ಕಾಂಗ್ರೆಸ್ ನಕಾರಾತ್ಮಕ ರಾಜಕೀಯ
ಇಂದಿನ ತನ್ನದೇ ಆದ ಅಬ್ಬರದ ವಾತಾವರಣದಲ್ಲಿ ಒಂದು ಕಾಲದಲ್ಲಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಕಳೆದುಹೋಗುತ್ತದೆ.
................
ಸಂಪಾದಕೀಯ
ಜನರ ಬದುಕಿನಲ್ಲಿರುವಂತೆಯೇ, ರಾಜಕಾರಣದಲ್ಲಿ ಯಾವುದೇ ಸಂಸ್ಥೆ ಅಥವಾ ಪಕ್ಷ ಅಥವಾ ದೇಶ ನಕಾರಾತ್ಮಕ ಚಿಂತನೆ, ಕಾರ್ಯಸೂಚಿಗಳ ತಳಹದಿಯ ಮೇಲೆ ಭವಿಷ್ಯ ರೂಪಿಸಲಾಗುವುದಿಲ್ಲ. ಉದಾಹರಣೆಗೆ ಪಾಕಿಸ್ತಾನವು ಭಾರತದ ವಿರುದ್ಧ ದ್ವೇಷ, ಪ್ರತೀಕಾರ ಮನೋಭಾವದ ಮೂಲಕವೇ ತನ್ನನ್ನು ರೂಪಿಸಿಕೊಂಡಿದ್ದು, ಇಂದಿನವರೆಗೂ ಒಂದು ಸ್ಥಿರವಾದ, ಗೌರವಯುತ ದೇಶವಾಗಲು ಸಾಧ್ಯವಾಗಿಲ್ಲ. ದುರದೃಷ್ಟವಶಾತ್ ಕಾಂಗ್ರೆಸ್ ಪಕ್ಷವೂ ಇದೇ ಮಾರ್ಗವನ್ನು ಅನುಸರಿಸುತ್ತಿದೆ. ತನ್ನ ಇಡೀ ಅಸ್ತಿತ್ವವೇ ಬಿಜೆಪಿಯ ವಿರುದ್ಧ ದಾಳಿ ನಡೆಸುವುದರಲ್ಲೇ ಕಾಣುವ ಮೂಲಕ ತನ್ನದೇ ಆದ ನೈತಿಕ, ರಾಜಕೀಯ ನೆಲೆಯನ್ನು ಮರುಕಟ್ಟಲು ವಿಫಲವಾಗುತ್ತಿದೆ.
ರಾಷ್ಟ್ರಮಟ್ಟದಲ್ಲಿ, ಕಾಂಗ್ರೆಸ್ ಪಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಗೊಂದಲಮಯವಾಗಿದ್ದು, ಪ್ರತಿಕ್ರಿಯಾತ್ಮಕವಾಗಿ, ಉದ್ದೇಶರಹಿತವಾಗಿ ಮುನ್ನಡೆಯುತ್ತಿದೆ. ರಾಹುಲ್ ಗಾಂಧಿಯ ರಾಜಕಾರಣವು ವಿರೋಧಕ್ಕಾಗಿ, ವಿರೋಧಿಸುವ ಮಾದರಿಯನ್ನೇ ಅವಲಂಬಿಸಿದ್ದು, ದೋಷಾರೋಪಗಳು, ನಿರಾಕರಣೆ ಮತ್ತು ಸ್ವಯಂ ಅನುಕಂಪವನ್ನೇ ತನ್ನ ಪ್ರಚಾರಗಳಲ್ಲಿ ತೋರುತ್ತಿದೆ. ವಿಶ್ವಾಸಾರ್ಹ ಪರ್ಯಾಯಗಳನ್ನು ಅಥವಾ ನೀತಿಗಳ ನೀಲನಕ್ಷೆಗಳನ್ನು ಜನರ ಮುಂದಿಡದೆ, ರಾಹುಲ್ ರಾಷ್ಟ್ರೀಯ ಚರ್ಚೆಗಳನ್ನು ಜಾತಿ, ಸಮುದಾಯ ಮತ್ತು ಸಂತ್ರಸ್ತ ಸ್ಥಿತಿಯನ್ನೂ ಮುಂದಿಟ್ಟುಕೊಂಡು ನಿರೂಪಣೆಗಳನ್ನು ಮಂಡಿಸುತ್ತಿದ್ದಾರೆ. ಅವರ ಭಾಷಣಗಳಲ್ಲಿ ವಿಷಯಗಳ ಆಳ ಇರುವುದಿಲ್ಲ, ಹಾಗಾಗಿ ಅವರ ಹೇಳಿಕೆಗಳು ಏಕತೆ ಸಾಧಿಸುವುದಕ್ಕಿಂತಲೂ ಹೆಚ್ಚಾಗಿ ವಿಭಜಿಸುತ್ತಾ ಹೋಗುತ್ತದೆ, ಅವರ ನಾಯಕತ್ವವು ಸಮರ್ಥ ನಾಯಕರಾದ ಪಿ ಚಿದಂಬರಂ, ಶಶಿ ತರೂರ್, ಮನೀಶ್ ತಿವಾರಿ ಮುಂತಾದವರನ್ನು ಮೂಲೆಗುಂಪು ಮಾಡಿದೆ. ಇಂದು ಕಾಂಗ್ರೆಸ್ ಪಕ್ಷವು ಚಿಂತನೆಗಳನ್ನೊಳಗೊಂಡ ಸಂಸ್ಥೆಯಾಗಿಲ್ಲ, ಬದಲಾಗಿ ರಾಹುಲ್‍ನ ನಾಟಕೀಯ ಪ್ರಸಂಗಗಳ ಆಡುಂಬೊಲವಾಗಿದ್ದು, ಅಧ್ಯಕ್ಷ ಖರ್ಗೆ ಅವರು ಆಲಂಕಾರಿಕ ಪೆÇೀಷಕರಾಗಿ ಕಾಣುತ್ತಿದ್ದಾರೆ.
ಕರ್ನಾಟಕದಲ್ಲಿ ಇದೇ ಪರಿಸ್ಥಿತಿಯನ್ನೇ ಕಾಣಬಹುದು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪಕ್ಷದ ರಾಷ್ಟ್ರಮಟ್ಟದ ವ್ಯಾಧಿಯನ್ನೇ ಬಿಂಬಿಸುವಂತಿದೆ. ಮಾತು ಹೆಚ್ಚಾಗಿದ್ದು ಕೃತಿ ಇಲ್ಲವಾಗುತ್ತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರಾಜ್ಯದ ರಸ್ತೆಗಳು ದುರಸ್ತಿಯಾಗದೆ ಬಳಕೆಗೆ ಅನರ್ಹವಾಗಿವೆ. ಸಾರ್ವಜನಿಕ ಸಂಸ್ಥೆಗಳಾದ ಶಾಲೆಗಳು, ಅಸ್ಪತ್ರೆಗಳು ಹಣಕಾಸು ಇಲ್ಲದೆ ಪರದಾಡುತ್ತಿವೆ, ದಿಕ್ಕುತಪ್ಪಿದಂತಾಗಿವೆ. ಸರ್ಕಾರಿ ನೌಕರರ ವೇತನಗಳು ಹಲವು ತಿಂಗಳುಗಳಿಂದ ಬಾಕಿ ಉಳಿದಿದೆ. ಗುತ್ತಿಗೆದಾರರ ಬಿಲ್‍ಗಳು ಸಾವಿರಾರು ಕೋಟಿ ರೂಗಳಷ್ಟು ಬಾಕಿ ಉಳಿದಿವೆ. ರಾಜ್ಯ ಬೊಕ್ಕಸ ಬಹುಪಾಲು ಖಾಲಿಯಾಗಿದೆ. ಆದರೂ ನಾಯಕತ್ವವು ಕೇಂದ್ರದೊಡನೆ ನಿತ್ಯ ಕಲಹದಲ್ಲಿ ತೊಡಗಿದ್ದು, ತನ್ನ ಪ್ರತಿಯೊಂದು ವೈಫಲ್ಯಕ್ಕೂ ಕೇಂದ್ರವನ್ನು ದೂಷಿಸುತ್ತಿದೆ. ಕೇಂದ್ರದ ಮೇಲೆ ದಾಳಿ ನಡೆಸುವುದು, ಬೆಂಗಳೂರಿನಲ್ಲಿ ತನ್ನ ಅದಕ್ಷತೆಯನ್ನು ಮುಚ್ಚಿಹಾಕುತ್ತದೆ ಎಂಬ ಭ್ರಮೆಯಲ್ಲಿದೆ ರಾಜ್ಯ ಸರಕಾರ. ಆದರೆ ಜನಸಾಮಾನ್ಯರು ಕುರುಡರಲ್ಲ, ಮೂರು ವರ್ಷಗಳ ಭರವಸೆಗಳನ್ನು ಈಡೇರಿಸಲಾಗದ ಆಳ್ವಿಕೆ ಮತ್ತು ಆಡಳಿತಾತ್ಮಕ ಸ್ಥಗಿತವನ್ನು ಕಂಡು ಜನರು ಭ್ರಮನಿರಸನಗೊಂಡು, ತಮಗೆ ದ್ರೋಹ ಬಗೆಯಲಾಗಿದೆ ಎಂದು ಭಾವಿಸುತ್ತಿದ್ದಾರೆ. ಹಿಂದಿನ ಬಿಜೆಪಿ ಆಳ್ವಿಕೆಯಲ್ಲೂ ಜನರಲ್ಲಿ ಇದೇ ಭಾವನೆ ಇತ್ತು. ತತ್ಪರಿಣಾಮವಾಗಿ ಟೀಕೆಗಳು ತೀವ್ರವಾಗುತ್ತಿದ್ದು, ಸತತವಾಗಿ ಎರಡು ಸರ್ಕಾರಗಳು ಬೇರೆ ಬಣ್ಣದ್ದಾದರೂ ಒಂದೇ ವರ್ತನೆಯನ್ನು ತೋರುತ್ತಿವೆ ಎಂದು ದೂಷಿಸಲಾಗುತ್ತಿದೆ.
ಮೂಲತಃ ಕಾಂಗ್ರೆಸ್ ಸಮಸ್ಯೆ ಇರುವುದು ತಾತ್ವಿಕ ನೆಲೆಯಲ್ಲೇ ಹೊರತು ಚುನಾವಣೆಗಳಲ್ಲಿ ಅಲ್ಲ. ನಾಯಕತ್ವ ಎಂದರೆ ದೂರಗಾಮಿ ಚಿಂತನೆಯಾಗಿರಬೇಕು, ಮತ್ತೊಬ್ಬರನ್ನು ಹೀಗಳೆಯುವುದು ಮಾತ್ರವೇ ಅಲ್ಲ ಎನ್ನುವುದನ್ನು ಪಕ್ಷ ಮರೆತಿದೆ. ಜವಾಬ್ದಾರಿಯುತ ವಿರೋಧ ಪಕ್ಷವು ಸರ್ಕಾರವನ್ನು ಉತ್ತರದಾಯಿಯಾಗಿ ನಿಲ್ಲಿಸಬೇಕು, ಹಾಗೆಯೇ ಒಂದು ಸಕಾರಾತ್ಮಕ ಪರ್ಯಾಯವನ್ನೂ ದೇಶದ ಮುಂದಿಡಬೇಕು. ಭರವಸೆಯನ್ನು ಮೂಡಿಸಬೇಕು. ರಾಹುಲ್ ಗಾಂಧಿಯ ರಾಜಕಾರಣದ ಮಾದರಿ, ರಾಜ್ಯ ಆಡಳಿತ ಪಕ್ಷ ಪ್ರಚೋದನೆಗಳನ್ನು ಆಧರಿಸಿದ್ದು, ಶಾಶ್ವತವಾಗಿ ಪ್ರತಿಭಟನೆಗಳಲ್ಲೇ ಮುಂದುವರೆಯುತ್ತಿದ್ದು, ತದ್ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ. ಪಕ್ಷದ ಈ ವರ್ತನೆ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತದೆ, ಪ್ರಜೆಗಳನ್ನು ವಿಭಜಿಸುತ್ತದೆ ಮತ್ತು ಪ್ರಜಾಸತ್ತಾತ್ಮಕ ಚರ್ಚೆಯನ್ನು ನಗಣ್ಯಗೊಳಿಸುತ್ತದೆ.
ಭಾರತಕ್ಕೆ ಆಲೋಚನೆ ಮಾಡುವ ವಿರೋಧ ಪಕ್ಷ ಬೇಕಿದೆ. ಕೇವಲ ಪ್ರತಿಕ್ರಿಯಿಸುವ ಪಕ್ಷವಲ್ಲ. ಕಾಂಗ್ರೆಸ್ ಪಕ್ಷವು ಆಳ್ವಿಕೆ ಎಂದರೆ ಕೇವಲ ನಾಟಕೀಯ ಪ್ರಹಸನಗಳಲ್ಲ, ಅದು ದೂರದೃಷ್ಟಿಯ ಸಂಕೇತ ಎಂಬ ಸತ್ಯವನ್ನು ಪಕ್ಷವು ಅರಿಯುವವರೆಗೂ ಇದೇ ರೀತಿ ಹಿಂದಕ್ಕೆ ಜಾರುತ್ತಲೇ ಇರುತ್ತದೆ. ಇಂದಿನ ತನ್ನದೇ ಆದ ಅಬ್ಬರದ ವಾತಾವರಣದಲ್ಲಿ ಒಂದು ಕಾಲದಲ್ಲಿ ದೊಡ್ಡ ಪಕ್ಷವಾಗಿದ್ದ ಕಾಂಗ್ರೆಸ್ ಕಳೆದುಹೋಗುತ್ತದೆ.
Comments
Post a Comment