ನಾಯಕರು ಮಹಾರಾಜರಂತಾದರೆ ಪ್ರಜಾಪ್ರಭುತ್ವ ಕುಸಿಯುತ್ತದೆ
ಕೋಟ್ಯಂತರ ಜನರು ದಿನಕ್ಕೆ ಎರಡು ಊಟ ಇಲ್ಲದೆ ಬದುಕುತ್ತಿರುವಾಗ, ದುಬಾರಿ ಬದುಕು ಕೇವಲ ಅಸೂಕ್ಷ್ಮವಷ್ಟೇ ಅಲ್ಲ, ಅನೈತಿಕವೂ ಆಗುತ್ತದೆ.
ಪ್ರಜಾಪ್ರಭುತ್ವದಲ್ಲಿ ನಾಯಕರು ತಾವು ಪ್ರತಿನಿಧಿಸುವ ಜನತೆಯ ಪ್ರತಿಬಿಂಬವಾಗಿ ಕಾಣಬೇಕು. ಆದರೆ ಭಾರತದಲ್ಲಿ ಸಾಧಾರಣ ಪ್ರಜೆಗಳು ಮತ್ತು ಅವರ ರಾಜಕೀಯ ಪ್ರತಿನಿಧಿಗಳ ನಡುವಿನಲ್ಲಿ ಕಾಣುವ ವ್ಯತ್ಯಾಸ ನಿಜಕ್ಕೂ ಆಘಾತಕಾರಿಯಾದುದು. ಒಂದೆಡೆ ಲಕ್ಷಾಂತರ ಮಂದಿ ತಮ್ಮ ಅಲ್ಪ ಆದಾಯವನ್ನು ಹೆಚ್ಚಿಸಿಕೊಳ್ಳಲು, ಬೆಲೆ ಏರಿಕೆಗಳ ನಡುವೆಯೂ ಪರದಾಡುತ್ತಿರುವಾಗಲೇ ಮತ್ತೊಂದೆಡೆ ರಾಜಕೀಯ ವರ್ಗವು ದುಬಾರಿ ವಿನ್ಯಾಸದ ಉಡುಪುಗಳನ್ನು ತೊಟ್ಟು, ಕೋಟ್‍ಗಳನ್ನು ಧರಿಸಿ, ಹಾಫ್ ಜಾಕೆಟ್‍ಗಳನ್ನು ಧರಿಸಿ ಲಕ್ಸುರಿ ಉಪಕರಣಗಳನ್ನು ಬಳಸುತ್ತಿರುತ್ತಾರೆ. ಇದು ನೀಡುವ ಸ್ಪಷ್ಟ ಸಂದೇಶ ಎಂದರೆ, ಜನರು ತಮ್ಮ ಸೊಂಟಪಟ್ಟಿಯನ್ನು ಬಿಗಿ ಮಾಡಿಕೊಳ್ಳುತ್ತಿರಬೇಕು ಆದರೆ ಅವರ ನಾಯಕರು ತಮ್ಮ ದುಂದುವೆಚ್ಚವನ್ನು ಹೆಚ್ಚಿಸುತ್ತಿರುತ್ತಾರೆ.
ಇಲ್ಲಿ ಮಹಾತ್ಮ ಗಾಂಧಿ ಅವರೊಡನೆ ಹೋಲಿಗೆ ಉತ್ತಮ. ಗಾಂಧಿ ಉದ್ದೇಶಪೂರ್ವಕವಾಗಿಯೇ ಖಾದಿ ವಸ್ತ್ರ, ಕಾಟನ್ ಮೇಲು ವಸ್ತ್ರವನ್ನು ಧರಿಸಿದ್ದು ಕೇವಲ ವೈಯುಕ್ತಿಕ ಆಯ್ಕೆ ಮಾತ್ರವಲ್ಲ, ಕಡುಬಡವ ಜನತೆಯೊಡನೆ ತಮ್ಮನ್ನು ತಾವು ಗುರುತಿಸಿಕೊಂಡು ಐಕಮತ್ಯ ಸಾರುವ ಉದ್ದೇಶದಿಂದ. ಅವರ ಸರಳತೆ ಮತ್ತು ಶಕ್ತಿಯ ಪರಿಣಾಮವೇ ಜನರು ಅವರನ್ನು ನಂಬಿದ್ದರು, ಏಕೆಂದರೆ ಅವರ ಕಷ್ಟ ಸುಖಗಳನ್ನು ಗಾಂಧಿ ಸ್ವತಃ ಅನುಭವಿಸಿ ಕಂಡಿದ್ದರು. ತಮ್ಮ ಪಕ್ಷದ ಒಳಗೇ ಅನೇಕ ನಾಯಕರು ರಾಜಮಹಾರಾಜರ ಹಾಗೆ ಉಡುಪು ಧರಿಸುತ್ತಿದ್ದರೂ ಗಾಂಧಿಯ ಧ್ವ ನಿ ನೈತಿಕತೆಯಿಂದ ಕೂಡಿದ್ದುದಕ್ಕೆ ಕಾರಣ ಎಂದರೆ ಅವರಲ್ಲಿದ್ದ ತ್ಯಾಗ ಮನೋಭಾವ.
ಜಾರ್ಜ್ ಫನಾರ್ಂಡಿಸ್, ಸಮಾಜವಾದಿ ನಾಯಕರಾಗಿದ್ದು ನಂತರ ರಕ್ಷಣಾ ಸಚಿವರೂ ಆಗಿದ್ದವರು. ಇದೇ ಹಾದಿಯನ್ನು ಆಧುನಿಕ ಭಾರತದಲ್ಲೂ ವಿಸ್ತರಿಸಿದ್ದರು. ಸರಳ ಉಡುಪಿನಲ್ಲೇ ಇರುತ್ತಿದ್ದ ಫನಾರ್ಂಡಿಸ್ ಒಂದು ಕಾಟನ್ ಕುರ್ತಾ ಮತ್ತು ಪೈಜಾಮ ಧರಿಸುತ್ತಿದ್ದರು, ತಮ್ಮ ದೇಶದ ಜನರಿಗೆ ಎಟುಕದ ಹಿತಕರ ಸೌಕರ್ಯಗಳನ್ನು ನಿರಾಕರಿಸುತ್ತಿದ್ದರು. "ನನ್ನ ದೇಶದ ಎಲ್ಲ ಪ್ರಜೆಗಳೂ ದುಬಾರಿ ಬಟ್ಟೆಗಳನ್ನು ಧರಿಸಿ ಮಹಾರಾಜರ ಹಾಗೆ ಬದುಕುತ್ತಾರೆಯೇ, ಹಾಗಾಗಿ ನನ್ನ ಜನರ ಬಳಿ ಇಲ್ಲದಿರುವುದನ್ನು ನಾನು ಬಳಸುವುದಿಲ್ಲ" ಎಂದು ಹೇಳುತ್ತಿದ್ದರು. ಅವರ ಈ ಬದ್ಧತೆ ಮೇಲ್ನೋಟಕ್ಕೆ ಸೀಮಿತವಾಗಿರಲಿಲ್ಲ, ಅದು ನೈಜ ಬದ್ಧತೆಯಾಗಿತ್ತು. ಊಟೋಪಹಾರದಲ್ಲಿಯೂ, ವಾಸದಲ್ಲಿಯೂ ಅವರು ಈ ಸರಳತೆ ಪಾಲಿಸಿದ್ದರು. ಉನ್ನತ ಅಧಿಕಾರದಲ್ಲಿದ್ದಾಗಲೂ ಜಾರ್ಜ್ ಎಂದೂ ಸಹ ತನ್ನ ಜನರಿಗಿಂತಲೂ ಮೇಲು ಎಂದು ಬದುಕಿರಲಿಲ್ಲ.
ಇಂದಿನ ನಾಯಕರು ಎಷ್ಟು ಭಿನ್ನವಾಗಿ ಕಾಣುತ್ತಾರೆ! ದುಬಾರಿ ಡಿಸೈನರ್ ಜಾಕೆಟ್, ರೇಷ್ಮೆ ಕುರ್ತ ಪೈಜಾಮ, ಚಿನ್ನದ ಆಭರಣಗಳು ಮತ್ತು ಸಾರ್ವಜನಿಕವಾಗಿ ಪ್ರದರ್ಶಿಸುವ ಸಂಪತ್ತು ಸಾಮಾನ್ಯವಾಗಿದೆ. ಅನೇಕ ರಾಜಕಾರಣಿಗಳು ಫ್ಯಾಶನ್ ಷೋನಲ್ಲಿ ಭಾಗವಹಿಸುವ ರೂಪದರ್ಶಿಗಳ ಹಾಗೆ ಕಾಣುತ್ತಾರೆ. ವಿಡಂಬನೆ ಎಂದರೆ, ಜನರನ್ನು ತ್ಯಾಗ ಮಾಡಲು ಹೇಳುವ ನಾಯಕರು, ಹಣದುಬ್ಬರ ಸಹಿಸಿಕೊಳ್ಳಲು ಹೇಳುವವರು, ಹೆಚ್ಚಿನ ತೆರಿಗೆ ತೆರುವಂತೆ ಮಾಡುವವರು, ಸ್ವತಃ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುತ್ತಾ, ಲಕ್ಷುರಿ ಕಾರುಗಳಲ್ಲಿ ಸಂಚರಿಸುತ್ತಾ ತೆರಿಗೆದಾರರ ಹಣದಲ್ಲಿ ಸೌಕರ್ಯಗಳನ್ನು ಅನುಭವಿಸುತ್ತಾರೆ. ಇದು ಸಾಂಕೇತಕವಾಗಿ ನೋಡಿದರೂ ಸಹ ಪ್ರಜೆಗಳಿಗೆ ರಾಜಕೀಯ ಎಂದರೆ ತ್ಯಾಗ ಅಲ್ಲ ಬದಲು ಸ್ವಯಂ ಶ್ರೀಮಂತಿಕೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.
ಧರಿಸುವ ಉಡುಪುಗಳೇ ನಾಯಕರನ್ನಾಗಿ ಮಾಡುವುದಿಲ್ಲ ಎಂದು ಹೇಳಬಹುದು, ಆದರೆ ಸಾರ್ವಜನಿಕ ಜೀವನದಲ್ಲಿ ಸಂಕೇತಗಳೂ ಮುಖ್ಯವಾಗುತ್ತವೆ. ಸರಳತೆ ಅನುಕಂಪ, ಸಹಾನುಭೂತಿ ಮೂಡಿಸುತ್ತದೆ. ಸಿರಿವಂತಿಕೆ ಅಹಂಕಾರ ಪ್ರದರ್ಶಿಸುತ್ತದೆ. ಮಮತಾ ಬ್ಯಾನರ್ಜಿ ತಮ್ಮ ಬಿಳಿಯ ಕಾಟನ್ ಸೀರೆ ಧರಿಸುವುದು, ಸಿದ್ದರಾಮಯ್ಯ ತಮ್ಮ ಕುರ್ತಾ ಪೈಜಾಮ ಧರಿಸಿ ಕಾಟನ್ ಶಾಲು ಹೆಗಲ ಮೇಲಿರಿಸಿಕೊಳ್ಳುವುದು ಸರಳತೆ ಮತ್ತು ಸುಲಭವಾಗಿ ಲಭ್ಯತೆಯ ಸೂಚನೆಯಾಗಿ ಕಾಣುತ್ತದೆ. ಅವರು ಹಾಗೆಯೇ ಬದುಕುತ್ತಿದ್ದಾರೆಯೇ ಎನ್ನುವುದು ಬೇರೆ ಪ್ರಶ್ನೆ. ಇದಕ್ಕೆ ವ್ಯತಿರಿಕ್ತವಾಗಿ, ದುಬಾರಿ ವಸ್ತ್ರಗಳನ್ನು ಧರಿಸುವ, ಶ್ರೀಮಂತಿಕೆಯ ಜೀವನ ನಡೆಸುವ ನಾಯಕರು, ಅವರನ್ನು ಚುನಾಯಿಸಿದ ಜನರನ್ನೇ ಅಣಕಿಸುತ್ತಿರುತ್ತಾರೆ.
ಇದು ಕೇವಲ ಸೌಂದರ್ಯದ ಪ್ರಶ್ನೆಯಲ್ಲ. ಭ್ರಷ್ಟಾಚಾರ ಮತ್ತು ಉತ್ತರದಾಯಿತ್ವದ ಪ್ರಶ್ನೆ. ದುಬಾರಿ ದುಂದುವೆಚ್ಚಕ್ಕಾಗಿ ಹಂಬಲಿಸುವುದು ಸಾರ್ವಜನಿಕರ ಹಣವನ್ನು ದುರುಪಯೋಗಪಡಿಸಿಕೊಳ್ಳಲು ಉತ್ತೇಜಿಸುತ್ತದೆ. ಅನಿಯಮಿತ ಆಸೆಗಳು ನಾಯಕರನ್ನು ಮಿತಿಮೀರಿದ ದುರಾಸೆಗೆ ಈಡುಮಾಡುತ್ತದೆ. ವ್ಯತಿರಿಕ್ತವಾಗಿ ಇವರ ಬೇಕು ಬೇಡಗಳು ಸೀಮಿತವಾಗಿದ್ದಾಗ, ಗಾಂಧಿ ಮತ್ತು ಫರ್ನಾಂಡಿಸ್ ತೋರಿಸಿದಂತೆ, ಪ್ರಾಮಾಣಿಕತೆ ಸಹಜವಾಗಿ ಇರುತ್ತದೆ. ಸರಳ ಜೀವನ ಆರ್ಥಿಕ ಆಯ್ಕೆಯಲ್ಲ ಬದಲಾಗಿ ರಾಜಕೀಯ ನೈತಿಕತೆ.
ಭಾರತದ ರಾಜಕೀಯ ವರ್ಗಗಳು ಈ ನೈತಿಕತೆಯನ್ನು ಮರಳಿ ಪಡೆಯಬೇಕಿದೆ. ಜನರು ಮತ್ತೆ ನಾಯಕರನ್ನು ನಂಬುತ್ತಾರೆ. ಆದರೆ ಅವರು ಮಹಾರಾಜರಂತೆ ಬದುಕುವುದನ್ನು ಬಿಟ್ಟು, ನೈಜ ಪ್ರತಿನಿಧಿಗಳಾಗಿ ಬದುಕಬೇಕಾಗುತ್ತದೆ. ಕೋಟ್ಯಂತರ ಜನರು ದಿನಕ್ಕೆ ಎರಡು ಊಟ ಇಲ್ಲದೆ ಬದುಕುತ್ತಿರುವಾಗ, ದುಬಾರಿ ಬದುಕು ಕೇವಲ ಅಸೂಕ್ಷ್ಮವಷ್ಟೇ ಅಲ್ಲ, ಅನೈತಿಕವೂ ಆಗುತ್ತದೆ.
Comments
Post a Comment