ಸಿ ಟಿ ರವಿ, ಯತ್ನಾಳ್ ವಿರುದ್ಧ ಕೇಸುಗಳು ಕಣ್ಕಟ್ಟಿಗೆ ಮಾತ್ರ
ಕರ್ನಾಟಕದಲ್ಲಿ ರಾಜಕಾರಣಿಗಳ ವಿರುದ್ಧ ಹೂಡುವ ಅಪರಾಧ ಮೊಕದ್ದಮೆಗಳು ಅದರ ಮೂಲ ಉದ್ದೇಶವನ್ನೇ ಕಳೆದುಕೊಂಡಿರುತ್ತವೆ. ಪ್ರಕರಣವನ್ನು ದಾಖಲಿಸುವಾಗ ಕಾಣುವ ಅಬ್ಬರ ತದನಂತರದಲ್ಲಿ ಸದ್ದಿಲ್ಲದೆ ತಣ್ಣಗಾಗಿರುತ್ತದೆ. ಇದು ಹಲವು ವರ್ಷಗಳಿಂದ ನಡೆದುಬಂದಿರುವ ಒಂದು ಮಾದರಿಯಾಗಿದ್ದು, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸಮಾನ ನೆಲೆಯಲ್ಲಿ ಕಾಣುತ್ತವೆ. ಅಪರೂಪವಾಗಬೇಕಿದ್ದ ಪ್ರಸಂಗಗಳು ಈಗ ಅಧಿಕಾರ ರಾಜಕಾರಣದ ನಿತ್ಯ ಪದ್ಧತಿಯಾಗಿದೆ.
ಹಾಲಿ ಕಾಂಗ್ರೆಸ್ ಸರ್ಕಾರವೂ ಭಿನ್ನವಾಗಿ ಕಂಡುಬಂದಿಲ್ಲ. ಕಳೆದ ವಾರವಷ್ಟೇ ಪಕ್ಷದ ಕಾರ್ಯಕರ್ತರ ವಿರುದ್ಧ ಮತ್ತು ಇತರರ ಮೇಲೆ ಹೂಡಲಾಗಿದ್ದ ಅಪರಾಧ ಮೊಕದ್ದಮೆಗಳನ್ನು ಹಿಂಪಡೆದಿದ್ದ ಸರ್ಕಾರವು, ಸಚಿವ ಸಂಪುಟದ ತೀರ್ಮಾನದಂತೆ ನಿಕಟವರ್ತಿಗಳ ಮೇಲಿನ ಮೊಕದ್ದಮೆಗಳನ್ನೂ ರದ್ದುಪಡಿಸಿತ್ತು. ಗೃಹ ಸಚಿವಾಲಯವು ಈ ಹಿಂಪಡೆತಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರೂ, ಸಚಿವ ಸಂಪುಟದಲ್ಲಿ ಈ ನಿರ್ಣಯವನ್ನು ಅನುಮೋದಿಸುವಾಗ, ಆಕ್ಷೇಪಗಳನ್ನು ನಿರ್ಲಕ್ಷಿಸಲಾಯಿತು. ಹೈಕೋರ್ಟ್ ಪದೇಪದೇ ಎಚ್ಚರಿಕೆ ನೀಡುತ್ತಿದ್ದರೂ ಸಹ ಈ ಪದ್ಧತಿಯನ್ನು ಸರ್ಕಾರಗಳು ಕೈಬಿಟ್ಟಿಲ್ಲ. ಅಂದರೆ ಸಚಿವ ಸಂಪುಟವೇ ಪರಮೋಚ್ಛವಾದುದು, ರಾಜಕೀಯ ಹಿತಾಸಕ್ತಿಗಳು ಕಾನೂನು ಪಾಲನೆಯನ್ನೂ ಮೀರಿದ್ದು ಎನ್ನುವ ಸಂದೇಶವನ್ನು ನೀಡಲಾಗಿದೆ.
ಈ ಹಿನ್ನೆಲೆಯಲ್ಲೇ ಬಿಜೆಪಿ ನಾಯಕ ಸಿ ಟಿ ರವಿ ಮತ್ತು ಉಚ್ಛಾಟಿತ ಬಿಜೆಪಿ ನಾಯಕ ಬಸವರಾಜ್ ಯತ್ನಾಳ್ ಅವರ ಮೇಲಿನ ಮೊಕದ್ದಮೆಗಳನ್ನೂ ಗಮನಿಸಬೇಕಿದೆ. ಇಬ್ಬರ ವಿರುದ್ಧವೂ ಕೋಮು ಸಂಘರ್ಷ ಹೆಚ್ಚಾಗಿದ್ದ ಮದ್ದೂರಿನಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದಾವೆ ಹೂಡಲಾಗಿತ್ತು. ಕಾಂಗ್ರೆಸ್ ಪಕ್ಷವು ಈ ಎಫ್‍ಐಆರ್‍ಗಳನ್ನು ಕಠಿಣ ಕ್ರಮ ಕೈಗೊಳ್ಳುವ ಸಲುವಾಗಿ ಅನಿವಾರ್ಯ ಎಂದು ಪ್ರಸ್ತುತಪಡಿಸುತ್ತದೆ. ಆದರೆ ಬಿಜೆಪಿ, ಮದ್ದೂರು ಗಲಭೆಗೆ ಆಡಳಿತಾರೂಢ ಪಕ್ಷವೇ ಕಾರಣ ಎಂದು ದೂಷಿಸುತ್ತದೆ. ಆದರೆ ಸಾಮಾನ್ಯ ಜನತೆಗೆ ಎಫ್ ಐ ಆರ್ ಫಲಿತಾಂಶ ಮೊದಲೇ ತಿಳಿದಿರುತ್ತದೆ. ಈ ಹಿಂದಿನ ಅನೇಕ ಮೊಕದ್ದಮೆಗಳ ಹಾಗೆಯೇ ಇವುಗಳನ್ನೂ ಸಹ ರಾಜಕೀಯ ಕಾವು ಕಡಿಮೆಯಾದ ಕೂಡಲೇ ಹಿಂಪಡೆಯುವುದು ನಿಶ್ಚಿತ ಎಂದು ಜನರು ಅರಿತಿರುತ್ತಾರೆ.
ಈ ಮೊಕದ್ದಮೆಗಳನ್ನು ಔಪಚಾರಿಕವಾಗಿ ಹಿಂಪಡೆಯುವ ಮುನ್ನವೂ ರಾಜಕಾರಣಿಗಳು ಸಾಮಾನ್ಯವಾಗಿ ನ್ಯಾಯಾಲಯದ ಮೂಲಕ ತಡೆಯಾಜ್ಞೆ ಅಥವಾ ರದ್ದತಿಯ ಆದೇಶ ಪಡೆದಿರುತ್ತಾರೆ. ನ್ಯಾಯಿಕ ರಕ್ಷಣೆ ಮತ್ತು ಸಚಿವ ಸಂಪುಟದ ನಿರ್ಣಯದ ನಡುವೆ, ರಾಜಕೀಯ ನಾಯಕರ ವಿರುದ್ಧದ ಮೊಕದ್ದಮೆಗಳು ವಿಚಾರಣೆಯ ಮೊದಲ ಹಂತವನ್ನು ತಲುಪುವುದೇ ಇಲ್ಲ, ಹಾಗಾಗಿ ಉತ್ತರದಾಯಿತ್ವ ಎನ್ನುವುದು ಮರೀಚಿಕೆಯಾಗುತ್ತದೆ.
ಈ ಸಿನಿಕ ಮಾದರಿ ಒಂದು ಅಪಾಯಕಾರಿ ಪರಂಪರೆಯನ್ನೇ ಸೃಷ್ಟಿಸಿದೆ. ಈ ಮೊಕದ್ದಮೆಗಳು ಅಂತಿಮವಾಗಿ ವಿಫಲವಾಗುತ್ತದೆ ಎಂದು ಅರಿತಿರುವುದರಿಂದ, ಯಾವ ನಾಯಕರೂ ಸಂಯಮವನ್ನು ಕಾಪಾಡಿಕೊಳ್ಳುವುದಿಲ್ಲ. ಕೋಮು ಪ್ರಚೋದಕ ಭಾಷಣ, ದ್ವೇಷ ಭಾಷಣ ಮಾಡುವುದು ನೀರು ಕುಡಿದಷ್ಟೇ ಸುಲಭವಾಗಿಹೋಗಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳುವ ಹಾಗೆ ತೋರಿಸಿಕೊಳ್ಳುತ್ತದೆ, ಆದರೆ ತದನಂತರ ಹಿಂದೆ ಸರಿಯುತ್ತದೆ, ತತ್ಪರಿಣಾಮವಾಗಿ ಕಾನೂನು ಎನ್ನುವುದು ಒಂದು ನಾಟಕೀಯ ವಿದ್ಯಮಾನವಾಗುತ್ತದೆ.
Comments
Post a Comment