ಸುಲಭವಾಗಿ ಲಭ್ಯವಿದ್ದ ಮರಳು-ಕೆಂಪು ಕಲ್ಲು ಮಾಯ
ಲೈಸೆನ್ಸ್ ರಾಜ್ ಪರಿಣಾಮ; ಪರಿಹಾರ ಹುಡುಕಲು ಸರಕಾರ ಅಸಮರ್ಥ
ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಸದಾ ನೀಡುತ್ತಿದ್ದ ಎಚ್ಚರಿಕೆ ಎಂದರೆ, ಲೈಸೆನ್ಸ್ ಪರ್ಮಿಟ್ ನಿಯಂತ್ರಣದ ವಾತಾವರಣವು ಭ್ರಷ್ಟಾಚಾರ ಮತ್ತು ಗೊಂದಲಗಳನ್ನು ಹೆಚ್ಚಿಸುತ್ತದೆ ಎಂದು. ಕರ್ನಾಟಕದಲ್ಲಿ ಈಗ ಮರಳು ಮತ್ತು ಕೆಂಪುಕಲ್ಲು ಅಥವಾ ಮುರಕಲ್ಲು (ಲ್ಯಾಟರೈಟ್) ಕೊರತೆಯ ಬಿಕ್ಕಟ್ಟು ಈ ಮಾತುಗಳನ್ನು ಸತ್ಯವಾಗಿಸಿದೆ.
ಒಂದು ಕಾಲದಲ್ಲಿ ಮುಕ್ತವಾಗಿ ಲಭ್ಯವಾಗುತ್ತಿದ್ದ ಈ ಸಂಪನ್ಮೂಲ ಈಗ ಕೊರತೆ ಎದುರಿಸುತ್ತಿದ್ದು, ದುಬಾರಿ ವಸ್ತುವಾಗಿದೆ. ಮರಳು ಮತ್ತು ಕಟ್ಟಡದ ಕಲ್ಲುಗಳನ್ನು ಕಠಿಣ ನಿಯಂತ್ರಣಕ್ಕೆ ಒಳಪಡಿಸುವುದರ ಮೂಲಕ, ಸರ್ಕಾರಗಳು ಒಂದು ಕಾಲದಲ್ಲಿ ಎಲ್ಲರಿಗೂ ಲಭ್ಯವಾಗುತ್ತಿದ್ದ ವಸ್ತುವನ್ನು ಈಗ ಕೆಲವೇ ಕೂಟಗಳ, ಮಧ್ಯವರ್ತಿಗಳ ನಿಯಂತ್ರಣದಲ್ಲಿರುವಂತೆ ಮಾಡಿದೆ. ತತ್ಪರಿಣಾಮವಾಗಿ, ಕಟ್ಟಡ ನಿರ್ಮಾಣ ಕಾರ್ಯವು ರಾಜ್ಯಾದ್ಯಂತ ನಿಧಾನಗತಿಯಲ್ಲಿ ಸಾಗುತ್ತಿದ್ದು, ಅನೇಕ ವಸತಿ ಮತ್ತು ವಾಣಿಜ್ಯ ಯೋಜನೆಗಳು ಸ್ಥಗಿತಗೊಂಡಿವೆ.
ಸಾರ್ವಜನಿಕರಿಗೆ ಉಪಯುಕ್ತವಾಗುವ ಬದಲು ಈ ಪದ್ಧತಿಯು ಕರಾಳ ಮಾರುಕಟ್ಟೆ ವ್ಯಾಪಿಸುವುದನ್ನು ಉತ್ತೇಜಿಸಿದೆ. ಅತಿ ಹೆಚ್ಚು ಲಂಚ ನೀಡಲು ಸಾಧ್ಯವಿದ್ದವರು ಈ ವಸ್ತುಗಳನ್ನು ಪಡೆಯುತ್ತಿದ್ದಾರೆ. ಆದರೆ ನಿಜವಾಗಿಯೂ ಕಟ್ಟಡ ನಿರ್ಮಾಣ ಮಾಡುತ್ತಿರುವವರು, ಸಣ್ಣ ಗುತ್ತಿಗೆದಾರರು ಅಸಹಾಯಕರಾಗಿ ಕೈಚೆಲ್ಲಿ ಕುಳಿತಿರುವಂತಾಗಿದೆ. ನ್ಯಾಯಾಂಗದ ಆದೇಶಗಳು ಕಲ್ಲುಗಣಿಗಾರಿಕೆಯನ್ನು ತಪ್ಪಿಸಲು, ಪರಿಸರ ನಾಶವನ್ನು ತಡೆಗಟ್ಟಲು ನೆರವಾಗಿದ್ದರೆ ಮತ್ತೊಂದೆಡೆ ಈ ಸಂಕೀರ್ಣ ಪರಿಸ್ಥಿತಿಗೂ ಕಾರಣವಾಗಿವೆ. ಸರ್ಕಾರಗಳು ಈ ಆದೇಶಗಳನ್ನೇ ನೆಪವಾಗಿರಿಸಿಕೊಂಡು ನಿಷ್ಕ್ರಿಯವಾಗಿವೆ. ವಾಸ್ತವವಾಗಿ ಇದು ರಾಜಕೀಯ ವರ್ಗಗಳಿಗೆ ಅನುಕೂಲಕರವಾಗಿದ್ದು, ಅಧಿಕಾರಿಗಳು ಮತ್ತು ಮರಳು ಮಾಫಿಯಾಗಳು ಈ ಕೊರತೆಯ ಲಾಭ ಪಡೆಯುತ್ತಿದ್ದಾರೆ.
ಇದರ ಆರ್ಥಿಕ ಪರಿಣಾಮಗಳು ಕಠೋರವಾಗಿವೆ. ಕರ್ನಾಟಕದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಕಟ್ಟಡ ನಿರ್ಮಾಣ ವಲಯವು, ಲಕ್ಷಾಂತರ ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರರಿಗೆ ನೆರವಾಗುತ್ತಿದ್ದು, ಈಗ ಕುಂಟುತ್ತಾ ಸಾಗುತ್ತಿದೆ. ಮರಳು ಸರಬರಾಜಿನ ಕೊರತೆ ಈ ಕ್ಷೇತ್ರವನ್ನು ಬಾಧಿಸುತ್ತಿದ್ದು, ಉದ್ಯೋಗಾವಕಾಶಗಳು ಕುಸಿಯತ್ತಿವೆ, ನಿರ್ಮಾಣ ವೆಚ್ಚಗಳು ಗಗನಕ್ಕೇರುತ್ತಿವೆ. ಮನೆಗಳ ಖರೀದಿ ಬೆಲೆಗಳು ಸಾಮಾನ್ಯ ಕುಟುಂಬಗಳ ಕೈಗೆಟುಕದ ಹಾಗೆ ಏರುತ್ತಿವೆ. ಸಾಧಾರಣ ವ್ಯಕ್ತಿಗಳಿಗೆ ಒಂದು ಪುಟ್ಟ ಮನೆಯನ್ನು ಕೊಳ್ಳುವುದೂ ಸಹ ಈ ಕೊರತೆಯ ಪರಿಣಾಮವಾಗಿ ದು:ಸ್ವಪ್ನವಾಗಿ ಕಾಡುತ್ತಿದೆ. ಸರ್ಕಾರ ಈ ಸನ್ನಿವೇಶದಲ್ಲಿ ವಾಸ್ತವತೆಗೆ ವಿಮುಖವಾಗಬಾರದು. ಮರಳು, ಕೆಂಪುಕಲ್ಲು ಬಿಕ್ಕಟ್ಟು ಸಣ್ಣ ಅನಾನುಕೂಲವನ್ನು ಸೃಷ್ಟಿಸುತ್ತಿಲ್ಲ, ಇದು ಸಾರ್ವಜನಿಕ ಕಲ್ಯಾಣ ಮತ್ತು ಆರ್ಥಿಕ ಬೆಳವಣಿಗೆಗೆ ಮಾರಕವಾಗುತ್ತಿದೆ. ಕನಿಷ್ಠ ಪ್ರಮಾಣದ ಕಟ್ಟದ ನಿರ್ಮಾಣ ಸಾಮಗ್ರಿಗಳನ್ನು ಪೂರೈಸಲಾಗದ ರಾಜ್ಯವು ವಸತಿ ಅಥವಾ ಅಭಿವೃದ್ಧಿಯ ಬಗ್ಗೆ ಗಂಭೀರವಾಗಿ ಯೋಚಿಸಲು ಸಾಧ್ಯವಾಗುವುದಿಲ್ಲ.
ಇದಕ್ಕೆ ಪರಿಹಾರವೇನು? ಪಾರದರ್ಶಕತೆ ಮತ್ತು ವಿಕೇಂದ್ರೀಕರಣದಲ್ಲಿ ಉತ್ತರ ಕಾಣಬಹುದು. ಮರಳು, ಕೆಂಪು ಕಲ್ಲು ವಿತರಣೆ ಮತ್ತು ಮಂಜೂರಾತಿ ಪ್ರಕ್ರಿಯೆಯು ತಂತ್ರಜ್ಞಾನಾಧಾರಿತ ಪದ್ಧತಿಗೆ ಒಳಪಟ್ಟರೆ, ಇ-ಹರಾಜು, ಸರಿಯಾದ ಸಮಯೋಚಿತ ಮೇಲ್ವಿಚಾರಣೆ ಮತ್ತು ನಿರ್ವಹಣೆ, ಮಧ್ಯವರ್ತಿಗಳನ್ನು ತಪ್ಪಿಸುವುದು ಮುಂತಾದ ಕ್ರಮಗಳು ಉಪಯುಕ್ತವಾಗುತ್ತವೆ. ಪರ್ಯಾಯವಾಗಿ ಉತ್ಪಾದಿತ ಮರಳು (ಎಮ್ ಸ್ಯಾಂಡ್) ಮತ್ತು ಪರಿಸರ ಸ್ನೇಹಿ ಬದಲಿ ವ್ಯವಸ್ಥೆಗಳನ್ನು ಉತ್ತೇಜಿಸಬೇಕಿದೆ. ಆದರೆ ಗುಣಮಟ್ಟದ ರಕ್ಷಣಾ ವ್ಯವಸ್ಥೆಯನ್ನೂ ಖಚಿತಪಡಿಸಬೇಕಿದೆ. ಬಹುಮುಖ್ಯವಾಗಿ, ಸ್ಥಳೀಯ ಸಂಸ್ಥೆಗಳು ಸಣ್ಣ ಕಲ್ಲುಗಣಿಗಳನ್ನು ನಿಯಂತ್ರಿಸುವ ಅಧಿಕಾರವನ್ನು ಪಡೆಯಬೇಕಿದೆ. ತನ್ಮೂಲಕ ರಾಜ್ಯಮಟ್ಟದ ಭ್ರಷ್ಟ ಲೈಸೆನ್ಸ್ ರಾಜ್ ಅಧಿಕಾರಿಗಳ ಅವಲಂಬನೆಯನ್ನು ತಪ್ಪಿಸಬಹುದು. ಅಂತಿಮವಾಗಿ, ಕಠಿಣ ಕ್ರಮಗಳ ಮೂಲಕ ಅನುಷ್ಠಾನಗೊಳಿಸುವುದು ಅಗತ್ಯವಾಗಿದ್ದು, ಅಧಿಕಾರಿಗಳು ಮತ್ತು ಮಾಫಿಯಾಗಳ ನಡುವಿನ ಸಂಪರ್ಕಗಳನ್ನು ಭೇದಿಸಬೇಕಿದೆ. ಈ ಮೈತ್ರಿಯೇ ಪ್ರಸ್ತುತ ಕೊರತೆಯ ಫಲಾನುಭವಿಗಳಾಗಿರುವುದು ವಾಸ್ತವ.
ರಾಜಾಜಿ ಅವರ ಎಚ್ಚರಿಕೆ ಹಿಂದೆಂದಿಗಿಂತಲೂ ಈಗ ಪ್ರತಿಧ್ವನಿಸುತ್ತಿದೆ. ಕರ್ನಾಟಕದ ಮರಳು, ಕೆಂಪು ಕಲ್ಲು ಸಮಸ್ಯೆ ನಿಸರ್ಗದ ಮಿತಿಗಳಲ್ಲಿ ಇಲ್ಲ, ಬದಲಾಗಿ ಆಳ್ವಿಕೆಯ ವೈಫಲ್ಯದಲ್ಲಿದೆ. ತುರ್ತು ಸುಧಾರಣೆಗಳು ಆಗದೆ ಇದ್ದರೆ, ಭ್ರಷ್ಟಾಚಾರ ಆಳಕ್ಕಿಳಿದು, ಕಟ್ಟಡ ನಿರ್ಮಾಣಕ್ಕೆ ಧಕ್ಕೆ ಉಂಟಾಗುತ್ತದೆ. ತತ್ಪರಿಣಾಮವಾಗಿ ಜನ ರಸ್ತೆಗೆ ಇಳಿಯುವ ಸಾಧ್ಯತೆ ಇಲ್ಲದಿಲ್ಲ.
Comments
Post a Comment