ಶಿವರಾಮ ಕಾರಂತರು ಇಂದು ಬದುಕಿದ್ದರೆ...



ಅಹುದಾದರಹುದೆನ್ನಿ * ಬಿವಿಸೀ

ಕರ್ನಾಟಕದ ಮೇರು ಸಾಹಿತಿ, ಕಾದಂಬರಿಕಾರ, ವೈಚಾರಿಕ ಚಿಂತಕ, ಪರಿಸರವಾದಿ ಮತ್ತು ನಿರ್ಭೀತ ಸಾರ್ವಜನಿಕ ಬುದ್ಧಿಜೀವಿ ಆಗಿದ್ದ ಕೋಟ ಶಿವರಾಮ ಕಾರಂತ ತಮ್ಮ 95ನೆ ವಯಸ್ಸಿನಲ್ಲಿ ದೇಹ ತ್ಯಾಗಗೈದರು. ಕಾರಂತರನ್ನು ಸಾಮಾನ್ಯವಾಗಿ ಏಕ ವ್ಯಕ್ತಿ ವಿಶ್ವವಿದ್ಯಾಲಯ ಎಂದೇ ಕರೆಯಲಾಗುತ್ತಿತ್ತು, ಏಕೆಂದರೆ ಅವರ ಜ್ಞಾನದ ವ್ಯಾಪಕತೆ ಮತ್ತು ಅವರ ಕೊಡುಗೆಗಳ ಅಪಾರ ವ್ಯಾಪ್ತಿ. ಅದಕ್ಕಿಂತಲೂ ಹೆಚ್ಚಾಗಿ ಯಾವುದಕ್ಕೂ ರಾಜಿಮಾಡಿಕೊಳ್ಳದ ಅವರ ಧೈರ್ಯ ಮೆಚ್ಚುವಂತಹುದಾಗಿತ್ತು. ನೇರ ನುಡಿಗಳಲ್ಲಿ ತಪ್ಪನ್ನು ತಪ್ಪು ಎಂದು ಹೇಳಲು ಎಂದೂ ಹಿಂಜರಿಯದ ಕಾರಂತರು, ಅವರ ವಿರುದ್ಧ ಎಷ್ಟೇ ಬಲಾಢ್ಯ ಶಕ್ತಿಗಳಿದ್ದರೂ ಹಿಂಜರಿಯುತ್ತಿರಲಿಲ್ಲ.

ಕಾರಂತರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಮ್ಮ ಜೀವನ ಕಳೆದಿದ್ದರು, ಇದೇ ಪ್ರದೇಶವೇ ಈಗ ಸರಣಿ ಅತ್ಯಾಚಾರ, ಹತ್ಯೆಗಳು ಮತ್ತು ಪ್ರಕರಣಗಳನ್ನು ಮುಚ್ಚಿಹಾಕುವ ಧರ್ಮಸ್ಥಳದ ವಿರುದ್ಧದ ಆರೋಪಗಳಿಗೆ ಈಡಾಗಿದೆ. ಇಬ್ಬರು ಯುವ ಮಹಿಳೆಯರ ಹೆಸರು, ವೇದವಲ್ಲಿ (1983ರಲ್ಲಿ ಹತ್ಯೆಗೀಡಾದರು) ಮತ್ತು ಪದ್ಮಲತಾ (ಇವರ ಸಾವು ಜಿಲ್ಲೆಯಲ್ಲಿ ಆಘಾತ ಮೂಡಿಸಿತ್ತು) ಅಸಹಜ ಸಾವಿನ ಸಂಕೇತವಾಗಿ ದಾಖಲಾಗಿದ್ದು, ಆ ಸಮಯದಲ್ಲಿ ಪ್ರಕರಣವನ್ನು ಮುಚ್ಚಿಹಾಕಿದ್ದರಿಂದಲೂ ಕುಖ್ಯಾತಿ ಪಡೆದಿತ್ತು. ಇಂದು ಈ ವಿವಾದವು ಇನ್ನೂ ಹೆಚ್ಚಿನ ಶಕ್ತಿಯೊಂದಿಗೆ ಮರಳಿ ಸಾರ್ವಜನಿಕರಲ್ಲಿ ಪ್ರಕಟವಾಗುತ್ತಿದ್ದು, ಸಹಜವಾಗಿಯೇ, ಒಂದು ವೇಳೆ ಶಿವರಾಮ ಕಾರಂತರು ಬದುಕಿದ್ದರೆ ಏನು ಹೇಳುತ್ತಿದ್ದರು ಎಂಬ ಪ್ರಶ್ನೆ ಹುಟ್ಟುತ್ತದೆ.

ಇದನ್ನು ಊಹಿಸಿಕೊಳ್ಳುವುದಕ್ಕೂ ಸಹ ನಾವು ಅವರ ದನಿಯ ಅಂತಃಸತ್ವವನ್ನು ಮತ್ತೊಮ್ಮೆ ಸ್ಮರಿಸಬೇಕಿದೆ. ನೇರ ನುಡಿ, ವೈಚಾರಿಕತೆ, ನೈತಿಕವಾಗಿ ರಾಜಿಯಾಗದ ಆ ದನಿಯನ್ನು ನೆನಪಿಸಿಕೊಳ್ಳಬೇಕಿದೆ. ಕಾರಂತರ ಸ್ಫೂರ್ತಿಯೊಂದಿಗೆ, ಅವರು ಇಂದು ಏನು ಮಾತನಾಡಬಹುದಿತ್ತು ಎಂಬುದರ ಒಂದು ಊಹಾತ್ಮಕ ವಿಚಾರ ಇಲ್ಲಿದೆ.


.............


ದಕ್ಷಿಣ ಕನ್ನಡದ ನನ್ನ ಪ್ರೀತಿಯ ಕನ್ನಡಿಗರೇ, ಸೋದರ ಸೋದರಿಯರೇ,

ಇಂದು ನಾನು ನಿಂತಿರುವ ಗಳಿಗೆಯಲ್ಲಿ ನನ್ನ ಮನಸ್ಸಿನಲ್ಲಿ ಇಬ್ಬರು ಮಹಿಳೆಯರ ಹೆಸರುಗಳು ಧ್ವನಿಸುತ್ತದೆ - ವೇದವಲ್ಲಿ ಮತ್ತು ಪದ್ಮಲತಾ. ಅವರ ಬದುಕನ್ನು ಅಸಹಜ ರೀತಿಯಲ್ಲಿ, ಕ್ರೂರವಾಗಿ ಬಣ್ಣಿಸಲಾಗದ ರೀತಿಯಲ್ಲಿ  ಕೊನೆಗೊಳಿಸಲಾಯಿತು. ಈ ಸಾವುಗಳು ನಾನು ಹುಟ್ಟಿ ಬೆಳೆದ ಈ ಮಣ್ಣಿನ ಕಣಕಣಗಳನ್ನೂ ಆಘಾತಕ್ಕೊಳಪಡಿಸಿತ್ತು. ಆದರೂ ದಶಕಗಳ ನಂತರವೂ ಈ ಭೂಮಿ ಕಳಂಕದಿಂದ ಕೂಡಿದ್ದು, ಸತ್ಯವನ್ನು ಸಮಾಧಿ ಮಾಡಲಾಗಿದೆ, ನ್ಯಾಯ ನಿರಾಕರಿಸಲಾಗಿದೆ.

ನಾವು ಎಂತಹ ಸಮಾಜದಲ್ಲಿದ್ದೇವೆ? ನಮ್ಮ ಹೆಣ್ಣುಮಕ್ಕಳ ನೋವಿನ ದನಿಗಳನ್ನು ಹಣಬಲ, ಪ್ರಭಾವಗಳ ಮೂಲಕ ಭಕ್ತಿಯ ಸುಳ್ಳು ಆಡಂಬರದ ಮೂಲಕ ಅದುಮಿಡುವ ಸಮಾಜದಲ್ಲಿದ್ದೇವೆ ಎಂದರೆ ಏನರ್ಥ? ನಮ್ಮ ನಡುವಿನ ಹೆಣ್ಣು ಮಕ್ಕಳಿಗೆ ರಕ್ಷಣೆ, ಘನತೆಯನ್ನು ಕಲ್ಪಿಸದಿರುವಾಗ, ನಮ್ಮ ವಿದ್ಯಾಭ್ಯಾಸ, ಸಂಸ್ಕøತಿ, ದೇವಾಲಯಗಳು ಮತ್ತು ಉತ್ಸವಗಳಿಂದ ಆಗುವ ಪ್ರಯೋಜನವಾದರೂ ಏನು?

ನಾನು ಜೀವನದುದ್ದಕ್ಕೂ ಹೇಳುತ್ತಲೇ ಬಂದಿದ್ದೇನೆ, ಅಧಿಕಾರದ ಭೀತಿಯಲ್ಲಿ ಬದುಕಬೇಡಿ, ಅನ್ಯಾಯಗಳು ಬಣ್ಣ ಬಣ್ಣದ ಉಡುಪುಗಳಲ್ಲಿ, ರೇಷಿಮೆ ವಸ್ತ್ರಗಳಲ್ಲಿ, ಆಚರಣೆಗಳಲ್ಲಿ ಕಂಡ ಮಾತ್ರಕ್ಕೆ ನೀವು ಕಣ್ಣು ಮುಚ್ಚಬೇಡಿ, ತಪ್ಪನ್ನು ತಪ್ಪು ಎಂದು ಹೇಳಲೇಬೇಕಾಗುತ್ತದೆ. ಅಲ್ಲಿ ನೆತ್ತರು ಮೆತ್ತಿದ್ದರೆ, ಅದನ್ನು ಗಟ್ಟಿಯಾಗಿ ಹೇಳೋಣ, ಅದರ ಕಾರಣಕರ್ತರು ಯಾರೇ ಆಗಿದ್ದರೂ ದನಿ ಎತ್ತೋಣ.

ವೇದವಲ್ಲಿ ಹತ್ಯೆಯಾದಾಗ, ಸಾರ್ವಜನಿಕರಲ್ಲಿ ಗುಸುಗುಸು ಮಾತುಗಳು ಕೇಳಿಬಂದವು. ಆದರೆ ಧೈರ್ಯ ಕಾಣಲಿಲ್ಲ. ಪದ್ಮಲತಾ ಬದುಕು ಅಂತ್ಯವಾದಾಗ, ಇಡೀ ಜಿಲ್ಲೆಯಲ್ಲಿ ಸಂಚಲನ ಉಂಟಾಗಿತ್ತು, ಆದರೆ ನಂತರ ಮೌನ ಆವರಿಸಿತು, ಇದು ಅಸ್ವಾಭಾವಿಕವಾಗಿತ್ತು. ಬಲಾಢ್ಯರು, ಅಧಿಕಾರಸ್ಥರು ಎಲ್ಲವನ್ನೂ ಮುಚ್ಚಿಹಾಕಿದರು. ಸುದ್ದಿಪತ್ರಿಕೆಗಳು, ನಾಯಕರು, ಸಂಸ್ಥೆಗಳು ಎಲ್ಲರೂ ವಿಮುಖರಾದರು. ಮಾತನಾಡಲು ಧೈರ್ಯ ತೋರಿದವರನ್ನು ಶತ್ರುಗಳೆಂದು ಬಿಂಬಿಸಲಾಯಿತು.

ಆದರೆ ಸತ್ಯ ತನ್ನದೇ ಆದ ರೀತಿಯಲ್ಲಿ ಮರುಕಳಿಸುತ್ತದೆ. ಹಲವು ವರ್ಷಗಳ ಕಾಲ ಸತ್ಯದ ಸಮಾಧಿ ಮಾಡಬಹುದು. ಆದರೆ ಅದು ಮತ್ತೆ ಹೊರಬರುತ್ತದೆ, ಅನಿಯಂತ್ರಿತವಾಗಿ ಬಂಡೆಯೊಳಗೆ ಚಿಲುಮೆ ಹುಟ್ಟುವಂತೆ ಹುಟ್ಟಿ ಬರುತ್ತದೆ. ಈಗ ಕರ್ನಾಟಕದಲ್ಲಿ ಸತ್ಯವು ಸಾರ್ವಜನಿಕ ಚರ್ಚೆಯಲ್ಲಿ ಸ್ಪೋಟಿಸಿದೆ.

ನಾನು ಇಂದು ಏನು ಹೇಳಬಲ್ಲೆ? ವೇದವಲ್ಲಿಯನ್ನು ಕೊಂದವರು ಯಾರು, ಪದ್ಮಲತಾಳನ್ನು ಕೊನೆಗೊಳಿಸಿದವರು ಯಾರು ಎಂದು ಧೈರ್ಯದಿಂದ ಕೇಳದೆ ಹೋದರೆ ನಮಗೆ ನಾಚಿಕೆಯಾಗಬೇಕು ಎಂದು ದೊಡ್ಡ ದನಿಯಲ್ಲಿ ಹೇಳುತ್ತೇನೆ. ದನಿಯಿಲ್ಲದ ನೂರಾರು ಹೆಣ್ಣು ಮಕ್ಕಳ ಅಮಾಯಕತೆಯನ್ನು ಬಳಸಿ ಅವರನ್ನು ದಮನಿಸಿದ್ದು ಯಾರು ಎಂದು ಪ್ರಶ್ನಿಸದಿದ್ದರೆ ನಾವು ತಲೆ ತಗ್ಗಿಸಬೇಕಾಗುತ್ತದೆ. ದುರ್ಬಲರೊಡನೆ ನಿಲ್ಲದೆ ಪ್ರಬಲ ಶಕ್ತಿಗಳೊಡನೆ ನಿಲ್ಲುವುದಾದರೆ ನಾವು ಲಜ್ಜೆಯಿಂದ ತಲೆ ತಗ್ಗಿಸಬೇಕಾಗುತ್ತದೆ.

ಸೇವಾ ಯೋಜನೆಗಳು, ಸಂಪತ್ತು ಮತ್ತು ಉದಾರ ದಾನ ಇತ್ಯಾದಿಗಳ ಬಗ್ಗೆ ನನಗೆ ಹೇಳದಿರಿ. ಎಷ್ಟೇ ಆಸ್ಪತ್ರೆಗಳು, ಶಾಲಾ ಕಾಲೇಜುಗಳು, ದೇವಾಲಯಗಳು ಇದ್ದರೂ ಅದು ಮಹಿಳೆಯರ ವಿರುದ್ಧ ನಡೆದ ಒಂದು ಅಪರಾಧವನ್ನು ಅಳಿಸಲಾಗುವುದಿಲ್ಲ. ಉತ್ತಮ ಕಾರ್ಯಗಳು ಕರಾಳ ಕೃತ್ಯಗಳನ್ನು ಮರೆಮಾಚಿಸುತ್ತವೆ, ವೇದವಲ್ಲಿಯ ಒಂದು ಪ್ರಕರಣವು ಇಡೀ ಸಮಾಜವನ್ನು ಕಾಡಿದ ಗಾಯವಾಗಿದೆ. ಕೊನೆಗೊಳಿಸಲಾದ ಒಬ್ಬ ಪದ್ಮಲತಾ ನಮ್ಮೆಲ್ಲರಿಗೆ ಶಾಪವಾಗಿ ಕಾಣುತ್ತದೆ.

ನನ್ನ ಸೋದರ ಸೋದರಿಯರೇ, ಸತ್ಯ ಮತ್ತು ನ್ಯಾಯ ಅನುಕೂಲ ಇದ್ದಾಗ ಧರಿಸುವ ಆಲಂಕಾರಿಕ ವಸ್ತುಗಳಲ್ಲ. ಅವು ಜೀವನದಲ್ಲಿ ಅಳವಡಿಸಬೇಕಾದ ಕರ್ತವ್ಯಗಳು, ಅಪಾಯ ಇದ್ದಾಗಲೂ ಅನುಸರಿಸಬೇಕಾದ್ದು. ಮೌನ ಎನ್ನುವುದು ಧರ್ಮ ಅಲ,್ಲ ವಿಶ್ವಾಸ ದ್ರೋಹ.

ನಾನು ಯುವಕನಾಗಿದ್ದಲ್ಲಿ, ನನ್ನ ದೇಹದಲ್ಲಿ ಶಕ್ತಿ ಇದ್ದಿದ್ದಲ್ಲಿ, ಧರ್ಮಸ್ಥಳಕ್ಕೆ ನಾನೇ ಖುದ್ದು ನಡೆದು ಹೋಗುತ್ತಿದ್ದೆ, ಯಾರು ಅಪರಾಧಿಗಳು ಎಂದು ಪ್ರಶ್ನಿಸುತ್ತಿದ್ದೆ. ಅವರನ್ನು ಏಕೆ ರಕ್ಷಿಸಲಾಗಿದೆ ಎಂದು ಪ್ರಶ್ನಿಸುತ್ತಿದ್ದೆ. ನ್ಯಾಯವನ್ನು ಏಕೆ ನಿರಾಕರಿಸಲಾಗುತ್ತಿದೆ ಎಂದು ಕೇಳುತ್ತಿದ್ದೆ. ಆದರೆ ನನ್ನ ವೃದ್ಧಾಪ್ಯದ ದನಿಯೂ ಸಹ ಸುಮ್ಮನಿರಲು ಒಪ್ಪುವುದಿಲ್ಲ. ನಿಮ್ಮ ದನಿಗಳು ಮೌನವಾಗಿದೆಯೇ ಎಂದು ನಿಮ್ಮನ್ನೇ ಕೇಳುತ್ತೇನೆ.

ಈ ಭೂಮಿಯು ಅಪರಾಧಗಳನ್ನು ಮುಚ್ಚಿಹಾಕಿದ ನೆಲ ಎಂದು ನೆನಪಿನಲ್ಲಿ ಉಳಿಯಬಾರದು. ಬದಲಾಗಿ ಜನರು ಸುಳ್ಳುಗಳ ಮುಂದೆ ತಲೆಬಾಗದೆ, ಎಚ್ಚೆತ್ತು, ಪ್ರಶ್ನಿಸಿದ ಭೂಮಿ ಎಂದು ದಾಖಲಾಗಲಿ. ಅದೊಂದೇ ಧರ್ಮವನ್ನು ಉಳಿಸುವ ಮಾರ್ಗ.

ಸತ್ಯವೇ ಧರ್ಮ, ನ್ಯಾಯವೇ ಧರ್ಮ. ಉಳಿದೆಲ್ಲವೂ ಮಿಥ್ಯೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again