ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸು
ನ್ಯಾಯ ವಿತರಣೆಯಲ್ಲಿ ಎರಡು ಹಾದಿಗಳಿವೆಯೇ?
ಲೈಂಗಿಕ ದೌರ್ಜನ್ಯಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೆÇೀಕ್ಸೊ ) ಜಾರಿಗೊಳಿಸಿದ ಮೂಲ ಉದ್ದೇಶ ಒಂದು ತಾತ್ವಿಕ ನೆಲೆಯಲ್ಲಿದೆ. ಅತಿ ಹೆಚ್ಚು ದುರ್ಬಲರಿಗೆ ಶೀಘ್ರವಾಗಿ ನ್ಯಾಯ ಒದಗಿಸುವ ಈ ತತ್ವ ಉದಾತ್ತವಾದದ್ದು. ಈ ಕಾಯ್ದೆಯಡಿ ನ್ಯಾಯ ತೀರ್ಮಾನಕ್ಕೆ ಸಮಯದ ಗಡುವು ನಿರ್ಧರಿಸಲಾಗಿದೆ. ಸಂತ್ರಸ್ತರ ಸಾಕ್ಷಿಗಳನ್ನು 30 ದಿನಗಳ ಒಳಗಾಗಿ ಸಂಗ್ರಹಿಸಿ ದಾಖಲಿಸಬೇಕು, ವಿಚಾರಣೆಯನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಬೇಕು ಎಂಬ ನಿಯಮ ಇದೆ. ಸಾವಿರಾರು ಪ್ರಕರಣಗಳಲ್ಲಿ, ಸಾಮಾನ್ಯ ಜನರು ಆರೋಪಿಗಳಾಗಿರುವ ಸಂದರ್ಭಗಳಲ್ಲಿ ಕಾನೂನು ತನ್ನ ಬಲವನ್ನು ಪ್ರದರ್ಶಿಸಿದೆ. ಆರೋಪಿತ ವ್ಯಕ್ತಿಗಳನ್ನು ಕೂಡಲೇ ಬಂಧಿಸಿ, ಜಾಮೀನು ನಿರಾಕರಿಸಿ, ಹೆಚ್ಚು ವಿಳಂಬ ಮಾಡದೆ ಶಿಕ್ಷೆ ವಿಧಿಸಲಾಗಿದೆ. ಈ ವ್ಯವಸ್ಥೆಯು ಬಹಳ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆರೋಪಿಗಳು ಯಾವುದೇ ಪ್ರಭಾವ ಇಲ್ಲದ, ಹಣಬಲ ಇಲ್ಲದ ಅಥವಾ ರಾಜಕೀಯ ವರ್ಚಸ್ಸು ಇಲ್ಲದಿದ್ದಾಗ ಮಾತ್ರ.
ಆರೋಪಿಯು ಸಮಾಜದ ಗಣ್ಯ ವ್ಯಕ್ತಿಯಾಗಿದ್ದಾಗ, ವಿಐಪಿ ಆಗಿದ್ದಾಗ, ಇಡೀ ಪ್ರಕ್ರಿಯೆಯೇ ಭಿನ್ನ ಹಾದಿಯಲ್ಲಿ ಸಾಗುತ್ತದೆ. ಪೆÇೀಕ್ಸೋ ಕಾಯ್ದೆಯ ತುರ್ತು ನಿಧಾನಗತಿಗೆ ಇಳಿಯುತ್ತದೆ. ನ್ಯಾಯಾಲಯದ ಮುಂದೂಡಿಕೆಗಳು ಹೆಚ್ಚಾಗುತ್ತಲೇ ಇರುತ್ತವೆ. ಮಧ್ಯಂತರ ತಡೆಯಾಜ್ಞೆಗಳು ಹೇರಳವಾಗಿರುತ್ತವೆ. ಖ್ಯಾತ ವಕೀಲರು ನ್ಯಾಯಾಲಯದ ವಿಚಾರಣೆಯನ್ನು ನಿರಂತರವಾಗಿ ಮುಂದೂಡುತ್ತಲೆ ಇರುತ್ತಾರೆ, ಸರ್ಕಾರಗಳು ಸಹ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತವೆ. ಯಾವುದೇ ರಾಜಿ ಇಲ್ಲದೆ, ತ್ವರಿತ ಗತಿಯಲ್ಲಿ ನಿರ್ಣಯವಾಗಬೇಕಾದ ಒಂದು ಕಾನೂನು ಹಿಂಜರಿಕೆಯಿಂದ, ಭಿನ್ನ ಮಾರ್ಗ ಅನುಸರಿಸುತ್ತದೆ.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ನಡೆಯುತ್ತಿರುವ ಪೆÇೀಕ್ಸೋ ಮೊಕದ್ದಮೆಯು ಈ ದ್ವಂದ್ವ ನೀತಿ ಮತ್ತು ಮಾನದಂಡಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹೈಕೋರ್ಟ್ ಅವರ ವಿರುದ್ಧ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದು, ಕಾನೂನು ಪ್ರಕಾರ ಇರುವ ಸಮಯದ ಗಡುವು ಮೀರಿದ್ದರೂ, ರಾಜ್ಯ ಸರ್ಕಾರವು ಈ ತಡೆಯಾಜ್ಞೆಯನ್ನು ತೆರೆಯುವ ನಿಟ್ಟಿನಲ್ಲಿ ಯಾವುದೇ ಉತ್ಸಾಹ ತೋರುತ್ತಿಲ್ಲ. ಇಡೀ ಪ್ರಕರಣವೇ ನೆನೆಗುದಿಗೆ ಬಿದ್ದಿದೆ. ಇದಕ್ಕೆ ವ್ಯತಿರಿಕ್ತವಾಗಿ, ರಾಜ್ಯದಲ್ಲಿ ಪೆÇೀಕ್ಸೋ ಕಾಯ್ದೆಯಡಿ ಆರೋಪ ಹೊತ್ತಿರುವ ವ್ಯಕ್ತಿಗಳು ಜೈಲು ಶಿಕ್ಷೆಗೊಳಗಾಗಿ, ವಿಳಂಬ ಇಲ್ಲದೆ ವಿಚಾರಣೆಗೊಳಪಡುತ್ತಿದ್ದಾರೆ.
ಈ ಎರಡು ಮಜಲಿನ ನ್ಯಾಯ ವ್ಯವಸ್ಥೆಯು ಪ್ರಜಾಪ್ರಭುತ್ವದಲ್ಲಿ ಇರುವ ವಿಶ್ವಾಸವನ್ನೇ ಕುಂದಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಸಮಾನತೆ ಎಂಬ ಉದಾತ್ತ ಧ್ಯೇಯವನ್ನು, ಪ್ರಬಲ ವ್ಯಕ್ತಿಗಳು ಒಳಗಾಗಿದ್ದಾಗ, ಕೇವಲ ಘೋಷಣೆಗಳ ಮಟ್ಟಕ್ಕೆ ಇಳಿಸಲಾಗುತ್ತದೆ. ದುರ್ಬಲರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸುವ ಕಾನೂನನ್ನು ಬಲಾಢ್ಯರು ದಾರಿ ತಪ್ಪಿಸುತ್ತಾರೆ. ನ್ಯಾಯಾಲಯವು ನಿರ್ಧರಿಸಬೇಕಿರುವುದು ಅಳುಕು ಅಥವಾ ಅಮಾಯಕತನವನ್ನು ಅಲ್ಲ, ಬದಲಾಗಿ ಕಾನೂನು ಪ್ರಕ್ರಿಯೆಯನ್ನು ಅನ್ವಯಿಸುವುದನ್ನು ಗಮನಿಸಬೇಕಿದೆ.
ಪ್ರಜಾಪ್ರಭುತ್ವ ಎಂದರೆ ಚುನಾವಣೆಗಳನ್ನೂ ಮೀರಿದ ಒಂದು ಮೌಲ್ಯ ಎನ್ನುವುದಾದರೆ, ಅದು ಕಾನೂನು ನಿಯಮಗಳಲ್ಲಿ ನ್ಯಾಯಪರತೆಯನ್ನು ಹೊಂದಿರಬೇಕು. ಆದರೆ ಇಂದು ಕಾನೂನಿಗೆ ಎರಡು ಮುಖಗಳಿರುವಂತೆ ಕಾಣಿಸುತ್ತದೆ. ದುರ್ಬಲರಿಗೆ ತ್ವರಿತ ಗತಿಯ ಕಠಿಣ ನಿಯಮಗಳು, ಬಲಾಢ್ಯರಿಗೆ ನಿಧಾನಗತಿಯ ವಿಳಂಬ ನೀತಿಯ ನಿಯಮಗಳು. ಸಂವಿಧಾನದ ಕರ್ತೃಗಳು ಇದನ್ನು ಅಪೇಕ್ಷಿಸಿರಲಿಲ್ಲ ಅಥವಾ ಜನತೆಯೂ ಇದಕ್ಕೆ ಸಮ್ಮತಿಸುವುದಿಲ್ಲ.
ಪೆÇೀಕ್ಸೋ ಕಾಯ್ದೆಯನ್ನು ಜಾರಿಗೊಳಿಸಿದ್ದು ಮಕ್ಕಳನ್ನು ರಕ್ಷಿಸುವ ಸಲುವಾಗಿಯೇ ಹೊರತು, ರಾಜಕೀಯ ಒತ್ತಡಕ್ಕೆ ಮಣಿಯಲು ಅಲ್ಲ. ವಿಐಪಿ ಪ್ರಕರಣಗಳಲ್ಲಿ ಸಮಯದ ಗಡುವಿನ ನಿಯಮವನ್ನು ಉಲ್ಲಂಘಿಸಬಹುದಾದರೆ, ಕಾನೂನಿನ ವಿಶ್ವಾಸಾರ್ಹತೆಯೇ ದುರ್ಬಲವಾಗುತ್ತದೆ. ಹಾಗಾದಲ್ಲಿ ಪ್ರಜಾಪ್ರಭುತ್ವ ಸಮಾನ ನ್ಯಾಯವನ್ನು ಒದಗಿಸದೆ ಕೇವಲ ನೆಪಮಾತ್ರವಾಗಿ ಉಳಿಯುತ್ತದೆ.
Comments
Post a Comment