ಆರೆಸ್ಸೆಸ್ ಹಿಂದೂ ವಿರೋಧಿ, ಮಹಿಳಾ ವಿರೋಧಿ ಆದಾಗ...

 ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಹಿಂದೂ ಮಹಿಳೆಯರ ಬಗ್ಗೆ ಮಾತನಾಡಲು ಆರೆಸ್ಸೆಸ್ ನಿರಾಕರಿಸುವ ಮೂಲಕ ಆರೆಸ್ಸೆಸ್ ತನ್ನ ಮುಖವಾಡವನ್ನು ತಾನೇ ಕಳಚಿಹಾಕಿದೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ಸದಾ ಕಾಲವೂ ತನ್ನನ್ನು ಹಿಂದೂಗಳ ಯೋಗಕ್ಷೇಮದ ರಕ್ಷಕನೆಂದೂ, ಹಿಂದೂ ನಂಬಿಕೆಗಳನ್ನು, ಜನತೆಯನ್ನು ಮತ್ತು ಸಂಸ್ಕøತಿಯನ್ನು ರಕ್ಷಿಸಲು ಕಟಿಬದ್ಧವಾಗಿರುವ ನಾಗರಿಕತೆಯ ಶಕ್ತಿ ಎಂದೂ ಬಿಂಬಿಸುತ್ತಾ ಬಂದಿದೆ. ಆದರೂ ಹಿಂದೂ ಇತಿಹಾಸದಲ್ಲಿ ಅತ್ಯಂತ ಕರಾಳ ಅಧ್ಯಾಯವೊಂದು ಮುಖಾಮುಖಿಯಾದಾಗ, ಕಳೆದ ನಾಲ್ಕೈದು ದಶಕಗಳಲ್ಲಿ ಧರ್ಮಸ್ಥಳದಲ್ಲಿ ನೂರಾರು ಹಿಂದೂ ಮಹಿಳೆಯರು ಅತ್ಯಾಚಾರಕ್ಕೀಡಾಗಿ, ಕೊಲೆಯಾಗಿರುವಾಗ, ಸಂಘವು ಮೌನಕ್ಕೆ ಶರಣಾಗಿರುವುದು ಖಂಡನೀಯ.

ಈಗ ಸಾರ್ವಜನಿಕ ವಲಯದಲ್ಲಿ ಸುದ್ದಿಯಾಗುತ್ತಿರುವ ಆರೋಪಗಳು ಮಾನವತೆಯ ವಿರುದ್ಧ ನಡೆದಿರುವ ಅಪರಾಧಗಳಿಗಿಂತಲೂ ಕಡಿಮೆಯೇನಲ್ಲ. ಈ ಮಟ್ಟದ ದೌರ್ಜನ್ಯಗಳನ್ನು ಹಿಂದೂ ಬಾಲಕಿಯರು ಮತ್ತು ಮಹಿಳೆಯರ ಮೇಲೆ ನಡೆಸುತ್ತಿರುವಾಗ, ಎಲ್ಲೇ ಆದರೂ ಹಿಂದೂಗಳ ಬದುಕಿಗೆ ಧಕ್ಕೆ ಉಂಟಾದಾಗ ದೊಡ್ಡ ಧ್ವನಿಯಲ್ಲಿ ತನ್ನ ಆಕ್ರೋಶ ವ್ಯಕ್ತಪಡಿಸುವ ಸುದೀರ್ಘ ಪರಂಪರೆಯನ್ನು ಹೊಂದಿರುವ ಸಂಘವು  ಇನ್ನೂ ಜೋರು ದನಿಯಲ್ಲಿ ಮಾತನಾಡಬೇಕಿತ್ತು. ಆದರೆ ಲವ್ ಜಿಹಾದ್ ಅಥವಾ ದೇವಸ್ಥಾನಗಳ ನಿಯಂತ್ರಣದ ವಿಚಾರದಲ್ಲಿ ಬೀದಿಗಿಳಿದು ಹೋರಾಡುವ ಅರೆಸ್ಸೆಸ್ ಧರ್ಮಸ್ಥಳದ ಭೀಕರ ಕೃತ್ಯಗಳ ಬಗ್ಗೆ ತುಟಿ ಪಿಟಕ್ ಎಂದಿಲ್ಲ. ಒಬ್ಬ ನಾಯಕನೂ ಸಹ ಉತ್ತರದಾಯಿತ್ವಕ್ಕಾಗಿ ಆಗ್ರಹಿಸಿಲ್ಲ ಅಥವಾ ಒಂದು ವೇದಿಕೆಯನ್ನು ಸೃಷ್ಟಿಸಿ ಒಂದಾದರೂ ಅರ್ಜಿಯನ್ನು ಸಲ್ಲಿಸಿಲ್ಲ.

ಈ ಠಕ್ಕುತನವು ಇನ್ನೂ ಸ್ಪಷ್ಟವಾಗಬೇಕೆಂದರೆ, ಬಾಂಗ್ಲಾದೇಶ ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯೆಯಾದಾಗ ಸಂಘ ಪರಿವಾರ ನಡೆಸಿದ ಪ್ರಚಾರಗಳನ್ನು ಸ್ಮರಿಸಬೇಕು. ಅಲ್ಲಿನ ಪ್ರತಿಯೊಂದು ಘಟನೆಯನ್ನೂ ಹಿಂದೂಗಳ ದೌರ್ಬಲ್ಯ ಎಂದು ಬಿಂಬಿಸುತ್ತಾ, ಪ್ರತಿಯೊಂದು ಹತ್ಯೆಯನ್ನೂ ರಾಜಕೀಯ ಬಂಡವಾಳವಾಗಿ ಕ್ರೋಢೀಕರಿಸಿ ಬಳಸಲಾಗುತ್ತಿತ್ತು. ಆದರೆ ಹಿಂದೂ ಮಹಿಳೆಯರ ಹತ್ಯೆಯಾದಾಗ, ವ್ಯವಸ್ಥಿತ ರೀತಿಯಲ್ಲಿ, ಯೋಜಿತ ಮಾದರಿಯಲ್ಲಿ, ಪ್ರಬಲವಾದ ಹಿಂದೂ ಗುಂಪಿನ ಛಾಯೆಯಲ್ಲಿ ನಿಂತು ಸಂಘಪರಿವಾರ ಮೌನ ವಹಿಸುತ್ತದೆ. ಆರೆಸ್ಸೆಸ್ ಏನನ್ನು ಸಾಬೀತುಪಡಿಸಲು ಹೊರಟಿದೆ? ಧರ್ಮಸ್ಥಳದ ಸಿಂಡಿಕೇಟ್ ಹೆಚ್ಚು ಮುಖ್ಯವೇ, ಹಿಂದೂ ಮಹಿಳೆಯ ಘನತೆ ಗೌರವಗಳಿಗಿಂತಲೂ ಮುಖ್ಯವಾದುದೇ? ಈ ಮೌನದ ಮೂಲಕ ಆರೆಸ್ಸೆಸ್ ತನ್ನನ್ನು ಹಿಂದೂ ವಿರೋಧಿ ಎಂದಷ್ಟೇ ಅಲ್ಲ, ಮಹಿಳಾ ವಿರೋಧಿ ಎನ್ನುವುದನ್ನೂ ಸಾಬೀತುಪಡಿಸುತ್ತಿದೆ.

ಇಲ್ಲಿ ಉತ್ತರ ಅಹಿತಕರವಾಗಿಯೇ ಇರುತ್ತದೆ. ಧರ್ಮಸ್ಥಳ ಕೇವಲ ಒಂದು ಗ್ರಾಮ ಅಲ್ಲ. ಅದು ಬಲಾಢ್ಯ ಕುಟುಂಬವೊಂದರ ಕೇಂದ್ರ, ಅಲ್ಲಿ ಧರ್ಮ, ರಾಜಕೀಯ, ಹಣಕಾಸು ಎಲ್ಲವೂ ಕ್ರೋಢೀಕೃತವಾಗಿವೆ. ಈ ಸ್ಥಳದ ಪ್ರಭಾವ ಪಕ್ಷಾತೀತವಾಗಿ ಎಲ್ಲ ಕಡೆಯೂ ಪ್ರಭಾವ ಬೀರುತ್ತದೆ, ಇದರ ಸಂಸ್ಥೆಗಳು ಗೌರವ ಮತ್ತು ಸಂಪತ್ತು ಎರಡನ್ನೂ ಸಂಪಾದಿಸಿವೆ. ಧರ್ಮಸ್ಥಳಕ್ಕೆ ಸವಾಲೆಸೆಯುವುದೆಂದರೆ, ಸಂರಕ್ಷಿತ, ಬೇರೂರಿದ ಸವಲತ್ತುಗಳ ಒಂದು ರಚನೆಯನ್ನು ಎದುರು ಹಾಕಿಕೊಂಡ ಹಾಗೆ. ಆರೆಸ್ಸೆಸ್ ಈ ರೀತಿಯ ಸಂಘರ್ಷಕ್ಕೆ ಸಿದ್ಧವಾಗಿಲ್ಲ.

ರಾಜಕೀಯ ಮೈತ್ರಿಗಳನ್ನು, ಹಣಕಾಸು ಹೊಂದಾಣಿಕೆಗಳನ್ನು ರಕ್ಷಿಸುತ್ತಲೇ ಸಂಘವು ತನ್ನ ನೈತಿಕ ಹೊಣೆಗಾರಿಕೆಯನ್ನು ಮರೆತಿದೆ. ಮೌನವಾಗಿರುವ ಮೂಲಕ ಅದು ತಾನು ರಕ್ಷಿಸುವುದಾಗಿ ಸಂಕಲ್ಪ ಮಾಡಿರುವ ಹಿಂದೂ ಮಹಿಳೆಯರಿಗೆ ವಂಚನೆ ಮಾಡಿದೆ. ಈ ಠಕ್ಕುತನ ಆರೆಸ್ಸೆಸ್‍ನ ಅಂತರಂಗವನ್ನು ಜಗಜ್ಜಾಹೀರುಗೊಳಿಸುತ್ತದೆ.  ಹಿಂದೂಗಳು ಅಪಾಯದಲ್ಲಿದ್ದಾರೆ ಎಂಬ ಕೂಗಿನೊಂದಿಗೆ, ಹಿಂದೂ ಸಂತ್ರಸ್ತರನ್ನೇ ಒಂದು ಅಸ್ತ್ರವನ್ನಾಗಿ ಮಾಡಿಕೊಂಡಿರುವ ಸಂಘವು, ದೌರ್ಜನ್ಯ ಎಸಗುವವರು ಹಿಂದೂಗಳೇ ಆಗಿದ್ದಾಗ, ರಾಜಿ ಮಾಡಿಕೊಂಡು ಬದಿಗೆ ಸರಿಯುತ್ತದೆ. ಧರ್ಮಸ್ಥಳದಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಹಿಂದೂ ಮಹಿಳೆಯರ ಬಗ್ಗೆ ಮಾತನಾಡಲು ಆರೆಸ್ಸೆಸ್ ನಿರಾಕರಿಸುವ ಮೂಲಕ ಆರೆಸ್ಸೆಸ್ ತನ್ನ ಮುಖವಾಡವನ್ನು ತಾನೇ ಕಳಚಿಹಾಕಿದೆ. ಮುಂದೆ ಹಿಂದೂಗಳ ಪರ ಮಾತನಾಡುವ ಅರ್ಹತೆಯನ್ನೇ ಕಳೆದುಕೊಳ್ಳಲಿದೆ. ತನ್ನನ್ನು ತಾನು ಹಿಂದೂ ರಕ್ಷಕ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದೆ.

Comments

Popular posts from this blog

ಕರಾವಳಿಯ ನೆಮ್ಮದಿಗೆ ಕೊಲೆಗಳ ಕರಿನೆರಳು

ಮಾತಿನ ಸಂಸ್ಕøತಿ ಕಳೆದುಕೊಳ್ಳುತ್ತಿರುವ ರಾಜಕೀಯ

WHEN COMMUNAL POLITICS POISONS TRADITION: A WARNING FROM UDUPI