ದೇವರೇ ನ್ಯಾಯ ಒದಗಿಸಲು ವಿಫಲವಾದಾಗ - ಧರ್ಮಸ್ಥಳದ ವಿರೋಧಾಭಾಸ
ಸದ್ಯಕ್ಕೆ ಧರ್ಮಸ್ಥಳ ಒಂದು ಪ್ರಮಾಣಿತ ಎಚ್ಚರಿಕೆಯನ್ನು ನೀಡುತ್ತಿದೆ. ದೇವರು ಅಂತಿಮ ತೀರ್ಮಾನ ನೀಡಲು ವಿಫಲವಾದಾಗ, ನೈತಿಕತೆಯು ಅಲ್ಲಿ ಅಗತ್ಯವಾಗುತ್ತದೆ.
..........
ಓ ದೇವರೇ! * ಬಿವಿಸೀ
ದಕ್ಷಿಣ ಕನ್ನಡ ಜಿಲ್ಲೆಯು ಪಾರಂಪರಿಕವಾಗಿ ಪವಿತ್ರ ಭೂಮಿ ಎಂದೇ ಹೆಸರಾಗಿದೆ. ಇಲ್ಲಿ ದೇವರುಗಳು, ದೈವ ಸ್ವರೂಪಿಗಳು, ಅಣ್ಣಪ್ಪ, ಪಂಜುರ್ಲಿ ಮತ್ತು ಗುಳಿಗಾ ಮುಂತಾದ ದೈವೀಕ ರಕ್ಷಕರು ಹೆಸರಾಗಿದ್ದಾರೆ. ಈ ನೆಲವು ಪ್ರಾರ್ಥನೆ ಮತ್ತು ಆಚರಣೆಗಳಲ್ಲೇ ಮುಳುಗಿದ್ದು, ಸಹಜವಾಗಿ ಸತ್ಯ ಮತ್ತು ನ್ಯಾಯವನ್ನು ಬೆಳೆಸುತ್ತದೆ ಎಂದೂ ನಂಬಲಾಗಿದೆ. ಆದಾಗ್ಯೂ ವಾಸ್ತವದಲ್ಲಿ ಕರಾಳ ಚಿತ್ರಣ, ಭೀಕರ ವಾತಾವರಣ ಕಂಡುಬರುತ್ತದೆ. ಅಧ್ಯಾತ್ಮದ ಮುಸುಕಿನ ಹಿಂದೆ ಅತ್ಯಾಚಾರ, ಹತ್ಯೆ ಮತ್ತು ಕೋಮು ಸಂಘರ್ಷಗಳು ಕಾಡುತ್ತಲೇ ಇವೆ.
ಈ ವೈರುಧ್ಯವನ್ನು ಮನಮುಟ್ಟುವ ರೀತಿಯಲ್ಲಿ ವ್ಯಾಖ್ಯಾನಿಸಿದವರು ಮಾಜಿ ಮುಖ್ಯಮಂತ್ರಿ ದಿವಂಗತ ಜೆ ಎಚ್ ಪಟೇಲ್ ಅವರು. ಒಮ್ಮೆ ಪಟೇಲ್ ದಕ್ಷಿಣ ಕನ್ನಡವನ್ನು ಖೂನಿದಾರರ (ಕೊಲೆಗಡುಕರ) ಭೂಮಿ ಎಂದು ಕರೆದಿದ್ದರು. ಯಾರೂ ಈ ಟೀಕೆಯನ್ನು ಅಪರಾಧ ಎಂದು ಭಾವಿಸಲಿಲ್ಲ. ಏಕೆಂದರೆ ಈ ಹೇಳಿಕೆಯ ಹಿಂದೆ ಸತ್ಯಾಂಶವಿತ್ತು. ದೈವೀಕ ರಕ್ಷಕರನ್ನು ಹೊಂದಿರುವ ಹೆಮ್ಮೆ ಪಡೆದಿರುವ ಜಿಲ್ಲೆಯು ಹಿಂಸೆ ಮತ್ತು ಭಾವಾತಿರೇಕದ ಅಂಧಾಭಿಮಾನಕ್ಕೆ ನೆಲೆಯಾಗಿದ್ದು, ಭಕ್ತಿ ಮತ್ತು ನೈತಿಕತೆ ಒಟ್ಟಾಗಿ ಇರಲು ಸಾಧ್ಯವಿಲ್ಲ ಎನ್ನುವುದನ್ನು ನಿರೂಪಿಸಿದೆ.
ಧರ್ಮಸ್ಥಳ ಎಂದರೆ ಧರ್ಮದ ಬೀಡು ಎಂದೇ ಅರ್ಥ. ಆದರೆ ಇದು ನೈತಿಕ ವೈರುಧ್ಯವನ್ನು ಎತ್ತಿ ತೋರಿಸುತ್ತಿದೆ. ಹಲವು ದಶಕಗಳ ಕಾಲ ಈ ದೇವಾಲಯಗಳ ಪ್ರದೇಶವು ನೂರಾರು ಸಂಖ್ಯೆಯ ನಿಗೂಢ ಸಾವುಗಳಿಗೆ, ಲೈಂಗಿಕ ದೌರ್ಜನ್ಯಗಳಿಗೆ ಆಶ್ರಯವಾಗಿದ್ದು, ಬಹುತೇಕವಾಗಿ ಮಹಿಳೆಯರೇ ಬಲಿಪಶುಗಳಾಗಿದ್ದಾರೆ. ಈ ಪ್ರಕರಣಗಳು ಇನ್ನೂ ಬಗೆಹರಿಸಲಾಗಿಲ್ಲ, ಅಪರಾಧಿಗಳು ಮುಕ್ತವಾಗಿ ಓಡಾಡಿಕೊಂಡಿದ್ದಾರೆ. ಸರ್ವವ್ಯಾಪಿ ನ್ಯಾಯ ನಿರ್ಧಾರಕರು ಎಂದು ಭಾವಿಸಲ್ಪಡುವ ದೇವರುಗಳು ಮೌನವಾಗಿವೆ. ಶ್ರದ್ಧೆ ಇರುವ ಭಕ್ತಾದಿಗಳು ಒಂದು ಕಾಲದಲ್ಲಿ ಮಂಜುನಾಥ ಸ್ವಾಮಿ ಮತ್ತು ಅಣ್ಣಪ್ಪನ ಮೇಲೆ ನಂಬಿಕೆ ಇಟ್ಟಿದ್ದವರು ಈ ನೆಲದಲ್ಲಿ ಅನ್ಯಾಯವಾಗಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆದರೆ ಮತ್ತೆ ಮತ್ತೆ ಈ ನಂಬಿಕೆಯು ಸುಳ್ಳಾಗುತ್ತಲೇ ಬಂದಿದೆ.
ದೈವೀಕ ನ್ಯಾಯದ ವೈಫಲ್ಯ ವಿಚಾರವಾದಿಗಳಿಗೆ ಪ್ರಧಾನ ಅಂಶವಾಗಿದ್ದು ನಾಸ್ತಿಕರಿಗೂ ಸಹ ಇದು ಚರ್ಚೆಯ ವಿಚಾರವಾಗಿದೆ. ಇವರುಗಳು ಸರಿಯಾಗಿಯೇ ಕೇಳುವಂತೆ, ದೇವರ ನೆಲವು ಹೇಗೆ ಶಿಕ್ಷೆಗೊಳಗಾಗದ ಪಾಪಗಳ ಭೂಮಿಯಾಗಲು ಸಾಧ್ಯ? ನಂಬಿಕೆ, ಶ್ರದ್ಧೆಗಳು ನೈತಿಕ ಉತ್ತರದಾಯಿತ್ವವನ್ನು ಕಾಪಾಡಲು ವಿಫಲವಾದಾಗ ಅದು ಮೂಢ ನಂಬಿಕೆಯಾಗಿ ಪರಿವರ್ತನೆಯಾಗುತ್ತದೆ. ದಕ್ಷಿಣ ಕನ್ನಡದಲ್ಲಿ ಬಹುಶಃ ದೈವ ನಂಬಿಕೆಯ ಸ್ಥಾನವನ್ನು ಅಧಿಕಾರದ ಭೀತಿ ಆಕ್ರಮಿಸಿಕೊಂಡಿದೆ.
ಈ ವಿರೋಧಾಭಾಸಗಳ ನಡುವೆ ನಿಂತಿರುವುದು, ಧರ್ಮಸ್ಥಳದ ವಂಶವಾಹಿ ಆಡಳಿತಗಾರರಾದ, ಸ್ವಘೋಷಿತ ಧರ್ಮ ರಕ್ಷಕರಾದ ಹೆಗ್ಗಡೆ ಕುಟುಂಬ. ಈ ಕುಟುಂಬದ ಸದಸ್ಯರು ಧರ್ಮಸ್ಥಳದ ಹೆಸರಿನಲ್ಲಿ ಬ್ಯಾಂಕುಗಳು, ಕಾಲೇಜುಗಳು, ಆಸ್ಪತ್ರೆಗಳು ಟ್ರಸ್ಟ್‍ಗಳನ್ನು ಸ್ಥಾಪಿಸುವ ಮೂಲಕ ತಮ್ಮನ್ನು ತಾವು ನಡೆದಾಡುವ ದೇವರು ಎಂದೇ ಬಿಂಬಿಸಿಕೊಂಡಿದ್ದಾರೆ. ಆದರೂ ಇವರ ಚರಿತ್ರೆ ಕೋರ್ಟ್ ಪ್ರಕರಣಗಳು, ಕಾನೂನುಬಾಹಿರ ವ್ಯವಹಾರಗಳು, ಟೀಕಾಕಾರರನ್ನು ಮುಕ್ತವಾಗಿ ಬೆದರಿಸುವ ತಂತ್ರಗಳಿಗೆ ಸಾಕ್ಷಿಯಾಗಿದೆ. ಇದನ್ನು ಪ್ರಶ್ನಿಸಿದಾಗ ಇವರು ದೇವರುಗಳ ಮೊರೆ ಹೋಗುವುದಿಲ್ಲ; ಬದಲಾಗಿ ನ್ಯಾಯಾಂಗದ ಮೊರೆ ಹೋಗುತ್ತಾರೆ, ಮೊಕದ್ದಮೆಗಳನ್ನು ದಾಖಲಿಸುತ್ತಾರೆ, ತಡೆಯಾಜ್ಞೆಗಳನ್ನು ತರುತ್ತಾರೆ ಹಾಗೂ ಪ್ರತಿರೋಧವನ್ನು ದಮನಿಸಲು ಕಾನೂನು ಸಾಧನಗಳನ್ನು ಬಳಸುತ್ತಾರೆ. ಹೀಗೆ ಮಾಡುವುದರ ಮೂಲಕ ತಾವೇ ಬೋಧಿಸುವ ದೈವೀಕ ನ್ಯಾಯದಲ್ಲಿ ತಮ್ಮ ಅಪನಂಬಿಕೆಯನ್ನು ಪ್ರದರ್ಶಿಸುತ್ತಾರೆ. ಈ ಕುಟುಂಬಕ್ಕೆ ಅಲ್ಲಿನ ದೈವ-ದೇವತೆಗಳ ಬಗ್ಗೆ ಭಯ-ಭೀತಿಯಿಲ್ಲ, ಶೃದ್ಧೆ ಇಲ್ಲ. ಇದ್ದಿದ್ದರೆ ಅವರು ಸ್ವತಃ ದೇವರಿಗೂ ಅಪ್ರಿಯವಾದ ಜನತಾಜನಾರ್ಧನರ ವಿರೋಧಿ ಕೃತ್ಯಗಳಲ್ಲಿ ತೊಡಗುತ್ತಿರಲಿಲ್ಲ.
ಧರ್ಮಸ್ಥಳದ ದುರಂತ ಇರುವುದು ಇಲ್ಲಿ. ಧರ್ಮವನ್ನೇ ಅಳವಡಿಸಿಕೊಂಡಿರುವುದಾಗಿ ಹೇಳಿಕೊಳ್ಳುವವರು ಧರ್ಮವನ್ನು ನಂಬುವುದಿಲ್ಲ. ಅವರ ಶ್ರದ್ದೆ ಪರೀಕ್ಷೆಗೊಳಗಾದಾಗ ಕಾನೂನು ದುರ್ಬಳಕೆಗೆ ಬಲಿಯಾಗುತ್ತದೆ. ತನ್ಮೂಲಕ ಆತ್ಮರಕ್ಷಣೆಯ ಕವಚವಾಗುತ್ತದೆ. ದೇವರುಗಳನ್ನು ಆಚರಣಾತ್ಮಕ ರಕ್ಷಾ ಕವಚಗಳಾಗಿ ಪರಿವರ್ತಿಸಲಾಗಿದ್ದು, ಸಂಪತ್ತು ಮತ್ತು ಅಧಿಕಾರವನ್ನು ರಕ್ಷಿಸಲು ಬಳಸಲಾಗುತ್ತದೆಯೇ ಹೊರತು, ನೈತಿಕತೆಗಾಗಿ ಅಲ್ಲ.
ಬಹುಶಃ ಅಂಧ ಶ್ರದ್ಧೆ ನಾಶವಾಗುವುದು ನಷ್ಟವೇನಲ್ಲ, ಅದು ವಿಮೋಚನೆಯ ಹಾದಿ. ಜನರು ದೈವೀಕ ನ್ಯಾಯದ ಮುಖವಾಡದ ಮೂಲಕ ನೋಡಲಾರಂಭಿಸಿದಂತೆ, ಅವರಿಗೆ ನಿಜವಾದ ಧರ್ಮದ ಅರಿವಾಗುತ್ತದೆ. ಪ್ರಶ್ನಿಸುವ ಧೈರ್ಯ ಮಾಡಿದಾಗ, ತರ್ಕದ ಬಗ್ಗೆ ಮಾತನಾಡಿದಾಗ, ಮನುಷ್ಯನ ಉತ್ತರದಾಯಿತ್ವವನ್ನು ಆಗ್ರಹಿಸಿದಾಗ ಈ ನಿಜವಾದ ಧರ್ಮ ಅನಾವರಣಗೊಳ್ಳುತ್ತದೆ.
ಸದ್ಯಕ್ಕೆ ಧರ್ಮಸ್ಥಳ ಒಂದು ಪ್ರಮಾಣಿತ ಎಚ್ಚರಿಕೆಯನ್ನು ನೀಡುತ್ತಿದೆ. ದೇವರು ಅಂತಿಮ ತೀರ್ಮಾನ ನೀಡಲು ವಿಫಲವಾದಾಗ, ನೈತಿಕತೆಯು ಅಲ್ಲಿ ಅಗತ್ಯವಾಗುತ್ತದೆ.
Comments
Post a Comment