ಚಿದಂಬರಂ ಬಂಡಾಯ - ಕಾಂಗ್ರೆಸ್ ಎತ್ತ ಸಾಗುತ್ತಿದೆ?
ಚಿದಂಬರಂ ಅವರ ಹೇಳಿಕೆಗಳು ಮೇಲ್ನೋಟಕ್ಕೆ ನೈತಿಕ ಆತ್ಮಾವಲೋಕನದಂತೆ ಕಂಡರೂ ಬಹಳ ಗಂಭೀರ ಪರಿಣಾಮಗಳನ್ನು ಬೀರಲಿದೆ.
ಪ್ರಚಲಿತ * ಬಿವಿಸೀ
1984ರಲ್ಲಿ ಪ್ರಧಾನಿ ಇಂದಿರಾಗಾಂಧಿ ಸಿಖ್ಖರ ಸುವರ್ಣ ದೇಗುಲದ ಮೇಲೆ `ಆಪರೇಷನ್ ಬ್ಲೂ ಸ್ಟಾರ್' ಸೇನಾ ದಾಳಿಯನ್ನು ನಡೆಸುವುದರಲ್ಲಿ ತಪ್ಪು ಮಾಡಿದ್ದರು ಎಂದು ಮಾಜಿ ಕೇಂದ್ರ ಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ ನೇರವಾಗಿ ಹೇಳಿರುವುದು ಕಾಂಗ್ರೆಸ್ಸಿನ ಮಾಸಿದ ಗಾಯವನ್ನು ಮತ್ತೆ ಕೆದಕಿದಂತಾಗಿದೆ. ದೇಶದ ನೆನಪಿನಲ್ಲಿ ಮಾತ್ರವೇ ಅಲ್ಲದೆ, ಕಾಂಗ್ರೆಸ್ ಪಕ್ಷದಲ್ಲೂ ಈ ಲಕ್ಷಣಗಳನ್ನು ಕಾಣಬಹುದು. ಚಿದಂಬರಂ ಅವರ ಹೇಳಿಕೆ, ಅವರ ಎಂದಿನ ವೈಖರಿಯ ಹಾಗೆ ನೇರ ನಿಷ್ಠುರವಾಗಿದ್ದು ಕಾನೂನಾತ್ಮಕವಾಗಿ ತೀಕ್ಷ್ಣವಾಗಿದೆ, ಆದರೆ ಇದು ಮತ್ತೊಮ್ಮೆ ಕಾಂಗ್ರೆಸ್ ಪಕ್ಷದೊಳಗಿನ ಹೈಕಮಾಂಡ್ ವಲಯದಲ್ಲಿ ಬಿರುಕು ಮೂಡಿಸಿದ್ದು, ಮೌನವಾಗಿರುವವರನ್ನೂ ಬಡಿದೆಬ್ಬಿಸಿದೆ.
ಹಲವು ದಶಕಗಳ ಕಾಲ ಕಾಂಗ್ರೆಸ್ ವಿರೋಧಾಭಾಸಗಳ ಪಕ್ಷವಾಗಿಯೇ ಕಾಣುತ್ತಿದ್ದು, ವಂಶಾಡಳಿತದ ಕೇಂದ್ರೀಕರಣದ ನೀತಿಯನ್ನೇ ಅನುಸರಿಸುತ್ತಾ ಬಂದಿದೆ. ಚಿದಂಬರಂ ಅವರ ಹೇಳಿಕೆಗಳು ಮೇಲ್ನೋಟಕ್ಕೆ ನೈತಿಕ ಆತ್ಮಾವಲೋಕನದಂತೆ ಕಂಡರೂ ಬಹಳ ಗಂಭೀರ ಪರಿಣಾಮಗಳನ್ನು ಬೀರಲಿದೆ. ಕಾಂಗ್ರೆಸ್ ಪಕ್ಷದ ಒಳಗೆ ಭಿನ್ನಮತದ ದನಿಗಳು ಗಟ್ಟಿಯಾಗುತ್ತಿರುವ ಹೊತ್ತಿನಲ್ಲಿ, ಪಕ್ಷವು ಸೋನಿಯಾ-ರಾಹುಲ್-ಪ್ರಿಯಾಂಕ ಹಿಡಿತದಿಂದ ಬಿಡಿಸಿಕೊಳ್ಳಬೇಕು, ಪಕ್ಷವು ತನ್ನ ಪ್ರಜಾಸತ್ತಾತ್ಮಕ ಮೂಲ ಆಶಯಗಳಿಗೆ ಮರಳಬೇಕು ಎಂಬ ಆಗ್ರಹಗಳು ಕೇಳಿಬರುತ್ತಿರುವಾಗ ಈ ಹೇಳಿಕೆಯೂ ಹೊರಬಂದಿರುವುದು ಕುತೂಹಲ ಮೂಡಿಸಿದೆ. ಈ ದೃಷ್ಟಿಯಿಂದ ಚಿದಂಬರಂ ಅವರ ಮಧ್ಯಪ್ರವೇಶವು, ಕಾಂಗ್ರೆಸ್ ಪಕ್ಷ ಪುನರುತ್ಥಾನದತ್ತ ಸಾಗಬೇಕು ಅಥವಾ ರಾಜಕೀಯವಾಗಿ ಅಪ್ರಸ್ತುತವಾಗಬೇಕು ಎಂಬ ಕೂಗಿಗೆ ಬಲ ನೀಡಿದೆ.
ಸೂಕ್ಷ್ಮವಾಗಿ ಗಮನಿಸಿದಾಗ, ಚಿದಂಬರಂ ಅವರ ಹೇಳಿಕೆ ಕೇವಲ ಆಪರೇಷನ್ ಬ್ಲೂ ಸ್ಟಾರ್ ಕಾರ್ಯಾಚರಣೆಯ ಅತಿರೇಕಗಳನ್ನು ಕುರಿತದ್ದು ಅಲ್ಲ. ಇದು ಇಂದಿರಾ ಗಾಂಧಿ ಕಾಲದಿಂದಲೂ ಪಕ್ಷದಲ್ಲಿ ಪ್ರಶ್ನಾತೀತವಾಗಿ ಬೆಳೆದುಬಂದಿರುವ ವಿನಮ್ರತೆ ಮತ್ತು ವಿಧೇಯತೆಯ ಸಂಸ್ಕøತಿಯ ಬಗ್ಗೆಯೂ ಸೂಚನೆ ನೀಡುತ್ತದೆ. ಇಲ್ಲಿ ಆತ್ಮಾವಲೋಕನ, ತಪ್ಪುಗಳನ್ನು ಸರಿಪಡಿಸುವುದು, ಪುನರ್‍ಪರಿಶೀಲನೆಗೆ ಅವಕಾಶವೇ ಇಲ್ಲದಿರುವುದನ್ನು ಸೂಚಿಸುತ್ತದೆ. ಪಕ್ಷದ ಅತ್ಯಂತ ಪ್ರಬಲ ನಾಯಕರು ಕೈಗೊಂಡ ನಿರ್ಣಯವನ್ನು ಪ್ರಶ್ನಿಸುವ ಮೂಲಕ ಚಿದಂಬರಂ ಈ ಸಂಸ್ಕೃತಿಯ ಮೂಲಕ್ಕೇ ಸವಾಲೆಸೆದಿದ್ದಾರೆ. ಇದು ಸಾಂಕೇತಿಕ ಬಂಡಾಯವೇ ಆಗಿದ್ದು, ಶಶಿ ತರೂರ್, ಮನೀಶ್ ತಿವಾರಿ ಮತ್ತು ಕಪಿಲ್ ಸಿಬಲ್ ಅಂಥವರಿಗೆ ಪೆÇ್ರೀತ್ಸಾಹದಾಯಕವಾಗಿ ಕಾಣಲಿದೆ.
ಈ ಹೇಳಿಕೆಗೆ ಕಾಂಗ್ರೆಸ್‍ನ ಆಂತರಿಕ ವಲಯದ ಪ್ರತಿಕ್ರಿಯೆ ಊಹಿಸಬಹುದು. ನಿಷ್ಠಾವಂತರು ಸೋನಿಯಾ ಗಾಂಧಿ ಕುಟುಂಬದ ಛಾಯೆಯ ಬಗ್ಗೆ ಸದಾ ಎಚ್ಚರದಿಂದಿದ್ದು, ಚಿದಂಬರಂ ಅವರ ಮಾತುಗಳನ್ನು ಅಸಾಂದರ್ಭಿಕ, ಮುಜುಗರ ಉಂಟುಮಾಡುವಂತಹುದು, ಪ್ರಯೋಜನವಿಲ್ಲದ್ದು ಎಂದು ಬಣ್ಣಿಸಿದ್ದಾರೆ. ಆದರೂ ಇವರ ಆಕ್ರೋಶದಲ್ಲಿ ಆತಂಕವನ್ನೂ ಗಮನಿಸಬಹುದು. ಹಳೆಯ ನಾಯಕರು ಸದಾ ಕಾಲವೂ ಮುಕ್ತ ಟೀಕೆಗಳು ಮೌನವಾಗಿರುವ ನಾಯಕರ ಗುಂಪನ್ನು ಜಾಗೃತಗೊಳಿಸಬಹುದು ಎಂದೇ ಭಾವಿಸುತ್ತಾರೆ. ಈ ಕಾರ್ಯಕರ್ತರು ಹಲವು ವರ್ಷಗಳಿಂದ ಭ್ರಮನಿರಸನರಾಗಿದ್ದು ಪಕ್ಷದ ಸ್ಥಗಿತತೆ ಮತ್ತು ಪರಾಭವಗಳಿಂದ ವಿಚಲಿತರಾಗಿದ್ದಾರೆ. ಕಾಂಗ್ರೆಸ್ ಈಗಾಗಲೇ ತನ್ನ ಸಾಂಪ್ರದಾಯಿಕ ಮತದಾರರನ್ನು ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಕಳೆದುಕೊಂಡಿದ್ದು, ಮತ್ತೊಂದು ಆಂತರಿಕ ಬಂಡಾಯ ಉಂಟಾದರೆ, ಪಕ್ಷವು ರಾಜಕೀಯ ಅವಸಾನದತ್ತ ಸಾಗುತ್ತದೆ ಎಂಬ ಆತಂಕ ಆವರಿಸಿದೆ.
ಪಕ್ಷದ ಭವಿಷ್ಯವು ಇದು ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದು ಕುತೂಹಲ ಮೂಡಿಸುವಂಥದ್ದು. ನಾಯಕತ್ವವು ಪ್ರತಿರೋಧವನ್ನು ದಮನಿಸುವ ಹಾದಿ ಅನುಸರಿಸಿದರೆ, ಅದು ಪಕ್ಷದ ಅವನತಿಯನ್ನು ಕ್ಷಿಪ್ರಗೊಳಿಸುತ್ತದೆ. ಮತ್ತೊಂದೆಡೆ, ಚಿದಂಬರಂ ಅವರ ಹೇಳಿಕೆಯನ್ನು ಆತ್ಮಾವಲೋಕನದ ಸೂಚನೆ ಎಂದು ಭಾವಿಸಿದರೆ, ಪಕ್ಷವು ಪುನರುಜ್ಜೀವನಗೊಂಡು ವಿಶ್ವಾಸಾರ್ಹ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮುತ್ತದೆ.
ಆದರೆ, ಈ ಸಾಧ್ಯತೆಗಳು ಕ್ಷೀಣವಾದಂತೆ ಕಾಣುತ್ತಿದೆ. ರಾಹುಲ್‍ಗಾಂಧಿ ಮಾದರಿಯ ನೈತಿಕ ಆದರ್ಶ ಮತ್ತು ಪ್ರಿಯಾಂಕ ಅವರ ಸಾಂಕೇತಿಕ ರಾಜಕಾರಣವು ಇನ್ನೂ ಸಹ ಚುನಾವಣಾ ಕಾರ್ಯತಂತ್ರವಾಗಿ, ತಳಮಟ್ಟದ ಪುನರುಜ್ಜೀವನಕ್ಕೆ ಪೂರಕವಾಗಿ ರೂಪುಗೊಳ್ಳಬೇಕಿದೆ. ಖರ್ಗೆ ಸಹಮತದ ತತ್ವವು ಕಾಂಗ್ರೆಸ್‍ಪಕ್ಷವನ್ನು ಒಂದು ಕುಟುಂಬದ ಕೋಟೆ ಎಂಬ ಭಾವನೆಯಿಂದ ಇನ್ನೂ ಹೊರತರಲಾಗಿಲ್ಲ. ಇಂತಹ ವಾತಾವರಣದಲ್ಲಿ ಚಿದಂಬರಂ ಅವರ ಬಂಡಾಯದ ದನಿ, ವೈಯುಕ್ತಿಕ ನೋವಿನಿಂದ ಅಥವಾ ಕಾನೂನಾತ್ಮಕ ಒತ್ತಡಗಳಿಂದ ವ್ಯಕ್ತವಾಗಿದ್ದರೂ ಸಹ, ಹೆಚ್ಚು ಮಹತ್ವ ಪಡೆದುಕೊಳ್ಳುತ್ತದೆ.
ತನ್ನೊಡನೆಯೇ ಸಂಘರ್ಷ ಎದುರಿಸುತ್ತಿರುವ ಪಕ್ಷಕ್ಕೆ ಇದು ಕನ್ನಡಿ ಹಿಡಿದಂತಿದೆ. ಕಾಂಗ್ರೆಸ್ ಈ ಸಂದೇಶವನ್ನು ಅರ್ಥಮಾಡಿಕೊಳ್ಳದೆ ಹೋದರೆ, ಅದು ಪ್ರಜಾಪ್ರಭುತ್ವದ ಚಳುವಳಿಯಾಗಿ ಕಾಣುವುದಿಲ್ಲ ಬದಲಾಗಿ ತನ್ನದೇ ಚರಿತ್ರೆಯ ಛಾಯೆಯಾಗಿ ಕಾಣುತ್ತದೆ. ಚಿದಂಬರಂ ಕಿಡಿ ಹೊತ್ತಿಸಿರಬಹುದು, ಆದರೆ ಈ ಬೆಂಕಿ ಶುದ್ಧೀಕರಿಸುವುದೋ ಅಥವಾ ಕಾಂಗ್ರೆಸ್ ಪಕ್ಷವನ್ನೇ ಆಹುತಿ ಪಡೆಯುವುದೋ ಎನ್ನುವುದು, ಪಕ್ಷದ ನಾಯಕತ್ವದ ಮುಂದಿನ ಹೆಜ್ಜೆಗಳನ್ನು ಅವಲಂಬಿಸಿದೆ.
Comments
Post a Comment