ನಗರ ಜೀವನಕ್ಕೆ ಧಕ್ಕೆಯಾದ ಮನೆಗೆಲಸದವರ ಶಾಸನ

 


ನೆತ್ತಿ ಮೇಲಿನ ಕತ್ತಿ * ಬಿವಿಸೀ

ತಮ್ಮ ಸರ್ಕಾರವನ್ನು ಕಾರ್ಮಿಕರ ಪರ ಎಂದು ಬಿಂಬಿಸುವ ಭರದಲ್ಲಿ ಕರ್ನಾಟಕ ಸರ್ಕಾರವು ಹೊಸ ಕಾನೂನನ್ನು ಜಾರಿಗೊಳಿಸಲು ಸಜ್ಜಾಗಿದ್ದು, ಅದು ನಗರಗಳ ಮಧ್ಯಮ ವರ್ಗದ ಬದುಕನ್ನು ಅಸಹನೀಯವಾಗಿಸುವ ಸಂಭವ ಇದೆ. ಕರ್ನಾಟಕ ಮನೆಗೆಲಸ ಕಾರ್ಮಿಕರ (ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ಮಸೂದೆಯು ಬೆಳಗಾವಿ ಅಧಿವೇಶನದಲ್ಲಿ ಮಂಡನೆಯಾಗಲಿದ್ದು, ಇದನ್ನು ಎಂಟು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿರುವ ಮನೆಗೆಲಸದ ಕಾರ್ಮಿಕರನ್ನು ರಕ್ಷಿಸುತ್ತದೆ ಎಂದು ಹೇಳಲಾಗಿದೆ. ಆದರೆ ಈ ಉದಾತ್ತ ಚಿಂತನೆಯ ಹಿಂದೆ ಅಸ್ವಾಭಾವಿಕವಾದ, ದಂಡನೆಯ ರೂಪ ನಿಯಮಗಳನ್ನು ಕಾಣಬಹುದಾಗಿದ್ದು, ಇದು ಕಚೇರಿಗಳಿಗೆ ಹೋಗುವ ಕುಟುಂಬಗಳಲ್ಲಿ ಉಸಿರುಗಟ್ಟುವ ವಾತಾವರಣ ಸೃಷ್ಟಿಸುತ್ತದೆ. ನಾಗರಿಕ ಸಮಾಜದಲ್ಲಿ ಈ ಮಧ್ಯಮ ವರ್ಗದ ಕುಟುಂಬಗಳೇ ಮುಖ್ಯ ಆಧಾರವಾಗಿರುತ್ತವೆ.

ಈ ಮಸೂದೆಯ ಅನುಸಾರ, ಮನೆಗೆಲಸ ಮಾಡುವ ಕಾರ್ಮಿಕರು, ಉದ್ಯೋಗದಾತರು, ಸೇವಾ ಏಜೆನ್ಸಿ ಮತ್ತು ಆನ್‍ಲೈನ್ ವೇದಿಕೆಗಳು ಸರ್ಕಾರದೊಡನೆ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ.  ನೋಂದಣಿಯಾಗದ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ದಂಡನಾರ್ಹ ಅಪರಾಧವಾಗಿ ಮೂರು ತಿಂಗಳ ಜೈಲು ಶಿಕ್ಷೆ ಅಥವಾ 20 ಸಾವಿರ ರೂ ದಂಡ ವಿಧಿಸಲಾಗುತ್ತದೆ. ಉದ್ಯೋಗದಾತರು ಸರ್ಕಾರ ನಿಗದಿಪಡಿಸಿದ ವೇತನವನ್ನು ನೀಡುವುದೇ ಅಲ್ಲದೆ, ವಾರದ ರಜೆ, ಹೆರಿಗೆ ರಜೆ ಮತ್ತು ಇತರ ಶಾಸನಬದ್ಧ ಸವಲತ್ತುಗಳನ್ನು ಒದಗಿಸಬೇಕಾಗುತ್ತದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ದಂಡನೆ ಮತ್ತು ಜೈಲು ವಾಸ ಕ್ರಮ ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರವು ಪ್ರತಿಯೊಂದು ಮನೆಯನ್ನೂ ನಿಯಂತ್ರಿತ ಕೆಲಸದ ಸ್ಥಳವನ್ನಾಗಿ ಮಾಡುತ್ತದೆ, ಪ್ರತಿಯೊಬ್ಬ ಕುಟುಂಬಸ್ಥರೂ ಉದ್ಯೋಗದಾತರಾಗುತ್ತಾರೆ, ಪ್ರತಿಯೊಂದು ಚಟುವಟಿಕೆಯೂ ಕಾನೂನು ಒಪ್ಪಂದ ಅನುಸಾರ ನಡೆಯಬೇಕಾಗುತ್ತದೆ.

ಇದು ಅಸಂಬದ್ಧವಾದ ನಿಯಮ. ಮನೆಗೆಲಸದ ವಲಯವು ಬೆಂಗೂರಿನಂತಹ ನಗರಗಳಲ್ಲಿ ಈಗಾಗಲೇ ಸ್ವಯಂ ನಿಬರ್ಂಧಗಳಿಗೊಳಗಾಗಿದೆ. ಕಾರ್ಮಿಕರು ಬುದ್ಧಿವಂತರಾಗಿದ್ದು, ತಮ್ಮ ಕೆಲಸದ ಮೌಲ್ಯವನ್ನು ಅರಿತು, ಹಕ್ಕೊತ್ತಾಯ ಮಾಡುತ್ತಾರೆ. ಇವರ ವೇತನಗಳನ್ನು, ಕೆಲಸದ ಅವಧಿಯನ್ನು ಮಾತುಕತೆಗಳ ಮೂಲಕ ಬೇಡಿಕೆ ಮತ್ತು ಅನುಭವದ ಆಧಾರದಲ್ಲಿ ನಿರ್ಧರಿಸಲಾಗುತ್ತದೆ.  ದಿನಕ್ಕೆ ನಾಲ್ಕು ಅಥವಾ ಐದು ಮನೆಗಳಲ್ಲಿ ಕೆಲಸ ಮಾಡುವವರು ತಿಂಗಳಿಗೆ ಕನಿಷ್ಠ 25ರಿಂದ 35 ಸಾವಿರ ರೂ ಸಂಪಾದನೆ ಮಾಡುತ್ತಾರೆ. ಕೆಲವೆಡೆ ಇನ್ನೂ ಹೆಚ್ಚಾಗಿದ್ದು ಆರಂಭಿಕ ಐಟಿ ವಲಯದ ಕಾರ್ಮಕರಿಗಿಂತಲೂ ಹೆಚ್ಚಿನ ಆದಾಯ ಪಡೆಯುತ್ತಾರೆ. ಈ ಪರಿವರ್ತನೆ ಸ್ವಾಭಾವಿಕವಾಗಿ ಮಾರುಕಟ್ಟೆ ನಿಯಮಗಳ ಅಡಿಯಲ್ಲೇ ಸಂಭವಿಸಿದೆಯೇ ಹೊರತು ಸರ್ಕಾರದ ಮಧ್ಯಸ್ತಿಕೆಯಿಂದಲ್ಲ. ಬೇಡಿಕೆ ಮತ್ತು ಸರಬರಾಜು ಸಮೀಕರಣವು ಸಮತೋಲನವನ್ನು ಸೃಷ್ಟಿಸಿದ್ದು, ನ್ಯಾಯಯುತ ವಾತಾವರಣವನ್ನು ಸೃಷ್ಟಿಸಿದೆ.

ನೋಂದಣಿಯನ್ನು ಕಡ್ಡಾಯ ಮಾಡುವ ಮೂಲಕ, ಲೆಕ್ಕಪತ್ರಗಳ ವ್ಯವಹಾರಗಳು ಮತ್ತು ಕುಟುಂಬಗಳಿಗೆ ಅನಗತ್ಯದ ಹೊರೆ ಹೊರಿಸಿದಂತಾಗುತ್ತದೆ. ಹೀಗೆ ಮಾಡುವುದರ ಮೂಲಕ ಸರ್ಕಾರವು ಸಾಧಾರಣ ಜನತೆಗೆ ಅವರ ನಿತ್ಯ ಜೀವನ ನಡೆಸಲಾಗದಂತೆ ಶಿಕ್ಷೆ ನೀಡುತ್ತಿದೆ. ಕಚೇರಿಗಳಿಗೆ ಹೋಗುವವರು, ವೃತ್ತಿಪರರು ತಮ್ಮ ಮನೆ ಕೆಲಸಗಳಿಗಾಗಿ ದಿನಕ್ಕೆ ಒಂದೆರಡು ಗಂಟೆ ನೇಮಿಸಿಕೊಳ್ಳುತ್ತಾರೆ, ತನ್ಮೂಲಕ ಮನೆಗಳನ್ನು ಸುಸ್ಥಿತಿಯಲ್ಲಿರಿಸುತ್ತಾರೆ. ಈ ಕುಟುಂಬಗಳಿಗೆ ವೇತನದ ಲೆಕ್ಕಪತ್ರಗಳನ್ನು ಕಾಪಾಡುವುದು, ಬೆನಿಫಿಟ್ಸ್ ಲೆಕ್ಕ ಹಾಕುವುದು ಅಥವಾ ನಿಯಮಗಳ ಉಲ್ಲಂಘನೆಗಾಗಿ ಜೈಲುವಾಸ ಎದುರಿಸಬೇಕಾಗುವುದು, ಇವೆಲ್ಲವೂ ಅಧಿಕಾರಶಾಹಿಯ ಹುಚ್ಚುತನ ಎಂದೇ ಹೇಳಬಹುದು. ಕಮ್ಯುನಿಸ್ಟ್ ಆಳ್ವಿಕೆಗಳಲ್ಲೂ ಸಹ, ಪ್ರಭುತ್ವದ ನಿಯಂತ್ರಣ ಹೆಚ್ಚಾಗಿದ್ದರೂ ಕುಟುಂಬ ಜೀವನವನ್ನು ನಿಯಂತ್ರಿಸುವ ಈ ಮಟ್ಟದ ಕ್ರಮಗಳನ್ನು ಕೈಗೊಂಡಿರಲಿಲ್ಲ.

ವಿಡಂಬನೆ ಎಂದರೆ, ಈ ಸರ್ಕಾರವೇ ತನ್ನ ಆಶಾ ಕಾರ್ಯಕರ್ತೆಯರಿಗೆ, ಅತಿಥಿ ಬೋಧಕರಿಗೆ, ಸಾವಿರಾರು ಹೊರಗುತ್ತಿಗೆ ನೌಕರರಿಗೆ ಕಡಿಮೆ ವೇತನ ನೀಡುತ್ತದೆ. ಅಲ್ಲದೆ ಯಾವುದೇ ಶಾಸನಬದ್ಧ ಸವಲತ್ತುಗಳನ್ನು ನೀಡುವುದಿಲ್ಲ. ಆದರೆ ಇದೇ ಸರ್ಕಾರ ಖಾಸಗಿ ಪ್ರಜೆಗಳ ಮೇಲೆ ನೈತಿಕ, ಹಣಕಾಸಿನ ಹೊರೆ ಹೊರಿಸುತ್ತಿದೆ. ಸರ್ಕಾರಕ್ಕೆ ಕಾರ್ಮಿಕರ ಯೋಗಕ್ಷೇಮವೇ ಮುಖ್ಯವಾಗಿದ್ದರೆ ಮೊದಲು ತನ್ನದೇ ನೌಕರರಿಗೆ ಸರಿಯಾದ ಸಮಯದ ವೇತನ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕೇ ಹೊರತು, ಜನತೆಯ ಖಾಸಗಿ ವ್ಯವಸ್ಥೆಗಳನ್ನು ನಿಯಂತ್ರಿಸುವುದಲ್ಲ.

ಮನೆಗೆಲಸದ ಕಾರ್ಮಿಕರು ಮತ್ತು ಉದ್ಯೋಗದಾತರು ಸೌಹಾರ್ದಯುತವಾಗಿ ದಶಕಗಳ ಕಾಲದಿಂದಲೂ ಜೀವನ ನಡೆಸುತ್ತಾ ಬಂದಿದ್ದಾರೆ, ಹೊಂದಾಣಿಕೆ, ವಿಶ್ವಾಸ, ನಂಬಿಕೆಗಳ ಮೂಲಕ ವೈಯಕ್ತಿಕ ಅರ್ಥಮಾಡಿಕೊಂಡು ಬಾಳುತ್ತಿದ್ದಾರೆ. ಈ ವಾತಾವರಣಕ್ಕೆ ಸರಕಾರ ಹುಳಿ ಹಿಂಡುವ ಅವಶ್ಯಕತೆ ಏನಿದೆ? ಗೃಹಕೃತ್ಯ ಸಹಾಯಕರ ಮೇಲ್ವಿಚಾರಕರಾಗಲೀ, ಕಲ್ಯಾಣ ಮಂಡಲಿಯಾಗಲೀ ಅಗತ್ಯವಿಲ್ಲ. ಕಾನೂನಿನ ಉದ್ದೇಶ, ಒಂದು ವೇಳೆ ಜಾರಿಯಾದರೆ, ಈ ವಲಯವನ್ನು ಗೋಪ್ಯತೆಯೆಡೆಗೆ ತಳ್ಳುತ್ತದೆ, ಕುಟುಂಬಗಳಲ್ಲಿ ಭೀತಿ ಹುಟ್ಟಿಸುತ್ತದೆ; ಅಂತಿಮವಾಗಿ, ಈ ಕಾನೂನು ರಕ್ಷಿಸಲು ಇಚ್ಛಿಸುವ ಕಾರ್ಮಿಕರಿಗೇ ಧಕ್ಕೆ ಉಂಟಾಗುತ್ತದೆ.

ಕರ್ನಾಟಕ ಸರ್ಕಾರವು ಈ ಅಪ್ರಬುದ್ಧ ಮಸೂದೆಯನ್ನು ಕೂಡಲೇ ಹಿಂಪಡೆಯಬೇಕು. ಕೆಲವೊಮ್ಮೆ ನಿಜವಾದ ಅಳ್ವಿಕೆ ಇರುವುದು ಹಸ್ತಕ್ಷೇಪ ಮಾಡುವುದರಲ್ಲಿ ಅಲ್ಲ, ಬದಲಾಗಿ ಸಂಯಮದಲ್ಲಿ. ಮನೆಗೆಲಸದ ಕಾರ್ಮಿಕರು ಮತ್ತು ಅವರನ್ನು ನೇಮಿಸಿಕೊಳ್ಳುವವರು ಅಧಿಕಾರಶಾಹಿಯ ಹಸ್ತಕ್ಷೇಪ ಇಲ್ಲದೆ ಸೌಹಾರ್ದತೆಯಿಂದ ಸಂಬಂಧಗಳನ್ನು ಬೆಳೆಸಿಕೊಳ್ಳಲಿ. ಸರ್ಕಾರ ತನ್ನ ಆಡಳಿತ ಕಚೇರಿಗಳನ್ನು ಮೊದಲು ಸುಸ್ಥಿತಿಯಲ್ಲಿರಿಸಲಿ, ನಮ್ಮ ಮನೆಗಳನ್ನಲ್ಲ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again