ಧರ್ಮಸ್ಥಳ: ಕರ್ನಾಟಕದ ಯುವ ತಲೆಮಾರಿನ ಗಳಿಗೆ
ಎಸ್‍ಐಟಿ ತನಿಖೆಯು ಕೇವಲ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ಮಾತ್ರ ಅಲ್ಲ. ಅದು ಕರ್ನಾಟಕದ ರಾಜಕೀಯ ಪ್ರಾಮಾಣಿಕತೆಯ ಅಗ್ನಿಪರೀಕ್ಷೆಯಾಗಿದೆ.
ಬಹುತೇಕ ಮಹಿಳೆಯರನ್ನೇ ಒಳಗೊಂಡಿರುವ, ಧರ್ಮಸ್ಥಳ ನರಮೇಧದ ಪ್ರಕರಣಗಳ ಬಗ್ಗೆ ಎಸ್‍ಐಟಿ ತನಿಖೆ ಕರ್ನಾಟಕದಲ್ಲಿ ಅವಿಶ್ವಾಸದ ಒಂದು ನಿರ್ಣಾಯಕ ಘಟ್ಟವಾಗಿ ಪರಿಣಮಿಸುತ್ತಿದೆ. ಸಾರ್ವಜನಿಕರಲ್ಲಿ ಭರವಸೆ ಮೂಡಿಸುವುದರ ಬದಲು, ಎಸ್‍ಐಟಿ ಮತ್ತು ಸರ್ಕಾರವು ಈ ಪ್ರಕರಣಗಳನ್ನು ನಿರ್ವಹಿಸುತ್ತಿರುವ ರೀತಿ ಗಮನಿಸಿದರೆ, ಇದು ತನಿಖೆಯ ಬಗ್ಗೆಯೇ ಅನುಮಾನಗಳನ್ನು ಹುಟ್ಟುಹಾಕಿದ್ದು, ಸತ್ಯವನ್ನು ಹೊರಗೆಡಹದಂತೆ, ಪ್ರಭಾವಶಾಲಿ ಕುಟುಂಬವನ್ನು ರಕ್ಷಿಸಲು ತನಿಖೆಯನ್ನು ನಡೆಸಲಾಗುತ್ತಿದೆ. ವಿಶ್ವಾಸ ದ್ರೋಹದ ಭಾವನೆ ವ್ಯಾಪಕವಾಗಿ ಹರಡುತ್ತಿದ್ದು, ಮಹಿಳಾ ಸಮೂಹಗಳ ಆಕ್ರೋಶವು ರಾಜ್ಯವ್ಯಾಪಿ ಪ್ರಭಾವ ಬೀರುವಂತಹ ರಾಜಕೀಯ ವಿವಾದವಾಗಿ ಪರಿಣಮಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.
ವಿವಿಧ ಜಿಲ್ಲೆಗಳಲ್ಲಿ, ಮಹಿಳಾ ಗುಂಪುಗಳು ಸಾರ್ವಜನಿಕ ಸಭೆಗಳನ್ನು ನಡೆಸುತ್ತಿದ್ದು, ಸರ್ಕಾರವು ನಾಚಿಕೆ ಇಲ್ಲದೆ ತನಿಖೆಯನ್ನು ಹಳ್ಳ ಹಿಡಿಸುತ್ತಿದೆ ಎಂದು ಆರೋಪಿಸುತ್ತಿವೆ. ಇವರ ಆಕ್ರೋಶವು ಹೆಚ್ಚಾಗಲು ಕಾರಣ, ಸೌಜನ್ಯಾಗೆ ನ್ಯಾಯ ಚಳುವಳಿಯನಾಯಕರಾದ ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ ಅವರನ್ನು ಬಂಧಿಸಿರುವುದು. ನ್ಯಾಯಯುತ ತನಿಖೆಯನ್ನು ಬಿಂಬಿಸುವ ಬದಲು, ಈ ಬಂಧನಗಳು ಪ್ರತಿರೋಧವನ್ನು ಅಡಗಿಸುವ ಮತ್ತು ಧರ್ಮಸ್ಥಳದ ಪ್ರಭಾವಿ ಕುಟುಂಬವನ್ನು ರಕ್ಷಿಸುವ ಸಲುವಾಗಿ ಕೈಗೊಂಡ ಕ್ರಮ ಎಂದು ಸಾರ್ವಜನಿಕರು ಭಾವಿಸುತ್ತಿದ್ದಾರೆ. ಸಾರ್ವಜನಿಕರ ಮನಸ್ಸಿನಲ್ಲಿ ಇದು ಕಾನೂನಿಗೆ ಸಂಬಂಧಿಸುವುದಕ್ಕಿಂತಲೂ ಹೆಚ್ಚಾಗಿ, ಸರ್ಕಾರವು ಪ್ರಭಾವಶಾಲಿ ಕುಟುಂಬಕ್ಕೆ ಶರಣಾಗುತ್ತಿರುವ ದುರದೃಷ್ಟಕರ ಬೆಳವಣಿಗೆ ಎಂಬ ಭಾವನೆ ಮೂಡುತ್ತಿದೆ.
ಪ್ರತಿಭಟನಾಕಾರರು ಹೇಳುವ ಮತ್ತೊಂದು ದುರದೃಷ್ಟಕರ ಅಂಶ ಎಂದರೆ, ಎಸ್‍ಐಟಿ ರಚಿಸಿ ತಿಂಗಳುಗಳೇ ಕಳೆದರೂ, ಅದು ಪ್ರಕರಣದ ಒಬ್ಬ ಪ್ರಮುಖ ಡಿಫೆನ್ಸ್ ಸಾಕ್ಷಿಯನ್ನೂ ವಿಚಾರಣೆಗೊಳಪಡಿಸಿಲ್ಲ. ಬದಲಾಗಿ ಮಾಹಿತಿದಾರರನ್ನು, ಕಾರ್ಯಕರ್ತರನ್ನು, ಸೌಜನ್ಯಾಗೆ ನ್ಯಾಯ ಕೇಳುವವರನ್ನು ಪ್ರಶ್ನಿಸುವುದರಲ್ಲಿ ತೊಡಗಿದೆ. ಈ ಬೆಳವಣಿಗೆಯೇ ಇಡೀ ಚಳುವಳಿಗೆ ಆತಂಕಕಾರಿ ಸಂದೇಶವನ್ನು ರವಾನಿಸುತ್ತದೆ. ಅನ್ಯಾಯಕ್ಕೊಳಗಾದ, ನೊಂದ ಬಾಲಕಿಯರ ಮತ್ತು ಮಹಿಳೆಯರ ಪರವಾಗಿ ಹೋರಾಡುವವರಿಗೆ ಚಿತ್ರಹಿಂಸೆ ನೀಡಲಾಗುತ್ತಿದ್ದು, ಗಂಭೀರ ಅಪರಾಧಗಳನ್ನು ಮಾಡಿರುವ ಅನುಮಾನಾಸ್ಪದ ವ್ಯಕ್ತಿಗಳನ್ನು ತನಿಖೆ ತಲುಪುತ್ತಲೂ ಇಲ್ಲ. ಈ ಧೋರಣೆಯೇ ತನಿಖೆಯು ರಾಜಿಯಾಗಿರುವುದಷ್ಟೇ ಅಲ್ಲದೆ, ಸತ್ಯ ಬಯಸುವವರ ವಿರುದ್ಧ ಆಯುಧದಂತೆ ತನಿಖೆಯನ್ನು ಬಳಸಲಾಗುತ್ತಿದೆ ಎಂಬ ಅನುಮಾನ ದೃಢವಾಗುತ್ತಿದೆ.
ಸರ್ಕಾರದ ವಿಶ್ವಾಸಾರ್ಹತೆಯ ಬಿಕ್ಕಟ್ಟು ಅಪಾಯಕಾರಿಯಾಗುತ್ತಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಆಳವಾದ ತನಿಖೆ ನಡೆಸುವುದಾಗಿ ಆಶ್ವಾಸನೆ ಕೊಟ್ಟಾಗ ಜನರು ಪಾರದರ್ಶಕತೆಯನ್ನು ನಿರೀಕ್ಷಿಸಿದ್ದರು. ಆದರೆ ಈಗ ನಡೆಯುತ್ತಿರುವುದನ್ನು ಗಮನಿಸಿದರೆ, ಇಡೀ ತನಿಖೆಯು ಧರ್ಮಸ್ಥಳ ಕುಟುಂಬವನ್ನು ನಿರಪರಾಧಿ ಎಂದು ಘೋಷಿಸುವ ರೀತಿಯಲ್ಲಿ ನಡೆಯುತ್ತಿದೆ. ಈ ಕಲ್ಪನೆಯೇ ಸಂಸ್ಥೆಗಳಲ್ಲಿನ ವಿಶ್ವಾಸವನ್ನು ಕುಂದಿಸುತ್ತದೆ. ತನಿಖೆಗಳನ್ನು ನಡೆಸುವುದೇ ಪ್ರಬಲ ವ್ಯಕ್ತಿಗಳನ್ನು ರಕ್ಷಿಸಲು ಎಂಬ ಭಾವನೆ ನಾಗರಿಕರಲ್ಲಿ ಮೂಡಿದರೆ ಸರ್ಕಾರವೇ ಅನ್ಯಾಯದೊಡನೆ ಶಾಮೀಲಾಗಿದೆ ಎನ್ನುವ ಭಾವನೆ ದೃಢವಾಗುತ್ತದೆ. ರಾಜಕೀಯ ನಾಯಕತ್ವವು ಈ ದುಬಾರಿ ಬೆಲೆಯನ್ನು ಹೆಚ್ಚು ಕಾಲ ತೆರದೇ ಇರಲಾಗುವುದಿಲ್ಲ.
ಮಹಿಳಾ ಸಮುದಾಯದ ಕ್ರೋಢೀಕರಣ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತಿರಬೇಕು. ಇತಿಹಾಸ ನಿರೂಪಿಸಿರುವಂತೆ, ಮಹಿಳೆಯರ ನೇತೃತ್ವದ ಆಂದೋಲನ, ಪ್ರತಿಭಟನೆಗಳು, ಉದಾಹರಣೆಗೆ 1970ರ ಮಥುರಾ ಅತ್ಯಾಚಾರದ ಪ್ರಕರಣ ಕಾನೂನುಗಳನ್ನೇ ಬದಲಿಸಿದ್ದು ನಂತರದ ದಿನಗಳಲ್ಲಿ ರಾಜಕಾರಣಕ್ಕೆ ನ್ಯಾಯಯುತ ದಿಕ್ಕು-ದೆಸೆ ತೋರಿಸಿದೆ. ಕರ್ನಾಟಕ ಇಂತಹುದೇ ನಿರ್ಣಾಯಕ ಘಟ್ಟ ತಲುಪಿದೆ. ಮಹಿಳೆಯರ ದನಿ, ಒಮ್ಮೆ ಕ್ರೋಢೀಕರಣಗೊಂಡರೆ, ಸಾಂಕೇತಿಕ ಬಂಧನಗಳು ಅಥವಾ ಠೊಳ್ಳು ಭರವಸೆಗಳು ಅದನ್ನು ಅಡಗಿಸಲಾಗುವುದಿಲ್ಲ. ಅವರನ್ನು ನಿರ್ಲಕ್ಷಿಸುವುದರಿಂದ ಆಕ್ರೋಶವು ಉಲ್ಬಣಿಸಿ, ಜನಸಮುದಾಯದ ರಾಜಕೀಯ ನಿಷ್ಠೆಗಳನ್ನೇ ಬದಲಾಯಿಸುವ ಒಂದು ಶಕ್ತಿಯಾಗಿ ಪರಿಣಮಿಸುತ್ತದೆ.
ವಿಮರ್ಶಕರು, ವಿಶ್ಲೇಷಕರು ಈ ಬೆಳವಣಿಗೆಗಳನ್ನು ಸಂಭಾವ್ಯ ಪ್ರಬಲ ಜೆನ್ ಝಡ್ ಗಳಿಗೆ ಎಂದೇ ಪರಿಗಣಿಸುತ್ತಾರೆ. ಈ ಪದಗಳು ಭ್ರಮನಿರಸನಗೊಂಡ ಯುವ ಸಮೂಹ, ಡಿಜಿಟಲ್ ಕಾರ್ಯಶೀಲತೆ, ಲಿಂಗತ್ವ ಪ್ರೇರಿತ ಆಕ್ರೋಶ, ಭ್ರಷ್ಟಾಚಾರ ಎಲ್ಲವನ್ನೂ ಸಮ್ಮಿಳಿತಗೊಳಿಸಿ ಪ್ರತಿನಿಧಿಸುತ್ತದೆ. ಸಾಮಾಜಿಕ ಮಾಧ್ಯಮಗಳ ಪ್ರಚಾರಗಳು, ಕ್ಯಾಂಪಸ್ ಪ್ರತಿಭಟನೆಗಳು, ಗ್ರಾಮಗಳಲ್ಲಿನ ಮೆರವಣಿಗೆಗಳು ಒಂದಾಗಿ, ಸೌಜನ್ಯ ಪ್ರಕರಣಕ್ಕಿಂತಲೂ ದೊಡ್ಡ ಪ್ರಮಾಣದ ಚಳುವಳಿಗೆ ಎಡೆಮಾಡಿಕೊಡಬಹುದು. ತಕ್ಷಣದ ಆಗ್ರಹ ಇರುವುದು ನ್ಯಾಯಕ್ಕಾಗಿ, ಆದರೆ ಇದರಿಂದಾಚೆಗೆ ರಾಜ್ಯವು ಜನರಿಗೆ ಸೇರಿದೆಯೋ ಅಥವಾ ಕೆಲವೇ ಪ್ರಬಲ ಶಕ್ತಿಗಳಿಗೆ ಸೇರಿದೆಯೇ ಎಂಬ ಪ್ರಶ್ನೆಯೂ ಅಡಗಿದೆ.
ಅಂತಿಮವಾಗಿ, ಎಸ್‍ಐಟಿ ತನಿಖೆಯು ಕೇವಲ ಧರ್ಮಸ್ಥಳದಲ್ಲಿ ನಡೆದಿರುವ ಅಪರಾಧಗಳ ಬಗ್ಗೆ ಮಾತ್ರ ಅಲ್ಲ. ಅದು ಕರ್ನಾಟಕದ ರಾಜಕೀಯ ಪ್ರಾಮಾಣಿಕತೆಯ ಅಗ್ನಿಪರೀಕ್ಷೆಯಾಗಿದೆ. ಎಸ್‍ಐಟಿ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ, ನಿರ್ಭೀತಿಯಿಂದ ನಡೆದರೆ, ಸರ್ಕಾರವೂ ಘನತೆಯನ್ನು ಉಳಿಸಿಕೊಳ್ಳುವುದು ಸಾಧ್ಯ. ಇಲ್ಲವಾದರೆ, ಅದು ಸಂತ್ರಸ್ತರ ಪಾಲಿಗೆ ನ್ಯಾಯದ ಸಮಾಧಿ ಮಾಡುವುದೇ ಅಲ್ಲದೆ ಸರ್ಕಾರದ ನೈತಿಕ ಅಧಃಪತನವನ್ನೂ ಸೂಚಿಸುವಂತಾಗುತ್ತದೆ. ನ್ಯಾಯವನ್ನು ಅಧಿಕಾರಕ್ಕಾಗಿ ಬಲಿ ಕೊಟ್ಟಾಗ ಸರ್ಕಾರಗಳ ಪತನವಾಗುತ್ತದೆ. ಇದು ವಿರೋಧ ಪಕ್ಷಗಳ ಪ್ರಯತ್ನದಿಂದ ಆಗುವುದಿಲ್ಲ, ಬದಲಾಗಿ ಜನರೇ ತಮ್ಮ ಸಮ್ಮತಿಯನ್ನು ಹಿಂಪಡೆಯಲಾರಂಭಿಸುತ್ತಾರೆ.
Comments
Post a Comment