ಸಂಘಟಿತ ಮತಗಳು ಅವಸಾನ ಹೊಂದುತ್ತಿವೆಯೇ?
ವೈಯಕ್ತಿಕ ಪ್ರಗತಿ ಮತ್ತು ಪಾರದರ್ಶಕತೆಯ ಈ ಯುಗದಲ್ಲಿ ಜನರು ತಮ್ಮ ಪ್ರಜ್ಞೆಯನ್ನು ಯಾವುದೇ ಅಧಿಕಾರ ಕೇಂದ್ರದ ಮುಂದೆ ಒತ್ತೆ ಇಡಲು ಒಪ್ಪುವುದಿಲ್ಲ.
............
ಅಲವಾದರಲವೆನ್ನಿ * ಬಿವಿಸೀ
ಸಂಘಟಿತ ಮತ ಅಥವಾ ಧರ್ಮಗಳು ಒಂದು ಕಾಲದಲ್ಲಿ ಮಾನವನ ನಾಗರಿಕತೆಯ ಆಧಾರ ಸ್ತಂಭವಾಗಿದ್ದವು; ಪ್ರಸ್ತುತ ಸನ್ನಿವೇಶದಲ್ಲಿ ಅಭೂತಪೂರ್ವ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಮಸೀದಿ, ದೇವಾಲಯ, ಚರ್ಚ್‍ಗಳಿಗೆ ಹೋಗುವವರ ಸಂಖ್ಯೆ ಕಡಿಮೆಯಾಗಿರುವುದಷ್ಟೇ ಅಲ್ಲದೆ, ಸಾಂಸ್ಥಿಕ ವಿಶ್ವಾಸವು ಕುಂದಿರುವುದು, ನೈತಿಕ ಅಧಿಕಾರ ಮತ್ತು ಆಧ್ಯಾತ್ಮಿಕ ಪ್ರಸ್ತುತತೆಯ ಬಗ್ಗೆ ನಂಬಿಕೆ ಕುಂದುತ್ತಿರುವುದೂ ಈ ಬೆಳವಣಿಗೆಯ ಸೂಚನೆಯಾಗಿ ಕಾಣುತ್ತದೆ. `ಸಂಘಟಿತ ಧರ್ಮ ಸಾಯುತ್ತಿದೆಯೇ?' ಎಂಬ ವಿಡಿಯೋ ಈ ಮನ್ವಂತರವನ್ನು ವಿಭಿನ್ನ ಆಯಾಮಗಳಲ್ಲಿ ಹಿಡಿದಿಡುತ್ತದೆ. ಇಲ್ಲಿ ಮಂಡಿಸುವ ವಾದಗಳು ನಮ್ಮ ಸುತ್ತಲಿನ ಸನ್ನಿವೇಶಗಳಿಗೆ ಕನ್ನಡಿ ಹಿಡಿದಂತೆ ಕಾಣುತ್ತದೆ. ಮಾಹಿತಿ, ವ್ಯಕ್ತಿ ಕೇಂದ್ರಿತ ನಿಲುವು, ನೈತಿಕತೆ ಇವೆಲ್ಲವೂ ಯಾವುದೇ ಸಂಘಟಿತ ಧರ್ಮ ಅಥವಾ ಸಂಪ್ರದಾಯದ ನಿಯಂತ್ರಣಕ್ಕೆ ಸಿಲುಕುತ್ತಿಲ್ಲ.
ಇಲ್ಲಿ ಮುಖ್ಯ ಸಮಸ್ಯೆ ಇರುವುದು ಶ್ರದ್ಧೆ, ಭಕ್ತಿಗಳ ಸಾಂಸ್ಥೀಕರಣ. ತನ್ನ ಮೂಲ ರೂಪದಲ್ಲಿ ಮತಗಳು ಅಥವಾ ಧರ್ಮಗಳು ಆಂತರಿಕ ಪಯಣದ ಮೂಲಕ ಜೀವನದ ಅರ್ಥವನ್ನು ತಿಳಿದುಕೊಳ್ಳಲು ಆರಂಭವಾದವು. ಆದರೆ ಸಂಘಟಿತ ಧರ್ಮಗಳು ಇದನ್ನು ಶ್ರೇಣೀಕರಣಕ್ಕೊಳಪಡಿಸಿ, ವಿಧಿವಿಧಾನ ಆಚರಣೆಗಳ ಮೂಲಕ ನಿಯಂತ್ರಣ ಸಾಧಿಸಿದವು. ಕಾಲ ಕಳೆದಂತೆ ವಿವಿಧ ಧರ್ಮಗಳ ಪುರೋಹಿತ ಶಾಹಿ, ಪಾದ್ರಿಗಳು, ಸ್ವಾಮಿಗಳು, ಧರ್ಮಾಧಿಕಾರಿಗಳು, ಮುಲ್ಲಾಗಳು ಮನುಷ್ಯ ಮತ್ತು ದೇವರ ನಡುವೆ ಮಧ್ಯಸ್ತಿಕೆ ವಹಿಸಲಾರಂಭಿಸಿದರು. ತತ್ಪರಿಣಾಮವಾಗಿ, ನಿರೀಕ್ಷೆಯಂತೆ ಕೆಲವೇ ಜನರಲ್ಲಿ ಅಧಿಕಾರ ಕೇಂದ್ರೀಕರಣವಾಗತೊಡಗಿತ್ತು. ಆಧ್ಯಾತ್ಮ ಎನ್ನುವುದು ವಿಧೇಯತೆಯ ವ್ಯವಸ್ಥೆಯಾಯಿತು. ವೈಯುಕ್ತಿಕ ಪ್ರಗತಿ ಮತ್ತು ಪಾರದರ್ಶಕತೆಯ ಈ ಯುಗದಲ್ಲಿ ಜನರು ತಮ್ಮ ಪ್ರಜ್ಞೆಯನ್ನು ಯಾವುದೇ ಅಧಿಕಾರ ಕೇಂದ್ರದ ಮುಂದೆ ಒತ್ತೆ ಇಡಲು ಒಪ್ಪುವುದಿಲ್ಲ.
ಧಾರ್ಮಿಕ ಸಂಸ್ಥೆಗಳ ನೈತಿಕ ವೈಫಲ್ಯಗಳು ಜನರಲ್ಲಿ ಪ್ರತ್ಯೇಕತೆಯ ಭಾವನೆ ಉಲ್ಬಣಿಸುವಂತೆ ಮಾಡಿವೆ. ಎಲ್ಲ ಸಂಪ್ರದಾಯಗಳಲ್ಲೂ ಕಾಣಬಹುದಾದ ಅಂಶ ಇದಾಗಿದೆ. ಚರ್ಚ್‍ಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯದ ಹಗರಣಗಳು, ಇಸ್ಲಾಂ ಧರ್ಮದಲ್ಲಿ ಕೆಲವು ವರ್ಗಗಳ ಉಗ್ರಗಾಮಿತ್ವ, ಹಿಂದೂ ಸ್ವಘೋಷಿತ ದೇವಮಾನವರ ಠಕ್ಕುತನ ಇವೆಲ್ಲವೂ ಧರ್ಮಗಳನ್ನು ತಮ್ಮ ಮೌಲ್ಯ ಕಾಪಾಡಿಕೊಳ್ಳಲು ಅಡ್ಡಿಯಾಗಿವೆ. ಅನುಕಂಪ, ಸಹಾನುಭೂತಿಯ ಬದಲು ಭಕ್ತರನ್ನು ಹಿಡಿದಿಟ್ಟುಕೊಂಡು ಶೋಷಿಸಲು ಪೈಪೆÇೀಟಿ ಹೆಚ್ಚಾಗಿದೆ. ಸಂಯಮ, ಸರಳತೆಗಿಂತಲೂ ರಾಜಕೀಯ ಆಕಾಂಕ್ಷೆ ಮೇಲುಗೈ ಸಾಧಿಸಿದೆ. ಯುವ ಜನಾಂಗವು ವಿಮರ್ಶಾತ್ಮಕ ಚಿಂತನಾ ಕ್ರಮಗಳ ಮೂಲಕವೇ ಬೆಳೆದಿದ್ದು, ಡಿಜಿಟಲ್ ಸಾಧನಗಳ ಬಳಕೆಗೆ ಒಡ್ಡಿಕೊಂಡಿರುವ ಸನ್ನಿವೇಶದಲ್ಲಿ ಈ ವಿರೋಧಾಭಾಸಗಳನ್ನು ಗಮನಿಸುತ್ತಿರುತ್ತದೆ. ಇಲ್ಲಿ ಸರಳವಾದ ಪ್ರಶ್ನೆ ಎಂದರೆ, ತಾವು ಬೋಧಿಸುವುದನ್ನು ಧರ್ಮಗಳು ಮತ್ತು ಅವುಗಳ ಪ್ರವರ್ತಕರು ಅನುಸರಿಸಲು ಸಾಧ್ಯವಾಗದಿದ್ದರೆ, ಅದನ್ನು ಜನಸಾಮಾನ್ಯರು ಏಕೆ ಅನುಕರಿಸಬೇಕು?
ಆಧುನಿಕ ಜಗತ್ತು ಧರ್ಮಗಳ ಹಳೆಯ ಉತ್ತರಗಳನ್ನು ಮೀರಿ ಬೆಳೆದಿದೆ. ಶತಮಾನಗಳ ಕಾಲ ಧರ್ಮಗಳು ಸಂಕಟ, ನೋವು, ನೈತಿಕತೆ ಮತ್ತು ಗುರಿಸಾಧನೆಗೆ ವಿವರಣೆ ನೀಡುತ್ತಿದ್ದವು. ಆದರೆ ವಿಜ್ಞಾನ ಮತ್ತು ಮನಶ್ಶಾಸ್ತ್ರ, ಮಾನವತಾವಾದ ಚಿಂತನೆಗಳು ಈಗ ಇನ್ನೂ ಒಪ್ಪಬಹುದಾದಂತಹ ಒಳಗೊಳ್ಳುವ ವ್ಯಾಖ್ಯಾನಗಳನ್ನು ಜನರ ಮುಂದಿಡುತ್ತವೆ. ಜೀವನದ ಅರ್ಥವನ್ನು ವ್ಯಕ್ತಿಯೊಬ್ಬ ಈಗ ಕಲೆ, ತತ್ವಶಾಸ್ತ್ರ, ಸಾಮಾಜಿಕ ಸೇವೆ, ಪ್ರಜ್ಞಾವಂತಿಕೆಯ ಮೂಲಕ ಕಂಡುಕೊಳ್ಳಬಹುದು. ಇದಾವುದಕ್ಕೂ ಧರ್ಮಗಳ ಪುರಾತನ ಬೋಧನೆಗಳು ಬೇಕಾಗುವುದಿಲ್ಲ. ಸೆಕ್ಯುಲರ್ ಮೌಲ್ಯಗಳು ಮತ್ತು ಆಧ್ಯಾತ್ಮಿಕ ಮಾನವತಾವಾದಗಳು ಈ ಮನ್ವಂತರವನ್ನು ಸೂಚಿಸುತ್ತವೆ. ಜನರು ಈಗಲೇ ಅತೀತತೆಯನ್ನು ಬಯಸುತ್ತಾರೆ ಆದರೆ ದೈವತ್ವದ ಮೇಲೆ ಏಕಸ್ವಾಮ್ಯ ಸಾಧಿಸುವ ಸಂಸ್ಥೆಗಳ ಮೂಲಕ ಅಲ್ಲ .
ಆದಾಗ್ಯೂ ಈಗ ಕಾಣುತ್ತಿರುವುದು ನಾಸ್ತಿಕತೆ ಅಲ್ಲ ಆಧ್ಯಾತ್ಮಿಕ ಸ್ವಾತಂತ್ರ್ಯ. ಜನರು ಶ್ರದ್ಧೆಯನ್ನು ತಿರಸ್ಕರಿಸುತ್ತಿಲ್ಲ, ಮರು ನಿರ್ವಚನೆ ಮಾಡುತ್ತಿದ್ದಾರೆ. ಹಾಗಾಗಿಯೇ ಧ್ಯಾನ, ಯೋಗ, ಅಂತರ್‍ಧರ್ಮೀಯ ಸಂವಾದಗಳು ಹೆಚ್ಚಾಗುತ್ತಿದ್ದು, ಇದು ಧರ್ಮದ ಚೌಕಟ್ಟುಗಳಿಂದಾಚೆಗೆ ನಡೆಯುತ್ತವೆ. ಇದು ಅಭ್ಯುದಯದ ಹಾದಿಯಾಗಿದ್ದು, ವಿನಾಶದ ಹಾದಿ ಅಲ್ಲ. ಧರ್ಮ ಒಂದು ಸಂರಚನೆಯಾಗಿ ಅವಸಾನ ಹೊಂದುತ್ತಿದೆ. ಆಧ್ಯಾತ್ಮ ವೈಯುಕ್ತಿಕ ಅನುಭವದ ಮೂಲಕ ಪುನರ್‍ಜನ್ಮ ಪಡೆಯುತ್ತಿದೆ.
ಸಂಘಟಿತ ಧರ್ಮಗಳ ದೌರ್ಬಲ್ಯ ಸ್ವಯಂಕೃತ ಅಪರಾಧವಾಗಿದೆ. ವಿನಮ್ರತೆ, ವಿಧೇಯತೆಯನ್ನು ಶ್ರದ್ಧೆ ಎಂದು ತಪ್ಪಾಗಿ ಭಾವಿಸುವ ಮೂಲಕ, ಬದ್ಧತೆಯನ್ನು ಸಮುದಾಯಕ್ಕೆ ಸಮೀಕರಿಸುವುದರ ಮೂಲಕ, ಸಂಪತ್ತನ್ನು ದೈವೀಕ ಸಮ್ಮತಿ ಎಂದು ಭಾವಿಸುವುದರ ಮೂಲಕ ತನ್ನ ಅವಸಾನಕ್ಕೆ ಕಾರಣವಾಗುತ್ತಿದೆ. ಅಧಿಕಾರಕ್ಕೆ ಅಂಟಿಕೊಳ್ಳುವುದು ಧರ್ಮಗಳ ವಿಶ್ವಾಸಾರ್ಹತೆಯನ್ನು ನಾಶಪಡಿಸಿದೆ. ಮಾನವ ಸಮಾಜವು ಸಾಂಸ್ಥಿಕತೆಯಿಂದ ಪಾವಿತ್ರ್ಯತೆಯನ್ನು ಪಡೆದುಕೊಳ್ಳುತ್ತಿದೆ. ಭವಿಷ್ಯವು ಬದ್ಧತೆಯನ್ನು ಬಯಸುವ ಧರ್ಮಗಳಿಗೆ ಸೇರುವುದಿಲ್ಲ; ಬದಲಾಗಿ, ಜಾಗೃತಿಗೆ ಅವಕಾಶ ಕೊಡುವ ಆಧ್ಯಾತ್ಮಿಕತೆಯನ್ನು ಬಯಸುತ್ತದೆ.
ಒಟ್ಟಾರೆ ಹೇಳುವುದಾದರೆ, ಸಂಘಟಿತ ಧರ್ಮಗಳ ಅವಸಾನ ದುರಂತವೇನಲ್ಲ, ಅದು ವಿಮೋಚನೆಯಾಗಿರುತ್ತದೆ. ಅವಸಾನ ಹೊಂದುತ್ತಿರುವುದು ನಮ್ಮನ್ನು ವಿಭಜಿಸುವ ಸಂರಚನೆ ಮಾತ್ರ. ಪುನರ್ಜನ್ಮ ಪಡೆಯುತ್ತಿರುವುದು ಜನರನ್ನು ಪರಸ್ಪರ ಸಂಪರ್ಕಿಸುವ ಪ್ರಜ್ಞೆ.
Comments
Post a Comment