ರಾಜ್ಯದ ಶಾಲಾ ಬಿಕ್ಕಟ್ಟುಗಳು - ನೆಪ ಹೇಳಿ ಪ್ರಯೋಜನವಿಲ್ಲ

 ಸರ್ಕಾರಿ ಶಾಲೆಗಳು ವಿಫಲವಾಗುವುದು ಮುಂದುವರೆದರೆ, ಸಮಾನ ಅವಕಾಶದ ಆಧಾರ ಸ್ತಂಭವೇ ಕುಸಿಯುತ್ತದೆ. ಲಕ್ಷಾಂತರ ಮಕ್ಕಳ ಭವಿಷ್ಯ ನಾಶವಾಗುತ್ತದೆ.

ವಿಧಾನ ಪರಿಷತ್ತಿನ ಚರ್ಚೆಗಳಲ್ಲಿ ಸರ್ಕಾರಿ ಶಾಲೆಗಳ ಕುರಿತು ನಡೆದ ಗಂಭೀರ ವಾದ ವಿವಾದಗಳು ಒಂದು ಅಪ್ರಿಯ ಸತ್ಯವನ್ನು ಹೊರಗೆಡಹಿದೆ. ರಾಜ್ಯದ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ. 36 ಸಾವಿರ ಶಾಲಾ ಕೊಠಡಿಗಳ ಕೊರತೆ, ದುರವಸ್ಥೆಯಲ್ಲಿ ಬಿದ್ದುಹೋಗುವಂತಿರುವ ಕಟ್ಟಡಗಳು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವಂತಿವೆ. ದಾಖಲಾತಿ ಪ್ರಮಾಣದಲ್ಲಿನ ಕುಸಿತ ಬಹಳ ಗಂಭೀರ ಪರಿಸ್ಥಿತಿಯನ್ನು ಬಿಂಬಿಸುತ್ತದೆ.

ವಿರೋಧ ಪಕ್ಷದ ಸದಸ್ಯರು ಸರ್ಕಾರದ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿದ್ದು, ಶಿಕ್ಷಕರೇ ಇಲ್ಲದ ಶಾಲೆಗಳು, ಪ್ರಾಥಮಿಕ ಕನ್ನಡವನ್ನೂ ಓದಲು ಬರೆಯಲು ಬಾರದ ವಿದ್ಯಾರ್ಥಿಗಳು, ಕಲ್ಯಾಣ ಕರ್ನಾಟಕದ ಶಾಲೆಗಳಿಗೆ ಅನುದಾನ ಪೂರೈಸದಿರುವುದು ಮುಂತಾದ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಆಳುವ ಪಕ್ಷದ ಸದಸ್ಯರೂ ಸಹ ಪರಿಸ್ಥಿತಿ ಹದಗೆಟ್ಟಿರುವುದನ್ನು ಅನುಮೋದಿಸಿದ್ದಾರೆ.

ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ಬಿಕ್ಕಟ್ಟು ಇರುವುದನ್ನು ಒಪ್ಪಿಕೊಂಡಿದ್ದು ಇದಕ್ಕೆ ಹಿಂದಿನ ಸರ್ಕಾರಗಳನ್ನೇ ದೂಷಿಸಿದ್ದಾರೆ. ಈ ಸಮಸ್ಯೆಗಳನ್ನು ರಾತ್ರೊರಾತ್ರಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಡಳಿತ ವ್ಯವಸ್ಥೆಯು ಸತತವಾಗಿ ಈ ಅವನತಿಯನ್ನು ನೋಡಿಕೊಂಡು ಸುಮ್ಮನಿರುವುದು ವಾಸ್ತವವೇ ಆದರೂ, ಸಚಿವರ ಸಮರ್ಥನೆ ನೆಪವಾಗಿ ಕಾಣುವುದೇ ಹೊರತು ಉತ್ತರದಾಯಿತ್ವವನ್ನು ಹೊತ್ತು ಮಾತನಾಡಿದಂತೆ ತೋರುವುದಿಲ್ಲ. ಪೆÇೀಷಕರು ಮತ್ತು ವಿದ್ಯಾರ್ಥಿಗಳು ಈ ಪರಸ್ಪರ ದೋಷಾರೋಪಗಳಿಗಾಗಿ ಕಾಯಲಾಗುವುದಿಲ್ಲ, ಅವರಿಗೆ ತಕ್ಷಣದ ಪರಿಹಾರಗಳು ಬೇಕಾಗಿವೆ.

ವಾಸ್ತವ ದುಃಸ್ಥಿತಿಯನ್ನು ಅಂಕಿಸಂಖ್ಯೆಗಳೇ ನಿರೂಪಿಸುತ್ತವೆ. ಮೂರು ವರ್ಷಗಳಲ್ಲಿ ಸರ್ಕಾರಿ ಶಾಲೆಗಳು 4.76 ಲಕ್ಷ ವಿದ್ಯಾರ್ಥಿಗಳನ್ನು ಕಳೆದುಕೊಂಡಿವೆ. ಖಾಸಗಿ ಶಾಲೆಗಳು ಹೆಚ್ಚಾಗುತ್ತಿವೆ. ಕುಟುಂಬಗಳು ಸರಕಾರಿ ವ್ಯವಸ್ಥೆಯನ್ನೇ ತೊರೆದು, ಸರ್ಕಾರಿ ಶಾಲೆಗಳು ರಕ್ಷಣೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಿಲ್ಲ ಎನ್ನುವುದನ್ನು ಸರ್ಕಾರಕ್ಕೆ ಮನದಟ್ಟು ಮಾಡಿದ್ದಾರೆ. ಸರ್ಕಾರವು ಸದ್ದಿಲ್ಲದೆ ಖಾಸಗಿ ವಲಯದ ಪ್ರಾಬಲ್ಯವನ್ನು ಉತ್ತೇಜಿಸುತ್ತಿದೆ ಎಂಬ ಆರೋಪಗಳು ರಾಜಕೀಯ ಸ್ವರೂಪದ್ದಾಗಿ ಕಂಡರೂ, ಮಕ್ಕಳು ತಂಡೋಪತಂಡವಾಗಿ ಸರಕಾರಿ ಶಾಲೆ ಬಿಡುತ್ತಿರುವುದು, ಸಾರ್ವಜನಿಕ ಶಿಕ್ಷಣದಲ್ಲಿನ ವಿಶ್ವಾಸವು ಅವನತಿ ಹೊಂದುತ್ತಿರುವುದನ್ನೇ ಸೂಚಿಸುತ್ತದೆ.

ಕೆಲವು ಪರಿಹಾರ ಮಾರ್ಗಗಳ ಸಲಹೆಯನ್ನು ನೀಡಲಾಗಿದೆ. ಮುಖ್ಯವಾಗಿ ಹನ್ನೆರಡಕ್ಕೂ ಕಡಿಮೆ ಮಕ್ಕಳಿರುವ ಶಾಲೆಗಳನ್ನು ವಿಲೀನಗೊಳಿಸುವುದು ಒಂದು ಆಯ್ಕೆ. ಇದು ವಾಸ್ತವಿಕವಾಗಿ ಕಂಡರೂ ಸಹ ಮುಚ್ಚುವ ನೀತಿಯು ಪರೋಕ್ಷವಾಗಿ ನೀತಿಯೇ ಆಗಕೂಡದು. ಅನೇಕ ಗ್ರಾಮೀಣ ಕುಟುಂಬಗಳಿಗೆ ಸ್ಥಳೀಯ ಶಾಲೆಯೇ ಶಿಕ್ಷಣದ ಜೀವನಮಾರ್ಗವಾಗಿದೆ.

ಸರ್ಕಾರವು ಸುಧಾರಣೆಗಳತ್ತ ಬೊಟ್ಟು ಮಾಡುತ್ತದೆ. ಶಾಲೆಗಳ ಉನ್ನತೀಕರಣ, ಆಂಗ್ಲ ಮಾಧ್ಯಮ ಸೆಕ್ಷನ್‍ಗಳನ್ನು ಸೇರ್ಪಡೆ ಮಾಡುವುದು, ಸಾವಿರಾರು ಸಂಸ್ಥೆಗಳನ್ನು ದತ್ತು ತೆಗೆದುಕೊಳ್ಳುವುದು ಇದೇ ಮುಂತಾದ ಆಯ್ಕೆಗಳು ಈ ಬಿಕ್ಕಟ್ಟಿನ ತೀವ್ರತೆಯ ಮುಂದೆ ಬಹಳ ದುರ್ಬಲವಾದ ಪರಿಹಾರ ಎನಿಸುತ್ತದೆ. ಇಲ್ಲಿ ಸೂಕ್ತವಾದ ಪರಿಹಾರೋಪಾಯಗಳ ಹಾದಿ ಮುಖ್ಯವಾಗುತ್ತದೆ. ಅಪಾರ ಹಣ ಹೂಡಿಕೆ, ಶಿಕ್ಷಕರ ನೇಮಕ, ವಿಶ್ವಾಸವನ್ನು ಮರಳಿ ಸ್ಥಾಪಿಸುವ ಬದ್ಧತೆ ಮುಖ್ಯವಾಗುತ್ತದೆ.

ಕರ್ನಾಟಕವು ಕ್ರಿಯಾಶೀಲ ಕ್ರಮಗಳ ಬದಲು ಈ ರೀತಿಯ ನೆಪಗಳನ್ನು ಒಪ್ಪುವುದಿಲ್ಲ. ಸರ್ಕಾರಿ ಶಾಲೆಗಳು ವಿಫಲವಾಗುವುದು ಮುಂದುವರೆದರೆ, ಸಮಾನ ಅವಕಾಶದ ಆಧಾರ ಸ್ತಂಭವೇ ಕುಸಿಯುತ್ತದೆ. ಲಕ್ಷಾಂತರ ಮಕ್ಕಳ ಭವಿಷ್ಯ ನಾಶವಾಗುತ್ತದೆ.

Comments

Popular posts from this blog

Karnataka Bank’s Course Correction: From Bureaucratic Blunder To Restoring Trust With Homegrown Leadership

When Prestige Is Gifted, Not Earned: The Padma Vibhushan Controversy Of Veerendra Heggade

Why I Will Never Fly Air India Again