ನಾಟಕೀಯ ಪ್ರಸಂಗವೆನಿಸಿದ ಪಾಕ್ ತಂಡ ಜತೆ ಭಾರತ ಕ್ರಿಕೆಟ್ ಕಲಿಗಳ ಹಸ್ತಲಾಘವ ನಿರಾಕರಣೆ
ಪಂದ್ಯವನ್ನು ಆಡಿ ನಂತರ ಹಸ್ತಲಾಘವಕ್ಕೆ ನಿರಾಕರಿಸಿರುವುದು, ಅದನ್ನು ದೇಶದ ಹೆಮ್ಮೆ ಎಂದು ಬಿಂಬಿಸುವುದು ಕ್ಷುಲ್ಲಕವಾಗುತ್ತದೆ.
............
ಸುಮ್ಮನೆ ಹಾಗೆ * ಬಿವಿಸೀ
ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದ ಪ್ರಜ್ಞೆಯನ್ನು ಕಂಗೆಡಿಸಿತ್ತು. ಕಾಶ್ಮೀರದಲ್ಲಿ ಹತ್ಯೆಗೊಳಗಾದ ಅಮಾಯಕ ಪ್ರವಾಸಿಗರ ಕುಟುಂಬಗಳು ತಮ್ಮ ಸ್ಪಷ್ಟವಾದ ಮನವಿಯನ್ನು ಸಲ್ಲಿಸಿದ್ದರು. ಹಿಂಸೆ ಮತ್ತು ಭಯೋತ್ಪಾದನೆಯನ್ನು ಪೆÇೀಷಿಸುವ ದೇಶದೊಡನೆ ಭಾರತ ಕ್ರಿಕೆಟ್ ಆಡಕೂಡದು ಎಂಬ ಈ ಮನವಿಗೆ ಸಾರ್ವಜನಿಕರೂ ಬಹುತೇಕವಾಗಿ ಸ್ಪಂದಿಸಿದ್ದರು. ಇದು ಕೇವಲ ಕ್ರಿಕೆಟ್ ಕುರಿತಾದದ್ದಲ್ಲ, ಬದಲಾಗಿ ದೇಶದ ಘನತೆ ಮತ್ತು ನೈತಿಕತೆಯ ಪ್ರಶ್ನೆಯಾಗಿತ್ತು.
ಆದರೂ ಭಾರತದ ಕ್ರಿಕೆಟ್ ತಂಡ, ಸರ್ಕಾರದ ಸಂಪೂರ್ಣ ಸಹಮತದೊಂದಿಗೆ, ದುಬೈನಲ್ಲಿ ಪಾಕಿಸ್ತಾನದ ವಿರುದ್ಧ ಆಡಿತ್ತು. ಯಾವುದೇ ಹಿಂಜರಿಕೆ ಇಲ್ಲದೆ, ನೈತಿಕ ಪರಿವೆ ಇಲ್ಲದೆ, ಸಾರ್ವಜನಿಕರಿಗೆ ಆಗಿರುವ ಘಾಸಿಯನ್ನೂ ಲೆಕ್ಕಿಸದೆ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿತ್ತು. ಈ ಪಂದ್ಯವನ್ನು ಆಡುವ ಮೂಲಕ ಭಾರತವು ತನ್ನ ಉನ್ನತ ನೈತಿಕ ನೆಲೆಯನ್ನು ಕಳೆದುಕೊಂಡಂತಾಗಿದೆ.
ತದನಂತರ ನಡೆದದ್ದು ನಾಟಕೀಯ ಬೆಳವಣಿಗೆಗಳು. ಟಾಸ್ ಗೆದ್ದ ನಂತರ ಭಾರತದ ಆಟಗಾರರು ಪಾಕ್ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿದರು. ಪಂದ್ಯವನ್ನು ಗೆದ್ದ ನಂತರ, ಇದೇ ವರ್ತನೆಯನ್ನು ತೋರಿದ್ದರು. ಹಠಾತ್ತನೆ ಈ ಅನಾದರವನ್ನೇ ವೀರತ್ವದ ನಡವಳಿಕೆಯಂತೆ ಬಿಂಬಿಸಲಾಯಿತು. ಪಂದ್ಯದ ವೀಕ್ಷಕ ವಿವರಣೆಗಾರರು, ಹಸ್ತಲಾಘವಕ್ಕೆ ನಿರಾಕರಿಸಿರುವುದನ್ನೇ ದೇಶದ ಗೆಲುವು ಎನ್ನುವಂತೆ ಬಿಂಬಿಸಿದ್ದರು. ಇದು ಪಾಕಿಸ್ತಾನಕ್ಕೆ ನೀಡಿದ ದಿಟ್ಟ ಉತ್ತರ ಎಂದು ಬಿಂಬಿಸಲಾಯಿತು. ಆದರೆ ಇಲ್ಲಿ ಸಾಧಿಸಿದ್ದಾದರೂ ಏನು?
ಬಾರತಕ್ಕೆ ನಿಜಕ್ಕೂ ಒಂದು ಸಂದೇಶವನ್ನು ರವಾನಿಸುವ ಉದ್ದೇಶವೇ ಇದ್ದರೆ, ಭಯೋತ್ಪಾದಕತೆಯ ದಲ್ಲಾಳಿಗಳೊಡನೆ ಪಂದ್ಯವನ್ನು ಆಡುವುದಿಲ್ಲ ಎಂಬ ಸಂದೇಶ ನೀಡಬೇಕಿದ್ದರೆ, ಪಂದ್ಯ ಆಡಲು ನಿರಾಕರಿಸಬೇಕಿತ್ತು. ಆಗ ಸಾರ್ವಜನಿಕರ ಭಾವನೆಗಳಿಗೆ ತಕ್ಕಂತೆ ವರ್ತಿಸಿದಂತಾಗುತ್ತಿತ್ತು. ಭಯೋತ್ಪಾದನೆ ಮತ್ತು ಆಟ ಒಟ್ಟಿಗೇ ಸಾಗುವುದಿಲ್ಲ ಎಂಬ ಸಂದೇಶವನ್ನೂ ನೀಡಿದಂತಾಗುತ್ತಿತ್ತು. ಪಂದ್ಯವನ್ನು ಆಡಿ ಹಸ್ತಲಾಘವ ನಿರಾಕರಿಸುವುದು ಠಕ್ಕುತನದ ನಡವಳಿಕೆಯಾಗುವುದೇ ಹೊರತು ಪ್ರತಿರೋಧ ಎನಿಸುವುದಿಲ್ಲ.
ಇನ್ನೂ ದುರಂತ ಎಂದರೆ, ಈ ನಾಟಕ ಪ್ರಹಸನವನ್ನು ಪ್ರದರ್ಶಿಸಿದ್ದು, ಅದನ್ನು ಆಡುವ, ನೋಡುವ ಜನತೆಯ ಬುದ್ಧಿವಂತಿಕೆಯನ್ನೇ ಅವಮಾನಿಸಿದಂತಾಗಿದೆ. ಭಾರತದ ಸಾರ್ವಜನಿಕರು ಪಂದ್ಯವನ್ನು ಬಹಿಷ್ಕರಿಸಲು ಆಗ್ರಹಿಸಿದ್ದರು. ಬದಲಾಗಿ ಅವರಿಗೆ ಸಿಕ್ಕಿದ್ದು, ಎಂದಿನಂತೆ ಪಾಕಿಸ್ತಾನದೊಡನೆ ಕ್ರಿಕೆಟ್ ಆಡುವ ಮತ್ತು ಸ್ನೇಹಪರ ಔದಾರ್ಯವನ್ನು ತಡೆಹಿಡಿಯುವ ಮೂಲಕ ಪ್ರತಿರೋಧ ವ್ಯಕ್ತಪಡಿಸುವ ಒಂದು ವಿರೋಧಾಭಾಸದ ನಾಟಕೀಯ ಪ್ರಹಸನ. ಇದು ಶುದ್ಧ ಪೆÇಳ್ಳು ವರ್ತನೆಯಾಗಿದ್ದು, ಇದು ಪಹಲ್ಗಾಮ್ ದಾಳಿಯಲ್ಲಿ ತಮ್ಮ ಕುಟುಂಬದವರನ್ನು ಕಳೆದುಕೊಂಡ ಸಂತ್ರಸ್ತರಿಗೆ ಸಾಂತ್ವನ ನೀಡುವುದಿಲ್ಲ. ಇದು ಜಾಗತಿಕವಾಗಿ ಭಾರತದ ನೈತಿಕತೆಯನ್ನು ಬಿಂಬಿಸುವುದಿಲ್ಲ. ಬದಲಾಗಿ, ಪಾಕಿಸ್ತಾನವನ್ನು ತಿರಸ್ಕರಿಸುವ ಒಂದು ಟಿವಿ ಪ್ರದರ್ಶನವಾಗಿ ಕಾಣುತ್ತದೆ.
ವಾಸ್ತವ ಎಂದರೆ, ಭಾರತ ಎರಡು ದೋಣಿಯಲ್ಲಿ ಚಲಿಸಲಾಗುವುದಿಲ್ಲ. ಕ್ರೀಡೆಗಳನ್ನು ರಾಜಕೀಯದಿಂದ ಮುಕ್ತವಾಗಿರಿಸಬೇಕು. ಆಗ ಆಟಗಾರರು ಪಂದ್ಯದಲ್ಲಿ ಭಾಗವಹಿಸಿ ಪರಸ್ಪರ ಹಸ್ತಲಾಘವ ಮಾಡುತ್ತಾರೆ. ಅಥವಾ ಕ್ರೀಡೆಯನ್ನು ರಾಜಕೀಯ ಅಂಗಳವನ್ನಾಗಿ ಮಾಡಿಕೊಂಡರೆ, ಪಂದ್ಯವನ್ನೇ ಬಹಿಷ್ಕರಿಸಬೇಕಾಗುತ್ತದೆ. ಪಂದ್ಯವನ್ನು ಆಡಿ ನಂತರ ಹಸ್ತಲಾಘವಕ್ಕೆ ನಿರಾಕರಿಸಿರುವುದು, ಅದನ್ನು ದೇಶದ ಹೆಮ್ಮೆ ಎಂದು ಬಿಂಬಿಸುವುದು ಕ್ಷುಲ್ಲಕವಾಗುತ್ತದೆ. ಇದು ಕ್ರೀಡೆ ಮತ್ತು ರಾಜತಾಂತ್ರಿಕತೆ ಎರಡನ್ನೂ ಅಣಕಿಸಿದಂತಾಗುತ್ತದೆ.
ಸ್ಪಷ್ಟತೆಯ ಒಂದು ಅವಕಾಶವೇನಾದರೂ ಇದ್ದಿದ್ದಲ್ಲಿ ಅದು ಈಗ ಲಭ್ಯವಾಗಿತ್ತು. ಸಾರ್ವಜನಿಕರಿಗೆ ನಾಟಕೀಯ ಪ್ರಹಸನಗಳು ಬೇಕಿಲ್ಲ, ಪ್ರಾಮಾಣಿಕತೆ ಬೇಕಿದೆ. ಭಾರತ ಪಾಕಿಸ್ತಾನದೊಡನೆ ವಿರೋಧಿ ತಂಡವಾಗಿ ಆಡಬೇಕು ಅಥವಾ ಆಡಲೇಕೂಡದು. ಎರಡರ ನಡುವೆ ನಡೆಯುವ ನಾಟಕಗಳು, ಡೊಂಬರಾಟವಾಗಿ ಕಾಣುತ್ತದೆ.
Comments
Post a Comment