ಅಂಧ ಶ್ರದ್ಧೆಗಿಂತಲೂ ಮಾನವೀಯ ಮೌಲ್ಯಗಳು ಮುಖ್ಯ
ಪ್ರಜೆಗಳು ಮಾನವ ಘನತೆಯೊಂದಿಗೆ ಬದುಕುವುದು, ಯಾವುದೇ ಆಚರಣೆಗಿಂತಲೂ ಮಿಗಿಲಾದದ್ದು.
ಮಾನವನ ಘನತೆ, ನ್ಯಾಯ ಮತ್ತು ಸಹಾನುಭೂತಿ ಇವುಗಳನ್ನು ಮೂರ್ತಿಪೂಜೆ ಮತ್ತು ಧಾರ್ಮಿಕ ಹಿತಾಸಕ್ತಿಗಳಿಗಿಂತಲೂ ಹೆಚ್ಚು ಎಂದು ಪರಿಗಣಿಸಲು ಇದು ಸಕಾಲ
21ನೆ ಶತಮಾನವು ಪ್ರಗತಿಯ ಭರವಸೆ ನೀಡಿತ್ತು. ತರ್ಕ, ಸಮಾನತೆ ಮತ್ತು ಸಮಾಜಕ್ಕೆ ಮಾನವೀಯತೆಯ ಮಾರ್ಗದರ್ಶನದ ಭರವಸೆಗಳನ್ನು ನೀಡಿತ್ತು. ತಂತ್ರಜ್ಞಾನ ಮತ್ತು ಸಂವಹನ ನೈತಿಕ ಪ್ರಜ್ಞೆಯನ್ನು ಉದ್ಧೀಪನಗೊಳಿಸಬೇಕಿತ್ತು. ಆದರೆ ಪ್ರಗತಿಯ ಬದಲು ನಾವು ಕಾಣುತ್ತಿರುವುದು ಹಿಮ್ಮುಖ ಚಲನೆ. ವೈಯುಕ್ತಿಕ ನೈತಿಕ ಮಾನದಂಡವಾಗಬೇಕಾದ ಧರ್ಮ ಹೆಚ್ಚು ಹೆಚ್ಚಾಗಿ ಅಧಿಕಾರದ ಅಸ್ತ್ರವಾಗುತ್ತಿದ್ದು, ಅಸ್ಮಿತೆ ಮತ್ತು ನಿಯಂತ್ರಣದ ಕೇಂದ್ರವಾಗಿದೆ. ಒಬ್ಬರ ಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸುವುದು, ಸಮಾಜವನ್ನು ವಿಭಜಿಸುವುದೇ ಅಲ್ಲದೆ, ಸಂಘರ್ಷಗಳನ್ನು ಹುಟ್ಟುಹಾಕಿ, ಪ್ರತಿರೋಧವನ್ನು ಅಡಗಿಸುತ್ತದೆ.
ಧರ್ಮಸ್ಥಳದ ಪ್ರಕರಣಗಳು ಈ ಚಿತ್ರಣವನ್ನು ಬಿಂಬಿಸುತ್ತದೆ. ಮಹಿಳೆಯರು ಮತ್ತು ಹೆಣ್ಣು ಮಕ್ಕಳು ಅತ್ಯಾಚಾರಕ್ಕೀಡಾಗಿ, ಹತ್ಯೆಗೊಳಗಾಗುತ್ತಿದ್ದಾರೆ. ಕಾರ್ಯಕರ್ತರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ಅವರ ಆಗ್ರಹದ ದನಿಯನ್ನು ಅವಹೇಳನ ಮಾಡಲಾಗುತ್ತಿದೆ. ವಿನಾಶಿಗಳು, ಬಂಡಾಯಗಾರರು ಎಂದು ಆರೋಪಿಸಲಾಗುತ್ತಿದೆ. ಪವಿತ್ರ ಸಂಪ್ರದಾಯಗಳ ಮೇಲೆ ದಾಳಿ ನಡೆಸುವ ಆರೋಪ ಮಾಡಲಾಗುತ್ತಿದೆ. ಸ್ವಾಮಿಗಳು, ಮಠಗಳು ಮತ್ತು ಇತರ ಸಹ ಸಂಘಟನೆಗಳು ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಲು ಹೆಣಗಾಡುತ್ತಿವೆ, ಸತ್ಯವನ್ನು ಮುಚ್ಚಿಹಾಕಲು ಇವುಗಳನ್ನೇ ಬಳಸಲಾಗುತ್ತಿದೆ. ಭಕ್ತಿ ಎನ್ನುವುದು ದುರ್ಬಳಕೆಯ ಕವಚವಾಗಿದ್ದು, ನೈತಿಕತೆಯನ್ನು ಬಲಿ ಕೊಡಲಾಗುತ್ತಿದೆ. ಮಾನವ ಜೀವಗಳನ್ನು ಆಚರಣಾತ್ಮಕವಾಗಿ ನಗಣ್ಯಗೊಳಿಸಲಾಗುತ್ತಿದೆ.
ಕುವೆಂಪು ಅವರ ವಿವೇಕ ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರತಿಧ್ವನಿಸುತ್ತಿದೆ. ದೈವ ಪೂಜೆಯ ಆಚರಣೆಗಳು ಮನುಷ್ಯನ ವೈಚಾರಿಕತೆಯನ್ನು ಹಾಳುಮಾಡುವುದೇ ಅಲ್ಲದೆ, ಮಾನವೀಯ ಮೌಲ್ಯಗಳನ್ನು ಅಪಮೌಲ್ಯಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ನೈತಿಕ ಸ್ಥೈರ್ಯ, ಅನುಕಂಪ, ಸಹಾನುಭೂತಿ, ಮತ್ತು ನ್ಯಾಯ ಇವುಗಳೇ ಸಮಾಜವನ್ನು ನಿರ್ದೇಶಿಸಬೇಕೇ ಹೊರತು, ಆಚರಣಾತ್ಮಕ ಭಕ್ತಿ ಗೌರವಗಳಲ್ಲ ಎಂದು ಕುವೆಂಪು ಹೇಳುತ್ತಿದ್ದರು. ಆದರೆ ಅವರ ಕರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಧಾರ್ಮಿಕ ನಾಯಕರು ಗೌರವಿಸಲ್ಪಡುತ್ತಿದ್ದು, ನ್ಯಾಯಕ್ಕೆ ಅಡ್ಡಿ ಮಾಡಲಾಗುತ್ತಿದೆ. ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ.
ಇಲ್ಲಿ ತುರ್ತು ಗಮನಿಸಬೇಕಾದ ಸಂದೇಶವೂ ಇದೆ. ಮೌನವೀಯ ಮೌಲ್ಯಗಳು ಪ್ರಥಮ ಆದ್ಯತೆ ಪಡೆಯಬೇಕು. ಅನುಕಂಪ, ಸಹಾನುಭೂತಿ, ನ್ಯಾಯ, ಸಮಾನತೆ ಮತ್ತು ಉತ್ತರದಾಯಿತ್ವ ಈ ಮೌಲ್ಯಗಳು ಪ್ರಗತಿಯ ಮಾನದಂಡಗಳಾಗಬೇಕು. ಲಿಂಗ, ಜಾತಿ ಅಥವಾ ಧರ್ಮ ರಕ್ಷಣೆಯ ಅಥವಾ ಹಕ್ಕುಗಳನ್ನು ನಿರ್ಧರಿಸುವ ಮಾಪಕಗಳಾಗಕೂಡದು. ಅಂಧ ಭಕ್ತಿಯ ಪರದೆಯ ಹಿಂದೆ ನಡೆಯುವ ದೌರ್ಜನ್ಯಗಳು, ನೈತಿಕ ದಿವಾಳಿತನವಾಗುತ್ತದೆ. ದೌರ್ಜನ್ಯಗಳ ನಡುವೆ ಮೌನವಾಗಿರುವುದು ಶಾಮೀಲಾದಂತೆಯೇ ಆಗುತ್ತದೆ.
ಇದು ಶ್ರದ್ಧೆಯ ಮೇಲಿನ ಆಕ್ರಮಣ ಅಲ್ಲ, ಬದಲಾಗಿ ನೈತಿಕತೆಯನ್ನು ಮರಳಿ ಗಳಿಸುವ ಒಂದು ಪ್ರಯತ್ನ. ಧಾರ್ಮಿಕ ನಂಬಿಕೆಗಳು ಮಾನವೀಯತೆಯೊಂದಿಗೆ ಚಾಲ್ತಿಯಲ್ಲಿರಬೇಕು, ಆದರೆ ದೌರ್ಜನ್ಯ, ದಬ್ಬಾಳಿಕೆಗಳನ್ನು, ಬಲಾಢ್ಯರನ್ನು ರಕ್ಷಿಸುವ ಕವಚಗಳಾಗಕೂಡದು. ಪ್ರಜೆಗಳು ಮಾನವ ಘನತೆಯೊಂದಿಗೆ ಬದುಕುವುದು, ಯಾವುದೇ ಆಚರಣೆಗಿಂತಲೂ ಮಿಗಿಲಾದದ್ದು. ಅನ್ಯಾಯ ಎಲ್ಲೇ ನಡೆದರೂ ಅದರ ವಿರುದ್ಧ ನಿಲ್ಲಬೇಕೇ ಹೊರತು, ಮೌನಕ್ಕೆ ಶರಣಾಗಲು ಒಪ್ಪಕೂಡದು.
ಇಂದು ದೇಶ ಕವಲು ಹಾದಿಯಲ್ಲಿದೆ. ನಾವು ಜನರಿಗಿಂತಲೂ ಸಂಕೇತಗಳನ್ನು ಗೌರವಿಸುತ್ತೇವೆಯೋ ಅಥವಾ ತರ್ಕ, ಸಹಾನುಭೂತಿ, ನ್ಯಾಯವನ್ನು ನಮ್ಮ ಹಾದಿಯಲ್ಲಿ ಅಳವಡಿಸಿಕೊಳ್ಳುತ್ತೇವೆಯೋ? ಕುವೆಂಪು ಅವರ ದಾರ್ಶನಿಕತೆ ಇದೇ ಹಾದಿಯನ್ನು ತೋರಿಸುತ್ತದೆ. ಅಂಧ ಶ್ರದ್ಧೆ, ಗೌರವಗಳನ್ನು ನಿರಾಕರಿಸಿ, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಿರಿ, ಘನತೆ, ಸಭ್ಯತೆ, ಸ್ಥೈರ್ಯ ಮತ್ತು ಎಲ್ಲರನ್ನೂ ಗೌರವಿಸುವ ಮೌಲ್ಯಗಳನ್ನು ಪುನರ್ ಸ್ಥಾಪಿಸಿ. ನೈತಿಕ ಸ್ಥೈರ್ಯ ತೋರಲು ಇದು ಸಕಾಲ.
Comments
Post a Comment