ರಾಜ್ಯ ಬಿಜೆಪಿಯ ಕುಸಿತಕ್ಕೆ ಸ್ವತಃ ಪಕ್ಷವೇ ಕಾರಣ

 ಕೆಂದ್ರ ಸರ್ಕಾರವು ಕರ್ನಾಟಕದ ಆಶೋತ್ತರಗಳ ಬಗ್ಗೆ ಅಸೂಕ್ಷ್ಮತೆಯಿಂದ ವರ್ತಿಸುತ್ತಿರುವುದು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ.

.............

ಅಲವಾದರಲವೆನ್ನಿ* ಬಿವಿಸೀ

ಭಾರತೀಯ ಜನತಾ ಪಕ್ಷದ ಕರ್ನಾಟಕದ ಘಟಕವು ರಾಜಕೀಯ ಕವಲು ಹಾದಿಯಲ್ಲಿದೆ. ಒಂದು ಸಮಯದಲ್ಲಿ ದಕ್ಷಿಣದ ಬೇಲಿಗಳನ್ನು ಮುರಿದು ಒಳನುಗ್ಗಿದ್ದ ಕೇಸರಿ ಪಕ್ಷ ಈಗ ನಾಯಕರಿಲ್ಲದ, ನಾವಿಕರಿಲ್ಲದ, ಲಂಗರು ಇಲ್ಲದ, ಸೈದ್ಧಾಂತಿಕವಾಗಿ ದಣಿದಿರುವ ಪಕ್ಷದಂತೆ ಕಾಣುತ್ತಿದೆ. ನಿಜವಾದ ಬಿಕ್ಕಟ್ಟು ಇರುವುದು ಚುನಾವಣೆಯ ಪರಾಭವದಲ್ಲಿ ಅಲ್ಲ; ಬದಲಾಗಿ, ಜನಪರವಾಗಿ ನಿರೂಪಣೆಯನ್ನು ರೂಪಿಸುವ ವೈಫಲ್ಯದಲ್ಲಿ. ಬಿಜೆಪಿ ತಾನೊಂದು ಪರಿಣಾಮಕಾರಿ ವಿರೋಧ ಪಕ್ಷ ಎನ್ನುವುದನ್ನೇ ಮರೆತಿದ್ದು, ಕರ್ನಾಟಕದಲ್ಲಿ ಕಂಡಿದ್ದ ರಾಜಕೀಯ ಕನಸನ್ನು ಕಾಂಗ್ರೆಸ್‍ಗೆ ಬಿಟ್ಟುಕೊಟ್ಟಿದೆ.

ಅಧಿಕಾರದಲ್ಲಿದ್ದಾಗ ಬಿಜೆಪಿ ಬಿ ಎಸ್ ಯಡಿಯೂರಪ್ಪ ಅವರ ನಾಯಕತ್ವ ಮತ್ತು ವರ್ಚಸ್ಸನ್ನು ಅವಲಂಬಿಸಿತ್ತು. ಅಧಿಕಾರ ಕೇಂದ್ರದಿಂದ ಯಡಿಯೂರಪ್ಪ ನಿರ್ಗಮನವು ನಿರ್ವಾತವನ್ನು ಸೃಷ್ಟಿಸಿದ್ದು, ಇದನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಇಂದಿನ ರಾಜ್ಯ ನಾಯಕತ್ವವು, ಆರ್ ಅಶೋಕ, ಸಿ ಟಿ ರವಿ, ಬಿ ವೈ ವಿಜಯೇಂದ್ರ ಮತ್ತು ಸುನೀಲ್ ಕುಮಾರ್, ಜನಾಕರ್ಷಣೆಯೂ ಇಲ್ಲದೆ, ಪಕ್ಷದ ವಿಶ್ವಸನೀಯತೆಯನ್ನು ಮರಳಿ ಪಡೆಯುವಂತಹ ಕಾರ್ಯತಂತ್ರ ಮತ್ತು ಕ್ಷಮತೆ ಇಲ್ಲದವರಾಗಿದ್ದಾರೆ. ಇವರು ಬಹುಮಟ್ಟಿಗೆ ಪಕ್ಷದ ಪದಾಧಿಕಾರಿಗಳಾಗಿ ವರ್ತಿಸುತ್ತಿದ್ದು ಸಾರ್ವಜನಿಕ ಅಭಿಪ್ರಾಯ ರೂಪಿಸುವ ನಾಯಕರಾಗಿ ಕಾಣುತ್ತಿಲ್ಲ. ಮಾರ್ಗದರ್ಶನಕ್ಕಾಗಿ ರಾಜ್ಯ ಬಿಜೆಪಿ ದೆಹಲಿಯನ್ನೇ ಅವಲಂಬಿಸುವುದು ಅದರ ಅಸ್ತಿತ್ವವನ್ನು ಮತ್ತು ಅಸ್ಮಿತೆಯನ್ನು ಕೇಂದ್ರ ಹೈಕಮಾಂಡಿನ ವಿಸ್ತರಣೆಯಾಗಿ ಮಾಡಿದ್ದು, ದೆಹಲಿ ವರಿಷ್ಠರು ಕನ್ನಡ ಮತದಾರರೊಡನೆ ಇದ್ದ ಭಾವನಾತ್ಮಕ ಸಂಪರ್ಕವನ್ನು ಕಡಿದುಹಾಕಿದ್ದಾರೆ.

ಮತ್ತೊಂದು ಬದಿಯಲ್ಲಿ ಕಾಂಗ್ರೆಸ್ ಜಾಣ್ಮೆಯಿಂದ ತನ್ನ ರಾಜಕೀಯವನ್ನು ಪುನರ್ ನಿರ್ವಚನೆ ಮಾಡಿದ್ದು, ಸ್ಥಳೀಯ ಹೆಮ್ಮೆ ಮತ್ತು ಕಲ್ಯಾಣ ಯೋಜನೆಗಳ ಜನಪ್ರಿಯತೆಯ ಸುತ್ತ ನಿರ್ಮಿಸಿದೆ. ಗೃಹ ಲಕ್ಷ್ಮಿ ಮತ್ತು ಅನ್ನ ಭಾಗ್ಯದಂತಹ ಯೋಜನೆಗಳ ಮೂಲಕ ಸರ್ಕಾರವು ಜನಕಲ್ಯಾಣ ಎಂದರೆ ಕೇವಲ ಉಚಿತವಾಗಿ ನೀಡುವುದಲ್ಲ, ಅದನ್ನೂ ಮೀರಿ ಜನರ ಘನತೆಯನ್ನು ಕಾಪಾಡುವುದು ಎಂಬುದನ್ನು ನಿರೂಪಿಸಿದೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಆಳ್ವಿಕೆಯೊಡನೆ ಭಾವನಾತ್ಮಕತೆಯನ್ನೂ ಬೆಸೆದಿದ್ದು, ಕನ್ನಡ ಅಸ್ಮಿತೆ ಮತ್ತು ಸಾಮಾಜಿಕ ನ್ಯಾಯವನ್ನು ರಾಜಕೀಯ ಅಸ್ತ್ರಗಳನ್ನಾಗಿ ಬಳಸುತ್ತಿದ್ದಾರೆ. ಏತನ್ಮಧ್ಯೆ ಬಿಜೆಪಿ ತಾನೇ ಸೃಷ್ಟಿಸಿಕೊಂಡ ಗೋಜಲಿನಲ್ಲಿ ಸಿಲುಕಿದ್ದು, ಅಸ್ತಿತ್ವಕ್ಕಾಗಿ ಹಿಂದುತ್ವ ರಾಜಕಾರಣವನ್ನೇ ಅವಲಂಬಿಸಿದೆ. ಇದು ಬೆಲೆ ಏರಿಕೆ ಮತ್ತು ನಿರುದ್ಯೋಗದೊಂದಿಗೆ ಕೃಷಿ ಬಿಕ್ಕಟ್ಟಿನೊಂದಿಗೆ ಸೆಣಸಾಡುತ್ತಿರುವ ಸಾಮಾನ್ಯ ಜನತೆಗೆ ಸ್ಪಂದಿಸುವಂತಾಗುವುದಿಲ್ಲ.

ಸಾಂಸ್ಕøತಿಕ ಮತ್ತು ಧಾರ್ಮಿಕ ವಿಷಯಗಳಲ್ಲೇ ಮುಳುಗಿರುವ ಬಿಜೆಪಿ, ಟಿಪ್ಪು ಸುಲ್ತಾನ್ ವಿವಾದ, ಪಠ್ಯಪುಸ್ತಕ ವಿವಾದ ಮತ್ತು ಲವ್ ಜಿಹಾದ್ ಘೋಷಣೆಗಳಲ್ಲೇ ತನ್ನ ಅಸ್ತಿತ್ವ ಗುರುತಿಸಿಕೊಳ್ಳುತ್ತಿರುವುದರಿಂದ, ಪ್ರಬುದ್ಧ ಮತದಾರರಿಂದ ದೂರ ಸರಿಯುತ್ತಿದೆ. ಈ ವಿಷಯಗಳು ತಾತ್ಕಾಲಿಕ, ಅಲ್ಪಾವಧಿಯ ಲಾಭ ಮತ್ತು ಜನರನ್ನು ಕ್ರೋಢೀಕರಿಸುವ ಅವಕಾಶ ಕಲ್ಪಿಸಿದ್ದರೂ, ಇಂದು ಇದರ ಪುನರಾವರ್ತನೆಯಾಗುತ್ತಿರುವುದು ಜನರ ನಿತ್ಯ ಜೀವನದ ಬವಣೆಗಳಿಂದ ವಿಮುಖವಾಗಿವೆ. ನಿಷ್ಠಾವಂತ ಬಿಜೆಪಿ ಮತದಾರರಲ್ಲೂ ಸಹ ಹಿಂದುತ್ವದ ಬಗ್ಗೆ ಹತಾಶೆ ಇರುವುದು ಎದ್ದುಕಾಣುತ್ತಿದೆ.

ಇದಕ್ಕೆ ಸೇರಿದಂತೆ, ಕೆಂದ್ರ ಸರ್ಕಾರವು ಕರ್ನಾಟಕದ ಆಶೋತ್ತರಗಳ ಬಗ್ಗೆ ಅಸೂಕ್ಷ್ಮತೆಯಿಂದ ವರ್ತಿಸುತ್ತಿರುವುದು ಸಮಸ್ಯೆಯನ್ನು ಉಲ್ಬಣಿಸುವಂತೆ ಮಾಡಿದೆ. ಪ್ರವಾಹ ಪರಿಹಾರದ ಅಸಮರ್ಪಕ ವಿತರಣೆ, ಪ್ರಾದೇಶಿಕ ಬೇಡಿಕೆಗಳ ನಿರ್ಲಕ್ಷ್ಯದ ಮೂಲಕ ದೆಹಲಿಯ ಕೇಂದ್ರ ನಾಯಕತ್ವವು ಹಿಂದಿ ಕೇಂದ್ರಿತವಾಗಿ ಕಾಣುತ್ತಿದ್ದು ರಾಜ್ಯವನ್ನು ತಿರಸ್ಕರಿಸಿದಂತೆ ಕಾಣುತ್ತಿದೆ. ಉತ್ತರ ಭಾರತದ ಅಮಿತ್ ಶಾ ಮತ್ತು ಯೋಗಿ ಆದಿತ್ಯನಾಥ್ ಅವರನ್ನು ಪ್ರಚಾರಕರಾಗಿ ಬಳಸುವ ಮೂಲಕ ಕರ್ನಾಟಕ ಒಂದು ಸೈದ್ಧಾಂತಿಕ ಕಾಲೋನಿ ಎಂಬಂತೆ ವರ್ತಿಸಲಾಗುತ್ತಿದ್ದು, ರಾಜ್ಯವನ್ನು ರಾಷ್ಟ್ರೀಯ ಯೋಜನೆಯ ಒಂದು ಭಾಗ ಎಂದು ಪರಿಗಣಿಸಿದಂತಾಗುತ್ತಿಲ್ಲ. ಇದು ಕರ್ನಾಟಕದ ರಾಷ್ಟ್ರೀಯವಾದಿ ಮತದಾರರಲ್ಲಿ ಭ್ರಮನಿರಸನ ಉಂಟುಮಾಡಿದ್ದು, ಬಿಜೆಪಿಯ ವಿಶಾಲ ದೃಷ್ಟಿಕೋನವನ್ನು ಮೆಚ್ಚುವವರೂ ಹಿಮ್ಮೆಟ್ಟುತ್ತಿದ್ದಾರೆ.

ಇಲ್ಲಿ ಸಂದೇಶ ಸ್ಪಷ್ಟವಾಗಿ ಪ್ರಕಟವಾಗಿದೆ. ಪ್ರಾದೇಶಿಕ ಆತ್ಮದ ಚಹರೆ ಇಲ್ಲದೆ, ಹೊಸ ನೀತಿ ಕಾರ್ಯಸೂಚಿ ಇಲ್ಲದೆ, ಜನರ ವಾಸ್ತವಿಕ ಸಮಸ್ಯೆಗಳಿಗೆ ಸ್ಪಂದಿಸುವ ಸರಳತೆ ಇಲ್ಲದಿದ್ದರೆ, ಬಿಜೆಪಿ, ತಾನು ಒಂದು ಕಾಲದಲ್ಲಿ ದಕ್ಷಿಣ ಭಾರತದಲ್ಲಿ ಹೆಜ್ಜೆಯೂರಲು ಪ್ರಯೋಗಿಸಿದ ರಾಜ್ಯದಲ್ಲೇ ಅಪ್ರಸ್ತುತವಾಗುತ್ತದೆ. ಕಾಂಗ್ರೆಸ್ ಬಿಜೆಪಿಯನ್ನು ಕೇವಲ ಚುನಾವಣೆಗಳಲ್ಲಿ ಪರಾಭವಗೊಳಿಸಿಲ್ಲ. ಬೌದ್ಧಿಕವಾಗಿ, ಭಾವನಾತ್ಮಕವಾಗಿ ಹಿಮ್ಮೆಟ್ಟಿಸಿದೆ.

ಕೇಸರಿ ಪಕ್ಷವು ಜನತೆ ಬದಲಾದ ಭಾವನೆಗಳನ್ನು ಅರ್ಥಮಾಡಿಕೊಳ್ಳದೆ ಹೋದರೆ, ಜವಾಬ್ದಾರಿಯುತ ವಿರೋಧ ಪಕ್ಷವಾಗಿ ಮರುರೂಪಿಸಿಕೊಳ್ಳದೆ ಹೋದರೆ, ಕರ್ನಾಟಕ ಶೀಘ್ರದಲ್ಲೇ ತಮಿಳುನಾಡು ಮತ್ತು ಕೇರಳದ ಮಾದರಿಯನ್ನು ಅನುಸರಿಸುತ್ತದೆ. ಅಲ್ಲಿ ಬಿಜೆಪಿ ಕೇವಲ ನಾಮಕಾವಸ್ತೆಯ ಪಕ್ಷವಾಗಿದೆ. ಈ ಕುಸಿತವು ಹೊರಗಿನಿಂದ ಹೇರಿರುವುದಲ್ಲ; ಬದಲಾಗಿ ಸ್ವಯಂಕೃತ ಅಪರಾಧ ಎನ್ನುವುದು ಗಮನಿಸಬೇಕಾದ ಸಂಗತಿ

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again