ನೈತಿಕ ಅಧಃಪತನ, ಅಪರಾಧಗಳು ಮುಚ್ಚಿಹೋಗುತ್ತವೆ.
2016ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅಬಕಾರಿ ಸಚಿವ ಹುದ್ದೆಗೆ ಎಚ್ ವೈ ಮೇಟಿ ರಾಜೀನಾಮೆ ನೀಡಿದ್ದು ಕರ್ತವ್ಯ ಪ್ರಜ್ಞೆಯಿಂದಲೋ ಅಥವಾ ರಾಜಕೀಯ ಇಚ್ಛೆಯಿಂದಲೋ ಅಲ್ಲ. ರಾಜ್ಯ ಸರ್ಕಾರ ಮತ್ತು ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿದ್ದ ಲೈಂಗಿಕ ಹಗರಣದ ನೇರ ಫಲಿತಾಂಶವಾಗಿತ್ತು. ವಿಡಿಯೋ ಒಂದರಲ್ಲಿ ಅವರು ಆರೋಗ್ಯ ಇಲಾಖೆ ಕಾರ್ಯಕರ್ತೆಯೊಬ್ಬಳ ಜತೆ ಲೈಂಗಿಕ ಸಂಪರ್ಕದಲ್ಲಿರುವ ದೃಶ್ಯ ಬಹಿರಂಗವಾಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಮಣಿದು ಕೆಳಗಿಳಿಯಬೇಕಾಯಿತು. ತದನಂತರದ ಪೆÇಲೀಸ್ ತನಿಖೆಯಲ್ಲಿ ಕಡತವನ್ನು ಮುಚ್ಚಿಹಾಕಲಾಯಿತು, ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳಲಾಯಿತು. ಆದರೆ ಇದು ಕ್ಲೀನ್‍ಚಿಟ್ ನೀಡಿದಂತಾಗಲಿಲ್ಲ. ಹೆಚ್ಚೆಂದರೆ ಅದು ಅಧಿಕಾರಶಾಹಿಯ ಅನುಕೂಲಕ್ಕೆ ತಕ್ಕಂತಹ ನಿರ್ಧಾರವಾಗಿತ್ತು. ಆದರೆ ಮೇಟಿ ಅವರ ನೈತಿಕ ಸ್ಥಾನಮಾನಕ್ಕೆ ಆಗಿದ್ದ ಧಕ್ಕೆಯನ್ನು ಸರಿಪಡಿಸಲಾಗಲಿಲ್ಲ. ಮತ್ತೆಂದೂ ಅವರು ಮಂತ್ರಿಯಾಗಲಿಲ್ಲ. 2023ರಲ್ಲಿ ಅವರು ವಿಧಾನ ಸಭೆಗೆ ಆಯ್ಕೆಯಾಗಿದ್ದರೂ, ಅವರ ಸೀನಿಯಾರಿಟಿ ಮನ್ನಿಸಿ ಅವರಿಗೆ ಮತ್ತೆ ಸಚಿವ ಪಟ್ಟ ನೀಡಿರಲಿಲ್ಲ. ಹಿಂದಿನ ಸರಕಾರದಲ್ಲಿ ತನ್ನ ಸರಕಾರಕ್ಕಾಗಿರುವ ಮುಜುಗರವನ್ನು ಸಿಎಂ ಸಿದ್ದರಾಮಯ್ಯ ಮರೆತಿರಲಿಲ್ಲ.
ಆದರೂ ಇಂದು ರಾಜ್ಯವೇ ಅವರಿಗಾಗಿ ಶೋಕ ಮಿಡಿಯುತ್ತಿದೆ. ಇತಿಹಾಸದ ಈ ಪ್ರಸಂಗವನ್ನು ಜಾಣತನದಿಂದ ಮರೆಯಲಾಗುತ್ತಿದೆ. ಇದೇ ವ್ಯವಸ್ಥೆಯೇ ಒಮ್ಮೆ ಅವರ ರಾಜೀನಾಮೆಗೆ ಒತ್ತಾಯಿಸಿದ್ದು ಈಗ ಅವರನ್ನು ಜನಸೇವಕ ಎಂದು ಪ್ರಶಂಸಿಸುತ್ತಿದೆ. ಭಾರತದಲ್ಲಿ ಈ ವರ್ತನೆ ಘಾಸಿಯುಂಟುಮಾಡುವಂತಹುದಾಗಿದ್ದು, ಸಾವು ವ್ಯಕ್ತಿಗೆ ಕ್ಷಮಾದಾನ ನೀಡುವ ಸಾಧನವಾಗಿಬಿಡುತ್ತದೆ. ನೈತಿಕ ಚರಿತ್ರೆಯನ್ನು ಶುದ್ಧಗೊಳಿಸಲಾಗುತ್ತದೆ. ಸಾರ್ವಜನಿಕರ ನೆನಪು ಆಯ್ದ ನಿರೂಪಣೆಗೆ ಸೀಮಿತವಾಗಿ, ಯಾವುದೇ ಅಹಿತಕರ ಪರಿಣಾಮ ಉಂಟಾಗದಂತೆ ನೋಡಿಕೊಳ್ಳಲಾಗುತ್ತದೆ.
ಈ ಮಾದರಿಯೇ ಭಾರತೀಯ ರಾಜಕಾರಣದ, ಸಮಾಜದ ಠಕ್ಕುತನವನ್ನು ಎತ್ತಿತೋರಿಸುತ್ತದೆ. ಹಗರಣವು ಹಸಿರಾಗಿದ್ದಾಗ, ಟಿವಿ ಚಾನೆಲ್‍ಗಳು ಜನಾಕ್ರೋಶವನ್ನು ಹೆಚ್ಚಿಸುವಾಗ, ನೈತಿಕ ವರ್ತನೆಯನ್ನು ಅಪೇಕ್ಷಿಸುವ ನಾವು, ಅಂತಹ ವ್ಯಕ್ತಿ ಮಡಿದ ಕೂಡಲೇ ಭಾವನಾತ್ಮಕ ಆಚರಣೆಗೆ ಮುಂದಾಗುತ್ತೇವೆ. ಇತಿಹಾಸವನ್ನು ಕಥನ ಮಾಡಿಬಿಡುತ್ತೇವೆ. ಆ ವ್ಯಕ್ತಿಯ ಉತ್ತರದಾಯಿತ್ವವೂ ಇಲ್ಲವಾಗುತ್ತದೆ, ಹಾಗೆಯೇ ಅಹಿತಕರ ಸತ್ಯವನ್ನು ಎದುರಿಸುವ ನಮ್ಮ ಇಚ್ಛೆಯನ್ನೂ ಇಲ್ಲವಾಗಿಸುತ್ತದೆ.
ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ, ಮೇಟಿ ಪ್ರಕರಣದಲ್ಲಿ ಹೊಗೆಯು ದಟ್ಟವಾಗಿತ್ತು, ಅವರ ಸಚಿವ ಹುದ್ದೆಯನ್ನೇ ಮಸುಕಾಗುವಷ್ಟು ದಟ್ಟವಾಗಿತ್ತು. ಸತ್ಯವು ಸತ್ತ ವ್ಯಕ್ತಿಯನ್ನು ಅಪಮಾನಗೊಳಿಸುವುದಿಲ್ಲ, ಬದಲಾಗಿ ಪ್ರಾಮಾಣಿಕತೆಯ ಸಾರ್ವಜನಿಕ ಹಕ್ಕನ್ನು ಗೌರವಿಸುತ್ತದೆ. ಪ್ರಜಾಪ್ರಭುತ್ವದಲ್ಲಿ ನಾಯಕರ ತಪ್ಪುಗಳನ್ನು ಬೇಗನೇ ಮರೆಯಲಾಗುತ್ತದೆ, ಭ್ರಷ್ಟಾಚಾರಗಳನ್ನು ಸಹಿಸಿಕೊಳ್ಳಲಾಗುತ್ತದೆ, ವಂಚನೆಯನ್ನು ಸಾಮಾನ್ಯ ಎಂದು ಭಾವಿಸಲಾಗುತ್ತದೆ. ಇಂತಹ ವ್ಯಕ್ತಿಗಳನ್ನು ವೈಭವೀಕರಿಸುವ ಮೂಲಕ ನಾವು ರಾಜಕಾರಣದ ದೋಷಗಳನ್ನು ಗುಣಪಡಿಸುವುದಿಲ,್ಲ ಬದಲಾಗಿ ಅದನ್ನು ಠಕ್ಕುತನದ ಆಡಂಬೋಲವಾಗಿ ಮಾಡಿಬಿಡುತ್ತೇವೆ.
Comments
Post a Comment