ಆರೆಸ್ಸೆಸ್ಸಿಗೆ ಹಿಂದೂ ಮಹಿಳೆಯರ ರೇಪಿಸ್ಟರು ಮತ್ತು ಹಂತಕರು ಹಿಂದೂ, ಜೈನರಾಗಿದ್ದರೆ ಅಪರಾಧಿಗಳಲ್ಲ
ಮಠಾಧೀಶರು, ಸ್ವಾಮಿಗಳು (ಇತ್ತೀಚೆಗೆ ದೆಹಲಿಯಲ್ಲೂ ಒಂದು ಪ್ರಕರಣ ದಾಖಲಾಗಿದೆ), ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಹಗರಣಗಳಲ್ಲಿ ಆರೋಪಿಗಳಾದಾಗ, ಆರೆಸ್ಸೆಸ್ ಮತ್ತು ಸಹ ಸಂಘಟನೆಗಳು ದಿವ್ಯ ಮೌನ ವಹಿಸುತ್ತವೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ತನ್ನ ಶತಮಾನೋತ್ಸವವನ್ನು ಆಚರಿಸುತ್ತಿರುವಂತೆಯೇ, ಈ ಸಂಘಟನೆಯನ್ನು ಹಿಂದೂ ರಾಷ್ಟ್ರ ಸಂರಕ್ಷಕ ಎಂದು ಪರಾಕು ಹೇಳುವ ಅಬ್ಬರದ ದನಿಗಳು ಕೇಳಿಬರುತ್ತಿವೆ. ಆದರೆ ಈ ಆಯೋಜಿತ ಆಚರಣೆಗಳ ಹಿನ್ನೆಲೆಯಲ್ಲಿ ಒಂದು ಕರಾಳ ಅಧ್ಯಾಯವೂ, ಹಿತಕರವಲ್ಲದ ಸತ್ಯವೂ ಅಡಗಿದೆ. ಆರೆಸ್ಸೆಸ್ಸಿನ ಪ್ರತಿಯೊಂದು ಸಮಾವೇಶವೂ `ನಮಸ್ತೇ ಸದಾ ವತ್ಸಲೇ ಮಾತೃಭೂಮೆ...' ಎನ್ನುವ ಮಹಿಳೆಯನ್ನು ನದಿ ರೂಪದಲ್ಲಿ ವೈಭವೀಕರಿಸುವ ಗೀತೆಯೊಂದಿಗೆ ಶುರುವಾಗುತ್ತದೆ. ಆದರೆ ಮಹಿಳೆಯರ ಮೇಲಿನ ದೌರ್ಜನ್ಯ ಕುರಿತಾದ ವಿಚಾರ ಬಂದಾಗ ಅದರ ನಿಲುವು ಮತ್ತು ಧ್ವನಿ ಪ್ರಶ್ನಾರ್ಹವಾಗುತ್ತದೆ. ಜೀವರಹಿತ ಮಹಿಳೆಯನ್ನು ಆರಾಧಿಸುವ ಆರೆಸ್ಸೆಸ್ ಜೀವಂತ ಮಹಿಳೆಯರ ಬಗ್ಗೆ ಆರೆಸ್ಸೆಸ್ ತರ್ಕಕ್ಕೆ ನಿಲುಕದಂಥ ಠಕ್ಕುತನದಿಂದ ನಡೆದುಕೊಳ್ಳುತ್ತದೆ.
ಹಿಂದೂ ಮಹಿಳೆಯರ ಬಗ್ಗೆ ಆರೆಸ್ಸೆಸ್ ತೋರುವ ಕಾಳಜಿ ಲೆಕ್ಕಾಚಾರದ ನಡೆಯಾಗಿದ್ದು, ಮುಸ್ಲಿಮರು ಅಥವಾ ಕ್ರೈಸ್ತರು ಆರೋಪಿಗಳಾಗಿದ್ದಾಗ ಅಬ್ಬರಿಸುತ್ತದೆ; ಆದರೆ ಹಿಂದೂಗಳೋ, ಜೈನರೋ ಆರೋಪಿಗಳಾದರೆ ಸದ್ದಿಲ್ಲದೆ ಜಾರಿಕೊಳ್ಳುತ್ತದೆ.
ಈ ಇಬ್ಬಂದಿತನ ಎದ್ದು ಕಾಣುವಂತಿದೆ. ಇತ್ತೀಚಿನ ದಶಕಗಳಲ್ಲಿ ಸಂಘಪರಿವಾರವು ಕಲ್ಪಿತ ಲವ್ ಜಿಹಾದ್ ವಿರುದ್ದ ಬೃಹತ್ ಪ್ರತಿಭಟನೆ, ಪ್ರಚಾರಗಳನ್ನು ಹಮ್ಮಿಕೊಂಡಿದ್ದು, ಮತಾಂತರದ ಬಗ್ಗೆ ಪ್ರಚೋದನಕಾರಿ ಭಾವನೆಗಳನ್ನು ಕೆರಳಿಸಿದೆ, ನಾಗರಿಕತೆಯ ಸಮರದ ಹೆಸರಿನಲ್ಲಿ ಮುಸ್ಲಿಮರನ್ನು ಅಪರಾಧ ಜಗತ್ತಿನೆಡೆಗೆ ಸೆಳೆಯಲಾಗುತ್ತಿದೆ. ಆದರೂ ಹಿಂದೂ ಮಹಿಳೆಯರು ಹಿಂದೂಗಳಿಂದಲೇ ಕ್ರೂರ ಅತ್ಯಾಚಾರ, ಹತ್ಯೆಗೊಳಗಾದಾಗ, ಇದನ್ನು ಮೇಲ್ಜಾತಿಯ ಭೂಮಾಲೀಕರು ಮಾಡಿರಲಿ ಅಥವಾ ಊಳಿಗಮಾನ್ಯ ಕುಟುಂಬಗಳು, ಸ್ವಾಮಿಗಳು ಮಾಡಿರಲಿ, ಆರೆಸ್ಸೆಸ್ ಪ್ರತಿಕ್ರಿಯಿಸದೆ ಮೌನವಾಗುತ್ತದೆ. ಧರ್ಮ ಮತ್ತು ಶಿಸ್ತಿಗೆ ಬದ್ಧವಾಗಿರುವುದಾಗಿ ಹೆಮ್ಮೆಯಿಂದ ಹೇಳಿಕೊಳ್ಳುವ ಸಂಘಪರಿವಾರದ ನೈತಿಕ ದಿವಾಳಿತನ ಇಲ್ಲಿ ಕಾಣುತ್ತದೆ.
ಧರ್ಮದ ಸ್ವಘೋಷಿತ ಪೀಠ ಆಗಿರುವ ಧರ್ಮಸ್ಥಳದ ಉದಾಹರಣೆಯನ್ನೇ ತೆಗೆದುಕೊಂಡರೆ, ದೇವಸ್ಥಾನ, ಆಚರಣೆಗಳು, ಉದಾರ ದಾನ ಈ ಉದಾತ್ತ ಚಟುವಟಿಕೆಗಳ ನಡುವೆ, ರಕ್ತಸಿಕ್ತ ಇತಿಹಾಸವೂ ಇದೆ. ಈ ಕೃತ್ಯಗಳು ಈಗಾಗಲೇ ಆರ್‍ಟಿಐ ದಾಖಲೆಗಳಲ್ಲಿ, ಸಾಕ್ಷಿಗಳ ಮೂಲಕ ಸಂಗ್ರಹವಾಗಿ ಸಾರ್ವಜನಿಕರ ನಡುವೆ ಪ್ರಚಾರ ಪಡೆದಿದೆ. ನೂರಾರು ಮಹಿಳೆಯರು ಅತ್ಯಾಚಾರಕ್ಕೀಡಾಗಿದ್ದಾರೆ, ಕಣ್ಮರೆಯಾಗಿದ್ದಾರೆ, ಅವರ ಬಾಯಿ ಮುಚ್ಚಿಸಲಾಗಿದೆ, ಹತ್ಯೆಗೊಳಗಾಗಿದ್ದಾರೆ. ಈ ಪ್ರಕರಣಗಳೆಲ್ಲವನ್ನೂ ಊಳಿಗಮಾನ್ಯ ಅಧಿಕಾರದ ಅಡಿಯಲ್ಲಿ, ರಾಜಕೀಯ ಹೊಂದಾಣಿಕೆಯೊಂದಿಗೆ, ಮುಚ್ಚಿಹಾಕಲಾಗಿದೆ. ಈ ಸಾಮ್ರಾಜ್ಯದ ಉಸ್ತುವಾರಿ ಹೊತ್ತಿರುವ ಯಜಮಾನ್ ಕುಟುಂಬವನ್ನು ಯಾರೂ ಮುಟ್ಟಲಾಗುವುದಿಲ್ಲ. ಸತ್ಯಾಂಶದ ಕೊರತೆ ಇದೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಕಾನೂನು ಯಂತ್ರವು ಹಣ, ಜಾತಿ ಮತ್ತು ಪ್ರಭಾವಕ್ಕೆ ತಲೆಬಾಗಿ ನಡೆಯುತ್ತದೆ ಎನ್ನುವುದಕ್ಕಾಗಿ.
1979 ಮತ್ತು 1986ರಲ್ಲಿ ಕ್ರಮವಾಗಿ, ಅತ್ಯಾಚಾರಕ್ಕೀಡಾಗಿ ಹತ್ಯೆಗೊಳಗಾದ ವೇದವಲ್ಲಿ ಮತ್ತು ಪದ್ಮಲತಾ ಪ್ರಕರಣಗಳು ಸಂಭವಿಸಿದಾಗ, ಈ ಪ್ರಕರಣಗಳನ್ನು ಮುಚ್ಚಿಹಾಕಿರುವುದು ಇಂದಿಗೂ ಜನರಲ್ಲಿ ಹಸಿರಾಗಿರುವಾಗ, ಆರೆಸ್ಸೆಸ್ ಎಲ್ಲಿತ್ತು? ದಶಕಗಳ ಅವಧಿಯ ಆರ್‍ಟಿಐ ದಾಖಲೆಗಳು ನೂರಾರು ಮಹಿಳೆಯರ ಹತ್ಯೆ, ಅತ್ಯಾಚಾರಗಳು ನಡೆದಿರುವುದನ್ನು ಸಾಕ್ಷಿಗಳ ಸಮೇತ ಮುಂದಿಡುತ್ತಿರುವಾಗ ಆರೆಸ್ಸೆಸ್ ಎಲ್ಲಿದೆ? ಇಲ್ಲಿ ಸರಳ ಸತ್ಯವೊಂದಿದೆ. ಆರೋಪಿಗಳು ಮುಸ್ಲಿಮರೋ, ಕ್ರೈಸ್ತರೋ ಆಗಿದ್ದಲ್ಲಿ ಆರೆಸ್ಸೆಸ್ ಬಿರುಗಾಳಿ ಎಬ್ಬಿಸಿ, ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿ, ಪ್ರಚಾರದ ಮೂಲಕ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತಿತ್ತು. ಈ ಆರೋಪಿಗಳು ಹಿಂದೂ ಅಥವಾ ಜೈನ ಗಣ್ಯ ವ್ಯಕ್ತಿಗಳಾಗಿರುವುದರಿಂದ, ಸಂಘ ಪರಿವಾರ ಮೌನಕ್ಕೆ ಶರಣಾಗಿದೆ. ಮೌನವೇ ರಕ್ಷಾಕವಚವಾಗುತ್ತದೆ, ಹೊಂದಾಣಿಕೆಯ ಶಾಮೀಲಾತಿ ಅಪರಾಧವಾಗುತ್ತದೆ. ಬಿಜೆಪಿಯ ಸಂಘಟನಾ ಹೊಣೆ ಹೊತ್ತಿರುವ ಆರೆಸ್ಸೆಸ್ಸಿನ ಪ್ರಮುಖ ವ್ಯಕ್ತಿ ಬಿ ಎಲ್ ಸಂತೋಷ್ ಎನ್ನುವವರು ಧರ್ಮಸ್ಥಳದ ಮಹಿಳಾ ದೌರ್ಜನ್ಯ ಆರೋಪಿಗಳನ್ನು ಸಮರ್ಥಿಸಿರುವುದಂತೂ ಆರೆಸ್ಸೆಸ್ ಗೋಮುಖ ವ್ಯಾಘ್ರ ಎನ್ನುವುದಕ್ಕೆ ಸೂಚಿ.
ಇದು ಪ್ರತ್ಯೇಕವಾದ ಘಟನೆಯಲ್ಲ. ದಲಿತ ಮಹಿಳೆಯರು ಅತ್ಯಾಚಾರಕ್ಕೀಡಾಗಿ ಹತ್ಯೆಯಾದಾಗ, ಮೇಲ್ಜಾತಿಯವರು ಆರೋಪಿಗಳಾಗಿದ್ದರೆ, ಆರೆಸ್ಸೆಸ್ ಜನರನ್ನು ಕ್ರೋಢೀಕರಿಸಲು ಮುಂದಾಗುವುದಿಲ್ಲ. ಕರ್ನಾಟಕದಲ್ಲಿ ಮತ್ತು ಇತರೆಡೆ ಮಠಾಧೀಶರು, ಸ್ವಾಮಿಗಳು (ಇತ್ತೀಚೆಗೆ ದೆಹಲಿಯಲ್ಲೂ ಒಂದು ಪ್ರಕರಣ ದಾಖಲಾಗಿದೆ), ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯಗಳ ಹಗರಣಗಳನ್ನು ಎದುರಿಸಿದಾಗ, ಆರೆಸ್ಸೆಸ್ ಸಹ ಸಂಘಟನೆಗಳು ದಿವ್ಯ ಮೌನ ವಹಿಸುತ್ತವೆ. ಇದೇ ಆರೆಸ್ಸೆಸ್ ಜಾಲಗಳು ಅಂತರ್ ಧರ್ಮೀಯ ವಿವಾಹಗಳಿಂದ ಹಿಂದೂ ಹೆಣ್ಣು ಮಕ್ಕಳನ್ನು ರಕ್ಷಿಸುವ ಬಗ್ಗೆ ಬೆನ್ನುತಟ್ಟಿಕೊಳ್ಳುತ್ತಿರುತ್ತದೆ. ಇದು ರಕ್ಷಣೆ ಎನ್ನುವುದಕ್ಕಿಂತಲೂ ಮಹಿಳೆಯರನ್ನು ಕೋಮುವಾದಿ ರಾಜಕಾರಣದ ಅಸ್ತ್ರವಾಗಿ ಬಳಸುವ ಒಂದು ತಂತ್ರ.
ಇದನ್ನು ಸಮ್ಮತಿಸುವುದೆಂದರೆ, ಹಿಂದೂ ಮಹಿಳೆಯರ ಬದುಕು ಅವರ ಮೇಲೆ ದಾಳಿ ನಡೆಸುವ ವ್ಯಕ್ತಿ ಅನ್ಯರು ಅಗಿದ್ದರೆ ಮಾತ್ರ ರಕ್ಷಣೆಗೆ ಅರ್ಹ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಇದು ಧರ್ಮ ಎನಿಸಿಕೊಳ್ಳುವುದಿಲ್ಲ. ಇದು ಧರ್ಮದ್ರೋಹವಾಗುತ್ತದೆ. ಇದು ಸಂಘಪರಿವಾರವನ್ನು ಒಂದು ತತ್ವಾಧಾರಿತ ಸಂಘಟನೆ ಎಂಬುದರ ಬದಲು ಅವಕಾಶವಾದದ ಸಂಘಟನೆ ಎಂದು ನಿರೂಪಿಸುತ್ತದೆ. ಮಹಿಳೆಯರ ನೋವನ್ನು ತನ್ನ ಕೋಮುವಾದಕ್ಕೆ ಬಳಸಿಕೊಳ್ಳುವ ಮತ್ತು ತನ್ನದೇ ಬಳಗದೊಳಗೆ ಕೊಳೆಯುತ್ತಿರುವ ವರ್ತನೆಯನ್ನು ಎದುರಿಸಲು ಅಸಮರ್ಥವಾದ ಸಂಘಟನೆಯಾಗಿ ಕಾಣುತ್ತದೆ.
ಆರೆಸ್ಸೆಸ್ ನೂರು ವರ್ಷಗಳನ್ನು ಪೂರೈಸುತ್ತಿರುವಂತೆಯೇ, ಇಡೀ ದೇಶವು ಅದರ ಸೇವೆಯನ್ನು ಸ್ಮರಿಸಿ ಆಚರಿಸುತ್ತಿದೆ. ಆದರೆ ಈ ಸಮಾಜ ಸೇವೆಯಲ್ಲಿ ದುರ್ಬಲ ವರ್ಗಗಳ ರಕ್ಷಣೆಯಾಗುವುದಿಲ್ಲ, ಹಿಂದೂ ಅಥವಾ ಜೈನರ ದೌರ್ಜನ್ಯಕ್ಕೆ ಒಳಗಾದ ಹಿಂದೂಮಹಿಳೆಯರನ್ನು ರಕ್ಷಿಸಲಾಗುವುದಿಲ್ಲ. ಇದು ಸಮಾಜ ಸೇವೆ ಎನಿಸಿಕೊಳ್ಳುವುದಿಲ್ಲ. ಬದಲಾಗಿ ರಾಷ್ಟ್ರೀಯವಾದದ ಮುಸುಕು ಧರಿಸಿದ ಹೇಡಿತನವಾಗುತ್ತದೆ. ಶಿಸ್ತಿನ ಮುಸುಕು ಧರಿಸಿದ ಮೌನವಾಗಿ ಕಾಣುತ್ತದೆ.
Comments
Post a Comment