ಮರುಕಳಿಸುವ ಕಾಲ್ತುಳಿತ ಪ್ರಕರಣಗಳು - ಸ್ಪಷ್ಟ ನೀತಿಯ ಕೊರತೆ

 ಪದೇ ಪದೇ ಸಂಭವಿಸುತ್ತಿರುವ ಕಾಲ್ತುಳಿತಗಳನ್ನು ಹಣೆಬರಹ ಎಂದು ಅಲಕ್ಷಿಸಿದರೆ ಈ ಸಾವುಗಳನ್ನು ತಡೆಗಟ್ಟುವುದು ಸಾಧ್ಯವಾಗುವುದಿಲ್ಲ.


...........


 


ಚಿಂತನೆ * ಬಿವಿಸೀ


ಕಳೆದ ಆರು ತಿಂಗಳ ಅವಧಿಯಲ್ಲಿ ಭಾರತ ಹಲವು ದುರದೃಷ್ಟಕರ ಕಾಲ್ತುಳಿತ ಪ್ರಕರಣಗಳಿಗೆ ಸಾಕ್ಷಿಯಾಗಿದೆ. 11 ಜೀವಗಳನ್ನು ಬಲಿ ತೆಗೆದುಕೊಂಡ ಬೆಂಗಳೂರಿನಿಂದ ತಮಿಳುನಾಡಿನ ಕರೂರುವರೆಗೆ, ಇದೀಗ ಆಂಧ್ರ ಪ್ರದೇಶದ ಶ್ರೀಕಾಕುಳಂನಲ್ಲಿ ಹತ್ತು ಜನ ಅಮಾಯಕರು ಮೃತಪಟ್ಟಿದ್ದಾರೆ. ಪ್ರತಿಯೊಂದು ಪ್ರಕರಣವೂ ವಿಭಿನ್ನ ಪ್ರದೇಶಗಳಲ್ಲಿ ಸಂಭವಿಸಿದ್ದರೂ ಘಟನೆಗಳ ಮಾದರಿ ಒಂದೇ ರೀತಿ ಕಾಣುತ್ತದೆ. ಆಡಳಿತದ ನಿರ್ಲಕ್ಷ್ಯ, ಜನದಟ್ಟಣೆಯ ನಿರ್ವಹಣೆಯ ಕೊರತೆ ಮತ್ತು ರಕ್ಷಣಾ ವ್ಯವಸ್ಥೆಯ ಅಸಮರ್ಪಕ ನಿರ್ವಹಣೆ.

ಕಾಲ್ತುಳಿತಗಳು ಅಪಘಾತಗಳಂತೆ ಸಂಭವಿಸುವುದು ಅಪರೂಪ. ಯೋಜನೆ, ಸಂವಹನ ಮತ್ತು ಉತ್ತರದಾಯಿತ್ವದ ವೈಫಲ್ಯಗಳನ್ನು ಸರಿಪಡಿಸಿದರೆ ಇವುಗಳನ್ನು ತಡೆಗಟ್ಟಬಹುದು. ಮೂಲತಃ ಇಲ್ಲಿ ಕಾಣುವುದು ಸಾಂಸ್ಥಿಕ ನಿಷ್ಕ್ರಿಯತೆ ಮತ್ತು ನಿರ್ಲಕ್ಷ್ಯ. ಸ್ಥಳೀಯ ಪೆÇಲೀಸರಿಂದಲೇ ಅಪಾರ ಸಂಖ್ಯೆಯ ಜನರನ್ನು ನಿಯಂತ್ರಿಸಬಹುದು ಎಂಬುದು ತಪ್ಪು ಕಲ್ಪನೆ. ದೇವಸ್ಥಾನಗಳ ಉತ್ಸವಗಳಲ್ಲಾಗಲೀ, ಸರ್ಕಾರದ ಕಲ್ಯಾಣ ಯೋಜನೆಗಳ ಫಲಾನುಭವಿಗಳಿಗೆ ವಿತರಣೆಯಾಗಲೀ ಅಥವಾ ರಾಜಕೀಯ ಸಭೆಯಾಗಲೀ, ಜನರನ್ನು ನಿಯಂತ್ರಿಸುವುದು ನಿಬರ್ಂಧಕವಾಗಿರುವುದಕ್ಕಿಂತಲೂ ಪ್ರತಿಕ್ರಿಯಾತ್ಮಕವಾಗಿ ಇರುವುದೇ ಹೆಚ್ಚು.

ಸರ್ಕಾರಗಳು ದುರಂತ ಸಂಭವಿಸಿದ ನಂತರ ಪರಿಹಾರಗಳನ್ನು ಘೋಷಿಸುವ ಮಾದರಿಯನ್ನು ಕೈಬಿಟ್ಟು, ರಾಷ್ಟ್ರೀಯ ವಿಪತ್ತು ನಿರ್ವಹಣೆಯ ನೀತಿಯನ್ನು ಶಾಸನಬದ್ಧವಾಗಿ ಜಾರಿಗೊಳಿಸುವ ಮೂಲಕ, ಕಾರ್ಯಾಚರಣೆಗೆ ಸ್ಪಷ್ಟತೆ ನೀಡಬಹುದು. ಈ ನೀತಿಯು ಆಯೋಜಕರಿಗೆ, ಸರ್ಕಾರಿ ಇಲಾಖೆಗಳು ಮತ್ತು ಖಾಸಗಿ ಧಾರ್ಮಿಕ, ಸಾಮಾಜಿಕ ಸಂಸ್ಥೆಗಳಿಗೆ,  ಸವಿವರವಾದ ಅಪಾಯ ತಪ್ಪಿಸುವಂತಹ ಪೂರ್ವ ಪರಿಷ್ಕರಣೆಯನ್ನು ನಡೆಸಲು ಕಡ್ಡಾಯ ಮಾಡಬೇಕು, ಘಟನೆ ನಡೆದ ಗಳಿಗೆಯನ್ನೇ ವಿಡಿಯೋ ರೆಕಾರ್ಡ್ ಮಾಡುವ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಗಳು ಈ ಯೋಜನೆಗಳನ್ನು ಮುಂಚಿತವಾಗಿ ಕೈಗೆತ್ತಿಕೊಂಡಿರಬೇಕು.

ಇಲ್ಲಿ ತಂತ್ರಜ್ಞಾನವೇ ಪ್ರಧಾನವಾಗಿ ಪರಿಸ್ಥಿತಿಯನ್ನು ನಿಭಾಯಿಸಲು ನೆರವಾಗುತ್ತದೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಜನದಟ್ಟಣೆಯನ್ನು ಗಮನಿಸುವ ವಿಧಾನಗಳು, ಮೊಬೈಲ್ ಮೂಲಕ ನೋಂದಣಿ ಮಾಡಿಸುವುದು ಅಥವಾ ಟೋಕನ್ ವ್ಯವಸ್ಥೆಯನ್ನು ಜಾರಿಗೊಳಿಸುವುದು, ಜನಜಂಗುಳಿಯನ್ನು ನಿರ್ವಹಿಸಲು ಅಲ್ಲದೆ, ಭೌತಿಕವಾಗಿ ಸಾಲುಗಟ್ಟಿ ನಿಲ್ಲುವ ಗೊಂದಲವನ್ನು ಪರಿಹರಿಸುತ್ತದೆ. ಸ್ಥಳೀಯ ಪೆÇಲೀಸರಿಗೆ ಮತ್ತು ಸ್ವಯಂಸೇವಕರಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುವ ವರ್ತನೆಯ ಬಗ್ಗೆ ತರಬೇತಿ ನೀಡಿ, ಆತಂಕಕಾರಿ ಪರಿಸ್ಥಿತಿಯನ್ನು ನಿಯಂತ್ರಿಸುವ ವಿಧಾನಗಳನ್ನು ಕಲಿಸುವುದು ನಿರ್ಣಾಯಕ ಸುಧಾರಣೆಗೆ ಕಾರಣವಾಗುತ್ತದೆ.

ಅಷ್ಟೇ ಮುಖ್ಯವಾದ ಅಂಶ ಎಂದರೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು. ಜನರು ವಿತರಣಾ ಕೇಂದ್ರಗಳಿಗೆ ಧಾವಿಸುವುದು, ದೇವರ, ನಾಯಕರ ದರ್ಶನಕ್ಕಾಗಿ ಮುನ್ನುಗ್ಗುವುದು ಆ ಕ್ಷಣದಲ್ಲಿ ಉನ್ಮಾದ ಸೃಷ್ಟಿಸುತ್ತದೆ. ಸಂಯೋಜಕರು ಮತ್ತು ಸ್ಥಳೀಯ ಸಂಸ್ಥೆಗಳು ಸಾರ್ವಜನಿಕವಾಗಿ ಸಲಹೆ ನೀಡುವ ವ್ಯವಸ್ಥೆಯನ್ನು ಅಳವಡಿಸಿ ಸ್ವಯಂಸೇವಕರನ್ನು ನೇಮಿಸಿ ಜನಸಂದಣಿಯನ್ನು ಚದುರಿಸಲು ನೆರವಾಗಬಹುದು.

ಇಲ್ಲಿ ಉತ್ತರದಾಯಿತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ. ಈವರೆಗಿನ ಪ್ರತಿಯೊಂದು ಘಟನೆಯಲ್ಲೂ ಸಮಿತಿಗಳನ್ನು ರಚಿಸಿದ್ದು, ವರದಿಗಳನ್ನು ಸಲ್ಲಿಸಲಾಗಿದೆ. ಅದರೆ ಕೆಲವು ಮಾತ್ರ ಶಿಕ್ಷೆಯಲ್ಲಿ ಕೊನೆಯಾಗಿದೆ ಅಥವಾ ರಚನಾತ್ಮಕ ಬದಲಾವಣೆಗೆ ಕಾರಣವಾಗಿದೆ. ಜಿಲ್ಲಾ ಅಧಿಕಾರಿಗಳು, ಆಯೋಜಕರಲ್ಲಿ ಮುಖ್ಯಸ್ಥರು, ಸಂಘಟನೆಯ ಟ್ರಸ್ಟಿಗಳು ಆಡಳಿತಾತ್ಮಕವಾಗಿ ಕ್ರಮ ಕೈಗೊಳ್ಳುವುದು, ನಿರ್ಲಕ್ಷ್ಯಗಳನ್ನು ತಪ್ಪಿಸುತ್ತದೆ.

ಭಾರತದ ಸಾಮಾಜಿಕ ಬದುಕು ಧಾರ್ಮಿಕವಾಗಿ, ಸಾಂಸ್ಕøತಿಕವಾಗಿ, ರಾಜಕೀಯವಾಗಿ ಜನರನ್ನು ಒಂದೆಡೆ ಸೇರಿಸುವ ಪದ್ಧತಿಯಲ್ಲಿ ರೂಪುಗೊಂಡಿದೆ. ಆದರೆ ಹೀಗೆ ಜನರು ಸೇರುವುದನ್ನು ರಕ್ಷಣೆಯ ಹಕ್ಕುಗಳ ದೃಷ್ಟಿಯಿಂದ ನೋಡಬೇಕಿದೆ. ಪದೇ ಪದೇ ಸಂಭವಿಸುತ್ತಿರುವ ಕಾಲ್ತುಳಿತಗಳನ್ನು ಹಣೆಬರಹ ಎಂದು ಅಲಕ್ಷಿಸಿದರೆ ಈ ಸಾವುಗಳನ್ನು ತಡೆಗಟ್ಟುವುದು ಸಾಧ್ಯವಾಗುವುದಿಲ್ಲ. ರಾಜ್ಯ ಸರ್ಕಾರಗಳು, ಆಯೋಜಕರು, ನಾಗರಿಕರು ಜನಸಂದಣಿಯನ್ನು ನಿರ್ವಹಿಸುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಿ ಘಟನೆ ನಡೆದ ನಂತರ ಯೋಚಿಸುವ ಬದಲು, ಶಿಸ್ತುಬದ್ಧವಾಗಿ ಮುಂಚಿತವಾಗಿಯೆ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಸಿದ್ಧಪಡಿಸಬೇಕಿದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again