ರಾಜ್ಯದಲ್ಲಿ ನಾಯಕತ್ವದ ಕಲಹದಿಂದ ಚಲನಹೀನ ಸ್ಥಿತಿಯಲ್ಲಿ ಆಡಳಿತ
ಕರ್ನಾಟಕಕ್ಕೆ ಸುಸ್ಥಿರವಾದ ಸರ್ಕಾರ ಬೇಕೇ ಹೊರತು ಊಹಾಪೋಹಗಳ ವಾತಾವರಣ ಅಲ್ಲ.
..............
ಅಹುದಾದರಹುದೆನ್ನಿ * ಬಿವಿಸೀ
ಕರ್ನಾಟಕದ ರಾಜಕೀಯ ವಾತಾವರಣ ಮತ್ತೊಮ್ಮೆ ಊಹಾಪೋಹಗಳ ನಡುವೆ ಗೊಂದಲದ ಗೂಡಾಗಿದೆ. ಕಾಂಗ್ರೆಸ್ ಸರ್ಕಾರದ ನಾಯಕತ್ವದಲ್ಲಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆ ಜಿಜ್ಞಾಸೆ ಮೂಡಿಸಿದೆ. ಹಲವು ವಾರಗಳ ಕಾಲ ಈ ಪ್ರಶ್ನೆ ರಾಜಕೀಯ ಚರ್ಚೆಗಳನ್ನು ಆವರಿಸಿದ್ದು ಮಾಧ್ಯಮಗಳಲ್ಲಿ ಹಾಗೂ ಸಾರ್ವಜನಿಕರ ನಡುವೆಯೂ ವ್ಯಾಪಕವಾಗಿದೆ. ಪ್ರತಿ ದಿನವೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರನ್ನು ಗುರಿಮಾಡಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದು ಅವರ ಪ್ರತಿಕ್ರಿಯೆಗಳು ಅವರವರ ಸಮರ್ಥನೆಯಲ್ಲೇ ಕೊನೆಗೊಳ್ಳುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿರಂತರ ಒತ್ತಡದಿಂದ ಬೇಸತ್ತು ಪತ್ರಕರ್ತರ ವಿರುದ್ಧವೂ ಕೂಗಾಡಿದ್ದಾರೆ. "ನಿಮಗೆ ಇದನ್ನು ಹೇಳಿದವರ್ಯಾರು, ಹೈಕಮಾಂಡ್ ಏನಾದರೂ ಹೇಳಿದೆಯೇ, ಇದೇ ಪ್ರಶ್ನೆಯನ್ನು ಪದೇಪದೇ ಏಕೆ ಕೇಳುತ್ತಿದ್ದೀರಿ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಮುಜುಗರವನ್ನು ಅರ್ಥಮಾಡಿಕೊಳ್ಳಬಹುದು. ಆದರೂ ಇದು ಆಳುವ ಪಕ್ಷದೊಳಗಿನ ಆತಂಕವನ್ನು ಬಿಂಬಿಸುತ್ತದೆ.
ಆಸಕ್ತಿಕರವಾಗಿ ಮಾಧ್ಯಮದ ಕುತೂಹಲ ಸುಮ್ಮನೆ ಸೃಷ್ಟಿಯಾಗಿಲ್ಲ. ನವಂಬರ್ ಕ್ರಾಂತಿ ಎಂಬ ವಿದ್ಯಮಾನವು ಸರ್ಕಾರದ ಮುಂದಾಳತ್ವವನ್ನು ಬದಲಾಯಿಸುವ ಸೂಚಕವಾಗಿ ಬಳಸಲಾಗುತ್ತಿದ್ದು ಇದನ್ನು ಸಾರ್ವಜನಿಕರ ನಡುವೆ ಪ್ರಚಾರ ಮಾಡಿದವರು ಸಚಿವ ಸಂಪುಟದಲ್ಲಿರುವ ಅವರ ನಿಷ್ಠಾವಂತರೇ ಆಗಿದ್ದಾರೆ. ಸಚಿವರಾದ ಕೆ ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್ ಖಾನ್ ಮೊದಲಾದವರು ನಾಯಕತ್ವದ ಬದಲಾವಣೆಯ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದು ಇದರ ಕಾರಣಗಳು ಅವರಿಗೆ ಮಾತ್ರ ತಿಳಿದಂತಿದೆ. ಇವರ ಹೇಳಿಕೆಗಳು ಅಸ್ಪಷ್ಟವಾಗಿದ್ದರೂ ಪ್ರಚೋದನಾಕಾರಿಯಾಗಿದ್ದು ರಾಜಕೀಯ ವಾತಾವರಣದಲ್ಲಿ ಕುತೂಹಲ ಹೆಚ್ಚಿಸಿದೆ, ಊಹಾಪೆÇೀಹಗಳನ್ನು ಸೃಷ್ಟಿಸಿದೆ. ಆಂತರಿಕ ಗುಸುಗುಸು ಪ್ರಚಾರವಾಗಿ ಆರಂಭವಾದ ಈ ನಿರೂಪಣೆ ಸಾರ್ವಜನಿಕ ಚರ್ಚೆಗೆ ಒಳಪಟ್ಟಿದ್ದು, ಸಿದ್ದರಾಮಯ್ಯ ಮತ್ತು ಶಿವಕುಮಾರ್ ಇಬ್ಬರೂ ಸಹ ವಿಧಿಯಿಲ್ಲದೆ ಸಮಜಾಯಿಷಿ ನೀಡುವಂತಾಗಿದೆ. ಕೆಲವೊಮ್ಮೆ ನಿರಾಕರಿಸಿದ್ದಾರೆ.
ಅನಿಶ್ಚಿತತೆಯ ವಾತಾವರಣವು ಕೇವಲ ಪಕ್ಷ ರಾಜಕಾರಣಕ್ಕೆ ಸೀಮಿತವಾಗಿಲ್ಲ. ಆಡಳಿತದ ಒಳಗೇ ಹಿರಿಯ ಅಧಿಕಾರಿಗಳು ಈ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸುತ್ತಿದ್ದು ತಮ್ಮ ನಿಷ್ಠೆಯ ಬಗ್ಗೆ ಚಿಂತಿತರಾಗಿದ್ದಾರೆ. ರಾಜಕೀಯ ನಾಯಕತ್ವವು ವಿಭಜನೆಯಾದಾಗ ಆಳ್ವಿಕೆ ದಿಕ್ಕು ತಪ್ಪುತ್ತದೆ. ಕಡತಗಳ ವಿಲೇವಾರಿ ತಡವಾಗುತ್ತದೆ, ನಿರ್ಧಾರಗಳನ್ನು ಮುಂದೂಡಲಾಗುತ್ತದೆ, ಆಡಳಿತ ಯಂತ್ರವು ಎಚ್ಚರಿಕೆಯಿಂದ ನಡೆಯುತ್ತದೆ, ಅಥವಾ ಅವಕಾಶವಾದಿ ಮಾದರಿ ಅನುಸರಿಸುತ್ತದೆ. ಈ ರೀತಿಯ ಪಲ್ಲಟಗಳು ತಾತ್ಕಾಲಿಕವಾದರೂ ಸರ್ಕಾರದ ಸಾಮಥ್ರ್ಯಕ್ಕೆ ಧಕ್ಕೆ ಉಂಟುಮಾಡುವುದಲ್ಲದೆ, ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿನ್ನಡೆ ಉಂಟಾಗಿ ಸಾರ್ವಜನಿಕರ ವಿಶ್ವಾಸಕ್ಕೆ ಭಂಗ ತರುತ್ತದೆ.
ಈ ಗೊಂದಲದ ಕೇಂದ್ರ ಬಿಂದು ಇರುವುದು ಕಾಂಗ್ರೆಸ್ ಪಕ್ಷವನ್ನು ಮೊದಲಿನಿಂದಲೂ ಕಾಡುತ್ತಿರುವ ದ್ವಿಮುಖ ನಾಯಕತ್ವ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಸಹಯೋಗ ಸುಲಭವಾಗಿರಲಿಲ್ಲ, ಆದರೂ ಅನಿವಾರ್ಯವಾಗಿತ್ತು. ಇದು ರಾಜಕೀಯ ಸಹಯೋಗಕ್ಕೆ ಪರೀಕ್ಷೆಯೂ ಆಗಿತ್ತು. ಇಬ್ಬರೂ ನಾಯಕರು ತಮ್ಮದೇ ರೀತಿಯಲ್ಲಿ ಪ್ರಬಲರಾಗಿದ್ದು ಒಬ್ಬರು ಸಾಮೂಹಿಕ ನಾಯಕರಾಗಿ ಆಡಳಿತಾತ್ಮಕವಾಗಿ ಸಮರ್ಥರಾಗಿದ್ದರೆ ಮತ್ತೊಬ್ಬರು ಉತ್ತಮ ಸಂಘಟಕರಾಗಿ ಹಣಕಾಸು ಒದಗಿಸುವ ಶಕ್ತಿಯಾಗಿದ್ದಾರೆ. ಈ ಮೈತ್ರಿಯು ಅನಿವಾರ್ಯ ಪರಿಸ್ಥಿತಿಗಳಿಂದ ಏರ್ಪಟ್ಟಿದೆಯೆ ಹೊರತು ಸೌಹಾರ್ದತೆಯಿಂದಲ್ಲ. ಹಾಗಾಗಿ ಇದು ಘರ್ಷಣೆಗೆ ಎಡೆಮಾಡಿಕೊಡುತ್ತದೆ. ಕರ್ನಾಟಕದಂತಹ ರಾಜಕೀಯವಾಗಿ ಕ್ರಿಯಾಶೀಲವಾಗಿರುವ ರಾಜ್ಯದಲ್ಲಿ ಅಸಮಾಧಾನದ ಸಣ್ಣ ಗುಮಾನಿಯೂ ಸಹ ದೊಡ್ಡ ಬಿಕ್ಕಟ್ಟಿನಂತೆ ಸ್ಫೋಟಿಸುತ್ತದೆ.
ಈ ಆತಂಕವನ್ನು ಹೆಚ್ಚು ಮಾಡುವುದು ಹೈಕಮಾಂಡಿನ ಮೌನ. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಪಕ್ಷದೊಳಗೆ ಅಂತಿಮ ತೀರ್ಮಾನ ಕೈಗೊಳ್ಳುವವರಾಗಿದ್ದು, ಈ ವಿಷಯದಲ್ಲಿ ತಟಸ್ಥರಾಗಿದ್ದಾರೆ. ಈ ಊಹಾಪೆÇೀಹಗಳನ್ನು ನಿರಾಕರಿಸುತ್ತಲೂ ಇಲ್ಲ, ಬದಲಾವಣೆಯ ಬಗ್ಗೆ ಮಾತನಾಡುತ್ತಲೂ ಇಲ್ಲ. ಇದು ಸಮತೋಲನ ಕಾಪಾಡುವ ತಂತ್ರ ಇರಬಹುದು. ಆದರೆ ಗೊಂದಲವನ್ನು ಉಲ್ಬಣಿಸುವಂತೆ ಮಾಡಿದೆ. ಸಾಮೂಹಿಕ ನಾಯಕತ್ವವನ್ನು ಎತ್ತಿಹಿಡಿಯುವ ಪಕ್ಷಕ್ಕೆ ಇಂತಹ ಅಸ್ಪಷ್ಟ ನಿಲುವು ತಂತ್ರಗಾರಿಕೆಗಿಂತಲೂ, ಹಿನ್ನಡೆಯಾಗಿ ಕಾಣುತ್ತದೆ.
ಕರ್ನಾಟಕದ ಜನತೆಗೆ ಈ ರಾಜಕೀಯ ಪ್ರಹಸನಗಳು ನಾಟಕಗಳನ್ನೂ ಮೀರಿದಂತೆ ಕಾಣುತ್ತಿವೆ. ಇದು ಆಳ್ವಿಕೆ, ಉತ್ತರದಾಯಿತ್ವ ಮತ್ತು ಆಡಳಿತದ ಗುರಿಯ ಪ್ರಶ್ನೆಗಳಿಗೆ ಎಡೆಮಾಡಿಕೊಡುತ್ತದೆ. ಸರ್ಕಾರವು ಹಣಕಾಸಿನ ಸವಾಲುಗಳನ್ನು ಎದುರಿಸುತ್ತಿರುವಾಗ, ಗ್ರಾಮೀಣ ಬಿಕ್ಕಟ್ಟು, ನಗರಗಳ ಗೊಂದಲ ಎದುರಿಸುತ್ತಿರುವಾಗ, ನಾಯಕರು ಉತ್ತರಾಧಿಕಾರದ ಬಗ್ಗೆ ಮಾತ್ರ ಯೋಚಿಸುವುದು ಪರಿಹಾರಗಳ ಚಿಂತನೆಯನ್ನು ಹಿಮ್ಮೆಟ್ಟಿಸುತ್ತದೆ. ಕಾಂಗ್ರೆಸ್ ಪಕ್ಷವು ತನ್ನ ಆಂತರಿಕ ಕಿತ್ತಾಟಗಳು ಪರಿಣಾಮಕಾರಿ ಆಳ್ವಿಕೆಯನ್ನು ಮಸುಕುಗೊಳಿಸಲು ಅವಕಾಶ ನೀಡಕೂಡದು.
ಹೈಕಮಾಂಡ್ ಈ ರಹಸ್ಯವನ್ನು ಕೊನೆಗೊಳಿಸಿ ಸ್ಪಷ್ಟತೆಯನ್ನು ನೀಡಬೇಕಿದೆ. ಕರ್ನಾಟಕಕ್ಕೆ ಸುಸ್ಥಿರವಾದ ಸರ್ಕಾರ ಬೇಕೇ ಹೊರತು ಊಹಾಪೆÇೀಹಗಳ ವಾತಾವರಣ ಅಲ್ಲ. ಆಳ್ವಿಕೆ ಮುಖ್ಯವಾಗಿದೆಯೇ ಹೊರತು ಗುಮಾನಿಗಳಲ್ಲ. ಇಲ್ಲಿನ ದೊಡ್ಡ ಪ್ರಶ್ನೆ ಎಂದರೆ ಅಂತಿಮವಾಗಿ ನಾಯಕತ್ವ ಯಾರು ವಹಿಸಿಕೊಳ್ಳುತ್ತಾರೆ, ಸಿದ್ದರಾಮಯ್ಯನವರೋ ಅಥವಾ ಶಿವಕುಮಾರ್ ಅವರೋ, ಕಾಂಗ್ರೆಸ್ ಇದನ್ನು ನಿವಾರಿಸುವುದೇ?
Comments
Post a Comment