ನ್ಯಾಯಾಂಗದ ನಿರ್ಬಂಧ ಆದೇಶ ಮಾಧ್ಯಮ ಸ್ವಾತಂತ್ರ್ಯಕ್ಕೆ ಪೆಟ್ಟು

ನಿರ್ಬಂಧಕಾಜ್ಞೆಗಳು ಬಲಾಢ್ಯರ ರಕ್ಷಾ ಕವಚವಾಗುವ ಕಾಲ ಮುಗಿದಿದೆ


ಪ್ರಜಾಪ್ರಭುತ್ವದಲ್ಲಿ ಮಾಧ್ಯಮ ಸ್ವಾತಂತ್ರ್ಯ ಒಂದು ಸವಲತ್ತು ಅಲ್ಲ, ಅದು ಅವಶ್ಯಕತೆ. ಆದರೂ ಕರ್ನಾಟಕದಲ್ಲಿ ಈ ಮೂಲ ತತ್ವವನ್ನು ಪದೇಪದೇ ಉಲ್ಲಂಘಿಸುವ ಪ್ರಕರಣಗಳು ಎದುರಾಗುತ್ತಲೇ ಇರುವುದು ಆಘಾತಕಾರಿ ಅಂಶವಾಗಿದೆ. ಆರೋಪಿಯ ಸ್ಥಾನದಲ್ಲಿರುವ ಮಾಧ್ಯಮದ ಜವಾಬನ್ನು ಕೇಳದೆಯೇ ತಡೆಯಾಜ್ಞೆಗಳನ್ನು ನೀಡುವುದು, ಕೆಳಹಂತದ ನ್ಯಾಯಾಲಯಗಳು, ವಿಶೇಷವಾಗಿ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಲಯಗಳು, ನಿರ್ಬಂಧದ ಆದೇಶ ನೀಡುವುದು ಹೆಚ್ಚಾಗುತ್ತಿದೆ. ನ್ಯಾಯಾಂಗದ ಈ ವ್ಯಾಪ್ತಿ ಮೀರಿದ ನಡೆ, ಈಗಾಗಲೇ ಸಂಪನ್ಮೂಲ ಕೊರತೆಯಿಂದ ನಲುಗಿಹೋಗುತ್ತಿರುವ ಮಾಧ್ಯಮ ಸಮೂಹಗಳಿಗೆ ಧಕ್ಕೆ ಉಂಟುಮಾಡಿರುವುದೇ ಅಲ್ಲದೆ ಪ್ರಬಲ ವ್ಯಕ್ತಿಗಳು, ಪ್ರಭಾವಶಾಲಿಗಳು ಮತ್ತು ಭ್ರಷ್ಟ ನಾಯಕರು ನ್ಯಾಯ ವ್ಯವಸ್ಥೆಯನ್ನೇ ಬಳಸಿಕೊಂಡು, ಮಾಧ್ಯಮ ಹಕ್ಕು-ಸ್ವಾತಂತ್ರ್ಯಕ್ಕೆ ತಿಲಾಂಜಲಿ ನೀಡಲು ನೆರವಾಗುತ್ತಿದೆ.

ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ `ಕುಡ್ಲಾ ರಾಂಪೇಜ್' ಪ್ರಕರಣದಲ್ಲಿ ಬೆಂಗಳೂರಿನ ಸಿವಿಲ್ ನ್ಯಾಯಾಲಯ ನೀಡಿದ್ದ ನಿಬರ್ಂಧದ ಆದೇಶವನ್ನು ರದ್ದುಪಡಿಸಿರುವುದು ಸಾಂವಿಧಾನಿಕ ಸ್ಪಷ್ಟತೆಯ ದೃಷ್ಟಿಯಿಂದ ಸ್ವಾಗತಾರ್ಹ ಬೆಳವಣಿಗೆ. ಮಾಧ್ಯಮಗಳ ದನಿಯನ್ನೇ ಅಡಗಿಸುವ ಏಕಪಕ್ಷೀಯ ನಿಬರ್ಂಧಕಾಜ್ಞೆಯನ್ನು ತೆರವುಗೊಳಿಸುವ ಮೂಲಕ ಹೈಕೋರ್ಟ್ ಕೆಳಹಂತದ ನ್ಯಾಯಾಲಯಗಳಿಗೆ ಮತ್ತು ಸಾರ್ವಜನಿಕರಿಗೆ, ಸಂವಿಧಾನದ ಅನುಚ್ಛೇದ 19(1)(ಎ) ನಿಯಮವು ಮನಸೋ ಇಚ್ಛೆ ನಿರ್ಬಂಧಿಸುವ ನಿಯಮ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ ಈ ಒಂದು ಪ್ರಕರಣವು ಇಡೀ ನ್ಯಾಯಾಂಗದ ನೀತಿಯಾಗಿ ಮಾರ್ಪಡುವ ಅವಶ್ಯಕತೆ ಇದೆ.

ಬಹಳ ದಿನಗಳಿಂದ ಕೆಳಹಂತದ ನ್ಯಾಯಾಲಯಗಳು ಕೇವಲ ಕೋರಿಕೆಯನ್ನು ಮನ್ನಿಸಿ ಮಾಧ್ಯಮ ವಿರುದ್ಧ ತಡೆಯಾಜ್ಞೆಗಳನ್ನು, ನಿಬರ್ಂಧ ಆದೇಶಗಳನ್ನು ಹೊರಡಿಸುತ್ತಿದ್ದು, ಪ್ರಕರಣದ ಮತ್ತೊಂದು ಬದಿಯ ಫಿರ್ಯಾದುದಾರರ ದನಿಯನ್ನು ನಿರ್ಲಕ್ಷಿಸಲಾಗುತ್ತಿದೆ. ಸಹಾರಾ ಇಂಡಿಯಾ ಮತ್ತು ಅನುರಾಧ ಭಾಸಿನ್ ವರ್ಸಸ್ ಒಕ್ಕೂಟ ಸರ್ಕಾರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಧಿಸಿದ್ದ ಅನುಪಾತದ ಪರಿಶೀಲನೆ ಮತ್ತು ಪರೀಕ್ಷೆಯನ್ನು ಅನುಸರಿಸದೆ ಈ ನ್ಯಾಯಾಂಗ ಆದೇಶವನ್ನು ಹೊರಡಿಸಲಾಗುತ್ತಿದೆ.

ಉದಾಹರಣೆಗೆ ಅಘಾತಕಾರಿ ಪ್ರಕರಣವೊಂದರಲ್ಲಿ, ಜಿಲ್ಲಾ ನ್ಯಾಯಾಲಯವೊಂದು ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯನ್ನು ಸ್ವೀಕರಿಸಿದ್ದು, ಇದಕ್ಕೆ ಅರ್ಜಿ ಹಾಕಿದವರು ಬಾಧಿತ ವ್ಯಕ್ತಿಯಾಗಿರದೆ, ಅವರ ಪರವಾಗಿ ಪವರ್ ಆಫ್ ಅಟಾರ್ನಿ ಹೊಂದಿರುವವರಿಂದ ಅರ್ಜಿ ಸಲ್ಲಿಸಲಾಗಿತ್ತು. ಇದು ಸುಪ್ರೀಂಕೋರ್ಟ್ ಹಾಕಿದ ಪೂರ್ವನಿದರ್ಶನದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಈ ಪ್ರಕರಣವನ್ನು ತದನಂತರ ಹೈಕೋರ್ಟ್ ರದ್ದುಪಡಿಸಿತ್ತು. ಆದರೆ ಪ್ರತಿವಾದಿ ವ್ಯಕ್ತಿಯು ಆ ವೇಳೆಗಾಗಲೇ ಸಾಕಷ್ಟು ಹಣಕಾಸು ನಷ್ಟ ಅನುಭವಿಸಿ, ಮಾನಸಿಕ ಯಾತನೆಗೆ ಒಳಗಾಗಿದ್ದರು.

ಈ ರೀತಿ ಪ್ರಕ್ರಿಯೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಅಪಭ್ರಂಶವಲ್ಲ, ಬದಲಾಗಿ ಒಂದು ಮಾದರಿಯಾಗಿ ಅನುಸರಿಸಲ್ಪಡುತ್ತಿದೆ. ನಿಬರ್ಂಧ ಆದೇಶಗಳನ್ನು ಪದೇ ಪದೇ ನೀಡಲಾಗುತ್ತಿದ್ದು, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುವ ಸಚಿವರು ಮತ್ತು ಮಠಾಧೀಶರು, ಭ್ರಷ್ಟಾಚಾರದಲ್ಲಿ ತೊಡಗಿದ ರಾಜಕಾರಣಿಗಳು, ಅಕ್ರಮ ಭೂಸ್ವಾಧೀನ ಆರೋಪ ಎದುರಿಸುವ ಪ್ರಬಲರು ಇದರ ಫಲಾನುಭವಿಗಳಾಗಿರುತ್ತಾರೆ. ಮಾಧ್ಯಮಗಳು ಈಗಾಗಲೇ ಉಸಿರುಗಟ್ಟಿಸುವ ರೀತಿಯಲ್ಲಿ, ನಿರಂತರ ಸುದ್ದಿಯ ಗಡುವಿನ ಭಾರಕ್ಕೆ ನಲುಗುತ್ತಿರುವುದರಿಂದ, ಪ್ರತಿಯೊಂದು ನಿಬರ್ಂಧ ಆದೇಶದ ವಿರುದ್ಧವೂ ನ್ಯಾಯಾಲಯದಲ್ಲಿ ಮೇಲರ್ಜಿ ಸಲ್ಲಿಸುವ ಸಂಪನ್ಮೂಲಗಳನ್ನಾಗಲೀ, ಸಮಯವನ್ನಾಗಲೀ ಹೊಂದಿರುವುದಿಲ್ಲ. ತತ್ಪರಿಣಾಮವಾಗಿ, ನ್ಯಾಯ ಕೋರುವವರು ಶಿಕ್ಷೆಗೊಳಗಾಗಿ, ನುಣುಚಿಕೊಳ್ಳುವವರು ಪಾರಾಗುತ್ತಿದ್ದಾರೆ.

ಕರ್ನಾಟಕ ಹೈಕೋರ್ಟ್ ಈ ವಿಚಾರದಲ್ಲಿ ವ್ಯವಸ್ಥೆಯ ಸುಧಾರಣೆಗಳಿಗೆ ಮುಂದಾಗಲು ಇದು ಸಕಾಲ. ಎಲ್ಲ ಕೆಳಹಂತದ ನ್ಯಾಯಾಲಯಗಳಿಗೂ ಹೈಕೋರ್ಟ್ ಸಾಮಾನ್ಯ ಸುತ್ತೋಲೆಯನ್ನು ಹೊರಡಿಸಿ, ಆರೋಪಿಯ ಅನುಪಸ್ಥಿತಿಯಲ್ಲಿ ಮಾಧ್ಯಮಗಳಿಗೆ ನಿಬರ್ಂಧ ಆದೇಶವನ್ನು ನೀಡುವ ಪದ್ಧತಿಯನ್ನು ನಿವಾರಿಸಬೇಕಿದೆ. ಮಾಧ್ಯಮಗಳ ಅಭಿಪ್ರಾಯಕ್ಕೆ ಅವಕಾಶ ಕಲ್ಪಿಸಿದ ನಂತರವಷ್ಟೇ ತಡೆಯಾಜ್ಞೆಯನ್ನು ನೀಡಬೇಕು. ಮೇಲಾಗಿ ಮಾನನಷ್ಟ ಮೊಕದ್ದಮೆಗಳಲ್ಲಿ, ಅದರಲ್ಲೂ ಕ್ರಿಮಿನಲ್ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಕಟ್ಟುನಿಟ್ಟಾಗಿ ನಿಯಮಗಳನ್ನು ಜಾರಿಗೊಳಿಸಿ ಬಾಧಿತ ವ್ಯಕ್ತಿ ಮಾತ್ರವೇ ಅರ್ಜಿ ಸಲ್ಲಿಸಿ ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶ ನೀಡಬೇಕಿದೆ. ಇದು ಸುಪ್ರೀಂಕೋರ್ಟ್ ಕಡ್ಡಾಯಗೊಳಿಸಿರುವ ಒಂದು ಮಾದರಿಯೂ ಆಗಿದೆ.

ಹೈಕೋರ್ಟ್‍ಗಳೂ ಮಾಧ್ಯಮ ನಿಬರ್ಂಧ ಆದೇಶ ಪ್ರಕರಣಗಳಲ್ಲಿ ಮೇಲ್ಮನವಿ ಅರ್ಜಿಗಳನ್ನು ಪರಿಶೀಲಿಸಲು ತ್ವರಿತಗತಿಯ ಮಾದರಿಯನ್ನು ಅನುಸರಿಸಬೇಕಿದೆ. ಇಂತಹ ಮೊಕದ್ದಮೆಗಳು ಸಹಜವಾಗಿಯೇ ವಿಚಾರಣಾ ನ್ಯಾಯಾಲಯದಿಂದ ಹೈಕೋರ್ಟ್‍ಗೆ ರವಾನೆಯಾಗುವ ಮೂಲಕ ನ್ಯಾಯ ವಿತರಣೆಯ ವೇಗ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ನ್ಯಾಯಾಲಯಗಳೂ ಸಹ, ಮಾಧ್ಯಮಗಳನ್ನು ಹೆದರಿಸುವ ಸಲುವಾಗಿಯೇ ಕ್ಷುಲ್ಲಕ ಅಥವಾ ದುರುದ್ದೇಶದ ಅರ್ಜಿಗಳನ್ನು ಸಲ್ಲಿಸುವವರಿಗೆ ದಂಡ ವಿಧಿಸಬೇಕಾಗುತ್ತದೆ.

ಕೆಳಹಂತದ ನ್ಯಾಯಾಲಯಗಳ ನ್ಯಾಯಮೂರ್ತಿಗಳಿಗೆ ಸೂಕ್ತ ತರಬೇತಿ ನೀಡಿ, ನಿಬರ್ಂಧಕಾಜ್ಞೆಗಳಿಂದ ಉಂಟಾಗುವ ಸಾಂವಿಧಾನಿಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಮಾಧ್ಯಮ ನಿಬರ್ಂಧವು ಹಾನಿಯಿಲ್ಲದ ಪ್ರಕ್ರಿಯೆಯಲ್ಲ; ಬದಲಾಗಿ, ಅದು ಪ್ರಜಾಸತ್ತಾತ್ಮಕ ಪ್ರಕ್ರಿಯೆಗೇ ಧಕ್ಕೆ ಉಂಟುಮಾಡುತ್ತದೆ. ನ್ಯಾಯಾಲಯಗಳು ಮಾಧ್ಯಮಗಳನ್ನು ಯಾವುದೇ ಸಮರ್ಥನೀಯ ಕಾರಣಗಳಿಲ್ಲದೆ ತೆಪ್ಪಗಾಗಿಸುವುದು ಮುಕ್ತ ವಾಕ್ ಸ್ವಾತಂತ್ರ್ಯದ ಉಲ್ಲಂಘನೆಯಷ್ಟೇ ಅಲ್ಲದೆ ಸಾರ್ವಜನಿಕ ವಿಶ್ವಾಸಕ್ಕೂ ಧಕ್ಕೆ ಉಂಟುಮಾಡುತ್ತದೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ, ಮಾಧ್ಯಮಗಳು ಸ್ವತಂತ್ರವಾಗಿರಬೇಕು. ಇದು ಸಾಧ್ಯವಾಗಬೇಕಾದರೆ, ನ್ಯಾಯಾಲಯಗಳು ಸ್ವಾತಂತ್ರ್ಯದ ರಕ್ಷಣೆ ಮಾಡಬೇಕೇ ಹೊರತು, ಬೆದರಿಕೆ ಹಾಕುವವರನ್ನು ರಕ್ಷಿಸುವುದಲ್ಲ. ಕರ್ನಾಟಕ ಹೈಕೋರ್ಟ್ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದೆ. ಇನ್ನು ಮುಂದೆ ಸಾಗಬೇಕಿದೆ.

ಈ ವ್ಯಾಧಿಯು ಬಹಳ ಆಳಕ್ಕಿಳಿದಿದೆ. ಅನೇಕ ಪ್ರಕರಣಗಳಲ್ಲಿ  ಅರ್ಜಿದಾರರು ತಾತ್ಕಾಲಿಕ ತಡೆಯಾಜ್ಞೆ ಪಡೆಯುವ ಸಲುವಾಗಿ, ತಮ್ಮ ಗೌರವಕ್ಕೆ ಅಪಾಯ ಎದುರಾಗಿದೆ, ಗೋಪ್ಯತೆ ಉಲ್ಲಂಘನೆಯಾಗುತ್ತಿದೆ, ಸಾರ್ವಜನಿಕ ಶಾಂತಿಗೆ ಭಂಗವಾಗುತ್ತಿದೆ ಎಂದು ವಾದಿಸುತ್ತಾರೆ, ಆದರೆ ಇದಕ್ಕೆ ಯಾವುದೇ ವಿಶ್ವಾಸಾರ್ಹ ಪುರಾವೆ ಇರುವುದಿಲ್ಲ. ಇಂತಹ ಆದೇಶಗಳನ್ನು ಶರವೇಗದಲ್ಲಿ ಹೊರಡಿಸಲಾಗುತ್ತದೆ, ಕೆಲವೊಮ್ಮೆ ಮಾಧ್ಯಮಗಳಿಗೆ ಸುದ್ದಿ ತಲುಪುವ ಮುನ್ನವೇ, ಅರ್ಜಿ ಸಲ್ಲಿಸಿದ ದಿನವೇ ನೀಡಲಾಗುತ್ತದೆ. ಮತ್ತಾವುದೇ ಪ್ರಸಂಗಗಳಲ್ಲಿ ನ್ಯಾಯಾಂಗವು ಇಷ್ಟು ಉದಾರವಾಗಿ, ತ್ವರಿತವಾಗಿ ಆದೇಶ ನೀಡುವುದಿಲ್ಲ.

ಈ ಪ್ರವೃತ್ತಿಯು ತನಿಖಾ ಪತ್ರಿಕೋದ್ಯಮವನ್ನು ನಿಬರ್ಂಧಿಸಲು ನ್ಯಾಯಾಂಗಕ್ಕೆ ಪ್ರಬಲ ಅಸ್ತ್ರವನ್ನು ನೀಡಿದಂತಾಗಿದ್ದು, ಇದು ಮುಂದುವರೆಯುವುದು ಅಪೇಕ್ಷಣೀಯವಲ್ಲ. ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಇವೆಲ್ಲವನ್ನೂ ಬಯಲಿಗೆಳೆಯುವುದು ಮಾಧ್ಯಮದ ಸಾಂವಿಧಾನಿಕ ಹಕ್ಕು ಮಾತ್ರವಲ್ಲ, ಇದು ಪ್ರಜಾಪ್ರಭುತ್ವದ ಅವಶ್ಯಕ ಕರ್ತವ್ಯ. ಕೆಳಹಂತದ ನ್ಯಾಯಾಲಯಗಳಿಗೆ ಈ ಹಕ್ಕನ್ನು ನಿರಾಕರಿಸುವ ಅವಕಾಶ ನೀಡುವ ಮೂಲಕ, ಅದರಲ್ಲೂ ಕ್ಷುಲ್ಲಕ ಕಾರಣಗಳಿಂದ, ಸ್ಥಳೀಯ ಒತ್ತಡ ಮತ್ತು ಆಮಿಷಗಳಿಗೆ ಅವಕಾಶ ನೀಡುವುದರಿಂದ ಸಾರ್ವಜನಿಕರಲ್ಲಿ ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೇ ಧಕ್ಕೆ ಉಂಟಾಗುತ್ತದೆ.

ಇಲ್ಲಿ ನೆನಪಿಡಬೇಕಾದ ಅಂಶ ಎಂದರೆ ಭಾರತದ ಬಹುತೇಕ ಮಾಧ್ಯಮ ಸಮೂಹಗಳು, ಅದರಲ್ಲೂ ಪ್ರಾದೇಶಿಕ-ಜಿಲ್ಲಾ ಮಟ್ಟದ ಪತ್ರಿಕೆಗಳು, ಅತಿಯಾದ ಹಣಕಾಸು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅನೇಕ ಮಾಧ್ಯಮಗಳಿಗೆ ಹಿರಿಯ ವಕೀಲರನ್ನು ನೇಮಿಸುವ ಸಂಪನ್ಮೂಲಗಳು ಇರುವುದಿಲ್ಲ ಅಥವಾ ದೀರ್ಘ ಕಾಲ ವಿಚಾರಣೆಗೆ ಒಳಪಡುವ ಸಾಮಥ್ರ್ಯ ಇರುವುದಿಲ್ಲ. ಕಾನೂನು ವೆಚ್ಚಗಳು, ಒತ್ತಡ ಮತ್ತು ತಪ್ಪಾದ ನಿಬರ್ಂಧ ಅದೇಶಗಳ ವಿರುದ್ಧ ಹೋರಾಡಲು ವ್ಯಯವಾಗುವ ಸಮಯ, ನ್ಯಾಯಕ್ಕಾಗಿ ಮುಂದುವರೆಯುವ ಉತ್ಸಾಹವನ್ನೇ ಕುಂದಿಸುತ್ತದೆ. ಈ ಕಾರಣಕ್ಕಾಗಿಯೇ ಬಲಾಢ್ಯ ಹಿತಾಸಕ್ತಿಗಳು ಕೆಳಹಂತದ ನ್ಯಾಯಾಲಯಗಳು ತಮ್ಮ ಪರವಾಗಿ ಇರುತ್ತವೆ ಎಂದು ಭಾವಿಸಿ ನ್ಯಾಯಾಲಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತವೆ. 

ಕರ್ನಾಟಕದ ಹೈಕೋರ್ಟ್ ಈಗ ಈ `ಕುಡ್ಲಾ ರಾಂಪೇಜ್' ಪ್ರಕರಣದ ಮೂಲಕ ವ್ಯಾಧಿಯನ್ನು ಗುರುತಿಸಿದ್ದು, ಒಂದು ಅಪರೂಪದ ಅವಕಾಶವನ್ನು ಕಲ್ಪಿಸಿ, ನೈತಿಕ ಕರ್ತವ್ಯವನ್ನೂ ಹೇರುವ ಮೂಲಕ ಪರಿಹಾರ ಮಾರ್ಗಗಳನ್ನು ಅನುಸರಿಸಲು ನೆರವಾಗಿದೆ. ಕಟ್ಟುನಿಟ್ಟಾದ ನ್ಯಾಯಾಂಗದ ನಿಯಮಗಳನ್ನು ರೂಪಿಸುವ ಮೂಲಕ ಆಚರಣಾತ್ಮಕ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವ ಮೂಲಕ ಸಮತೋಲನ ಕಾಪಾಡಬೇಕಿದೆ. ಒಂದು ಮಾದರಿ ಸೂತ್ರವನ್ನು ರಚಿಸಿ ಪ್ರತಿಯೊಂದು ನ್ಯಾಯಾಲಯವೂ ಅನುಪಾತದ ಆಧಾರದಲ್ಲಿ ವಿಶ್ಲೇಷಣೆ ನಡೆಸಿ, ವಿವರವಾದ ಕಾರಣಗಳನ್ನು ದಾಖಲಿಸಿ, ಕಡ್ಡಾಯವಾಗಿ ಯಾವುದೇ ಸಾರ್ವಜನಿಕ ನಿಬರ್ಂಧಕಾಜ್ಞೆ ಹೊರಡಿಸುವ ಮುನ್ನ ಮಾಧ್ಯಮಗಳಿಗೆ ಮಾಹಿತಿ ನೀಡುವ ಪದ್ಧತಿ ಅನುಸರಿಸಬೇಕಿದೆ.

ನ್ಯಾಯಾಂಗದ ಆತ್ಮಾವಲೋಕನ ಮತ್ತು ಉತ್ತರದಾಯಿತ್ವವನ್ನು ಸಾಬೀತುಪಡಿಸುವ ಸಮಯ ಬಂದಾಗಿದೆ. ನಿಬರ್ಂಧಕಾಜ್ಞೆಗಳು ಬಲಾಢ್ಯರ ರಕ್ಷಾ ಕವಚವಾಗುವ ಕಾಲ ಮುಗಿದಿದೆ. ನ್ಯಾಯಾಲಯಗಳು ತಮ್ಮ ನೈತಿಕ ಅಧಿಕಾರ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಯ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಬೇಕಾದರೆ, ನ್ಯಾಯ, ಪಾರದರ್ಶಕತೆ, ಸಾರ್ವಜನಿಕ ಹಿತಾಸಕ್ತಿಗೆ ಬದ್ಧವಾಗಿರಬೇಕಿದೆ. ಇದು ಪ್ರಬಲ ವ್ಯಕ್ತಿಗಳಿಗೆ ಮಾರಕವಾದರೂ ಅಡ್ಡಿಯಿಲ್ಲ.

ಈ ಗಳಿಗೆಯಲ್ಲಿ ಕರ್ನಾಟಕವು ನ್ಯಾಯವನ್ನು ಬಗ್ಗುಬಡಿಯಲಾಗುವುದಿಲ್ಲ ಎಂದು ದೃಢವಾಗಿ ಹೇಳುವ ಅವಕಾಶ ಲಭಿಸಿದ್ದು, ನ್ಯಾಯವನ್ನು ಭೀತಿಗೊಳಪಟ್ಟು ನಿರಾಕರಿಸಲಾಗುವುದಿಲ್ಲ ಎಂದು ಹೇಳಬೇಕಿದೆ. ಹೈಕೋರ್ಟ್ ಈ ನಿಟ್ಟಿನಲ್ಲಿ ನ್ಯಾಯಾಂಗವು ಜನರ ಮಾಹಿತಿ ಹಕ್ಕುಗಳ ರಕ್ಷಣೆಗಾಗಿ ಬದ್ಧವಾಗಿದೆ ಎಂದು ಸಾರಿ ಹೇಳುವ ಸಂಸ್ಥೆಯಾಗಲಿ.

 

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again