ಧರ್ಮಸ್ಥಳದ ನರಮೇಧ: ಪ್ರಜ್ಞಾವಂತರ ದಿವ್ಯ ಮೌನ
ಪ್ರಕ್ಷುಬ್ದಗೊಳಿಸುವ ವಿಚಾರ ಎಂದರೆ, ಕೆಲವು ಬುದ್ಧಿಜೀವಿಗಳ ವಿಶ್ವಾಸ ದ್ರೋಹದ ನಡೆ
ಧರ್ಮಸ್ಥಳದಲ್ಲಿ ಅನಾವರಣಗೊಳ್ಳುತ್ತಿರುವ ಭೀಕರ ಚಿತ್ರಣಗಳು, ನೂರಾರು ಮಹಿಳೆಯರ, ಬಾಲೆಯರ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಗಳು ಕೇವಲ ಕಾನೂನು ವ್ಯವಸ್ಥೆಯ ವೈಫಲ್ಯ ಎಂದು ಭಾವಿಸಲಾಗದು. ಇದು ನಾಗರಿಕತೆಗೆ ಸವಾಲಿನ ಪ್ರಶ್ನೆಯಾಗಿದ್ದು ಒಂದು ಸಮಾಜ ತನ್ನ ನೈತಿಕ ನೆಲೆಯನ್ನು ಕಾಪಾಡಿಕೊಳ್ಳಬಲ್ಲದೇ ಎಂಬ ಪರೀಕ್ಷೆಯ ಕಾಲವಾಗಿದೆ. ಕೆಲವೇ ಮಾಧ್ಯಮದವರ ದಿಟ್ಟತನದ ಪರಿಣಾಮ ಈ ಭೀಕರ ಕೃತ್ಯಗಳು ಬಯಲಾಗಿವೆ. ಆದರೆ ಈ ಅಪರಾಧಗಳಷ್ಟೇ ಆಘಾತಕಾರಿಯಾಗಿ ಕಾಣುವುದು, ಸಮಾಜದಲ್ಲಿ ಪ್ರತಿಯೊಂದು ವಿಚಾರದಲ್ಲೂ ತಮ್ಮ ಪ್ರಜ್ಞಾವಂತಿಕೆಯನ್ನು ಮುನ್ನಲೆಗೆ ತಂದು ಪ್ರಚಾರ ಪಡೆಯುವ ಒಂದು ವರ್ಗದ ದಿವ್ಯ ಮೌನ.
ಸಾರ್ವಜನಿಕ ವ್ಯಕ್ತಿಗಳಾದ ರಾಜ್ಯ ಸಭಾ ಸದಸ್ಯೆ ಸುಧಾ ಮೂರ್ತಿ, ಈ ವರ್ಷದ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್, ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಇವರೆಲ್ಲರೂ ಈ ಘಟನೆಗಳ ಬಗ್ಗೆ ಮೌನ ಮುರಿದು ಮಾತನಾಡುತ್ತಾರೆ, ದನಿ ಇಲ್ಲದವರಿಗೆ ದನಿಯಾಗಿ, ಉತ್ತರದಾಯಿತ್ವಕ್ಕಾಗಿ ಆಗ್ರಹಿಸುತ್ತಾರೆ ಎಂಬ ನಿರೀಕ್ಷೆ ಸಹಜವಾದುದು. ಆದರೆ ಈ ವ್ಯಕ್ತಿಗಳ ಮೌನ ನಾಚಿಕೆಗೇಡಿನ ವಿಚಾರ ಅಲ್ಲದಿದ್ದರೂ ಅಚ್ಚರಿದಾಯಕವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಮುಖರ ಅಭಿಪ್ರಾಯಗಳ ದನಿಗೆ ತನ್ನದೇ ಆದ ಪ್ರಾಮುಖ್ಯತೆ ಇರುತ್ತದೆ. ಇದು ಸಾರ್ವಜನಿಕ ಚರ್ಚೆಯ ವಾತಾವರಣವನ್ನು ರೂಪಿಸುವುದೇ ಅಲ್ಲದೆ, ಸರ್ಕಾರಗಳ ನಿರ್ಧಾರಗಳ ಮೇಲೆ ಸಹ ಪ್ರಭಾವ ಬೀರುತ್ತವೆ. ಇಂತಹ ದನಿಗಳು ಮೌನವಾದಾಗ, ಇದು ಅಪರಾಧ ಎಸಗುವ ಪಾತಕಿಗಳಿಗೆ ಧೈರ್ಯ ತುಂಬುತ್ತದೆ, ಸಂತ್ರಸ್ತರಿಗೆ ಅವರ ಸಂಕಟಗಳನ್ನು ಗುರುತಿಸುವ ಅವಶ್ಯಕತೆ ಇಲ್ಲ ಎಂಬ ಸಂದೇಶ ರವಾನೆಯಾಗುತ್ತದೆ.
ಇನ್ನೂ ಹೆಚ್ಚು ಪ್ರಕ್ಷುಬ್ದಗೊಳಿಸುವ ವಿಚಾರ ಎಂದರೆ, ಕೆಲವು ಬುದ್ಧಿಜೀವಿಗಳ ವಿಶ್ವಾಸ ದ್ರೋಹದ ನಡೆ. ಹಂಪ ನಾಗರಾಜಯ್ಯ ಸಾಹಿತ್ಯ ವಿಮರ್ಶೆಯಲ್ಲಿ ಗೌರವ ಪಡೆದಿರುವ ಸಾಹಿತಿ. ಇವರು ಸಂತ್ರಸ್ತರಿಗೆ ಅನುಕಂಪ ತೋರಿಸುವ ಬದಲು, ಜಾತಿ ಮತ್ತು ಸಮುದಾಯದ ಶಕ್ತಿಗಳೊಡನೆ ಗುರುತಿಸಿಕೊಂಡು, ಧರ್ಮಸ್ಥಳದ ಡಿ ಗ್ಯಾಂಗ್ ವಿರುದ್ಧ ಯಾವುದೇ ಕ್ರಮ ಜರುಗಿಸಿದರೆ ಅದು ಗೌರವಕ್ಕೆ ಚ್ಯುತಿ ಉಂಟಾಗುತ್ತದೆ ಎಂದು ಸರ್ಕಾರವನ್ನು ಬೆದರಿಸಿರುವ ಜೈನ ಸ್ವಾಮೀಜಿಗಳ ಜೊತೆಗೆ ನಿಂತಿದ್ದಾರೆ. ಆ ಕ್ಷಣದಲ್ಲಿ ಅವರ ಮಾತುಗಳು ದುರ್ಬಲರಿಗೆ ರಕ್ಷಾಕವಚ ಆಗುವುದರ ಬದಲು ಬಲಾಢ್ಯರಿಗೆ ಅಸ್ತ್ರವಾಗಿ ಪರಿಣಮಿಸಿದೆ. ಇಂತಹ ನೈತಿಕ ಅವನತಿಯನ್ನು ಮರೆಯಲಾಗುವುದಿಲ್ಲ.
ಇನ್ನು ಕೆಲವು ಹಿರಿಯ ವ್ಯಕ್ತಿಗಳು, ಪ್ರಮುಖ ನಾಯಕರು ಯಕ್ಷಗಾನ, ಶಿಕ್ಷಣ, ಬೌದ್ಧಿಕ ವಲಯ ಮತ್ತು ಸಾಹಿತ್ಯದಲ್ಲಿ ಹೆಸರು ಮಾಡಿರುವವರು ಕರಾವಳಿ ಪ್ರದೇಶದಲ್ಲಿದ್ದಾರೆ. ಅನೇಕರು ವೃದ್ಧಾಪ್ಯದಲ್ಲಿದ್ದಾರೆ. ಇವರ ಮೌನ ಇನ್ನೂ ಗಂಭೀರವಾಗಿದೆ. ಸಾರ್ವಜನಿಕ ಗೌರವದ ಮೂಲಕ ತಮ್ಮ ಬದುಕಿನಲ್ಲಿ ಘನತೆ ಸಂಪಾದಿಸಿರುವ ಕೆಲವರು ಅವರ ಸಮುದಾಯಗಳ ನೈತಿಕ ಮಾರ್ಗದರ್ಶಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ನಿರ್ಣಾಯಕ ಗಳಿಗೆಯಲ್ಲಿ ತಾಟಸ್ಥ್ಯದ ಹೆಸರಿನಲ್ಲಿ ಮೌನವಾಗಿದ್ದಾರೆ. ಇದು ದುಷ್ಟ ಶಕ್ತಿಗಳ ಜತೆ ಹೊಂದಾಣಿಕೆಯ ನಡೆಯಾಗಿದೆ. ಅವರ ಮೌನ ಇತಿಹಾಸ ನಿರ್ಮಿಸುತ್ತಿದೆ ಎನ್ನುವುದನ್ನು ಅವರು ಮರೆಯದಿರಲಿ. ಹಾಗಾಗಿ ಇವರು ಕ್ಷಮೆಗೆ ಪಾತ್ರರಾಗುವುದಿಲ್ಲ. ಧರ್ಮಸ್ಥಳದಲ್ಲಿ ನರಮೇಧ ನಡೆಯುತ್ತಿರುವ ಹೊತ್ತಿನಲ್ಲೂ ಇವರು ಅನ್ಯಮನಸ್ಕರಾಗಿದ್ದಾರೆ ಎನ್ನುವುದನ್ನು ಇತಿಹಾಸ ದಾಖಲಿಸುತ್ತದೆ.
ಇಲ್ಲಿರುವುದು ಕೇವಲ ಜೀವ ಕಳೆದುಕೊಂಡವರ ನೋವು, ಸಂಕಟಗಳಲ್ಲ. ಬದಲಾಗಿ ಪ್ರಜಾಪ್ರಭುತ್ವದ ಉತ್ತರದಾಯಿತ್ವದ ಪ್ರಶ್ನೆ. ದೌರ್ಜನ್ಯಗಳು ಸಂಭವಿಸಿದಾಗ, ಪ್ರಭಾವಿ ವ್ಯಕ್ತಿಗಳು ಮೌನ ವಹಿಸುವುದು ಅಮಾಯಕ ನಡೆ ಎನಿಸುವುದಿಲ್ಲ. ಅದು ಅಪರಾಧ ಎಸಗುವವರನ್ನು ರಕ್ಷಿಸುತ್ತದೆ ಅಥವಾ ಸಂತ್ರಸ್ತರನ್ನು ನಿರ್ಲಕ್ಷಿಸುತ್ತದೆ. ಬರಹಗಾರರು, ಕಲಾವಿದರು ಮತ್ತು ಬುದ್ದಿಜೀವಿಗಳು ಸಾಂಸ್ಕøತಿಕ ಉತ್ಸವಗಳ ಆಲಂಕಾರಿಕ ದನಿಗಳಲ,್ಲ ಬದಲಾಗಿ ಸಮಾಜದ ಪ್ರಜ್ಞೆಯನ್ನು ಕಾಪಾಡುವವರು. ಇವರ ಜವಾಬ್ದಾರಿ ಅಧಿಕಾರದಲ್ಲಿರುವವರನ್ನು ಉತ್ತರದಾಯಿಗಳಾಗಿ ಗುರುತಿಸಬೇಕು. ಈ ಕರ್ತವ್ಯದಲ್ಲಿ ವಿಫಲವಾಗುವ ಮೂಲಕ, ಈ ವ್ಯಕ್ತಿಗಳು ತಾವು ಒಂದು ಬಾರಿ ಗಳಿಸಿರಬಹುದಾದ ನೈತಿಕ ಅಧಿಕಾರವನ್ನು ಕಳೆದುಕೊಳ್ಳಲಿದ್ದಾರೆ.
ಧರ್ಮಸ್ಥಳದ ಭೀಕರ ಘಟನೆಗಳು ಈಗಾಗಲೇ ದೇಶದ ಸಾಕ್ಷಿಪ್ರಜ್ಞೆಯನ್ನು ಘಾಸಿಗೊಳಿಸಿವೆ. ಉನ್ನತ ಸಾರ್ವಜನಿಕ ವ್ಯಕ್ತಿಗಳ ಮೌನ ಮತ್ತು ಅಭಿಪ್ರಾಯ ಮೂಡಿಸುವವರ ಮೌನ ಈ ಗಾಯವನ್ನು ಹುಣ್ಣಾಗಿಸುತ್ತದೆ. ಧೈರ್ಯದ ಬದಲು ಇವರು ತಮ್ಮ ಹಿತವನ್ನೇ ಬಯಸಿದರೆ, ಜವಾಬ್ದಾರಿಯ ಬದಲು ಗೌರವವನ್ನೇ ನಿರೀಕ್ಷಿಸಿದರೆ ಇತಿಹಾಸವು ಇಂಥವರನ್ನು ಪ್ರಜಾಪ್ರಭುತ್ವದ ರಕ್ಷಕರೆಂದು ಪರಿಗಣಿಸುವುದಿಲ್ಲ, ಬದಲಾಗಿ ವಿಶ್ವಾಸದ್ರೋಹದ ಭಾಗಿದಾರರು ಎಂದು ಪರಿಗಣಿಸುತ್ತದೆ.
Comments
Post a Comment