ನೈತಿಕತೆ ಬೋಧಕರು ತಾವು ಪ್ರಾಮಾಣಿಕರಾಗಿರಬೇಡವೇ?

 ಧಾರ್ಮಿಕ ವ್ಯಕ್ತಿಗಳು ಮತ್ತು ಹೊಣೆ ಮರೆಯುವ ಮಾಧ್ಯಮಗಳ ನಡುವಿನ ಅಪವಿತ್ರ ಮೈತ್ರಿ ಫೇಕ್ ನೈತಿಕತೆಯನ್ನು ಮಾತ್ರ ಸೃಷ್ಟಿಸುತ್ತದೆ.

..............

ನೈತಿಕ ಬೋಧನೆ ಭಾರತದ ಸಾರ್ವಜನಿಕ ಜೀವನದಲ್ಲಿ ಸದಾ ಕಾಲವೂ ಒಂದು ಪವಿತ್ರ ಆಕರ್ಷಣೆಯನ್ನು ಹೊಂದಿರುತ್ತದೆ. ಪ್ರವಚನ ಕೇಂದ್ರಗಳಿಂದ ರಾಜಕೀಯ ವೇದಿಕೆಯವರೆಗೂ ಶುದ್ಧತೆ, ಸಂಯಮ, ತ್ಯಾಗಗಳ ಬಗ್ಗೆ ಉಪದೇಶಗಳನ್ನು ಕೇಳುತ್ತಲೇ ಇರಬಹುದು. ಈ ನೈತಿಕ ಪರಿಚಾರಕರಲ್ಲಿ ಎದ್ದು ಕಾಣುವ ಪ್ರಮುಖ ಭಾಗಿದಾರರು ಎಂದರೆ ಸ್ವಘೋಷಿತ ಧಾರ್ಮಿಕ ನೇತಾರರು. ಇವರು ಸಮಾಜವನ್ನು ಸಂಯಮ, ಸದ್ಗುಣಗಳನ್ನೊಳಗೊಂಡ ಶಾಂತಿಯ ವಾತಾವರಣದ ಕಡೆಗೆ ಕರೆದೊಯ್ಯುವುದಾಗಿ ಹೇಳುತ್ತಲೇ ಇರುತ್ತಾರೆ. ಆದರೆ ಇವರುಗಳೇ ಶುದ್ಧಹಸ್ತರಾಗಿಲ್ಲ ಎನ್ನುವಾಗ ಈ ಉಪದೇಶಗಳು ಟೊಳ್ಳು ಎನಿಸುತ್ತವೆ.

ಒಂದು ಧಾರ್ಮಿಕ ಸಂಸ್ಥೆಯ ಪ್ರಬಲ ಮುಖ್ಯಸ್ಥರು ಸಾರಾಯಿ ಮುಕ್ತ ಸಮಾಜದ ಆಂದೋಲನದಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ, ಇದು ಮೇಲ್ನೋಟಕ್ಕೆ ಉದಾತ್ತ ಎನಿಸುತ್ತದೆ. ಏಕೆಂದರೆ ಸಾರಾಯಿಯ ದುಶ್ಚಟವು ಸಾಮಾಜಿಕ ಸಮಸ್ಯೆಯಾಗಿ, ಕುಟುಂಬಗಳನ್ನು, ಜೀವನೋಪಾಯಗಳನ್ನೂ ನಾಶಪಡಿಸುತ್ತದೆ. ಆದಾಗ್ಯೂ ಈ ಉಪದೇಶ ನೀಡುವ ವ್ಯಕ್ತಿಯೇ, ಸಂಸ್ಥೆಯ ಅಕ್ರಮ ಹಣ ಸಂಗ್ರಹಣೆ, ತೆರಿಗೆ ವಂಚನೆ, ಅತ್ಯಾಚಾರ ಮತ್ತು ಹತ್ಯೆಯಂತಹ ಘೋರ ಅಪರಾಧ ಎಸಗಿರುವವರನ್ನು ರಕ್ಷಿಸುವುದರಲ್ಲಿ ಭಾಗಿಯಾದಾಗ, ಈ ಸಂದೇಶವಾಹಕನ ವಿಶ್ವಾಸಾರ್ಹತೆ ಕುಸಿಯುತ್ತದೆ. ಇದು ನೈತಿಕತೆ ಅಲ್ಲ, ಬದಲಾಗಿ ಜಾಣ್ಮೆಯ ದುರ್ಬಳಕೆಯಾಗಿ ಕಾಣುತ್ತದೆ. ಉದಾತ್ತ ಮೌಲ್ಯಗಳನ್ನು ಬೋಧಿಸುವುದು ಮತ್ತು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುವುದು, ವಿನಾಶಕಾರಿ ವಂಚನೆಯಾಗಿ ಕಾಣುವುದೇ ಅಲ್ಲದೆ, ಶ್ರದ್ಧೆಯನ್ನೇ ಭ್ರಷ್ಟಗೊಳಿಸುತ್ತದೆ.

ದುರಂತ ಕಾಣುವುದು ಉಪದೇಶ ನೀಡುವ ವ್ಯಕ್ತಿಯ ಠಕ್ಕುತನದಲ್ಲಿ ಮಾತ್ರ ಅಲ್ಲ, ಇದನ್ನು ಪ್ರಶ್ನಿಸಲು ಹಿಂಜರಿಯುವ ಮಾಧ್ಯಮಗಳ ಹೇಡಿತನದಲ್ಲಿ ಕೂಡ. ನಮ್ಮ ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಜ್ಞೆಯ ರಕ್ಷಾಕವಚ ಕೇಂದ್ರವಾಗಿ ಇರಬೇಕಿತ್ತು, ಆದರೆ ಅದು ಬಲಾಢ್ಯರ ಸಂದೇಶಗಳನ್ನು ಪ್ರತಿಧ್ವನಿಸುವ ಲೌಡ್ ಸ್ಪೀಕರ್‍ಗಳಾಗಿವೆ. ದಾನ ಧರ್ಮಗಳ ವೈಭವೀಕರಿಸಿದ ಪ್ರಸರಣ, ದೇವಸ್ಥಾನದ ಉತ್ಸವಗಳ ದೃಶ್ಯಗಳು ಅಥವಾ ಮೌಲ್ಯಾಧಾರಿತ ನಕಲಿ ಆಂದೋಲನಗಳು ಸುದ್ದಿಗಳಲ್ಲಿ ಕಾಣುತ್ತವೆ. ಆದರೆ ಅಹಿತಕರ ಎನಿಸುವ ಸತ್ಯಗಳನ್ನು ಮರೆಮಾಚಲಾಗುತ್ತದೆ. ಈ ಸಂಸ್ಥೆಗಳನ್ನೊಳಗೊಂಡ ಅಪಾರದರ್ಶಕ ಹಣಕಾಸು ವ್ಯವಹಾರಗಳಾಗಲೀ, ನಿಗೂಢ ಸಾವುಗಳಾಗಲೀ, ಅನಿಬರ್ಂಧಿತ ಭೂ ವ್ಯವಹಾರಗಳಾಗಲೀ ಅಪರೂಪವಾಗಿಯೂ ಸಹ ಪ್ರಸಾರವಾಗುವುದಿಲ್ಲ. ಕಾವಲು ಪಡೆಗಳು ಮಡಿಲ ಕೂಸುಗಳಾಗಿವೆ.

ಧಾರ್ಮಿಕ ವ್ಯಕ್ತಿಗಳು ಮತ್ತು ಹೊಣೆ ಮರೆಯುವ ಮಾಧ್ಯಮಗಳ ನಡುವಿನ ಅಪವಿತ್ರ ಮೈತ್ರಿ ಫೇಕ್ ನೈತಿಕತೆಯನ್ನು ಮಾತ್ರ ಸೃಷ್ಟಿಸುತ್ತದೆ. ಇದು ಪ್ರಾಮಾಣಿಕತೆಯ ಭ್ರಮೆಯನ್ನು ಸೃಷ್ಟಿಸಿ, ಇದನ್ನೇ ಸರಳತೆ, ಧರ್ಮನಿಷ್ಠೆ ಎಂದು ಬಿಂಬಿಸಿ ಸಾರ್ವಜನಿಕರ ದಿಕ್ಕು ತಪ್ಪಿಸುತ್ತದೆ.

ಏತನ್ಮಧ್ಯೆ ನೈಜ ಸಮಾಜ ಸುಧಾರಕರು, ಸರಳ ಜೀವನ ನಡೆಸುತ್ತಾ, ಅನ್ಯಾಯಗಳನ್ನು ಪ್ರಶ್ನಿಸುತ್ತಾ, ಉತ್ತರದಾಯಿತ್ವವನ್ನು ಆಗ್ರಹಿಸುತ್ತಿದ್ದರೂ ಅವರನ್ನು ಅಲಕ್ಷಿಸಲಾಗುತ್ತದೆ ಅಥವಾ ಸುಮ್ಮನಿರಿಸಲಾಗುತ್ತದೆ. ಏಕೆಂದರೆ ಇವರುಗಳು ನವ ಭಾರತದ ತೋರಿಕೆಯ ನೈತಿಕ ಪ್ರದರ್ಶನಕ್ಕೆ ಸರಿ ಹೊಂದುವುದಿಲ್ಲ.

ಭಾರತವು ನೈತಿಕ ಸಮಾಜವೊಂದನ್ನು ನಿರ್ಮಿಸಬೇಕಾದಲ್ಲಿ, ಅದನ್ನು ಅಧಿಕಾರದ ಅಮಲಿನಲ್ಲಿ ತೇಲುತ್ತಿರುವ ವ್ಯಕ್ತಿಗಳ ಉಪದೇಶಗಳಿಂದ ಸಾಧ್ಯವಾಗುವುದಿಲ್ಲ. ಅದು ಪಾರದರ್ಶಕತೆಯೊಂದಿಗೆ ಆರಂಭವಾಗಬೇಕು, ಲೆಕ್ಕಪತ್ರಗಳು, ವರ್ತನೆ, ನಡವಳಿಕೆ, ಚಟುವಟಿಕೆ, ಪ್ರಜ್ಞೆಯು ಪಾರದರ್ಶಕವಾಗಿರಬೇಕು. ನೈತಿಕ ಪ್ರಭಾವ ಬೀರುವ ಸಂಸ್ಥೆಗಳು ತಮ್ಮ ಲೆಕ್ಕಪತ್ರಗಳನ್ನು ತೆರೆದಿಟ್ಟು, ನಾಗರಿಕರನ್ನು ನಿಯಂತ್ರಿಸುವ ಕಾನೂನುಗಳಿಗೆ ತಮ್ಮನ್ನು ಒಡ್ಡಿಕೊಳ್ಳಬೇಕು. ಮಾಧ್ಯಮಗಳು ತಾವು ಕಳೆದುಕೊಂಡ ಧೈರ್ಯವನ್ನು ಮರಳಿ ಪಡೆದು ದೈವೀಕ ಶಕ್ತಿಯ ಮುಸುಕಿನಲ್ಲಿ ತಮ್ಮ ದುರಾಸೆಗಳನ್ನು ಮುಚ್ಚಿಡುವವರನ್ನು ಪ್ರಶ್ನಿಸಲಾರಂಭಿಸಬೇಕು.

ಠಕ್ಕರನ್ನು ಕಣ್ಣುಮುಚ್ಚಿ ಮೆಚ್ಚುವ, ಅವರಿಗೆ ಚಪ್ಪಾಳೆ ತಟ್ಟುವ ಸಮಾಜವು ಸತ್ಯ ಶೋಧಕರನ್ನು ಶಿಕ್ಷಿಸುತ್ತದೆಯೇ ಹೊರತು, ಅಪ್ರಾಮಾಣಿಕರನ್ನಲ್ಲ. ಅಂತಹ ಸಮಾಜವು ಭ್ರಮಾಧೀನವಾಗಿರುತ್ತದೆ. ಆಧ್ಯಾತ್ಮಿಕ ಪ್ರಾಮಾಣಿಕತೆಯನ್ನು ಸಾಂಸ್ಥಿಕ ಅಧಿಕಾರದಿಂದ, ನೈತಿಕತೆಯಿಂದ ದುರ್ಬಳಕೆಯ ಜಾಣ್ಮೆಯಿಂದ ಬೇರ್ಪಡಿಸುವ ಕಾಲ ಒದಗಿಬಂದಿದೆ. ಆಗ ಮಾತ್ರ ಸಾರಾಯಿ ಮುಕ್ತ ಸಮಾಜದ ಕರೆ ಹೆಚ್ಚು ಅರ್ಥಪೂರ್ಣವೆನಿಸುತ್ತದೆ, ತಮ್ಮ ಪಾವಿತ್ರ್ಯತೆಯ ಅಮಲಿಗೆ ಒಳಗಾದವರ ಈ ಕರೆಗೆ ಮಾನ್ಯತೆಯೂ ಸಿಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again