ಭಾರತ ನಿರ್ಲಕ್ಷಿಸಲಾಗದ ಬ್ರೆಜಿಲ್ ಅನುಭವ

 ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಅಥವಾ ನಂತರದಲ್ಲಿ ವಿಷಾದ ವ್ಯಕ್ತಪಡಿಸಬೇಕು.

                                            ದೇಶಭ್ರಷ್ಟ ಬ್ರೆಝಿಲ್ ಮಾಜಿ ಅಧ್ಯಕ್ಷ ಜೈರ್ ಬೊಲ್ಸನಾರೋ


ನೆಟ್ ಫ್ಲಿಕ್ಸ್‍ನಲ್ಲಿ ಬಿತ್ತರವಾದ ಬ್ರೆಜಿಲ್ ದೇಶದ ಒಂದು ಡಾಕ್ಯುಮೆಂಟರಿ ಸಿನಿಮಾ `ಅಪೆÇೀಕಲಿಪ್ಸ್ ಇನ್ ದ ಟ್ರಾಪಿಕ್ಸ್' ರಾಜಕೀಯ ಸಂದೇಶವನ್ನೂ ಮೀರಿದ ಒಂದು ವಸ್ತುವಿಷಯದ ಸುತ್ತ ಹೆಣೆಯಲಾಗಿದ್ದು, ಇದೊಂದು ಭಾರತವೂ ಸೇರಿ ಎಲ್ಲ ಪ್ರಜಾತಾಂತ್ರಿಕೆ ದೇಶಗಳಿಗೂ ಎಚ್ಚರಿಕೆಯ ಕತೆಯಾಗಿದೆ. ಧರ್ಮ ಒಂದು ರಾಜಕೀಯ ಅಸ್ತ್ರವಾದರೆ ಜಾತ್ಯತೀತ ಪ್ರಜಾಪ್ರಭುತ್ವವೊಂದನ್ನು ಹೇಗೆ ಕ್ರಮೇಣವಾಗಿ ಧರ್ಮಾಧರಿತ ಡೋಂಗಿ ಪ್ರಭುತ್ವವನ್ನಾಗಿ ಪರಿವರ್ತಿಸಬಹುದು ಎಂಬುದನ್ನು ಈ ಸಿನಿಮಾ ಪ್ರಸ್ತುತಪಡಿಸುತ್ತದೆ. ಈ ಚಿತ್ರದಲ್ಲಿ ಬ್ರೆಜಿಲ್ ದೇಶವನ್ನು ಚಿತ್ರಿಸಿರುವ ರೀತಿ ಜಾಗತಿಕ ಮಟ್ಟದ ಪ್ರಕ್ಷುಬ್ಧ ಮಾದರಿಯನ್ನು ಸೂಚಿಸುತ್ತದೆ. ಒಮ್ಮೆ ಧರ್ಮವು ಪ್ರಭುತ್ವವನ್ನು ಆಕ್ರಮಿಸಿದರೆ, ಪ್ರಜಾಪ್ರಭುತ್ವದ ಸಂಸ್ಥೆಗಳು ಸದ್ದಿಲ್ಲದೆ ದುರ್ಬಲವಾಗುತ್ತವೆ ಎಂಬ ಸಂದೇಶವನ್ನು ಇದು ಸಾರುತ್ತದೆ.
ಈ ಬೆಳವಣಿಗೆಯನ್ನು ನಾವು ಈ ಹಿಂದೆ ಕಂಡಿದ್ದೇವೆ. ಒಂದು ಕಾಲದಲ್ಲಿ ಜಾತ್ಯತೀತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ತುರ್ಕಿ ದೇಶವು ಎರ್ಡೋಗನ್ ನೇತೃತ್ವದಲ್ಲಿ ಮರುವಿನ್ಯಾಸಕ್ಕೊಳಪಟ್ಟು, ಧರ್ಮವೇ ಶಿಕ್ಷಣ ವ್ಯವಸ್ಥೆಯನ್ನು, ಕಾನೂನುಗಳನ್ನು ಪ್ರಭಾವಿಸಿದ್ದನ್ನು ಕಂಡಿದ್ದೇವೆ. ಶ್ರೀಲಂಕಾದ ಬೌದ್ಧ ಬಹುಸಂಖ್ಯಾವಾದವು ಅಲ್ಲಿನ ಜನಾಂಗೀಯ ಒಳಬಿರುಕುಗಳನ್ನು ಮತ್ತಷ್ಟು ತೀವ್ರಗೊಳಿಸಿದೆ. ಇಸ್ರೇಲ್‍ನಲ್ಲಿ ತೀವ್ರವಾದಿ ಧಾರ್ಮಿಕ ಬೇಡಿಕೆಗಳು ರಾಷ್ಟ್ರೀಯ ರಾಜಕಾರಣವನ್ನು ಹೆಚ್ಚಾಗಿ ನಿರ್ದೇಶಿಸುತ್ತದೆ. 

ದಕ್ಷಿಣ ಏಷ್ಯಾ ಇನ್ನೂ ಎದ್ದು ಕಾಣುವಂತಹ ಎಚ್ಚರಿಕೆಯನ್ನು ನೀಡುತ್ತದೆ. ಪಾಕಿಸ್ತಾನವನ್ನು ಜಾತ್ಯತೀತತೆಯ ಆಶ್ವಾಸನೆಯ ಮೇಲೆ ಸ್ಥಾಪಿಸಲಾದರೂ, ಇದು ಜಿಯಾ ಉಲ್ ಹಕ್ ಅವರ ಇಸ್ಲಾಮೀಕರಣದ ಪ್ರಭಾವದಿಂದ ಬದಲಾಗಿದ್ದು, ಇಲ್ಲಿನ ಮೌಲ್ವಿಗಳಿಗೆ ರಾಜಕೀಯವಾಗಿ ಪರಮ ವಿವೇಚನಾಧಿಕಾರವನ್ನು ನೀಡಲಾಗಿದೆ. ತನ್ಮೂಲಕ ಅಲ್ಪಸಂಖ್ಯಾತರನ್ನು ಶಾಶ್ವತವಾಗಿ ಅಸ್ಪøಶ್ಯರನ್ನಾಗಿ ಮಾಡಲಾಗಿದೆ.  ಸೆಕ್ಯುಲರ್ ಸಂವಿಧಾನದೊಂದಿಗೆ ಸ್ಥಾಪನೆಯಾದ ಬಾಂಗ್ಲಾದೇಶ ಎರಡೇ ದಶಕಗಳ ಅವಧಿಯಲ್ಲಿ ಇಸ್ಲಾಮ್ ಧರ್ಮವನ್ನು ಪ್ರಭುತ್ವದ ಧರ್ಮ ಎಂದು ಘೋಷಿಸಿದ್ದು, ಅದರ ನಾಗರಿಕ ಅವಕಾಶಗಳನ್ನು ಕಸಿದುಕೊಂಡಿದೆ. ಎರಡೂ ಪ್ರಸಂಗಗಳಲ್ಲಿ ಧಾರ್ಮಿಕತೆಯ ಕಡೆಗೆ ವಾಲಿದ ಪರಿಣಾಮವಾಗಿ, ರಾಜಕೀಯವು ಧರ್ಮಾಧರಿತ ನೈತಿಕ ಪೆÇಲೀಸ್‍ಗಿರಿಯಾಗಿ, ಆಳ್ವಿಕೆಯು ಧಾರ್ಮಿಕ ಹೇರಿಕೆಯಾಗಿ ಪರಿಣಮಿಸಿದೆ.

 ಭಾರತದ ಸ್ಥಾಪಕರು ಒಂದು ಜಾತ್ಯತೀತ ಗಣತಂತ್ರವನ್ನು ಕಟ್ಟಿದ್ದು ಈ ಬಲೆಯಿಂದ ಪಾರಾಗುವ ಸಲುವಾಗಿಯೇ ಆಗಿತ್ತು. ಭಾರತದಲ್ಲಿ ಜಾತ್ಯತೀತತೆಯು ಎಂದಿಗೂ ಸಹ ಶ್ರದ್ಧೆಗೆ ವಿರೋಧಿಯಾಗಿರಲಿಲ್ಲ. ಬದಲಾಗಿ ಎಲ್ಲ ಧರ್ಮಗಳನ್ನೂ ಕಾನೂನಿನ ದೃಷ್ಟಿಯಲ್ಲಿ ಸಮಾನವಾಗಿ ರಕ್ಷಿಸುವ ಕವಚವಾಗಿದೆ. ಇಂದು ಹೆಚ್ಚುತ್ತಿರುವ ಬಹುಸಂಖ್ಯಾವಾದದ ಅಬ್ಬರವು ಈ ರಕ್ಷಾ ಕವಚವನ್ನು ದುರ್ಬಲಗೊಳಿಸುತ್ತಿದೆ. ಧಾರ್ಮಿಕ ಸಂಕೇತಗಳು ಆಡಳಿತ ನೀತಿ ರೂಪಿಸುವುದರಲ್ಲೂ ಪ್ರವೇಶಿಸುತ್ತಿದ್ದು, ಪ್ರತಿರೋಧವನ್ನು ಸುಲಭವಾಗಿ ರಾಷ್ಟ್ರದ ಶ್ರದ್ಧೆಗೆ ಬಗೆದ ದ್ರೋಹ ಎಂದು ಪರಿಗಣಿಸಲಾಗುತ್ತಿದೆ.

 ಇಲ್ಲಿ ಅಪಾಯ ಇರುವುದು ಕೇವಲ ಸೈದ್ಧಾಂತಿಕ ನೆಲೆಯಲ್ಲಿ ಅಲ್ಲ. ಧಾರ್ಮಿಕ ಪ್ರಭುತ್ವವು ದೈವೀಕ ಮಾನ್ಯತೆಯನ್ನು ನಿರೀಕ್ಷಿಸುತ್ತದೆ, ಹಾಗಾಗಿ ಭಿನ್ನಾಭಿಪ್ರಾಯಗಳು ಧರ್ಮದ್ರೋಹವಾಗಿಬಿಡುತ್ತವೆ. ಈ ನೀತಿಯು ಗ್ರಾಂಥಿಕ ಸಂಹಿತೆಗಳನ್ನು ಅಭಿವೃದ್ಧಿಗಿಂತಲೂ ಹೆಚ್ಚು ಪ್ರಧಾನವಾಗಿ ನೋಡುತ್ತದೆ, ವೈವಿಧ್ಯತೆಯನ್ನು ಬದ್ಧತೆಗೆ ಶರಣಾಗಿಸುತ್ತದೆ. ಒಮ್ಮೆ ಇದು ಭದ್ರವಾದರೆ ಮರಳಿ ಬರಲಾಗುವುದಿಲ್ಲ, ಇದರಿಂದ ತೀವ್ರವಾದ ಪಲ್ಲಟಗಳು ಸಂಭವಿಸುತ್ತವೆ.

 ಅಪೆÇೀಕಲಿಪ್ಸ್ ಇನ್ ದ ಟ್ರಾಪಿಕ್ಸ್' ಡಾಕ್ಯುಮೆಂಟರಿಯು, ಧಾರ್ಮಿಕ ಪ್ರಭುತ್ವವು ರಾತ್ರೋರಾತ್ರಿ ಸಂಭವಿಸುವುದಿಲ್ಲ ಎನ್ನುವುದನ್ನು ನೆನಪಿಸುತ್ತದೆ. ಅದು ಸಾಂಸ್ಕøತಿಕ ಹೆಮ್ಮೆ ಮತ್ತು ಕಾನೂನು ತಿದ್ದುಪಡಿಗಳ ಮೂಲಕ ಕ್ರಮೇಣವಾಗಿ ಒಳನುಸುಳುತ್ತದೆ. ಇದು ಶಾಶ್ವತÀವಾಗುವ ವೇಳೆಗೆ, ಸ್ವಾತಂತ್ರ್ಯ ಎನ್ನುವುದು ಮಸುಕಾಗಿರುತ್ತದೆ. ಇಲ್ಲಿ ಆಯ್ಕೆ ಸ್ಪಷ್ಟವಾಗಿದೆ, ಜಾತ್ಯತೀತ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಅಥವಾ ನಂತರದಲ್ಲಿ ವಿಷಾದ ವ್ಯಕ್ತಪಡಿಸಬೇಕು.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again