ಆರೆಸ್ಸೆಸ್ ನಿಷೇಧ ರಾಜಕೀಯ ದುಸ್ಸಾಹಸ

 

ನಿಷೇಧಗಳು ಹುತಾತ್ಮರನ್ನು ಸೃಷ್ಟಿಸುತ್ತದೆ ಎಂಬ ವಾಸ್ತವ ಚಾರಿತ್ರಿಕವಾಗಿ ನಿರೂಪಿತವಾಗಿದೆ. ಸಮಾಲೋಚನೆ ಮತ್ತು ಉತ್ತರದಾಯಿತ್ವವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ.

............

ಅಹುದಾದರಹುದೆನ್ನಿ * ಬಿವಿಸೀ

ಕರ್ನಾಟಕದ ರಾಜಕೀಯ ನಿಯಂತ್ರಿತ ಸಾರ್ವಜನಿಕ ವಲಯಗಳಲ್ಲಿ ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು (ಆರೆಸ್ಸೆಸ್) ನಿಷೇಧಿಸುವ ಪ್ರಸ್ತಾಪಗಳು ಕೇಳಿಬರುತ್ತಿದ್ದು, ಇದು ರಾಜ್ಯದಲ್ಲಿ ಉದ್ಭವಿಸಿರುವ ಆಳವಾದ ಸೈದ್ಧಾಂತಿಕ ಬಿರುಕುಗಳ ಸಂಘರ್ಷವಾಗಿ ಕಾಣುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಪುತ್ರ ಮತ್ತು ಪ್ರಮುಖ ಸಚಿವರಾಗಿರುವ ಪ್ರಿಯಾಂಕ ಖರ್ಗೆ ಈ ಪ್ರಸ್ತಾವನೆಯನ್ನು ಮುಂದಿರಿಸಿದ್ದು, ರಾಜ್ಯದ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಸಿಎಂ ರವಾನಿಸಿದ್ದಾರೆ. ಸಚಿವರ ಈ ನಡೆಯು ಬಿಜೆಪಿಯಿಂದ ತೀವ್ರ ಆಕ್ರೋಶಕ್ಕೀಡಾಗಿದ್ದು, ಕಾಂಗ್ರೆಸ್ ಪಕ್ಷದ ಒಳಗೂ ಅಸಮಾಧಾನದ ಹೊಗೆಯಾಡುತ್ತಿದೆ.

ಆರೆಸ್ಸೆಸ್‍ನ ಸೈದ್ಧಾಂತಿಕ ಅಂಗವಾಗಿರುವ ಬಿಜೆಪಿ ನಿರೀಕ್ಷಿತವಾಗಿಯೇ ಈ ಪ್ರಸ್ತಾವನೆಯನ್ನು ರಾಷ್ಟ್ರೀಯವಾದದ ಮೇಲಿನ ನೇರ ದಾಳಿ ಎಂದು ಖಂಡಿಸಿದ್ದು, ಪಕ್ಷದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 1948, 1975 ಮತ್ತು 1992ರಲ್ಲಿ ಆರೆಸ್ಸೆಸ್ ನಿಷೇಧಗಳು ವಿಫಲವಾಗಿರುವುದನ್ನು ನೆನಪಿಸಿದ್ದಾರೆ. ಈ ನಿಷೇಧಗಳಿಂದ ಸಂಘಟನೆಯು ಇನ್ನೂ ಬಲಗೊಂಡಿರುವುದನ್ನೂ ನೆನಪಿಸಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‍ನ ಹಿರಿಯ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹರಿತ ನಾಲಗೆಯ ಬಿ ಕೆ ಹರಿಪ್ರಸಾದ್ ಅವರೂ ಸಹ ಆರೆಸ್ಸೆಸ್ ಕೋಮುವಾದದ ಮೂಲ ಕೇಂದ್ರ ಎಂದೇ ಗುರುತಿಸಿದ್ದಾರೆ. ಪ್ರಿಯಾಂಕ ಖರ್ಗೆ ಅವರ ಈ ಪ್ರಸ್ತಾವನೆಯು, ಆರೆಸ್ಸೆಸ್ ಸಂಘಟನೆಯನ್ನು ಪ್ರತಿಗಾಮಿ ಶಕ್ತಿ ಎಂದೂ, ಭಾರತದ ಜಾತ್ಯತೀತ ಮನೋಭಾವವನ್ನು ನಾಶಪಡಿಸುವ ಸಂಘಟನೆ ಎಂದೂ ಭಾವಿಸುವ ರಾಹುಲ್‍ಗಾಂಧಿಯ ರಾಜಕೀಯ ನಿರೂಪಣೆಯನ್ನು ಅನುಮೋದಿಸಿದಂತೆ ಕಾಣುತ್ತದೆ.

ಆದರೆ ಪ್ರಶ್ನೆಇರುವುದು ಈ ಸಂದರ್ಭದಲ್ಲಿ ಈ ರೀತಿಯ ನಿಷೇಧ ಹೇರುವುದು ವಿವೇಕಯುತ ಕ್ರಮವೇ, ಸಮರ್ಥನೀಯವೆ ಎಂಬುದು.

ಚಾರಿತ್ರಿಕವಾಗಿ, ಆರೆಸ್ಸೆಸ್ ಭಾರತದಲ್ಲಿ ಮೂರು ಬಾರಿ ನಿಷೇಧಕ್ಕೊಳಗಾಗಿದೆ. ಪ್ರತಿಬಾರಿಯೂ ಅಸಾಧಾರಣ ಸಂದರ್ಭಗಳಲ್ಲಿ ಕ್ರಮ ಜರುಗಿಸಲಾಗಿತ್ತು.  ಮೊದಲನೆಯ ಸಲ 1948ರಲ್ಲಿ ಗಾಂಧಿ ಹತ್ಯೆಯ ನಂತರ ನಿಷೇಧಿಸಲಾಗಿತ್ತು. ಎರಡನೆಯ ಬಾರಿ ಇಂದಿರಾಗಾಂಧಿಯ ತುರ್ತುಪರಿಸ್ಥಿತಿಯಲ್ಲಿ ನಿಷೇಧ ಮಾಡಲಾಗಿತ್ತು. ಮೂರನೆಯದು 1992ರಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ಆರೆಸ್ಸೆಸ್ ನಿಷೇಧಕ್ಕೊಳಗಾಗಿತ್ತು. ಮೂರೂ ಸಂದರ್ಭಗಳಲ್ಲಿ ಇದು ರಾಜಕೀಯ ತಿರುಗುಬಾಣವಾಗಿದ್ದೇ ಅಲ್ಲದೆ, ತಮ್ಮ ಸಂಘಟನೆಯನ್ನು ದಮನಿಸಲಾಗುತ್ತಿದೆ ಎಂಬ ಆರೆಸ್ಸೆಸ್ ಆರೋಪವನ್ನು ಮತ್ತಷ್ಟು ಬಲಪಡಿಸಿದಂತಾಗಿತ್ತು. ಇದು ಸಂಘಟನೆಯ ತಳಮಟ್ಟದ ವಿಸ್ತರಣೆಗೆ ನೆರವಾಗಿತ್ತು. ಪ್ರತಿಯೊಂದು ನಿಷೇಧವೂ ಸಂಘದ ಪಾಲಿಗೆ ಪ್ರಚಾರದ ಇಂಧನವಾಗಿ ಪರಿಣಮಿಸಿದೆ.

ಇದೇ ದೋಷಪೂರಿತ ಪರಂಪರೆಯನ್ನು ಮತ್ತೊಮ್ಮೆ ಅನುಸರಿಸುವುದು, ಅದೂ ಕರ್ನಾಟಕದಂತಹ ರಾಜ್ಯದಲ್ಲಿ, ಅಪಾಯಕಾರಿಯಾಗಿ ಕಾಣುತ್ತದೆ.  ಮಡಿಕೇರಿ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಯಲ್ಲಾಪುರದವರೆಗಿನ ಮಲೆನಾಡು ಮತ್ತು ಕಾಸರಗೋಡಿನಿಂದ ಮಂಗಳೂರು ಉಡುಪಿಯಿಂದ ಕಾರವಾರದವರೆಗೂ ಇರುವ ಕರಾವಳಿ ಪ್ರದೇಶದಲ್ಲಿ ಆರೆಸ್ಸೆಸ್‍ನ ಸೈದ್ಧಾಂತಿಕ ಬೇರುಗಳು, ವಿಸ್ತರಿಸುತ್ತದೆ. ಇದು ಆಳವಾಗಿದ್ದು ಸಾಂಸ್ಕøತಿಕ ಸಂರಕ್ಷಣೆ ಮತ್ತು ಸ್ಥಳೀಯ ರಾಜಕೀಯ ಎರಡರಲ್ಲೂ ಪ್ರಭಾವಶಾಲಿಯಾಗಿದೆ. ಸಾಮಾನ್ಯ ಜನತೆಗೆ, ಆರೆಸ್ಸೆಸ್ ಕೇವಲ ರಾಜಕೀಯ ಗುಂಪು ಅಲ್ಲ, ಬದಲಾಗಿ ಶಾಲೆಗಳನ್ನು ನಡೆಸುವ, ರಕ್ತದಾನ ಶಿಬಿರಗಳನ್ನು ಆಯೋಜಿಸುವ, ಪರಿಹಾರ ಕಾರ್ಯಗಳಲ್ಲಿ ತೊಡಗುವ ಸಾಮಾಜಿಕ ಸಂಘಟನೆಯಾಗಿ ಕಾಣುತ್ತದೆ. ಇದನ್ನು ಸಾರಾಸಗಟಾಗಿ ನಿಷೇಧಿಸುವುದು, ರಾಜಕೀಯವಾಗಿ ಸಕ್ರಿಯವಾಗಿಲ್ಲದಿದ್ದರೂ ಸಹ ಸಂಘಟನೆಯ ಶಿಸ್ತು ಮತ್ತು ಸೇವೆಯನ್ನು ಸಮ್ಮಾನಿಸುವ ಸಾವಿರಾರು ಜನರನ್ನು ಎದುರುಹಾಕಿಕೊಂಡಂತೆ.

ಕರ್ನಾಟಕ ಸರ್ಕಾರವು ಆರೆಸ್ಸೆಸ್ ನಾಯಕರಿಂದ ಸತತವಾಗಿ ಹೊರಬರುತ್ತಿರುವ ದ್ವೇಷಪೂರಿತ ಭಾಷಣಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎನ್ನುವುದು ನಿರ್ವಿವಾದ ಸತ್ಯ. ಬಿ ಎಲ್ ಸಂತೋಷ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರಂತಹ ನಾಯಕರು ಈ ನಿಟ್ಟಿನಲ್ಲಿ ಪ್ರಧಾನವಾಗಿ ಕಾಣುತ್ತಾರೆ. ಇವರ ಭಾಷಣಗಳು ನಾಗರಿಕ ಪ್ರಜ್ಞೆಯ ಇತಿಮಿತಿಯನ್ನೂ ದಾಟಿದ್ದು, ಕೋಮು ಸಂಘರ್ಷವನ್ನು ಹೆಚ್ಚಿಸುವಂತಿರುತ್ತವೆ. ಆದರೆ ಇಂತಹ ಚಟುವಟಿಕೆಗಳನ್ನು ಕಾನೂನು ಕ್ರಮದ ಮೂಲಕ, ಜಾರಿಯಲ್ಲಿರುವ ಕಾಯ್ದೆಗಳ ಅನ್ವಯ ನಿಯಂತ್ರಿಸಬೇಕೇ ಹೊರತು, ಪ್ರತಿರೋಧ ಮತ್ತು ಅಪರಾಧದ ನಡುವಿನ ತೆಳುಗೆರೆಯನ್ನೆ ಮಸುಕಾಗಿಸುವಂತಹ ಕ್ರಮಗಳ ಮೂಲಕ ನೋಡಬಾರದು.

ಪ್ರಜಾಪ್ರಭುತ್ವದಲ್ಲಿ ಧೃವೀಕರಿಸುವ ಸಿದ್ಧಾಂತಗಳನ್ನು ಎದುರಿಸಲು ಅದನ್ನು ದಮನಿಸುವುದರಿಂದ ಸಾಧ್ಯವಿಲ್ಲ. ಅದನ್ನು ಬೌದ್ಧಿಕವಾಗಿ, ನೈತಿಕವಾಗಿ, ರಾಜಕೀಯವಾಗಿ ಎದುರಿಸಿ ನಿಲ್ಲಬೇಕಾಗುತ್ತದೆ. ಆರೆಸ್ಸೆಸ್ ಸಿದ್ಧಾಂತ ಅಪಾಯಕಾರಿ ಎಂದು ರಾಜ್ಯ ಸರ್ಕಾರ ಭಾವಿಸಿದರೆ, ಅದನ್ನು ಸಾರ್ವಜನಿಕ ವಲಯದಲ್ಲಿ ಪ್ರಶ್ನಿಸಬೇಕೇ ಹೊರತು, ಉದ್ಯಾನವನಗಳಿಂದ, ಸಾರ್ವಜನಿಕ ಸಭಾಂಗಣದಿಂದ ನಿಷೇಧಿಸುವ ಮೂಲಕ ಅಲ್ಲ.

ನಿಷೇಧಗಳು ಹುತಾತ್ಮರನ್ನು ಸೃಷ್ಟಿಸುತ್ತದೆ ಎಂಬ ವಾಸ್ತವ ಚಾರಿತ್ರಿಕವಾಗಿ ನಿರೂಪಿತವಾಗಿದೆ. ಸಮಾಲೋಚನೆ ಮತ್ತು ಉತ್ತರದಾಯಿತ್ವವು ಪ್ರಜಾಪ್ರಭುತ್ವವನ್ನು ಬಲಪಡಿಸುತ್ತದೆ. ಹಾಗಾಗಿ ಕರ್ನಾಟಕದ ಮುಂದಿರುವ ಆಯ್ಕೆ ಆರೆಸ್ಸೆಸ್ ನಿಷೇಧಿಸುವುದಲ್ಲ. ಇತಿಹಾಸದಲ್ಲಿ ನೈತಿಕ ಗೆಲುವಿನ ಭ್ರಮೆಗೊಳಗಾಗಿ ಮಾಡಿದ ಪ್ರಮಾದಗಳನ್ನೇ ಮತ್ತೆ ಮಾಡಲು ಉಚಿತವೇ ಎನ್ನುವ ಪ್ರಶ್ನೆ ಕಾಂಗ್ರೆಸ್ ಪಕ್ಷವನ್ನು ಕಾಡಬೇಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again