ಮಾಧ್ಯಮ ನೈತಿಕತೆಯ ಅಧಃಪತನಕ್ಕೆ ಧರ್ಮಸ್ಥಳ ಸಾಕ್ಷಿ

 ಧರ್ಮಸ್ಥಳದ ಪ್ರಕರಣದಲ್ಲಿ, ಮುಖ್ಯವಾಹಿನಿ ಮಾಧ್ಯಮಗಳು ತಮ್ಮ ಸತ್ಯ ಹಾಗೂ ಅನುಕಂಪದ ನೈತಿಕ ಕರ್ತವ್ಯವನ್ನು ಮರೆತಿರುವುದು ಸ್ಪಷ್ಟವಾಗಿದೆ. ದೂರುದಾರರ ಮೇಲೆ ದಾಳಿ ನಡೆಸುತ್ತಾ, ಬಲಾಢ್ಯರನ್ನು ರಕ್ಷಿಸುವ ಮೂಲಕ ಮಾಧ್ಯಮಗಳು ಸಮಾಜದ ಕಾವಲುಪಡೆಗಳಾಗುವುದರ ಬದಲು, ಪ್ರಬಲ ಶಕ್ತಿಗಳೊಡನೆ ಶಾಮೀಲಾಗಿವೆ.  ಸಹಜವಾಗಿಯೇ ನಾಗರಿಕರು ಕಳಂಕಹೊತ್ತ ಮಾಧ್ಯಮಗಳನ್ನು ಬಹಿಷ್ಕರಿಸಲು ಕರೆ ನೀಡುತ್ತಿದ್ದು ಅನ್ಯ ಮಾರ್ಗವೂ ಇಲ್ಲವಾಗಿದೆ.

ಕಳೆದ ಒಂದು ವಾರದಲ್ಲಿ ಹೆಚ್ಚಿನ ಕನ್ನಡ ಮಾಧ್ಯಮಗಳ ಪ್ರಸಾರಗಳನ್ನು ಗಮನಿಸುತ್ತಿದ್ದರೆ ದಿಕ್ಕು ದೆಸೆ ಇಲ್ಲದ ಕಾರ್ಯಸೂಚಿಯನ್ನು ಅನುಸರಿಸುವ ಒಂದು ಮಾದರಿಯನ್ನು ಗುರುತಿಸಬಹುದು.  ಧರ್ಮಸ್ಥಳದ ಪ್ರಕರಣಗಳು ಈಗಾಗಲೇ ದುರಂತಮಯವಾಗುತ್ತಿರುವ ಹಾಗೆಯೇ, ಮಾಧ್ಯಮಗಳೇ ನ್ಯಾಯ ವಿಚಾರಣೆಯನ್ನು ನಡೆಸುವ ಮೂಲಕ ವಿಷಯವನ್ನು ತಿರುಚಲಾಗುತ್ತಿದ್ದು, ಪತ್ರಿಕೋದ್ಯಮ ಎನ್ನುವುದು ವಿಷಯವನ್ನು ತಿರುಚುವ ನ್ಯಾಯಕೇಂದ್ರಗಳಾಗಿ ಕಾಣತೊಡಗಿವೆ. ಟಿವಿ ವಾಹಿನಿಗಳು, ಪತ್ರಿಕೆಗಳು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ ನಿಖರ ಮಾಹಿತಿ ನೀಡುವುದರ ಬದಲು, ಅರ್ಧಸತ್ಯಗಳನ್ನು ಸೃಷ್ಟಿಸುತ್ತಾ ಸತ್ಯ ಮತ್ತು ನ್ಯಾಯಕ್ಕಾಗಿ ಹೋರಾಡುತ್ತಿರುವವರ ವಿರುದ್ಧವೇ ಸುಳ್ಳು ಆರೋಪಗಳನ್ನು ಹೊರಿಸುತ್ತಿವೆ.

ಮಾಧ್ಯಮ ಪ್ರಸಾರಗಳಲ್ಲಿ ಗುರುತಿಸಬಹುದಾದ ಪ್ರಕ್ಷುಬ್ಧ ಲಕ್ಷಣ ಎಂದರೆ ದೂರುದಾರರನ್ನು, ಸಂತ್ರಸ್ತ ಕುಟುಂಬಗಳನ್ನು, ಮಾಹಿತಿದಾರರನ್ನು ಹಾಗೂ ಪ್ರತ್ಯಕ್ಷ ಸಾಕ್ಷಿಗಳನ್ನು ದೋಷಿಗಳನ್ನಾಗಿ ನಿರೂಪಿಸುವುದು. ಚಿನ್ನಯ್ಯ, ಮಟ್ಟಣ್ಣನವರ್, ತಿಮರೋಡಿ, ಜಯಂತ್ ಮತ್ತು ಸುಜಾತಾ ಭಟ್ ಮೊದಲಾದವರ ಮೇಲೆ ದಾಳಿ ನಡೆಸಲಾಗುತ್ತಿದ್ದು, ಅವರೇ ನಿಜವಾದ ಅಪರಾಧಿಗಳು ಎಂದು ಬಿಂಬಿಸಲಾಗುತ್ತಿದೆ. ವರದಿಗಾರರ ಕ್ಯಾಮರಾಗಳು ಇವರನ್ನು ಬೆನ್ನತ್ತಿದ್ದು, ಬೈಟ್‍ಗಳನ್ನು ದಾಖಲಿಸುವ ಮೂಲಕ, ಹೈರಾಣಾದ ಈ ಸಾಕ್ಷಿಗಳು ದುರ್ಬಲರಾಗುವಂತೆ ಮಾಡುತ್ತಿವೆ. ಇದು ಪತ್ರಿಕೋದ್ಯಮದ ಕರ್ತವ್ಯವೇ? ಸಂತ್ರಸ್ತರಲ್ಲಿ ಅವರಿಗಾದ ಆಘಾತವನ್ನು ಮರುಕಳಿಸುವಂತೆ ಮಾಡುವುದು ತನ್ಮೂಲಕ ಟಿಆರ್‍ಪಿ ಹೆಚ್ಚಿಸಿಕೊಳ್ಳುವುದು ಮಾಧ್ಯಮಗಳ ನೈತಿಕತೆಯೇ? ಅಥವಾ ನೈಜ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡುವುದೇ?

ಇದಕ್ಕೆ ವ್ಯತಿರಿಕ್ತವಾಗಿ ಆರೋಪಿಗಳು ಮತ್ತು ಅವರ ಜಾಲಗಳು ಅನುಕಂಪವನ್ನು ಗಳಿಸುವುದೇ ಅಲ್ಲದೆ, ಇಡೀ ಮಾಧ್ಯಮ ಗ್ಯಾಂಗು ರಾಜ್ಯ ಸರ್ಕಾರದ ತನಿಖೆಯ ಪ್ರಕ್ರಿಯೆಯನ್ನು ಅವಹೇಳನ ಮಾಡುವುದರಲ್ಲಿ ತೊಡಗಿವೆ, ಇದು ಅಪರಾಧಗಳ ಗಂಭೀರತೆಯನ್ನು ನಗಣ್ಯಗೊಳಿಸುತ್ತವೆ. ಪತ್ರಿಕೋದ್ಯಮವು ಪಟ್ಟಭದ್ರರ ವಿರುದ್ಧ ಸತ್ಯ ನ್ಯಾಯದ ಅಸ್ತ್ರಗಳಾಗದೆ ಅವರ ರಕ್ಷಾ ಕವಚಗಳಾದರೆ ಉದ್ಯಮದ ತಾತ್ವಿಕ ತಳಹದಿಗೇ ದ್ರೋಹ ಬಗೆದಂತಾಗುತ್ತದೆ.

ಈ ಕಸರತ್ತುಗಳ ಹಿಂದೆ ಹಣಬಲ ಇದೆ. ಅನೇಕ ಮಾಧ್ಯಮ ಸಮೂಹಗಳು ಹಲವು ವರ್ಷಗಳ ಕಾಲ ಧರ್ಮಸ್ಥಳಕ್ಕೆ ಸಂಬಂಧಿಸಿದ ಸಂಸ್ಥೆಗಳು ಮತ್ತು ಪ್ರಭಾವಶಾಲಿ ಕುಟುಂಬಗಳ ಪರ ಪ್ರಸಾರ ಮಾಡುವ ಮೂಲಕ, ಭಾರಿ ಮೊತ್ತದ ಜಾಹೀರಾತುಗಳನ್ನು ಬಿತ್ತರಿಸುತ್ತಾ ಬಂದಿವೆ. ಜತೆಗೇ ಅವು ಪ್ರತ್ಯೇಕ ಡೀಲುಗಳನ್ನು ಕುದುರಿಸಿಕೊಂಡಿವೆ ಎನ್ನುವುದೂ ಕೂಡ ಚರ್ಚಿತವಾಗುತ್ತಿದೆ. ಹೀಗಿರುವಾಗ ಪಟ್ಟಭದ್ರರನ್ನು ಇದೇ ಮಾಧ್ಯಮಗಳು ರಕ್ಷಿಸಲು ಧಾವಿಸುವುದು ಅಚ್ಚರಿಯೇನಲ್ಲ.

ಇದರ ಪರಿಣಾಮಗಳು ಸ್ಪಷ್ಟವಾಗುತ್ತಿದ್ದು ಮಾಧ್ಯಮ ರಂಗದಲ್ಲಿ ಸಾರ್ವಜನಿಕರ ವಿಶ್ವಾಸ ಕುಂದುತ್ತಿದೆ. ಓದುಗರು ಮುಖವಾಣಿಗಳಾಗಿರುವ ವೃತ್ತ ಪತ್ರಿಕೆಗಳನ್ನು ಬಹಿಷ್ಕರಿಸುತ್ತಿದ್ದಾರೆ, ನೋಡುಗರು ಕೇವಲ ರೋಚಕತೆಗೆ ಬೆಲೆ ನೀಡುವ ಟಿವಿ ಸುದ್ದಿಗಳನ್ನು ನೋಡುವುದನ್ನು ನಿಲ್ಲಿಸಿದ್ದಾರೆ. ಪತ್ರಿಕೆಗಳ ಪ್ರಸಾರ ಮತ್ತು ಟಿವಿ ವಾಹಿನಿಗಳ ವೀಕ್ಷಕರ ಸಂಖ್ಯೆಯಲ್ಲಿ ಕುಸಿತವಾಗುತ್ತಿರುವುದು ಸಾರ್ವಜನಿಕರ ಈ ಮೌನ ನಿರ್ಧಾರದ ಪರಿಣಾಮವಾಗಿದೆ. ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕಿರುವುದು ಪತ್ರಿಕೋದ್ಯಮದ ಕರ್ತವ್ಯ.

ಇದು ಬಹುಮುಖ್ಯ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಮಾಧ್ಯಮಗಳು ಯಾರ ಸೇವೆ ಸಲ್ಲಿಸುತ್ತಿವೆ? ಜಾಹಿರಾತುದಾರರ, ರಾಜಕೀಯ ಪೆÇೀಷಕರ, ಪೂಜಾಸ್ಥಾನಗಳ ನಿರ್ವಾಹಕರ ಸೇವೆ ಸಲ್ಲಿಸುತ್ತಿದ್ದಲ್ಲಿ, ಸಾರ್ವಜನಿಕರು ಒಂದು ಕಾಲದಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆಯನ್ನು ಕಾಪಾಡುವ ಸಂಸ್ಥೆಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದೇ ಅರ್ಥ. ದೂರುದಾರರನ್ನು ಬೆದರಿಸುವ ಮಾಧ್ಯಮಗಳು ತಮ್ಮ ಕರ್ತವ್ಯದಲ್ಲಿ ವಿಫಲವಾಗುತ್ತಿರುವುದೇ ಅಲ್ಲದೆ, ಅನ್ಯಾಯದೊಡನೆ ಶಾಮೀಲಾಗುತ್ತಿವೆ.

ಅನೈತಿಕ ಮಾಧ್ಯಮಗಳ ಸಾರ್ವಜನಿಕ ಬಹಿಷ್ಕಾರ ಒಂದೇ ಮಾರ್ಗ ಎಂದು ಹಲವರು ವಾದಿಸುತ್ತಾರೆ. ಈ ರೀತಿಯ ಪ್ರತಿಭಟನೆ ಈಗಾಗಲೇ ನಡೆಯುತ್ತಿದೆ. ನಾಗರಿಕರು ತಮ್ಮ ಚಂದಾದಾರಿಕೆಯನ್ನು ರದ್ದುಪಡಿಸಬಹುದು, ಟಿವಿ ಆಫ್ ಮಾಡಬಹುದು, ತಮ್ಮದೇ ಆದ ಸತ್ಯದ ಪರ ಇರುವ ಸ್ವತಂತ್ರ ವಾಹಿನಿಗಳನ್ನು ಬೆಂಬಲಿಸಬಹುದು,  ಆರಂಭಿಸಬಹುದು. ಇವೆಲ್ಲವೂ ನೋವುಂಟುಮಾಡುವ ಸಂಗತಿಗಳು. ಆದರೆ ಪತ್ರಿಕೋದ್ಯಮವನ್ನು ಅಧಿಕಾರ ಮತ್ತು ಹಣಬಲದಿಂದ ಮರಳಿ ಸರಿಹಾದಿಗೆ ತರಬೇಕಾದರೆ ಇದು ಅವಶ್ಯ.

ಧರ್ಮಸ್ಥಳದ ಪ್ರಕರಣವು ಮಾಧ್ಯಮ ವಿಚಾರಣೆಯು ಒಳ್ಳೆಯದು ಮಾಡುವುದಕ್ಕಿಂತಲೂ ಹೆಚ್ಚು ಕೇಡು ಉಂಟುಮಾಡುತ್ತದೆ ಎನ್ನಲು ಒಂದು ನಿದರ್ಶನ. ಸತ್ಯಶೋಧನೆಗೆ ತಾಳ್ಮೆ, ಅನುಕಂಪ, ಸಹಾನುಭೂತಿ ಮತ್ತು ಪರಿಶೀಲನೆ ಅಗತ್ಯವೇ ಹೊರತು ಕ್ಯಾಮರಾಗಳ ಮುಂದಿನ ವೀರಾವೇಷ ಮಾತುಗಳಲ್ಲ. ಪತ್ರಿಕೆಗಳು ನ್ಯಾಯದ ಪರವಾದ ದನಿಗಳಾಗಿ ನೆನಪಿನಲ್ಲಿ ಉಳಿಯಬೇಕೇ ಅಥವಾ ಅಧಿಕಾರಸ್ಥರೊಡನೆ ಶಾಮೀಲಾಗುವ ಸಂಸ್ಥೆಗಳಾಗಿ ಉಳಿಯಬೇಕೇ ಎನ್ನುವುದನ್ನು ನಿರ್ಧರಿಸಬೇಕಿದೆ. ಅಂತಿಮವಾಗಿ ಈ ಆಯ್ಕೆಯೇ ಭವಿಷ್ಯವನ್ನು ನಿರ್ಧರಿಸುತ್ತದೆ, ಪ್ರಜಾಪ್ರಭುತ್ವದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again