ಕರ್ನಾಟಕದಲ್ಲಿ ಮೀಸಲಾತಿ ಕೇವಲ ಪೊಳ್ಳು ಆಶ್ವಾಸನೆ
ಸುಧಾರಣೆ ಅಥವಾ ರದ್ದತಿ ಯಾವುದರ ಬಗ್ಗೆ ವಾದ ಮಾಡಿದರೂ, ಪ್ರಸ್ತುತ ಮಾದರಿಯ ಮೀಸಲಾತಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದು ವಾಸ್ತವ
ರಾಜಕೀಯ ಮತ್ತು ಸಾರ್ವಜನಿಕ ವಲಯಗಳಲ್ಲಿ ಎಸ್‍ಸಿ, ಎಸ್‍ಟಿ, ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ಹೆಚ್ಚಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಮೀಸಲಾತಿ ನೀತಿಯು ಜಾರಿಯಾದ ಏಳು ದಶಕಗಳ ನಂತರ, ಈ ನೀತಿಯು ನೀಡಿದ ಆಶ್ವಾಸನೆಗೆ ತಕ್ಕಂತೆ ಫಲ ನೀಡಿದೆಯೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ. ಸತತವಾಗಿ ಸರ್ಕಾರಗಳು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿ ಒದಗಿಸುವ ಮೂಲಕ ಸಬಲೀಕರಣಗೊಳಿಸುವುದಾಗಿ ಹೇಳುತ್ತಲೇ ಬಂದಿವೆ, ಆದರೆ ವಾಸ್ತವದಲ್ಲಿ ಕರ್ನಾಟಕದ ಸನ್ನಿವೇಶ ಭಿನ್ನವಾಗಿಯೇ ಕಾಣುತ್ತದೆ.
ಸರ್ಕಾರಿ ಉದ್ಯೋಗವನ್ನೇ ಪರಿಗಣಿಸಿದರೆ, ಅಧಿಕೃತ ಅಂಕಿಅಂಶಗಳ ಪ್ರಕಾರ 2.5 ಲಕ್ಷಕ್ಕೂ ಹೆಚ್ಚು ಮಂಜೂರಾಗಿರುವ ಹುದ್ದೆಗಳು ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿವೆ. ಪ್ರತಿಯೊಂದು ಸಚಿವಾಲಯವೂ, ಶಿಕ್ಷಣದಿಂದ ಆರೋಗ್ಯದವರೆಗೆ, ಕಂದಾಯದಿಂದ ಲೋಕೋಪಯೋಗಿವರೆಗೆ ಅಲ್ಪ ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಪಕ್ಷಾತೀತವಾಗಿ ಸರ್ಕಾರಗಳು ಈ ಹುದ್ದೆಗಳನ್ನು ಭರ್ತಿ ಮಾಡುವುದು ಅಸಾಧ್ಯ ಎನ್ನುವುದನ್ನು ಮನಗಂಡಿವೆ. ಈಗಿರುವ ಸಿಬ್ಬಂದಿಗಳಿಗೆ ವೇತನ ಮತ್ತು ಪಿಂಚಣಿಯ ಪಾವತಿಯನ್ನು ತಿಂಗಳುಗಟ್ಟಲೆ ವಿಳಂಬ ಮಾಡಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ಹಣಕಾಸು ಕೊರತೆ ಇರುವುದನ್ನೂ ಸರ್ಕಾರ ಒಪ್ಪಿಕೊಂಡಿದೆ. ಹಾಲಿ ಸಿಬ್ಬಂದಿಗಳಿಗೇ ಸಮಯಕ್ಕೆ ಸರಿಯಾಗಿ ವೇತನ ಪಾವತಿ ಮಾಡಲಾಗದ ಸರ್ಕಾರ ಲಕ್ಷಾಂತರ ನಿರುದ್ಯೋಗಿಗಳಿಗೆ ಮೀಸಲಾತಿ ವ್ಯವಸ್ಥೆಯಲ್ಲಿ ಹೇಗೆ ಉದ್ಯೋಗ ನೀಡಲು ಸಾಧ್ಯ?
ನಿಯತಕಾಲಿಕ ನೇಮಕಾತಿಗಳ ಬದಲು, ಅರೆಕಾಲಿಕ, ಗುತ್ತಿಗೆ ಆಧಾರಿತ, ಅತಿಥಿ ನೌಕರರನ್ನು ನೇಮಿಸುವುದು ಈಗಿನ ಪ್ರವೃತ್ತಿಯಾಗಿದೆ. ಇದು ಶಿಕ್ಷಣ ವಲಯದಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಸಾವಿರಾರು ಅತಿಥಿ ಶಿಕ್ಷಕರನ್ನು ಕಳೆದ ಹತ್ತು ತಿಂಗಳಲ್ಲಿ ನೇಮಿಸಲಾಗಿದ್ದು, ಅವರಿಗೆ ಖಾಯಂ ನೌಕರರಿಗೆ ನೀಡುವ ಐದನೆ ಒಂದರಷ್ಟು ವೇತನವನ್ನೂ ನೀಡಲಾಗುತ್ತಿಲ್ಲ. ಶೈಕ್ಷಣಿಕ ವಷಾರ್ಂತ್ಯದಲ್ಲಿ ಅವರನ್ನು ಕೆಲಸದಿಂದ ಹೊರಗೆ ಕಳಿಸಲಾಗುತ್ತದೆ, ಕೆಲವು ತಿಂಗಳುಗಳ ಕಾಲ ಅವರ ಜೀವನ ನಿರ್ವಹಣೆ ಸ್ವಂತ ಜವಾಬ್ದಾರಿಯಾಗುತ್ತದೆ. ಇದು ಅವರು ಖರ್ಚುಮಾಡುವ ಸಾರಿಗೆ ಮತ್ತು ಕುಟುಂಬದ ಊಟ, ವಸತಿಗೇ ಸಾಲುವುದಿಲ್ಲ. ಇತರ ಇಲಾಖೆಗಳೂ ಸಹ ಇದೇ ರೀತಿಯ ವ್ಯವಸ್ಥೆಯನ್ನು ಅಳವಡಿಸಿದ್ದು, ವಿದ್ಯಾವಂತ ಯುವ ಸಮೂಹವನ್ನು ವಂಚಿಸುತ್ತಿವೆ. ಈ ಸನ್ನಿವೇಶದಲ್ಲಿ, ಉದ್ಯೋಗಗಳೇ ಘನತೆಯನ್ನು ಕಳೆದುಕೊಂಡಿರುವಾಗ ಭದ್ರತೆ ಇಲ್ಲವಾದಾಗ ಮೀಸಲಾತಿ ಏನು ಉಪಯೋಗವಾಗುತ್ತದೆ?
ಉನ್ನತ ಶಿಕ್ಷಣದಲ್ಲಿ ಚಿತ್ರಣವೇನೂ ಉತ್ತಮವಾಗಿಲ್ಲ. ಇಂಜಿನಿಯರಿಂಗ್, ವೈದ್ಯಕೀಯ ಮತ್ತು ವೃತ್ತಿಪರ ಕಾಲೇಜುಗಳು ನಾಯಿಕೊಡೆಗಳಂತೆ ಆರಂಭವಾಗುತ್ತಿದ್ದು ಸೀಟುಗಳನ್ನು ತುಂಬಲಾಗುತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಕ್ಯಾಪಿಟೇಷನ್ ಶುಲ್ಕ ನೀಡುವವರು ಪ್ರವೇಶ ಪಡೆಯುತ್ತಾರೆ. ಮೀಸಲಾತಿ ಕೋಟಾಗಳು ತಮ್ಮ ಕೈಕಾಲು ಕಳೆದುಕೊಳ್ಳುತ್ತವೆ. ಇದು ಸಬಲೀಕರಣವನ್ನು ವಿಫಲಗೊಳಿಸುತ್ತದೆ. ಗುಣಮಟ್ಟ ಮತ್ತು ಸುಲಭ ಲಭ್ಯತೆ ಬಹುಮುಖ್ಯ ಸವಾಲುಗಳಾಗಿವೆ. ಈ ವಿಚಾರದಲ್ಲೇ ಸರ್ಕಾರಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಂಡಿವೆ.
ಈ ಹಿನ್ನೆಲೆಯಲ್ಲಿ ಮೀಸಲಾತಿಯನ್ನು ನಿರಂತರವಾಗಿ ಮುಂದುವರೆಸುವ ಬಗ್ಗೆ ಯೋಚನೆ ಮಾಡಬೇಕಿದೆ. ಇದರ ಹಿಂದಿನ ಉದ್ದೇಶ ಉದಾತ್ತವಾದುದೇ. ಶತಮಾನಗಳ ತಾರತಮ್ಯ ಮತ್ತು ಹೊರಗಿಡುವಿಕೆಯಿಂದ ಬಡವರನ್ನು ಪಾರು ಮಾಡುತ್ತದೆ. ನಿಸ್ಸಂಶಯವಾಗಿ ಸಾವಿರಾರು ಎಸ್‍ಸಿ, ಎಸ್‍ಟಿ, ಒಬಿಸಿ ಕುಟುಂಬಗಳಿಗೆ ಇದು ನೆರವಾಗಿದೆ. ಇವರು ವಿಶ್ವವಿದ್ಯಾಲಯಗಳನ್ನು, ಕಚೇರಿಗಳನ್ನು ಪ್ರವೇಶಿಸಿರುವುದರಿಂದ ಜೀವನ ನಿರ್ವಹಣೆ ಉತ್ತಮವಾಗಿದೆ. ಆದರೆ ಈಗ ಸರ್ಕಾರಿ ನೌಕರಿ ಕ್ಷೀಣಿಸುತ್ತಿದೆ, ಉನ್ನತ ಶಿಕ್ಷಣ ವಾಣಿಜ್ಯೀಕರಣಕ್ಕೊಳಗಾಗಿದೆ, ಆರ್ಥಿಕ ದಿವಾಳಿತನವು ಸರ್ಕಾರಕ್ಕೆ ಸವಾಲಾಗಿದೆ, ಹಾಗಾಗಿ ಮೀಸಲಾತಿ ಕೇವಲ ರಾಜಕೀಯ ಘೋಷಣೆಯಾಗಿದೆಯೇ ಹೊರತು, ಅರ್ಥಪೂರ್ಣ ನ್ಯಾಯ ಒದಗಿಸುವ ಸವಲತ್ತು ಆಗಿಲ್ಲ.
ಕಟು ಸತ್ಯ ಎಂದರೆ, ಕರ್ನಾಟಕ ಸರ್ಕಾರದ ಬಳಿ ವ್ಯಾಪಕ ಸಿಬ್ಬಂದಿ ನೇಮಕಕ್ಕೆ ಅಗತ್ಯವಾದ ಸಂಪನ್ಮೂಲಗಳಿಲ್ಲ ಅಥವಾ ಸರಕಾರ ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಉತ್ತಮಪಡಿಸುವ ಉದ್ದೇಶ ಹೊಂದಿಲ್ಲ. ಇಂತಹ ವಾತಾವರಣದಲ್ಲಿ ಮೀಸಲಾತಿ ಸೌಲಭ್ಯವನ್ನು ಪದೇಪದೇ ಮುನ್ನಲೆಗೆ ತರುವುದರಿಂದ, ಇದನ್ನು ಪಡೆದು ರಕ್ಷಣೆ ಪಡೆಯುವ ಸಮುದಾಯಗಳನ್ನು ವಂಚಿಸಿದಂತಷ್ಟೇ ಆಗುತ್ತದೆ. ಕನಿಷ್ಠ ಪಕ್ಷ ಈ ವಾಸ್ತವವನ್ನು ಒಪ್ಪಿಕೊಳ್ಳಲು ಇದು ಸಕಾಲ. ಸುಧಾರಣೆ ಅಥವಾ ರದ್ದತಿ ಯಾವುದರ ಬಗ್ಗೆ ವಾದ ಮಾಡಿದರೂ, ಪ್ರಸ್ತುತ ಮಾದರಿಯ ಮೀಸಲಾತಿ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವುದು ವಾಸ್ತವ.
Comments
Post a Comment