ಇದು ಪ್ರಜಾಡಳಿತ, ರಾಜಪ್ರಭುತ್ವ ಅಲ್ಲ

 ಈ ದೇಶಕ್ಕೆ ಸಮಚಿತ್ತದಿಂದ ಕೇಳಿಸಿಕೊಳ್ಳುವ, ಸಹಿಷ್ಣುತೆಯ ಪ್ರಬುದ್ಧತೆ ಇರುವ ಮತ್ತು ಟೀಕೆ ಎನ್ನುವುದು ದೇಶದ್ರೋಹ ಅಲ್ಲ, ಬದಲಾಗಿ ಪ್ರಜಾತಂತ್ರ ಉಸಿರಾಡುತ್ತಿರುವುದರ ಸಂಕೇತ ಎಂದು ಅರಿಯುವ ವಿವೇಕವನ್ನು ಹೊಂದಿರುವ ನಾಯಕರು ಅಗತ್ಯವಾಗಿ ಬೇಕಿದ್ದಾರೆ.

................

ಜೀವಾಳದ ಪ್ರಶ್ನೆ * ಬಿವಿಸೀ

ಅಧಿಕಾರದಲ್ಲಿರುವವರನ್ನು ಟೀಕಿಸಿದ ಕಾರಣಕ್ಕಾಗಿ ನಾಗರಿಕರನ್ನು ಬಂಧಿಸುವುದು, ಚಿತ್ರಹಿಂಸೆ ನೀಡುವುದು, ಭಾರತದ ರಾಜಕೀಯ ವಾತಾವರಣದಲ್ಲಿ ಸಾಮಾನ್ಯವಾದ ನಾಚಿಕೆಗೇಡಿನ ಲಕ್ಷಣವಾಗಿ ಕಾಣುತ್ತಿದೆ. ರಾಷ್ಟ್ರಮಟ್ಟದಲ್ಲಿ ಪ್ರಧಾನಮಂತ್ರಿಯಾಗಲಿ ಅಥವಾ ರಾಜ್ಯಗಳ ಮುಖ್ಯಮಂತ್ರಿಗಳಾಗಲಿ, ಇದು ಒಂದೇ ಮಾದರಿಯಲ್ಲಿ ನಡೆಯುತ್ತಿದೆ. ಅಧಿಕಾರದ ವಿರುದ್ಧ ಮಾತನಾಡುವ ವ್ಯಕ್ತಿಗೆ ಕೂಡಲೇ ಪೆÇಲೀಸ್ ನೋಟಿಸ್ ನೀಡಲಾಗುತ್ತದೆ, ಎಫ್‍ಐಆರ್ ದಾಖಲಿಸಲಾಗುತ್ತದೆ ಅಥವಾ ನಡುರಾತ್ರಿಯಲ್ಲಿ ಮನೆಗೆ ಹೋಗಿ ಬಂಧಿಸಲಾಗುತ್ತದೆ. ಇದು ಪ್ರಜಾಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವದ ಮುಸುಕು ಧರಿಸಿರುವ ಸರ್ವಾಧಿಕಾರಿ ಧೋರಣೆ.

ಸಂವಿಧಾನದ ಅಡಿ, ಪ್ರತಿಯೊಬ್ಬ ಭಾರತೀಯ ನಾಗರಿಕ ಸಹ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿರುತ್ತಾರೆ. ಸರ್ಕಾರವನ್ನು ಟೀಕಿಸಲು, ಆಡಳಿತ ನೀತಿಗಳನ್ನು ಪ್ರಶ್ನಿಸಲು, ನಾಯಕರನ್ನು ಉತ್ತರದಾಯಿಯಾಗಿ ನಿಲ್ಲಿಸಲು ಸ್ವಾತಂತ್ರ್ಯವನ್ನು ನೀಡಲಾಗಿದ್ದು, ಇದು ಸವಲತ್ತು ಅಲ್ಲ; ಬದಲಾಗಿ ಸಾಂವಿಧಾನಿಕ ಗ್ಯಾರಂಟಿ. ಆದರೆ ದುರದೃಷ್ಟವಶಾತ್ ಈ ಸಂವಿಧಾನವನ್ನು ಎತ್ತಿಹಿಡಿಯಬೇಕಾದವರೇ ಜನತೆಯ ಹಕ್ಕನ್ನು ದಮನಿಸುತ್ತಿದ್ದಾರೆ. ಭಾರತದಾದ್ಯಂತ ಪತ್ರಕರ್ತರು, ಕಾರ್ಯಕರ್ತರು ಸಾಧಾರಣ ನಾಗರಿಕರು ಕೇವಲ ಮಾತನಾಡಿದ ಕಾರಣಕ್ಕಾಗಿ, ಈ ಮಾತುಗಳು ಅಧಿಕಾರದಲ್ಲಿರುವವರಿಗೆ ಅಹಿತಕರವಾಗಿರುವುದರಿಂದ, ಜೈಲಲ್ಲಿ ಕೊಳೆಯುತ್ತಾರೆ, ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.

ಕಾನೂನು ದುರುಪಯೋಗ ಸರ್ಕಾರದಿಂದಲೇ ಸಂಭವಿಸಿದರೆ, ಅದು ಸೆಕ್ಯುಲರ್ ಆಗಿರಲಿ ಪ್ರಗತಿಪರ ಆಗಿರಲಿ, ಅಪರಾಧವೇ ಆಗುತ್ತದೆ. ರಾಜ್ಯಗಳಲ್ಲಿ ಈಗಿನ ಸರ್ಕಾರಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಟೀಕೆಗಳನ್ನು ಎದುರಿಸುವಾಗ ನಾಯಕರನ್ನು ಲೇವಡಿ ಮಾಡುವ ವ್ಯಕ್ತಿಗಳನ್ನು ಬಂಧಿಸಿದಾಗ ಅಥವಾ ಶಾಂತಿಯುತ ಪ್ರತಿಭಟನೆ ನಡೆಸುವ ವಿರೋಧಿಗಳನ್ನು ಬಂಧಿಸುವಾಗ, ಪ್ರಜಾಪ್ರಭುತ್ವ ಮತ್ತು ನಿರಂಕುಶಾಧಿಕಾರದ ನಡುವಿನ ಅಂತರ ಮಸುಕಾಗುತ್ತದೆ. ಇಲ್ಲಿ ಯಾವುದೇ ಹಿಂಜರಿಕೆಯಿಲ್ಲದೆ ಕಲಿಯಬೇಕಾದ ಪಾಠ ಎಂದರೆ, ಅಸಹಿಷ್ಣುತೆಯನ್ನು ಗೆಲ್ಲುವುದು.

ಈ ವ್ಯಾಧಿಯ ಮೂಲ ಇರುವುದು, ಸಾರ್ವಜನಿಕ ಅಧಿಕಾರ ಪೀಠವನ್ನು ಅಪಾರ್ಥಮಾಡಿಕೊಂಡಿರುವ ಅಪಾಯಕಾರಿ ಧೋರಣೆಯಲ್ಲಿ. ಪ್ರಧಾನಿಯಾಗಲೀ, ಮುಖ್ಯಮಂತ್ರಿಗಳಾಗಲೀ ರಾಜರಲ್ಲ. ಅವರು ಸಾಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವ ಪ್ರಜಾ ಸೇವಕರು; ಸದಾ ಜನರಿಗೆ ಉತ್ತರದಾಯಿಯಾಗಿರುತ್ತಾರೆ. ಅವರನ್ನು ಟೀಕಿಸುವುದು ದೇಶಕ್ಕೆ ಅಥವಾ ರಾಜ್ಯಕ್ಕೆ ಅಪಮಾನ ಮಾಡಿದಂತಾಗುವುದಿಲ್ಲ. ಇದು ಜನತೆ ಪ್ರಜಾಸತ್ತಾತ್ಮಕವಾಗಿ ಪಾಲ್ಗೊಳ್ಳುವ ಒಂದು ಕ್ರಿಯೆ. ಒಮ್ಮೆ ಅಧಿಕಾರವು ತನ್ನನ್ನೇ ದೇಶದೊಡನೆ ಸಮೀಕರಿಸಲು ಆರಂಭಿಸಿದರೆ, ಪ್ರತಿರೋಧವೇ ದ್ರೋಹವಾಗಿಬಿಡುತ್ತದೆ, ಸ್ವಾತಂತ್ರ್ಯವು ಅಪರಾಧವಾಗಿ ಬಿಡುತ್ತದೆ.

ನಿಧಾನವಾಗಿ ವ್ಯವಸ್ಥೆಯಲ್ಲಿ ಬೇರೂರುತ್ತಿರುವ ಈ ಸರ್ವಾಧಿಕಾರಿ ಧೋರಣೆಯನ್ನು ಉನ್ನತ ನ್ಯಾಯಾಂಗವು ಸೂಕ್ಷ್ಮವಾಗಿ ಗಮನಿಸಬೇಕಿದೆ. ಪೆÇಲೀಸ್ ವ್ಯವಸ್ಥೆಯು ರಾಜಕೀಯ ಪ್ರತೀಕಾರದ ಅಸ್ತ್ರಗಳಾಗಿ ಪರಿಣಮಿಸಿದರೆ, ನ್ಯಾಯಾಲಯಗಳು ಕೂಡಲೇ ಮಧ್ಯಪ್ರವೇಶಿಸಿ ಸಮತೋಲನ ಕಾಪಾಡಬೇಕಾಗುತ್ತದೆ. ಪ್ರತಿರೋಧದ ಹಕ್ಕು ಪ್ರಜಾಪ್ರಭುತ್ವದ ಜೀವನಾಡಿ. ಇದಕ್ಕೆ ಚ್ಯುತಿಯಾದರೆ ಚುನಾವಣೆಗಳು ಕೇವಲ ಆಚರಣೆಗಳಾಗುತ್ತವೆ, ನಾಯಕರು ಹೆಸರಿನಿಂದ ಅಲ್ಲದಿದ್ದರೂ, ಉಳಿದ ಎಲ್ಲ ಸ್ತರಗಳಲ್ಲೂ ರಾಜರೇ ಆಗಿಬಿಡುತ್ತಾರೆ.

ಆಧುನಿಕ ಬಿರುದುಗಳಿಂದ ಆವೃತವಾದ ಮಹಾರಾಜರು ಭಾರತಕ್ಕೆ ಅಗತ್ಯವಿಲ್ಲ. ಬದಲಾಗಿ ಈ ದೇಶಕ್ಕೆ ಸಮಚಿತ್ತದಿಂದ ಕೇಳಿಸಿಕೊಳ್ಳುವ, ಸಹಿಷ್ಣುತೆಯ ಪ್ರಬುದ್ಧತೆ ಇರುವ ಮತ್ತು ಟೀಕೆ ಎನ್ನುವುದು ದೇಶದ್ರೋಹ ಅಲ್ಲ, ಬದಲಾಗಿ ಪ್ರಜಾತಂತ್ರ ಉಸಿರಾಡುತ್ತಿರುವುದರ ಸಂಕೇತ ಎಂದು ಅರಿಯುವ ವಿವೇಕವನ್ನು ಹೊಂದಿರುವ ನಾಯಕರು ಅಗತ್ಯವಾಗಿ ಬೇಕಿದ್ದಾರೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again