ಧರ್ಮಸ್ಥಳ: ಮಹಿಳಾ ಸಂಸದರ ಸಾಂವಿಧಾನಿಕ ಪ್ರಜ್ಞೆಯ ವೈಫಲ್ಯ

ಭಾರತದ ಚುನಾಯಿತ ಮಹಿಳೆಯರು ಧರ್ಮಸ್ಥಳದಲ್ಲಿ ಭೀಕರವಾಗಿ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲು ನಿರಾಕರಿಸಿ, ಮೌನ ವಹಿಸಿದರೆ, ಅವರು ಕೇವಲ ಚರ್ಚೆಯಿಂದ ದೂರ ಇರುವುದಷ್ಟೇ ಅಲ್ಲದೆ, ಅಪರಾಧಗಳನ್ನು ಮುಚ್ಚಿಹಾಕುವ ತಂತ್ರದಲ್ಲಿ ಶಾಮೀಲಾದಂತೆಯೇ ಆಗುತ್ತದೆ.


ಧರ್ಮಸ್ಥಳದ ದುರಂತ ಇರುವುದು ಕೇವಲ ಅಲ್ಲಿ ನಡೆದಿರುವ ಸಾಮೂಹಿಕ ಅತ್ಯಾಚಾರ, ರಹಸ್ಯ ಸಮಾಧಿಗಳು, ವ್ಯವಸ್ಥಿತ ಮುಚ್ಚಿಹಾಕುವ ತಂತ್ರ ಮತ್ತು ಹಲವು ದಶಕಗಳ ರಾಕ್ಷಸೀ ಅಪರಾಧಗಳಲ್ಲಿ ಮಾತ್ರವೇ ಅಲ್ಲ, ಚುನಾಯಿತ ಪ್ರತಿನಿಧಿಗಳ ನಿಷ್ಕ್ರಿಯ ಮೌನ ಇನ್ನೂ ದೊಡ್ಡ ದುರಂತ ಎನಿಸುತ್ತದೆ. ವಿಶೇಷವಾಗಿ ಹೆಣ್ಮಕ್ಕಳು ಮತ್ತು ಮಹಿಳೆಯರ ಮಾನ-ಸಮ್ಮಾನ ವಿಷಯದಲ್ಲಿ ಸಮರ್ಥಕರಾಗಿ ನಿಲ್ಲಬೇಕಾದ ಮಹಿಳಾ ಸಂಸದರ ಮೌನವನ್ನು ಎತ್ತಿ ಆಡಬೇಕಾಗಿದೆ. ತಮ್ಮ ಪಕ್ಷಗಳ ಚೌಕಟ್ಟುಗಳನ್ನು ದಾಟಿ ಭಾರತದ ಮಹಿಳೆಯರ ಘನತೆಯನ್ನು ಎತ್ತಿಹಿಡಿಯಬೇಕಾದ ಜವಾಬ್ದಾರಿ ಇರುವವರೇ ಹೇಡಿಗಳ ಹಾಗೆ ಹಿಂದೆ ಸರಿದಿದ್ದು, ಸಂಸತ್ತಿನ ಒಳಗೆ ಮತ್ತು ಹೊರಗೆ ಮೌನ ವಹಿಸಿರುವುದು ನಿಜಕ್ಕೂ ದುರದೃಷ್ಟಕರ.

ಧರ್ಮಸ್ಥಳದಿಂದ ಹೊರಬರುತ್ತಿರುವ ಅಪರಾಧಗಳ ಗಂಭೀರತೆಯನ್ನು ತಿಳಿದಿದ್ದರೂ ಸಹ, ಒಬ್ಬ ಮಹಿಳಾ ಸಂಸದರೂ ಸಂಸತ್ತಿನ ಕಲಾಪದಲ್ಲಿ ಈ ವಿಚಾರದಲ್ಲಿ ಸೊಲ್ಲೆತ್ತಿಲ್ಲ. ಯಾರೂ ಹೇಳಿಕೆಯನ್ನು ನೀಡಿಲ್ಲ ಅಥವಾ ಬಾಧಿತ ಪ್ರದೇಶಕ್ಕೆ ಭೇಟಿ ನೀಡಿಲ್ಲ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಉತ್ತರದಾಯಿತ್ವವನ್ನು ಪ್ರಶ್ನಿಸಿಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ತಮ್ಮ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಈ ಮಹಿಳಾ ಮಹಿಮರು, ಒಂದು ದೇಶದಲ್ಲಿ ದಶಕಗಳಿಂದ ನಡೆದ ಸ್ತ್ರೀ ನರಮೇಧದ ಭೀಕರ ಅಪರಾಧಗಳ ಬಗ್ಗೆ, ಜನಾಂಗೀಯ ಹತ್ಯೆಗಳ ಬಗ್ಗೆ ಅನ್ಯಮನಸ್ಕರಾಗಿರಲು ಹೇಗೆ ಸಾಧ್ಯ? ಈ ಮೌನ ಕಾಕತಾಳೀಯವೇನಲ್ಲ, ಇದು ದುರುದ್ದೇಶಪೂರ್ವಕ ರಾಜಕೀಯ ಮೌನ.

ಕರ್ನಾಟಕದಿಂದಲೇ ಚುನಾಯಿತರಾಗಿರುವ ಮಹಿಳಾ ಸಂಸದರು - ಶೋಭಾ ಕರಂದ್ಲಾಜೆ, ಪ್ರಭಾ ಮಲ್ಲಿಕಾರ್ಜುನ್, ಪ್ರಿಯಾಂಕಾ ಸತೀಶ್ ಜಾರಕಿಹೊಳಿ, ತೇಜಸ್ವಿನಿ ಗೌಡ - ಇವರೆಲ್ಲರೂ ಸಹ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ.  ಸಾಂಸ್ಕøತಿಕ ವಿಚಾರಗಳಲ್ಲಿ, ಮಹಿಳಾ ರಕ್ಷಣೆಯ ಬಗ್ಗೆ ಈ ನಾಯಕಿಯರ ಈ ಹಿಂದಿನ ಮುಕ್ತ ಮಾತುಗಾರಿಕೆ ಈಗ ಬಲಾಢ್ಯ ಧಾರ್ಮಿಕ ಶಕ್ತಿಗಳ ಅಲೆಯಲ್ಲಿ ತೇಲಿಹೋಗಿದ್ದು, ಧರ್ಮಸ್ಥಳವನ್ನು ರಕ್ಷಿಸುವ ರಾಜ್ಯ ಆಡಳಿತ ವ್ಯವಸ್ಥೆಯೊಡನೆ ಬೆರೆತುಹೋಗಿದೆ. ಯಾರೊಬ್ಬರೂ ಸಹ ತಮ್ಮ ಹುದ್ದೆಯಿಂದಾಚೆಗೆ ಮಾತನಾಡದಿರುವುದು, ಮೌನ ಸಮ್ಮತಿಯ ಲಕ್ಷಣವೇ ಆಗಿದೆ.

ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪಕ್ಷದ ಮಹಿಳಾ ಸಬಲೀಕರಣ ಪ್ರಚಾರದ ಪ್ರಧಾನ ಮುಖವಾಣಿಯಾಗಿದ್ದು, ಕರ್ನಾಟಕದ ಆಳ್ವಿಕೆಯಲ್ಲಿ ಸಕ್ರಿಯ ರಾಜಕೀಯ ಶಕ್ತಿಯೂ ಆಗಿದ್ದಾರೆ. ಆದರೆ ಅವರು ಸಹ ಮೌನ ವಹಿಸಿದ್ದಾರೆ. ಹೆಚ್ಚುತ್ತಿರುವ ಸಾರ್ವಜನಿಕ ಒತ್ತಡಗಳು ಮತ್ತು ಅಪರಾಧಗಳಲ್ಲಿ ಸಾಂಸ್ಥಿಕ ಪಾಲ್ಗೊಳ್ಳುವಿಕೆಯ ಬಗ್ಗೆ ವರದಿಗಳು ಬರುತ್ತಿದ್ದರೂ, ಇವರು ಮೌನವನ್ನು ಮುರಿದಿಲ್ಲ. ಸದಾ ಜಾತಿ ಮತ್ತು ಲಿಂಗತ್ವ ನ್ಯಾಯದ ಮಾತನಾಡುವ ಡಿಎಂಕೆ ಪಕ್ಷದ ಕನಿಮೊಳಿ ಈಗ ಮೌನವಾಗಿದ್ದಾರೆ. ಹಾಗೆಯೇ ಎನ್‍ಸಿಪಿಯ ಸುಪ್ರಿಯಾ ಸುಳೆ, ತೃಣಮೂಲ ಕಾಂಗ್ರೆಸ್‍ನ ಮಹುವಾ ಮೈತ್ರ, ಸಾಗರಿಕಾ ಘೋಷ್ (ಸ್ವತಃ ಪತ್ರಕರ್ತರಾಗಿದ್ದವರು) ಅವರೂ ಮೌನಕ್ಕೆ ಶರಣಾಗಿದ್ದಾರೆ. ಇವರಾರೂ ಹಿಂಬದಿಯಲ್ಲಿ ನಿಂತು ಮಾತನಾಡುವ ನಾಯಕಿಯರಲ್ಲ. ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ದಿಟ್ಟ ನಾಯಕರು ಹಾಗೂ ಲಿಂಗತ್ವ ದೌರ್ಜನ್ಯದ ಬಗ್ಗೆ ಸದಾ ದನಿ ಎತ್ತುವವರು. ಆದರೆ ಈಗೇಕೆ ಮೌನ?

ಇಲ್ಲಿ ಮುಖ್ಯವಾದ ಪ್ರಶ್ನೆಯೊಂದನ್ನು ಕೇಳಲೇಬೇಕಾಗುತ್ತದೆ. ಧರ್ಮಸ್ಥಳ ಭಾರತದ ಗಣತಂತ್ರದ ವ್ಯಾಪ್ತಿಯಿಂದ ಹೊರಗಿದೆಯೇ? ಕೋಮುವಾದಿ ಅಥವಾ ರಾಜಕೀಯವಾಗಿ ಲಾಭದಾಯಕವಾಗುವ ಅಪರಾಧಗಳು ಸಂಭವಿಸಿದಾಗ, ಎನ್‍ಐಎ ಮುಂತಾದ ತನಿಖಾ ಸಂಸ್ಥೆಗಳನ್ನು ಕೆಲವೇ ಗಂಟೆಗಳಲ್ಲಿ ನಿಯೋಜಿಸುವ ಸರ್ಕಾರಗಳು ಈಗ ಸಾಮೂಹಿಕ ಸಮಾಧಿಗಳು ಸಿಗುತ್ತಿದ್ದರೂ, ಸಂತ್ರಸ್ತರು ಮಂದೆ ಬಂದು ಸಾಕ್ಷಿ ಹೇಳುತ್ತಿದ್ದರೂ ಕೇಂದ್ರ ಸರ್ಕಾರ ಯಾವುದೇ ತನಿಖೆಗೆ ಆದೇಶಿಸಿಲ್ಲ. ಕರ್ನಾಟಕ ರಾಜ್ಯ ಸರ್ಕಾರ ರಚಿಸಿರುವ ಎಸ್‍ಐಟಿ ಹಲ್ಲಿಲ್ಲದ ಹುಲಿಯಂತೆ ಕಾಣುತ್ತಿದೆ. ಸಂಸತ್ತು ಇನ್ನೂ ಹೆಚ್ಚಿನ ಕ್ರಮವನ್ನು ಏಕೆ ಆಗ್ರಹಿಸುತ್ತಿಲ್ಲ? ವಿರೋಧ ಪಕ್ಷಗಳು ಏಕೆ ಸರ್ಕಾರವನ್ನು ಒತ್ತಡಕ್ಕೆ ಸಿಲುಕಿಸುತ್ತಿಲ್ಲ? ಸಾರ್ವಜನಿಕ ವಲಯದಲ್ಲಿರುವ ಸ್ವಘೋಷಿತ ಸ್ತ್ರೀವಾದಿಗಳು ಏಕೆ ಕೇವಲ ಮೂಕಪ್ರೇಕ್ಷಕರಾಗಿದ್ದಾರೆ?

ಈ ಪ್ರಶ್ನೆಗಳಿಗೆ ಉತ್ತರ ಸರಳವಾಗಿದೆ. ಧರ್ಮಸ್ಥಳದ ಆರೋಪಿಗಳು ಬಡವರಲ್ಲ, ಶಕ್ತಿಹೀನ ಪುರುಷರೂ ಅಲ್ಲ. ಇವರು ಒಂದು ಬಲಾಢ್ಯ ಧಾರ್ಮಿಕ ಸಂಸ್ಥೆಯ ಒಂದು ಭಾಗವಾಗಿದ್ದು, ರಾಜ್ಯದ ರಾಜಕೀಯ ಹಾಗೂ ಆರ್ಥಿಕ ವಲಯದಲ್ಲಿ ಒಂದು ಭಾಗವಾಗಿದ್ದಾರೆ. ಹಾಗಾಗಿ ಭಾರತದ ಪ್ರಜಾಪ್ರಭುತ್ವದ ದೇಗುಲ ಎನ್ನಲಾಗುವ ಸಂಸತ್ತು ವಾಸ್ತವಿಕ ದೇವಸ್ಥಾನಗಳ ಸುಪರ್ದಿಯಲ್ಲಿ ನಡೆದಿರುವ ಚಿತ್ರಹಿಂಸೆ ಮತ್ತು ಮರೆಮಾಚುವಿಕೆಯ ತಂತ್ರಗಳತ್ತ ತಿರುಗಿಯೂ ನೋಡುತ್ತಿಲ್ಲ.

ಆದರೆ ಇದು ಕೇವಲ ಪ್ರಾದೇಶಿಕ ವಿಷಯವಲ್ಲ. ಅಥವಾ ರಾಜ್ಯಕ್ಕೆ ಸೀಮಿತವಾದ ಕಾನೂನು ಸುವ್ಯವಸ್ಥೆಯ ಸಮಸ್ಯೆಯೂ ಅಲ್ಲ. ಇಲ್ಲಿ ನ್ಯಾಯ ವ್ಯವಸ್ಥೆಯ ವೈಫಲ್ಯ ಇದೆ. ಭಾರತದ ಚುನಾಯಿತ ಮಹಿಳೆಯರು ಧರ್ಮಸ್ಥಳದಲ್ಲಿ ಭೀಕರವಾಗಿ ದೌರ್ಜನ್ಯಕ್ಕೊಳಗಾದ ಮಹಿಳೆಯರ ಬಗ್ಗೆ ಮಾತನಾಡಲು ನಿರಾಕರಿಸಿ, ಮೌನ ವಹಿಸಿದರೆ, ಅವರು ಕೇವಲ ಚರ್ಚೆಯಿಂದ ದೂರ ಇರುವುದಷ್ಟೇ ಅಲ್ಲದೆ, ಅಪರಾಧಗಳನ್ನು ಮುಚ್ಚಿಹಾಕುವ ತಂತ್ರದಲ್ಲಿ ಶಾಮೀಲಾದಂತೆಯೇ ಆಗುತ್ತದೆ.

ಇತಿಹಾಸ ಇದನ್ನು ಕ್ಷಮಿಸುವುದಿಲ್ಲ. ಜನತೆಯೂ ಸಹ ಕ್ಷಮಿಸಕೂಡದು.


Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again