ಯುವ ಜನ ಬಂಡಾಯ ಯಾವಾಗಬೇಕಾದರೂ ಸಂಭವಿಸಬಹುದು
ಆಳುವವರು ತಮ್ಮ ಅಧಿಕಾರದ ಇತಿಮಿತಿಗಳನ್ನು ಅರಿಯದೆ ವರ್ತಿಸಿದಾಗ ಮುಳುಗಿಹೋಗುತ್ತಾರೆ
ಬಿಜೆಪಿ ಈಗ ರಾಹುಲ್ ಗಾಂಧಿ ಜೆನ್‍ಝಡ್‍ಕ್ರಾಂತಿಯನ್ನು ಪ್ರಚೋದಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ಇದೇ ರೀತಿಯ ಬಂಡಾಯವೇ ನೇಪಾಳ ಮತ್ತು ಬಾಂಗ್ಲಾದೇಶದ ಸರ್ಕಾರಗಳನ್ನು ಪದಚ್ಯುತಗೊಳಿಸಿತ್ತು. ಆದರೆ ಇಲ್ಲಿರುವ ವಾಸ್ತವ ಎಂದರೆ, ಕ್ರಾಂತಿಯನ್ನು ರಾಜಕಾರಣಿಗಳು ಸೃಷ್ಟಿಸುವುದಿಲ್ಲ. ಬದಲಾಗಿ ಆಳುವವರ ವಂಚನೆ, ದ್ರೋಹ, ದಮನಿತ ದನಿಗಳು, ಭವಿಷ್ಯವನ್ನೇ ಕಾಣದ ಯುವ ಜನತೆಯಿಂದ ಸೃಷ್ಟಿಯಾಗುತ್ತದೆ. ಇದು ಭಾರತದಲ್ಲಿ ಸದ್ದಿಲ್ಲದೆ ಆಗುತ್ತಿದೆ
ಭಾರತದ ಅಸಂಖ್ಯಾತ ಯುವ ಜನತೆ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ. ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಪ್ರಜಾಸತ್ತಾತ್ಮಕ ಸಂಸ್ಥೆಗಳು ರಾಜಕೀಯ ಒತ್ತಡಕ್ಕೆ ಸಿಲುಕಿ ನಿಷ್ಪ್ರಯೋಜಕವಾಗುತ್ತಿವೆ. ಆದರೂ ಸರ್ಕಾರ ನಿಷ್ಕ್ರಿಯವಾಗಿದೆ. ನಾಯಕರು ತಮ್ಮನ್ನು ಯಾರೂ ಮುಟ್ಟಲಾಗದು ಎನ್ನುವಂತೆ ವರ್ತಿಸುತ್ತಿದ್ದಾರೆ, ಕಾನೂನು ಉಲ್ಲಂಘಿಸುತ್ತಿದ್ದಾರೆ, ವ್ಯವಸ್ಥೆಯನ್ನು ಪಲ್ಲಟಗೊಳಿಸುತ್ತಿದ್ದಾರೆ, ಬಂಡವಾಳಗಾರರನ್ನು ಪೆÇೀಷಿಸುವ ಬೃಹತ್‍ಯೋಜನೆಗಳನ್ನು ಬೆನ್ನತ್ತಿದ್ದಾರೆ.
ಎಂದರೆ ಪ್ರತಿಯೊಬ್ಬ ಟೀಕಾಕಾರರ ಬಾಯಿ ಮುಚ್ಚಿಸಲಾಗುತ್ತಿದೆ. ಪತ್ರಕರ್ತರನ್ನು ಕೈಕೋಳ ತೊಡಿಸಿ ಸೆರೆವಾಸಕ್ಕೆ ದೂಡಲಾಗುತ್ತಿದೆ. ವಿರೋಧ ಪಕ್ಷದ ನಾಯಕರ ವಿರುದ್ದ ಅನೇಕ ಪ್ರಕರಣಗಳನ್ನು ಹೇರಲಾಗುತ್ತಿದೆ. ಪ್ರತಿಭಟಿಸುವ ಪ್ರಜೆಗಳನ್ನು ದೇಶಕ್ಕೆ ಅಪಾಯಕಾರಿ ಎಂದು ಬಣ್ಣಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವ ಅಲ್ಲ, ಬದಲಾಗಿ ದಬ್ಬಾಳಿಕೆಯನ್ನೇ ಅಧಿಕಾರ ಎಂದು ಭಾವಿಸುವ ಒಂದು ವಿಧಾನ.
ಇತಿಹಾಸ ಎಚ್ಚರಿಕೆಯನ್ನು ನೀಡುತ್ತಲೇ ಇದೆ. 1975ರಲ್ಲಿ ಇಂದಿರಾಗಾಂಧಿ ತುರ್ತುಪರಿಸ್ಥಿತಿ ಹೇರಿದರು. ಪತ್ರಿಕೆಗಳನ್ನು ನಿರ್ಬಂಧಿಸಲಾಯಿತು. ಪ್ರತಿಭಟನಕಾರರನ್ನು ಬಂಧಿಸಲಾಯಿತು. ಪ್ರಜಾತಂತ್ರವನ್ನು ಹೊಸಕಿ ಹಾಕಲಾಯಿತು. ಇಂದಿರಾ ಗಾಂಧಿ ಹೊರ ಸಮಾಜದಲ್ಲಿ ಭುಗಿಲೇಳುತ್ತಿದ್ದ ಆಕ್ರೋಶಕ್ಕೆ ಕುರುಡಾಗಿದ್ದರು. ಭಾರತದ ಯುವ ಜನತೆ ಜಾಗೃತವಾದರು. ಲೋಕನಾಯಕ್ ಜಯಪ್ರಕಾಶ್‍ನಾರಾಯಣ್ ವಿದ್ಯಾರ್ಥಿಗಳಿಗೆ ಸಂಘರ್ಷದಲ್ಲಿ ತೊಡಗುವಂತೆ ಪ್ರೇರೇಪಿಸಿದರು. ವಿದ್ಯಾರ್ಥಿಗಳು ಬಂಡಾಯ ಹೂಡಿದರು. ತುರ್ತುಪರಿಸ್ಥಿತಿ ಕುಸಿಯಿತು.
ಅದಕ್ಕೆ ಸಮಾನಾಂತರವಾಗಿ, ಇಂದಿನ ಪರಿಸ್ಥಿತಿ ಭಿನ್ನವಾಗಿಲ್ಲ. ಮತ್ತೊಮ್ಮೆ ಆಳುವ ಸರ್ಕಾರಗಳು ಪ್ರತಿರೋಧವನ್ನು ಹತ್ತಿಕ್ಕುತ್ತಿವೆ. ರಾಹುಲ್ ಗಾಂಧಿ ಅವರ ಭಾಷಣಗಳು ಕ್ರಾಂತಿಯನ್ನು ಹುಟ್ಟುಹಾಕುವುದಿಲ್ಲ. ಆದರೆ ಹಸಿವು, ನಿರುದ್ಯೋಗ, ಅನ್ಯಾಯಗಳು ಇದನ್ನು ಆಗುಮಾಡುತ್ತವೆ. ತೆಪ್ಪಗಾಗಿಸಲಾದ ಮಾಧ್ಯಮಗಳು ಮಾಡುತ್ತವೆ. ಪ್ರತಿಯೊಬ್ಬ ಟೀಕಾಕಾರರನ್ನೂ ಶತ್ರು ಎಂದು ಭಾವಿಸುವುದರಿಂದ ಇದು ಆಗುತ್ತದೆ. ದೇಶದ ಯವಜನರು ಹತಾಶರಾಗಿದ್ದಾರೆ. ಡಿಜಿಟಲ್ ಸಂಪರ್ಕ ಹೊಂದಿದ್ದು ರಾಜಕೀಯವಾಗಿ ಜಾಗೃತರಾಗಿದ್ದಾರೆ. ಅವರಿಗೆ ವಿಕಾಸ ಎಂಬ ಪೊಳ್ಳು ಘೋಷಣೆಯ ಒಳ ಅರ್ಥದ ಅರಿವಾಗುತ್ತದೆ. ಬಂಡವಾಳ ಸ್ನೇಹಿ ನೀತಿಯನ್ನು ಅಭಿವೃದ್ಧಿ ಎನ್ನುವ ವ್ಯಾಖ್ಯಾನವನ್ನು ಗಮನಿಸುತ್ತಿದ್ದಾರೆ. ಪ್ರಜಾತಂತ್ರವನ್ನು ಬಹುಮತದ ಬಲದಿಂದ, ಸಿನಿಕ ಪ್ರಚಾರಗಳ ಮೂಲಕ ಹತ್ತಿಕ್ಕಲಾಗುತ್ತಿದೆ ಎನ್ನುವುದನ್ನು ಅರಿತಿದ್ದಾರೆ.
ತುರ್ತುಪರಿಸ್ಥಿತಿ ಕೊನೆಯಾಗಿದ್ದು ಇಂದಿರಾಗಾಂಧಿ ಅವರ ಪಶ್ಚಾತ್ತಾಪದ ನಡೆಯಿಂದಲ್ಲ. ಅದು ಕೊನೆಯಾಗಿದ್ದು ಯುವ ಜನತೆಯ ಒಕ್ಕೊರಲ ದನಿ, `ಇನ್ನು ಸಾಕು' ಎಂಬ ಘೋಷಣೆಯಿಂದ. ಇದೇ ಶಕ್ತಿ ಇಂದು ಮರುಕಳಿಸುತ್ತಿದೆ.
ಯುವ ಜನತೆಯ ಆಕ್ರೋಶ ವಿದೇಶಿ ಅಲ್ಲ. ಅಥವಾ ವಿರೋಧ ಪಕ್ಷದ ಪಿತೂರಿಯೂ ಅಲ್ಲ. ಇದು ಸ್ಥಳೀಯವಾಗಿ ಉಗಮಿಸಿದ, ಭರವಸೆಗಳನ್ನು ಈಡೇರಿಸದ ಕಾರಣಕ್ಕಾಗಿ, ವಿಶ್ವಾಸ ದ್ರೋಹದ ಕಾರಣಕ್ಕಾಗಿ ಉಗಮಿಸಿದೆ. ಇದು ಸ್ಫೋಟಿಸಿದಾಗ, ಯಾವ ಸರ್ಕಾರವೂ ಸಹ, ಎಷ್ಟೇ ಬಲಿಷ್ಠವಾಗಿದ್ದರೂ ಉಳಿಯುವುದಿಲ್ಲ.
ಇತಿಹಾಸದ ಪಾಠ ಕ್ರೌರ್ಯ ಅಲ್ಲ, ಸರಳವಾದದ್ದು. ಆಳುವವರು ತಮ್ಮ ಅಧಿಕಾರದ ಇತಿಮಿತಿಗಳನ್ನು ಅರಿಯದೆ ವರ್ತಿಸಿದಾಗ ಮುಳುಗಿಹೋಗುತ್ತಾರೆ. ಇಂದಿರಾ ಗಾಂಧಿ ಈ ಪಾಠ ಕಲಿತಿದ್ದರು. ಇಂದಿನ ನಾಯಕರು ಅದನ್ನೇ ಮರುಕಳಿಸುವಂತೆ ಮಾಡುತ್ತಿದ್ದಾರೆ.
Comments
Post a Comment